ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭುವಿಯ ಮೇಲಿನ ನಂದನ ಗಾರ್ಡನ್ಸ್ ಬೈ ದ ಬೇ

Last Updated 16 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಸಿಂಗಪುರ ಹಲವು ಆಕರ್ಷಣೆಗಳ ನಗರ. ಇಲ್ಲಿನ ‘ಗಾರ್ಡನ್ಸ್ ಬೈ ದ ಬೇ’ ಎಂಬ ಹೆಸರಿನ ಹಸಿರನ್ನೇ ತುಳುಕಿಸುವ ನೇಚರ್ ಪಾರ್ಕ್‌ ಪ್ರಮುಖ ಆಕರ್ಷಣೆ. ಅದು ಸಿಂಗಪುರದ ಐಕಾನ್ ಕೂಡ ಆಗಿದೆ. ನಗರದ ಮಧ್ಯ ಭಾಗದಲ್ಲಿರುವ ಇದು ಸುಮಾರು 250 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಉದ್ಯಾನವನವನ್ನು ಬೇ ಸೆಂಟ್ರಲ್ ಗಾರ್ಡನ್, ಬೇ ಈಸ್ಟ್ ಗಾರ್ಡನ್ ಹಾಗೂ ಬೇ ಸೌತ್ ಎಂದು ವಿಭಜಿಸಿದ್ದಾರೆ. ಭುವಿಯ ಮೇಲಿನ ನಂದನವನವೇ ಇದು ಎಂಬ ಭಾವನೆ ಮೂಡುತ್ತದೆ.

ಸಿಂಗಪುರ ಭೇಟಿ ನೀಡಬೇಕೆಂಬುದು ನನ್ನ ಬಹು ದಿನದ ಕನಸಾಗಿತ್ತು. ಕೇವಲ ಸಿನಿಮಾಗಳಲ್ಲಿ ಮಾತ್ರ ನೋಡಿದ್ದ ಸಿಂಗಪುರದ ದೃಶ್ಯ ಕಾವ್ಯಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಅದು ಕೈಗೂಡಿತ್ತು.

ಬೆಂಗಳೂರಿನಿಂದ ಸಿಂಗಪುರ ತಲುಪಿ ಅಲ್ಲಿನ ಚಾಂಗಿ ಏರ್‌ಪೋರ್ಟ್‌ನಲ್ಲಿ ಕಾಲಿಡುತ್ತಿದ್ದಂತೆಯೇ ಈ ದೇಶದ ಜನ ಸ್ವಚ್ಛತೆಗೆ ನೀಡುವ ಪ್ರಾಮುಖ್ಯದ ಬಗ್ಗೆ ನನಗೆ ಅರಿವಾಯಿತು. ನಿಲ್ದಾಣದಿಂದ ಹೊರಟಾಗ, ಕಪ್ಪು ಹೆಬ್ಬಾವಿನಂತೆ ಮಿರ ಮಿರನೆ ಮಿಂಚುವ ಟಾರ್ ರಸ್ತೆಗಳು, ಆಕಾಶಕ್ಕೆ ಮುತ್ತಿಡುವಂತಿರುವ ಅದ್ಭುತ ವಾಸ್ತುಶಿಲ್ಪವನ್ನು ಮೈಗೂಡಿಸಿಕೊಂಡ ಕಟ್ಟಡಗಳನ್ನು ಕಂಡು ಬೆರಗಾದೆ. ಶಿಸ್ತು, ಸಂಯಮ, ಪರಿಶ್ರಮಗಳನ್ನೇ ತಮ್ಮ ಮೂಲ ಮಂತ್ರವನ್ನಾಗಿಸಿಕೊಂಡಿದೆ ಈ ದೇಶ.

ಸಿಂಗಪುರ ಹಲವು ಆಕರ್ಷಣೆಗಳ ನಗರ. ಇಲ್ಲಿನ ‘ಗಾರ್ಡನ್ಸ್ ಬೈ ದ ಬೇ’ ಎಂಬ ಹೆಸರಿನ ಹಸಿರನ್ನೇ ತುಳುಕಿಸುವ ನೇಚರ್ ಪಾರ್ಕ್‌ ಪ್ರಮುಖ ಆಕರ್ಷಣೆ. ಅದು ಸಿಂಗಪುರದ ಐಕಾನ್ ಕೂಡ ಆಗಿದೆ. ನಗರದ ಮಧ್ಯ ಭಾಗದಲ್ಲಿರುವ ಇದು ಸುಮಾರು 250 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಉದ್ಯಾನವನವನ್ನು ಬೇ ಸೆಂಟ್ರಲ್ ಗಾರ್ಡನ್, ಬೇ ಈಸ್ಟ್ ಗಾರ್ಡನ್ ಹಾಗೂ ಬೇ ಸೌತ್ ಎಂದು ವಿಭಜಿಸಿದ್ದಾರೆ. ಭುವಿಯ ಮೇಲಿನ ನಂದನವನವೇ ಇದು ಎಂಬ ಭಾವನೆ ಮೂಡುತ್ತದೆ.

ಉದ್ಯಾನವನ್ನು ಪ್ರವೇಶಿಸುತ್ತಿದ್ದಂತೆಯೇ ಹಚ್ಚ ಹಸುರಿನ ದಟ್ಟವಾದ ಗಿಡ-ಮರಗಳು ಕಣ್ಣಿಗೆ ತಂಪನ್ನೀಯುತ್ತವೆ. ಇಲ್ಲಿರುವ ಸೂಪರ್ ಟ್ರೀ ಗ್ರೋವ್, ಫ್ಲವರ್ ಡೋಮ್, ಕ್ಲೌಡ್ ಫಾರೆಸ್ಟ್, ಚಿಲ್ಡ್ರನ್ಸ್ ಗಾರ್ಡನ್, ಹಾರ್ಟಿಕಲ್ಚರ್ ಥೀಮ್ಡ್ ಗಾರ್ಡನ್, ಡೇ ಫ್ರಂಟ್ ಪ್ಲಾಜಾ ಮತ್ತು ಫ್ಲೋರಲ್ ಫ್ಯಾಂಟಸಿ ಎಂದು ವಿಭಾಗಿಸಲಾಗಿದೆ. ಇಲ್ಲಿನ ಗುಮ್ಮಟಾಕಾರ ಗಾಜಿನ ಮನೆ ಸುಪ್ರಸಿದ್ಧವಾಗಿದ್ದು, ಇದು ವಿಶ್ವದಲ್ಲಿಯೇ ಅತ್ಯಂತ ಬೃಹತ್ ಗಾಜಿನ ಮನೆ ಎಂಬ ಖ್ಯಾತಿಯೂ ಇದೆ. ಈ ಗಾಜಿನ ಮನೆ ತರಹೇವಾರಿಯ ಅಲಂಕಾರಕ ಪುಷ್ಪ ಹಾಗೂ ಗಿಡಗಳಿಂದ ತುಂಬಿಕೊಂಡಿದೆ.

ಉದ್ಯಾನವನದಲ್ಲಿ ಹಲವು ಕೃತಕ ಝರಿಗಳನ್ನು ಸೃಷ್ಟಿಸಲಾಗಿದೆ. ಮಾನವ ನಿರ್ಮಿತ ಜಲಧಾರೆಯೂ ಇದೆ. ಆ ಜಲಪಾತದಲ್ಲಿ ಸುಮಾರು 40 ಮೀಟರ್ ಎತ್ತರದಿಂದ ರಭಸವಾಗಿ ನೀರು ಬೀಳುತ್ತದೆ. ನೇಚರ್ ಪಾರ್ಕ್‌ನ ಅಭಿಮುಖವಾಗಿ ಮರೀನಾ ಜಲಾಶಯವಿರುವ ಕಾರಣ ನೀರಿಗೆ ಕೊರತೆ ಇಲ್ಲ. ನೀರನ್ನು ಹಿತಮಿತವಾಗಿ ಬಳಸುವುದಲ್ಲದೇ ನೀರಿನ ಮರು ಬಳಕೆಯ ವಿಧಾನವನ್ನು ಅತ್ಯಂತ ಸೊಗಸಾಗಿ ಇಲ್ಲಿ ಅಳವಡಿಸಿಕೊಂಡಿದ್ದಾರೆ.

‘ಸುಪರ್ ಟ್ರೀ ಗ್ರೋವ್’ ಭಾಗ ಟಾರ್ಚ್ ಆಕಾರದಲ್ಲಿದೆ. ಇಲ್ಲಿ 18 ಕಲಾತ್ಮಕ ಲೋಹದ ಕಂಬಗಳಿವೆ. ಇವುಗಳಿಗೆ ಆಕರ್ಷಕವಾದ ಬಳ್ಳಿಗಳನ್ನು ಹಬ್ಬಿಸಿದ್ದಾರೆ. ಸೋಲಾರ್ ಶಕ್ತಿಯಿಂದಲೇ ವಿದ್ಯುತ್ ದೀಪಗಳು ಬೆಳಗುತ್ತವೆ. ರಾತ್ರಿ ವೇಳೆಯಲ್ಲಿ ಇವು ಬಗೆ ಬಗೆಯ ಬಣ್ಣಗಳನ್ನು ಸೂಸುತ್ತವೆ. ಒಂದು ಸಾವಿರ ವರ್ಷ ಹಳೆಯ ಆಲೀವ್ ಮರಗಳೂ ಇಲ್ಲಿವೆ. ಸುಮಾರು ಐದು ಲಕ್ಷದಷ್ಟು ಗಿಡ-ಮರ, ಬಳ್ಳಿಗಳನ್ನು ಇಲ್ಲಿ ಪೋಷಿಸಲಾಗಿದೆ. ಅತೀ ಅಪರೂಪವೆನಿಸಿರುವ ಈ ಉದ್ಯಾನವನ ಹಲವಾರು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಕಳೆದ ವರ್ಷ 50 ದಶಲಕ್ಷದಷ್ಟು ಜನರು ಈ ಉದ್ಯಾನವನಕ್ಕೆ ಭೇಟಿ ನೀಡಿದ್ದಾರೆ.

ಆರ್ಕಿಡ್ ಸಿಂಗಪುರದ ರಾಷ್ಟ್ರೀಯ ಪುಷ್ಪ. ಇಲ್ಲಿ ಹಲವಾರು ಬಗೆಯ ಆರ್ಕಿಡ್‌ಗಳಿವೆ. ಬಗೆ ಬಗೆಯ ಗುಲಾಬಿ, ಅಲಂಕಾರಿಕ ಪುಷ್ಪೋದ್ಯಾನ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ವಿಸ್ತಾರವಾದ ಈ ಪಾರ್ಕಿನಲ್ಲಿ ವಸ್ತು ಸಂಗ್ರಹಾಲಯ, ಆಕ್ವೆರಿಯಮ್, ಮಾರಾಟ ಮಳಿಗೆಗಳು, ಉಪಹಾರ ಗೃಹಗಳು, ಎತ್ತರದ ಪ್ರದೇಶಕ್ಕೆ ತೆರಳಲು ಎಸ್ಕಲೇಟರ್‌ಗಳೂ ಇವೆ. ರಾತ್ರಿ ಹೊತ್ತು ಮಕ್ಕಳ ಮನೋರಂಜನೆಗೆ ಲೈಟಿಂಗ್ ಷೋಗಳೂ ನಡೆಯುತ್ತವೆ.

ಸಿಂಗಪುರ ‘ಗಾರ್ಡನ್ ಸಿಟಿ’ ಎಂದು ಖ್ಯಾತಿ ಪಡೆದಿರುವುದೇ ಇಂಥ ಹೂವಿನ ತೋಟ, ವೈವಿಧ್ಯಮಯ ಹಸಿರು ರಾಶಿ ಬೆಳೆದು ನಿಂತಿರುವ ಕಾರಣದಿಂದ. ಮುಂದೆ ನೀವು ಸಿಂಗಪುರಕ್ಕೆ ಭೇಟಿ ನೀಡಿದರೆ, ತಪ್ಪದೇ ನೇಚರ್ ಪಾರ್ಕ್‌ಗೆ ಭೇಟಿ ಕೊಡಿ.

ಚಿತ್ರಗಳು: ಪ್ರಜಾವಾಣಿ ಸಂಗ್ರಹ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT