ಸೋಮವಾರ, ಜೂಲೈ 6, 2020
23 °C

ದುಬೈನ ಮಿರಾಕಲ್ ಗಾರ್ಡನ್

ಡಾ.ಎಂ. ವೆಂಕಟಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಯುನೈಟೆಡ್‌ ಅರಬ್ ಎಮಿರೇಟ್ಸ್ (ಯುಎಇ)ನ ದುಬೈಲ್ಯಾಂಡ್ ಜಿಲ್ಲೆಯಲ್ಲಿ ಇರುವ ದುಬೈ ಮಿರಾಕಲ್ ಗಾರ್ಡನ್ 72,000 ಚ.ಮೀ.  ವಿಸ್ತೀರ್ಣ ಹೊಂದಿದೆ. 50 ದಶಲಕ್ಷಕ್ಕಿಂತ ಹೆಚ್ಚು ಹೂವುಗಳು ಮತ್ತು 250 ದಶಲಕ್ಷಕ್ಕಿಂತ ಹೆಚ್ಚು ಸಸ್ಯಗಳನ್ನು ಒಳಗೊಂಡಿರುವ ವಿಶ್ವದ ಅತಿದೊಡ್ಡ ನೈಸರ್ಗಿಕ ಉದ್ಯಾನ ಇದು.

ಆದರೆ, ಇದು ಸೆಪ್ಟೆಂಬರ್‌ನಿಂದ ಮಾರ್ಚ್‌ ಮಧ್ಯದವರೆಗೆ ಮಾತ್ರ ಸಾರ್ವಜನಿಕರಿಗೆ ತೆರೆಯಲಾಗುತ್ತದೆ. ಆನಂತರ ಇಲ್ಲಿನ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿಹೋಗಿ ಹೂವುಗಳು ಬಾಡಿಹೋಗುತ್ತವೆ. ದುಬೈ ಮಹಾನಗರದ ಎಲ್ಲಾ ರೀತಿಯ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಿ ಈ ಉದ್ಯಾನದ ಗಿಡಗಳಿಗೆ ಹನಿ ನೀರಾವರಿ ವ್ಯವಸ್ಥೆ ಮಾಡಲಾಗಿದೆ. ಈ ಉದ್ಯಾನಕ್ಕೆ ಪ್ರತಿದಿನ 7,57,082 ಲೀಟರ್ ನೀರು ಉಪಯೋಗಿಸಲಾಗುತ್ತದೆ. ಬಣ್ಣ ಬಣ್ಣದ ಹೂವುಗಳು ಮತ್ತು ಗಿಡಗಳಲ್ಲಿ ಅರಮನೆಗಳು, ಪ್ರಾಣಿಗಳು, ವಿಮಾನಗಳು ಹೀಗೆ ನೂರಾರು ರೀತಿಯ ಚಿತ್ರಗಳನ್ನು ಜೀವ ತಳೆದಿವೆ. ಉದ್ಯಾನದಲ್ಲಿ ಪ್ರಖ್ಯಾತ ಕಂಪನಿಗಳ ಗೂಪಿ, ಮಿಕ್ಕಿ ಮೌಸ್, ಪ್ಲೂಟೊ, ಡೈಸಿ ಡಕ್, ಡೊನಾಲ್ಡ್ ಡಕ್ ಇತ್ಯಾದಿ ಚಿತ್ರಗಳನ್ನು ನಿರ್ಮಿಸಲಾಗಿದೆ.

2013ರ ಫೆಬ್ರವರಿ 14ರಂದು ಸಾರ್ವಜನಿಕರ ಪ್ರವೇಶಕ್ಕೆ ಈ ಉದ್ಯಾನವನ್ನು ತೆರೆಯಲಾಯಿತು. ಈ ಯೋಜನೆಯ ಒಟ್ಟು ವೆಚ್ಚ 11 ದಶಲಕ್ಷ ಯು.ಎಸ್. ಡಾಲರ್‌. ಇದರ ಪಕ್ಕದಲ್ಲಿಯೇ 8,55,000 ಚದರ ಅಡಿಗಳ ಬಹುಮಹಡಿ ಕಾರುಗಳ ನಿಲ್ದಾಣ ಸ್ಥಾಪಿಸಲಾಗಿದೆ. ಇದರ ಜೊತೆಗೆ ಚಿಟ್ಟೆಗಳ ಉದ್ಯಾನ, ಅಂಗಡಿಗಳು, ಮಸೀದಿಗಳು ಇನ್ನಿತರ ಸೌಲಭ್ಯ ಹೊಂದಿದ ಕಟ್ಟಡಗಳನ್ನು ಕಟ್ಟಲಾಗಿದೆ. ತೋಟದಲ್ಲಿ ನಿರ್ಮಿಸಿರುವ ಏರ್‌ಬಸ್ ಎ380 ಹೂವುಗಳ ವಿಮಾನ ಜಗತ್ತಿನಲ್ಲಿಯೇ ಅತಿದೊಡ್ಡದು. ಉದ್ಯಾನದ ಒಳಗಿರುವ ಒಳಾಂಗಣ ಸಂಗ್ರಹಾಲಯದಲ್ಲಿ 26 ಜಾತಿಗಳ 15,000 ಸಾವಿರ ಚಿಟ್ಟೆಗಳು ಜನರ ಮಧ್ಯೆಯೇ ಓಡಾಡುತ್ತಿರುತ್ತವೆ. ಉದ್ಯಾನದಲ್ಲಿ ಅನೇಕ ಇಂಗ್ಲಿಷ್ ಮತ್ತು ಹಿಂದಿ ಸಿನಿಮಾಗಳ ಚಿತ್ರೀಕರಣ ನಡೆದಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್‌ನ ಒಟ್ಟು ಭೂವಿಸ್ತೀರ್ಣ 83,600 ಚ.ಕಿ.ಮೀ. ಜನಸಂಖ್ಯೆ ಒಂದು ಕೋಟಿಗಿಂತ ಕಡಿಮೆ. 1971ರಲ್ಲಿ ಹಲವು ರಾಜರು ಆಳುತ್ತಿದ್ದ ರಾಜ್ಯಗಳು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ಮೇಲೆ ಒಟ್ಟುಗೂಡಿ ಯುಎಇ ಸಂಯುಕ್ತ ದೇಶವಾಯಿತು. ದೇಶದಲ್ಲಿ ಸ್ಥಳೀಯ ಎಮಿರೇಟಿ ಜನಾಂಗ ಶೇಕಡ 11ರಷ್ಟಿದೆ. ದಕ್ಷಿಣ ಏಷ್ಯಾ ದೇಶಗಳಿಗೆ ಸೇರಿದ ಜನಸಂಖ್ಯೆ ಶೇಕಡ 59ರಷ್ಟಿದೆ. ಈ ಪೈಕಿ ಭಾರತೀಯರು ಶೇಕಡ 38, ಈಜಿಪ್ಟಿಯನ್‌ ಶೇಕಡ 11, ಪಾಕಿಸ್ತಾನ ಮತ್ತು ಬಾಂಗ್ಲಾ ದೇಶಗಳ ತಲಾ ಶೇಕಡ 9ರಷ್ಟು ಜನರು ವಾಸಿಸುತ್ತಿದ್ದಾರೆ. ಜಗತ್ತಿನ ತೈಲ ಉತ್ಪಾದನೆಯಲ್ಲಿ ಯುಎಇ ಏಳನೇ ಸ್ಥಾನದಲ್ಲಿದೆ.

ತೈಲದ ಜೊತೆಗೆ ದೇಶದಲ್ಲಿ ಹೊಸ ನಗರಗಳನ್ನು ನಿರ್ಮಿಸಿ ಅಭಿವೃದ್ಧಿಪಡಿಸಲಾಗಿದೆ. ಪ್ರಸ್ತುತ ಜಗತ್ತಿನ ಅಚ್ಚುಮೆಚ್ಚಿನ ಪ್ರವಾಸೋದ್ಯಮ ದೇಶವಾಗಿ ಬೆಳೆದು ನಿಂತಿದೆ. ಸ್ವಾತಂತ್ರ್ಯ ನಂತರ ಕಡಲತೀರಗಳು ಮತ್ತು ಸಾಗರದ ಮಧ್ಯೆ ಅದ್ಭುತವಾದ ನಗರಗಳನ್ನು ನಿರ್ಮಿಸಲಾಯಿತು. ಒಂದು ಕಾಲದಲ್ಲಿ ಮರಳುಗಾಡು ಮತ್ತು ಕಡಲದಂಡೆಗಳ ಮರಳು ದ್ವೀಪಗಳಾಗಿದ್ದ ಪ್ರದೇಶಗಳು ಈಗ ಜಗಮಗಿಸುವ ಪಟ್ಟಣಗಳಾಗಿ ಮೈದಾಳಿದ್ದು, ಇಡೀ ಜಗತ್ತನ್ನು ತನ್ನತ್ತ ಸೆಳೆಯುತ್ತಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು