ಶನಿವಾರ, ನವೆಂಬರ್ 23, 2019
18 °C
ಮನೋಹರ ಮೊಂಟರಿ ಬೇ

ಮೊಂಟರಿಯಲ್ಲಿ ‘ಮೀನಿನ ಮನೆ’

Published:
Updated:
ಮೀನಿನ ಮನೆ

ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್‌ಫ್ರಾನ್ಸಿಸ್ಕೊ ನಗರದಿಂದ ಉತ್ತರಕ್ಕೆ ಪೆಸಿಫಿಕ್‌ ಸಮುದ್ರವಿದೆ. ಅದರ ಕಿನಾರೆಯಲ್ಲಿರುವುದೇ ಮೊಂಟರಿ ನಗರ. ಇದು ಜಿಲ್ಲಾಕೇಂದ್ರ.

ಇಲ್ಲಿ ದ್ರಾಕ್ಷಿ ತೋಟಗಳು ಹೆಚ್ಚಿವೆ. 40 ದ್ರಾಕ್ಷಿ ತಳಿಗಳಿವೆ. ಸುಮಾರು 71ಕ್ಕೂ ಹೆಚ್ಚು ವೈನ್‌ ಉತ್ಪಾದಕ ಘಟಕಗಳಿವೆ. ಇಂಥ ಉದ್ಯಮವಿದ್ದರೂ, ಈ ನಗರವನ್ನು ಆಕರ್ಷಿಸುವುದು ಇಲ್ಲಿನ ‘ಮೀನುಗಳ ಮನೆ’(ಮತ್ಸ್ಯಾಲಯ Aquarium). ಮತ್ಸ್ಯೋದ್ಯಮವನ್ನೇ ಬದುಕಿಗೆ ಆಧಾರ ಮಾಡಿಕೊಂಡಿದ್ದ ಮೀನು ಕೃಷಿಕ ಸಮುದಾಯವೇ ಇಲ್ಲಿನ ಮೂಲ ನಿವಾಸಿಗಳು. ಮೀನು ಹಿಡಿಯುವ ಕಾಯಕ ಪುರುಷರದ್ದು. ಅದನ್ನು ಸಂಸ್ಕರಿಸಿ, ಮಾರಾಟಕ್ಕೆ ಸಿದ್ಧಗೊಳಿಸುವುದು ಮಹಿಳೆಯರ ಜವಾಬ್ದಾರಿ. ನಾನು ಈ ಕಿನಾರೆಯ ಮೇಲಿನ ನಗರದಲ್ಲಿ ಅಡ್ಡಾಡುತ್ತಿದ್ದಾಗ, ಮನೆಯಲ್ಲಿ ಮಹಿಳೆಯರು ಮೀನುಗಳನ್ನು ಸಂಸ್ಕರಿಸಿ ಮಾರಾಟಕ್ಕೆ ಅಣಿಗೊಳಿಸುತ್ತಿದ್ದರು. ಈ ವೃತ್ತಿ ನಡೆಸುವ ಸಾಮೂಹಿಕ ಕಾರ್ಯಸ್ಥಾನ ಅಕ್ವೇರಿಯಂ, ಮೊದಲು ಬೀದಿಯಲ್ಲೇ ಇತ್ತು. ಈಗ ಆಧುನಿಕ ಯಂತ್ರಗಳ ಆವಿಷ್ಕಾರ ಪಡೆದು ಆ ಬೀದಿಯೇ ‘ಕ್ಯಾನರಿ ರೋ’ ಎಂಬ ಹೆಸರು ಪಡೆದಿದೆ.

ಆದರೆ ಹಳೆಯ ಕ್ಯಾನರಿಗಳೀಗ ಕಾರಣಾಂತರಗಳಿಂದ ಕಣ್ಮುಚ್ಚಿವೆ. ಖಾಸಗಿ ಕಂಪನಿಗಳು ತಲೆಯೆತ್ತಿವೆ. ಹಳೆಯದನ್ನು ಮರೆಯಬಾರದೆಂಬ ಹಿರಿದಾಸೆ ಸ್ಥಳೀಯರದ್ದಾಗಿದೆ. ಆ ನೆನಪಿಗಾಗಿ ದಂಡೆಗೆ ಹೊಂದಿಕೊಂಡಂತೆ ಒಂದು ಸ್ಮಾರಕವನ್ನೂ ನಿರ್ಮಿಸಲಾಗಿದೆ. ಬಂದ ಪ್ರವಾಸಿಗರು ಈ ಸ್ಮಾರಕದ ಸನಿಹ ಸೆಲ್ಫಿ ಕ್ಲಿಕ್ಕಿಸುವುದನ್ನು ಮರೆಯುವುದಿಲ್ಲ.

ಮೊಂಟರಿ ಬೇ ಈಗ ನಾಗರಿಕ ಜಗತ್ತಿಗೆ ಒಂದು ಸುಂದರ ಸಮುದ್ರ ದಂಡೆ. ನೀಲನಭದ ವರ್ಣಮಿಶ್ರಿತ ಉಪ್ಪುನೀರು. ಬಿರುಸಾಗಿ ಬೀಸುವ ಗಾಳಿಗೇಳುವ ಹೆದ್ದೆರೆಗಳು. ಏಳುಬೀಳುವ ಅವುಗಳ ಲಾಸ್ಯ. ತೇಲುವ ಬಿಳಿ ಬೋಟುಗಳು. ದೊಡ್ಡ ಹಡಗುಗಳು. ಸ್ವಚ್ಛ ದಂಡೆಯಗುಂಟಾ ವಿನೋದದಲ್ಲಿ ಮಗ್ನವಾಗಿರುವ ದಂಪತಿ. ವಿಹಾರದಲ್ಲಿರುವ ಹಿರಿಯರು, ಆಟವಾಡುವ ಮಕ್ಕಳು ಹೀಗೆ ಪೆಸಿಫಿಕ್‌ ತೀರ ಸದಾ ಜನವಿಹಾರದ ಲವಲವಿಕೆಯ ತಾಣವಾಗಿರುತ್ತದೆ.

ಮೊಂಟರಿ ಬೇ, ಕಡಲದಂಡೆಯಲ್ಲೇ ಆಕರ್ಷಣೀಯ ಬೃಹತ್ ‘ಅಕ್ವೇರಿಯಂ’ ಇದೆ. ಅದರೊಳಗೆ ಇಡೀ ಮಹಡಿ ಮನೆಯೆತ್ತರದ ಗಾಜುಗೊಳದಲ್ಲಿ ಜಲರಾಶಿಗಳ ಜೀವವೈವಿಧ್ಯವಿದೆ. ಹೀಗಾಗಿ ನನಗೆ ಅಚ್ಚಗನ್ನಡದಲ್ಲಿ ‘ಮೀನುಗಳ ಮನೆ’ ಎಂಬ ಪದ ಥಟ್ಟನೆ ಹೊಳೆಯಿತು. ನಮ್ಮ ಪುಟ್ಟ ಕಣ್ಣುಗಳಿಗೆ ಅವುಗಳ ಸರಿದಾಟ, ವೇಗಚಲನೆ ನೋಡಿದರೂ ದಣಿವಾಗದು. ಸಮೃದ್ಧ ಜಲಚರಗಳ ಸೂಕ್ಷ್ಮಜಗತ್ತು, ಅವುಗಳ ಬಗೆಗಿನ ನಮ್ಮ ಅರಿವನ್ನು ಸಾಗರದಷ್ಟು ವಿಸ್ತರಿಸುತ್ತದೆ. ಅಲ್ಲಿನ ಸಾಸಿವೆಕಾಳಿನ ಗಾತ್ರದ ಜಲಚರಗಳನ್ನು ನೋಡಿ ಒಂದು ಕ್ಷಣ ಮೂಕವಿಸ್ಮಿತರಾಗಿಬಿಡುತ್ತೇವೆ. ಸಾಗರಗರ್ಭದ ಜೀವಸೃಷ್ಟಿಯ ಬಗ್ಗೆ ನಮಗೇ ತಿಳಿಯದ ಎಷ್ಟೋ ಮಾಹಿತಿ ಇಲ್ಲಿ ದಕ್ಕುತ್ತದೆ.

ಗಾಜಿನ ಆಯತದೊಳಗೆ ಹರಿದಾಡುವ ಎಲ್ಲ ಗಾತ್ರದ ಮೀನು ಪ್ರಬೇಧಗಳು ನಮ್ಮ ಮೈಸೋಕುವಷ್ಟು ಸನಿಹ ಕಾಣಸಿಗುತ್ತವೆ. ದಪ್ಪಗಾಜಿನ ಗೋಡೆ ನಡುವೆ ಇರುವುದನ್ನೂ ಮರೆತು ರೋಮಾಂಚನಗೊಳ್ಳುತ್ತೇವೆ. ಬಟ್ಟಲು ಗಾತ್ರ, ಬಾಳೆಎಲೆ ವಿನ್ಯಾಸದ, ತೆಳುಪರದೆಯಂತೆ ಮೈ ಬಿಚ್ಚಿಕೊಳ್ಳುವ, ಜಡೆಯ ಹೆರಳಂತೆ ಮೈ ಜಾರಿಸುವ, ಬೆಳ್ಳಿಯಂತೆ ಮಿರಿಮಿರಿ ಹೊಳಪಿರುವ, ಸರ‍್ರನೆ ಮರಿ ತಿಮಿಂಗಿಲದಂತೆ ಹಾಯುವ ಅಷ್ಟೇಕೆ ಹೆಬ್ಬಾವಿನ ಪಟ್ಟೆಯ ಹಾಗಿರುವ ಮೈನ ಮೀನುಗಳ ಚಲನೆ ನಮ್ಮನ್ನು ವಾಸ್ತವ ಜಗತ್ತಿನಿಂದ ಬೇರ್ಪಡಿಸುತ್ತವೆ.

ಅಬ್ಬಾ! ಗಾಜಿನ ಗೋಡೆಗೇ ಅಂಟಿಕೊಂಡಿರುವ ಆಕ್ಟೋಪಸ್, ಜೆಲ್ಲಿಫಿಶ್, ಒಂದೇ ಎರಡೇ?!. ಮತ್ಸ್ಯ ಸಾಮ್ರಾಜ್ಯದ ವೈವಿಧ್ಯ! ಸಾಗರ ಜೀವಶಾಸ್ತ್ರವಿದ್ಯಾರ್ಥಿಗಳಿಗೆ ಅದೊಂದು ವಿಶ್ವವಿದ್ಯಾಲಯ. ಈ ನಡುವೆ ಪೆಂಗ್ವಿನ್ ಹಕ್ಕಿಗಳಿಗೆ ಆಹಾರ ನೀಡುವ ಪ್ರಾತ್ಯಕ್ಷಿಕೆ ಪ್ರವಾಸಿಗರನ್ನು ಕುತೂಹಲದಿಂದ ಕಾಯುವಂತೆ ಮಾಡುತ್ತದೆ. ಪುಟ್ಟ ಮಕ್ಕಳಂತೆ ಎಲ್ಲರೂ ಪಿಳಿಪಿಳಿ ಕಣ್ಣುಬಿಟ್ಟು ಕೂತಿರುವ ದೃಶ್ಯ ಪಕ್ಷಿ ಸಂಕುಲದ ಬಗ್ಗೆ ಮನುಷ್ಯ ವರ್ಗ ಇನ್ನೂ ಮುಗ್ಧತೆ ಉಳಿಸಿಕೊಂಡಿದೆ ಎಂಬುದನ್ನು ಸಂಕೇತಿಸುತ್ತದೆ.

ಸುಂದರ ಸಮುದ್ರತೀರ, ನಿಚ್ಚಳ ಮರಳ ದಂಡೆ. ಒಂದುಕ್ಷಣ ನಿಮ್ಮ ತಲ್ಲಣಗಳನ್ನು ಬದಿಗೊತ್ತಿ ಉಲ್ಲಸಿತರಾಗಬಹುದು.

ಕ್ಯಾಲಿಫೋರ್ನಿಯಾಗೆ ಹೋದಾಗ ಮೊಂಟರಿ ಪಟ್ಟಣಕ್ಕೆ ಭೇಟಿ ನೀಡುವುದನ್ನು ಮರೆಯದಿರಿ.

ಹೋಗುವುದು ಹೇಗೆ ?

ಮೊಂಟರಿ ನಗರಕ್ಕೆ ಸ್ಯಾನ್‌ಫ್ರಾನ್ಸಿಸ್ಕೋ ಪಟ್ಟಣದಿಂದ ಸುಮಾರ 118 ಮೈಲುಗಳಷ್ಟು ದೂರವಿದೆ. ಉತ್ತಮ ರಸ್ತೆ ಮಾರ್ಗವಿದೆ. ಸುಮಾರು ಮೂರು ಗಂಟೆಯ ಪ್ರಯಾಣ. ಸ್ವಂತ ಅಥವಾ ಬಾಡಿಗೆ ವಾಹನಗಳಲ್ಲಿ ಪ್ರಯಾಣಿಸಿದರೆ ಸಮಯ ಉಳಿಯುತ್ತದೆ. ಚಾರಣಿಗರಿಗೆ ಸೈಕಲ್‌ಗಳು ಬಾಡಿಗೆಗೆ ಸಿಗುತ್ತವೆ.

ಊಟ – ವಸತಿ

ವಸತಿಗೆ ಸಾಮಾನ್ಯ ದರದಿಂದ ಹಿಡಿದು ಐಷಾರಾಮಿ ದರದವರೆಗಿನ ಹೋಟೆಲ್‌ಗಳಿವೆ. ನಿಮ್ಮ ಕಿಸೆಯ ಸಾಮರ್ಥ್ಯಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳವುದು ಒಳಿತು. ಭಾರತೀಯ ಅದರಲ್ಲೂ ದಕ್ಷಿಣ ಭಾರತೀಯ ಊಟೋಪಹಾರ ಕಷ್ಟಸಾಧ್ಯ. ಆದ್ದರಿಂದ ಸಸ್ಯಾಹಾರಿಗಳಾಗಿರುವವರು ತಮ್ಮದೇ ಶೈಲಿಯ ಬುತ್ತಿಗಂಟು ಜತೆಗೆ ಕುಡಿವ ನೀರು ಒಯ್ಯುವುದು ಒಳಿತು.

ಪ್ರತಿಕ್ರಿಯಿಸಿ (+)