ಮಂಗಳವಾರ, ಅಕ್ಟೋಬರ್ 15, 2019
22 °C

ವಿಶಿಷ್ಟ ಶಿಲ್ಪೋದ್ಯಾನ ನಾರ್ವೆಯ ‘ಫ್ರಾಗ್ನರ್ ಪಾರ್ಕ್’

Published:
Updated:

ಯೂರೋಪ್‌ನ ದ್ವೀಪರಾಷ್ಟ್ರ ನಾರ್ವೆ, ಸುಂದರ ಪ್ರಕೃತಿಯ ತಾಣ. ನಾರ್ವೆಯ ರಾಜಧಾನಿ ಓಸ್ಲೊ, ಹಲವು ಪ್ರವಾಸಿತಾಣಗಳನ್ನು ಒಡಲಿಲ್ಲಟ್ಟುಕೊಂಡಿದೆ. ಅಂಥ ತಾಣಗಳ ಪಟ್ಟಿಗೆ ಫ್ರಾಗ್ನರ್ ಪಾರ್ಕ್, ವೈಕಿಂಗ್ ಶಿಪ್ ಮ್ಯೂಸಿಯಂ, ರಾಯಲ್ ಪ್ಯಾಲೆಸ್, ಅಕೆರ್ಶಸ್ ಫೋರ್ಟ್‌ಗಳು ಸೇರುತ್ತವೆ.

ಓಸ್ಲೊ ನಗರದ ಫ್ರಾಗ್ನರ್‌ ಪಾರ್ಕ್‌, ಸುಮಾರು 110 ಎಕರೆಯಲ್ಲಿದೆ. ಈ ಪಾರ್ಕ್‌ ವೈಶಿಷ್ಟ್ಯವೆಂದರೆ ಅಲ್ಲಿರುವ ವೈವಿಧ್ಯಮಯ ಶಿಲ್ಪಗಳು. ಇದು ವಿಶ್ವದ ‘ಏಕ ಶಿಲ್ಪಿಯ ಅತಿ ದೊಡ್ಡ ಶಿಲ್ಪಗಳ ಉದ್ಯಾನ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಉದ್ಯಾನ ಗುಸ್ತಾವ್ ವಿಜಿಲ್ಯಾಂಡ್‌ ಎಂಬ ಶಿಲ್ಪಿಯ ಕನಸಿನ ಕೂಸು. ವಿಜಿಲ್ಯಾಂಡರ ಶಿಲ್ಪಗಳಿಂದಾಗಿ ಈ ಪಾರ್ಕ್‌ಗೆ ‘ವಿಜಿಲ್ಯಾಂಡ್ ಸ್ಕಲ್ಪರ್ಚರ್ ಪಾರ್ಕ್’ ಅಥವ ‘ವಿಜಿಲ್ಯಾಂಡ್ ಶಿಲ್ಪಕಲಾ ಉದ್ಯಾನವನ’ ಎಂದೇ ಇದು ಪ್ರಸಿದ್ಧವಾಗಿದೆ.

ಒಂದು ಉದ್ಯಾನವನವೆಂದರೆ, ಅಲ್ಲಿ ಮರ, ಗಿಡ, ಕಾರಂಜಿಗಳಿರುವುದು ಸಾಮಾನ್ಯ. ಆದರೆ, ಇಲ್ಲಿ 212 ಆಳೆತ್ತರದ ಮೂರ್ತಿಗಳಿವೆ. ಹೆಚ್ಚಿನ ಮೂರ್ತಿಗಳು ಕಂಚಿನವು. ಇನ್ನು ಕೆಲವು ಗ್ರಾನೈಟ್, ಮೆದು ಕಬ್ಬಿಣದವು. ಇಲ್ಲಿರುವ ಮೂರ್ತಿಗಳು ಜನ ಸಾಮಾನ್ಯರ ಮೂರ್ತಿಗಳು. ವಿವಿಧ ಭಂಗಿಯಲ್ಲಿರುವ ಮೂರ್ತಿಗಳ ಮುಖದಲ್ಲಿ ಪ್ರೀತಿ, ಅಳು, ನಗು, ನೋವು, ಸ್ವಾತಂತ್ರ್ಯ ಮತ್ತು ಆಕಾಂಕ್ಷೆಯಂತಹ ಭಾವನೆಗಳಿವೆ. ಮನುಷ್ಯನ ಜೀವ–ಭಾವ ಮತ್ತು ಜೀವನಚರಿತ್ರೆ ಬಿಂಬಿಸುವುದೇ ಶಿಲ್ಪಿಯ ಮುಖ್ಯ ಉದ್ದೇಶ. ಇಲ್ಲಿನ ಶಿಲ್ಪಗಳ ಮತ್ತೊಂದು ವೈಶಿಷ್ಟ್ಯವೆಂದರೆ ಎಲ್ಲವೂ ನಗ್ನ ಶಿಲ್ಪಗಳು. ‘ಬಟ್ಟೆಗಳ ಫ್ಯಾಷನ್ ಬದಲಾಗುತ್ತಿರುತ್ತದೆ ಆದ್ದರಿಂದ ಶಿಲ್ಪಗಳಲ್ಲಿ ಬಟ್ಟೆಗಳನ್ನೇಕೆ ತೋರಿಸಬೇಕು’ ಎನ್ನುವುದು ಶಿಲ್ಪಿಯ ಅಂಬೋಣ.

ಉದ್ಯಾನದ ಮುಖ್ಯದ್ವಾರ ದಾಟಿ ಒಳ ಬರುತ್ತಿದ್ದಂತೆ ಬಲಬದಿಯಲ್ಲಿ ಶಿಲ್ಪಿ ಗುಸ್ತಾವ್ ವಿಜಿಲ್ಯಾಂಡರ ಮೂರ್ತಿ ಎದುರಾಗುತ್ತದೆ. ನಂತರ ಸೇತುವೆಯ ಮಾದರಿಯ ಸುಮಾರು 15 ಮೀಟರ್ ಅಗಲದ ದಾರಿಯಿದ್ದು ಎರಡೂ ಕಡೆ 58 ಕಂಚಿನ ಮೂರ್ತಿಗಳಿವೆ. ಮಗುವಿನ ಕೈಯನ್ನು ಹಿಡಿದುಕೊಂಡಿರುವ ತಾತ, ಗ್ರೀಕ್ ಅಥೆನ್ಸ್ ಒಲಿಂಪಿಕ್ ಆಟಗಾರ್ತಿಯನ್ನು ಹೋಲುವ ನೃತ್ಯ ಭಂಗಿಯಲ್ಲಿರುವ ಶಿಲ್ಪ, ದೊಡ್ಡ ಹಲ್ಲಿಯನ್ನು ಅಪ್ಪಿಕೊಂಡಿರುವ ಮಹಿಳೆಯ ಶಿಲ್ಪಗಳು ನೆನಪಿನಲ್ಲಿ ಉಳಿಯುತ್ತವೆ. ಕುಳಿತು ಆಲೋಚಿಸುತ್ತಿರುವ, ನಿಂತಿರುವ, ಗಡಿಬಿಡಿಯಿಂದ ನಡೆಯುವಂತೆ ಕಾಣುವ ಶಿಲ್ಪಗಳು, ಅಳುವ ಮಗು, ಮಗುವನ್ನು ಆಡಿಸುತ್ತಿರುವ ಪುರುಷ, ಪ್ರೇಮ ಚೇಷ್ಟೆಯಲ್ಲಿ ತೊಡಗಿಕೊಂಡಿರುವ ಪ್ರೇಮಿಗಳು, ಜಗಳವಾಡುತ್ತಿರುವ ಪುರುಷರಿಬ್ಬರ ಶಿಲ್ಪಗಳು ಒಂದು ಕ್ಷಣ ನಿಂತು, ಕಣ್ತುಂಬಿಕೊಂಡು ಹೋಗಿ ಎನ್ನುತ್ತವೆ. ಇಲ್ಲಿನ ಮುಖ ಸಿಂಡರಿಸಿಕೊಂಡು ರಚ್ಚೆ ಹಿಡಿದು ಅಳುವ ಮಗುವಿನ ಶಿಲ್ಪವೊಂದಿದೆ. ಇದೇ ಪ್ರಸಿದ್ಧ ‘ಆ್ಯಂಗ್ರಿ ಬಾಯ್’ ಶಿಲ್ಪ. ಪ್ರವಾಸಿಗರು ಅತಿ ಹೆಚ್ಚು ಫೋಟೊ ಸೆರೆ ಹಿಡಿಯುವ ಶಿಲ್ಪವೆಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ.

ಮನುಷ್ಯನ ಭಾವನೆ, ಚಟುವಟಿಕೆ, ಜೀವನಚಕ್ರವನ್ನೇ ಕೇಂದ್ರವಾಗಿಸಿಕೊಂಡು ಪ್ರತಿ ಶಿಲ್ಪವನ್ನೂ ರಚಿಸಲಾಗಿದೆ. ಈ ಶಿಲ್ಪಗಳಲ್ಲಿ ಎಲ್ಲ ವಯೋಮಾನದವರ ಭಾವನೆಗಳನ್ನು (ಸ್ತ್ರೀ–ಪುರುಷ ಸೇರಿದಂತೆ) ಅಡಕವಾಗಿ ಸಲಾಗಿದೆ. ಸಮಾಧಾನದಿಂದ ಎಲ್ಲವನ್ನು ವೀಕ್ಷಿಸಿ ಅರಿತುಕೊಳ್ಳಬೇಕು. ನನ್ನ ಪ್ರಕಾರ ಇಡೀ ಉದ್ಯಾನವನದಲ್ಲಿ ಪುರುಷ ಶಿಲ್ಪಗಳು ಮತ್ತು ‘ಅವನ’ ಭಾವನೆಗಳಿಗೇ ಹೆಚ್ಚು ಒತ್ತು ಕೊಟ್ಟಂತಿದೆ.

ಸುಮಾರು 46 ಅಡಿ ಎತ್ತರವಿರುವ ಏಕಶಿಲಾ ಶಿಲ್ಪವೇ ಇಲ್ಲಿನ ಪ್ರಧಾನ ಆಕರ್ಷಣೆ. ಮೆಟ್ಟಿಲುಗಳಿರುವ ವೇದಿಕೆಯ ಮೇಲೆ ನಿಂತಿರುವ ಈ ಶಿಲ್ಪವು ಗ್ರಾನೈಟ್ ಕಲ್ಲಿನಲ್ಲಿ ಕೆತ್ತಿದ್ದು ಸುಮಾರು 121 ಮಾನವನ ದೇಹಗಳು ಒಂದಕ್ಕೊಂದು ಹೆಣೆದುಕೊಂಡಿವೆ. ಎಲ್ಲವೂ ಮೇಲೇರಲು ಕುಸ್ತಿ ಮಾಡುವಂತಿದೆ. 1927ರಲ್ಲಿ ನೂರಕ್ಕೂ ಅಧಿಕ ಟನ್ನಿನ ಗ್ರಾನೈಟ್‌ ಅನ್ನು ‘ಹಾಲ್ಡನ್’ ಕಣಿವೆಯಿಂದ ಇಲ್ಲಿಗೆ ತರಲಾಯಿತಂತೆ. ನಂತರ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಲ್ಲಿ ಇದರ ಮಾದರಿಯನ್ನು ತಯಾರಿಸಿ ಮುಂದೆ ಕಲ್ಲು ಕೆತ್ತುವವರು 14 ವರ್ಷಗಳ ಕಾಲ ಈ ಏಕಶಿಲ್ಪದ ಕೆತ್ತನೆಯಲ್ಲಿ ತೊಡಗಿಕೊಂಡಿದ್ದು 1944ರ ಕ್ರಿಸ್‌ಮಸ್‌ ದಿನದಂದು ಸಂದರ್ಶಕರಿಗೆ ತೆರೆದುಕೊಂಡಿತು.

ವೇದಿಕೆಯ ಮೆಟ್ಟಿಲುಗಳ ಮೇಲೆ ಗ್ರಾನೈಟ್ ಕಲ್ಲಿನ ವಿವಿಧ ಭಾವನೆಗಳನ್ನು ಅನಾವರಣಗೊಳಿಸುವ 36 ಮೂರ್ತಿಗಳಿವೆ. ಇನ್ನೊಂದು ಗಮನ ಸೆಳೆಯುವ ಶಿಲ್ಪ ‘ವೀಲ್ ಆಫ್ ಲೈಫ್’. ಚಕ್ರದೊಳಗೆ ನಾಲ್ಕು ಮನುಷ್ಯನ ಆಕೃತಿಗಳು ಮತ್ತು ಮಗು ಸುತ್ತಿಕೊಂಡಿದೆ. ಇದು ಜೀವನದ ಅನಂತತೆಯನ್ನು ಸಾರಿದಂತೆ ಕಾಣುತ್ತದೆ.

‘ದಿ ಫೌಂಟನ್’ ಎಂದೇ ಪ್ರಸಿದ್ಧವಾಗಿರುವ ಮಾನವನ ಜೀವನಚಕ್ರವನ್ನು ಸೂಚಿಸುವ ಸುಮಾರು 20 ಕಂಚಿನ ಶಿಲ್ಪಗಳ ಗುಚ್ಛವಿದೆ. ಮಧ್ಯದಲ್ಲಿ ನೀರಿನ ಪಾತ್ರೆ ಹೊತ್ತುಕೊಂಡಿರುವ ಆರು ಪುರುಷರ ಪ್ರತಿಮೆಗಳಿವೆ. 20 ಶಿಲ್ಪಗಳೂ ಮರಕ್ಕೆ ಅಂಟಿಕೊಂಡಂತಿದ್ದು ಹುಟ್ಟು, ಬಾಲ್ಯ, ಪ್ರೇಮ, ವಿರಹ, ವೈರಾಗ್ಯ, ವೃದ್ಧಾಪ್ಯ, ಸಾವು ಎಲ್ಲವನ್ನೂ ಕಣ್ಣಿಗೆ ಕಟ್ಟಿದಂತೆ ಕೆತ್ತಿದ್ದಾರೆ. ಇವೆಲ್ಲ ಉದ್ಯಾನದಲ್ಲಿ ಮೊದಲಿಗೆ ಸ್ಥಾಪಿಸಲ್ಪಟ್ಟ ಶಿಲ್ಪಗಳು. ಇದನ್ನು ಮೊದಲು ಪಾರ್ಲಿಮೆಂಟ್‌ ಎದುರು ನಿಲ್ಲಿಸಲು ಯೋಚಿಸಿದ್ದರಂತೆ. ನಂತರ ಚರ್ಚೆಗೆ ಒಳಗಾಗುವ ಭೀತಿಯಿಂದಾಗಿ ಉದ್ಯಾನವನದಲ್ಲಿ ಸ್ಥಾಪಿಸಿದರಂತೆ.

‘ಎ ಮ್ಯಾನ್ ಅಟಾಕ್ಡ್‌ ಬೈ ಬೇಬೀಸ್’ ಎಂದು ಕರೆಯಲ್ಪಡುವ ಶಿಲ್ಪವನ್ನು ‘ಅಮೂರ್ತ’ ಶಿಲ್ಪವೆನ್ನಬಹುದು. ಹಾರಾಡುತ್ತಿರುವ ನಾಲ್ಕು ಮಕ್ಕಳಿಂದ ತೊಂದರೆಗೊಳಗಾದ ಪುರುಷನ ಈ ಶಿಲ್ಪವು ನಮ್ಮನ್ನು ಆಲೋಚನೆಗೆ ಹಚ್ಚುತ್ತದೆ. ಈ ಫ್ರಾಗ್ನರ್ ಉದ್ಯಾನವನದಲ್ಲಿ ಶಿಲ್ಪಗಳ ಉದ್ಯಾನವನವಲ್ಲದೆ ಸ್ಟೇಡಿಯಂ, ಕ್ರೀಡಾ ಮಂಟಪ, ಕೊಳ, ದೊಡ್ಡ ಮನೆ ಮತ್ತು ಸ್ಪಾ ಇದೆ.

ಇದನ್ನೂ ಓದಿ: ಮನ ತಂಪಾಗಿಸುವ ಮೌಂಟ್‌ಟೈಟ್ಲಿಸ್‌

ಇಲ್ಲಿ ಅತಿಶಯವಾದದ್ದು ಯಾವುದೂ ಇಲ್ಲ. ಎಲ್ಲವೂ ಸಾಮಾನ್ಯ, ಸರಳ, ಸುಂದರವಾಗಿದ್ದು ಪರಿಶುದ್ಧತೆಯನ್ನು ಸಾರುತ್ತದೆ. ಆದರೂ ಇದೊಂದು ಅಸಾಮಾನ್ಯ, ಉತ್ಕೃಷ್ಟವಾದ ಉದ್ಯಾನ. ನೋಡುಗರು ಕೆಲವು ಕ್ಷಣ ಆಶ್ಚರ್ಯ ಚಕಿತರಾದರೂ, ಜೀವನವೆಂದರೆ ಇದೇ ತಾನೇ ಎನ್ನುವ ತೀರ್ಮಾನಕ್ಕೆ ಬರುವುದು ಸುಳ್ಳಲ್ಲ.

ಪಾರ್ಕ್‌ ಪೂರ್ವಾಪರ

ಫ್ರಾಗ್ನರ್ ಪಾರ್ಕ್‌ನಲ್ಲಿ ಶಿಲ್ಪಗಳ ಕೆತ್ತನೆ ಕೆಲಸ ಶುರುವಾದದ್ದು 1924ರಲ್ಲಿ. ಮುಕ್ತಾಯಗೊಂಡಿದ್ದು 1949ರಲ್ಲಿ. ಆದರೆ ಕನಸುಗಾರ, ಮುಖ್ಯ ಶಿಲ್ಪಿ ಗುಸ್ತಾವ್ ವಿಜಿಲ್ಯಾಂಡ್ 1942ರಲ್ಲಿ ಸಾವನ್ನಪಿದ್ದರಿಂದ, ಉದ್ಯಾನವನದಲ್ಲಿನ ಶಿಲ್ಪಗಳ ಕೆತ್ತನೆ ಕಾರ್ಯ ಮುಕ್ತಾಯವಾಗುವುದನ್ನು ಅವನಿಗೆ ನೋಡಲಾಗಲಿಲ್ಲ.

ಅಂದ ಹಾಗೆ, ಈ ಉದ್ಯಾನಕ್ಕೆ ವರ್ಷಕ್ಕೆ ಸುಮಾರು 10 ಲಕ್ಷಕ್ಕೂ ಅಧಿಕ ಜನರು ಭೇಟಿ ನೀಡುತ್ತಾರಂತೆ. ವರ್ಷದ 365 ದಿನವೂ, 24 ನಾಲ್ಕು ಗಂಟೆಯೂ ಸಾರ್ವಜನಿಕರಿಗಾಗಿ ಉದ್ಯಾನವನ ತೆರೆದಿರುತ್ತದೆ. ಉದ್ಯಾನ ಪ್ರವೇಶಕ್ಕೆ ಉಚಿತ ಪ್ರವೇಶ.

ಚಿತ್ರಗಳು: ಲೇಖಕರವು

Post Comments (+)