ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವಾಯ್‌ ಬಹುರೂಪಿ ದ್ವೀಪ

Last Updated 28 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಅಮೆರಿಕದ ಐವತ್ತು ರಾಜ್ಯಗಳಲ್ಲಿ ಸಂಪೂರ್ಣ ದ್ವೀಪಗಳಿಂದ ಆವೃತವಾಗಿರುವ ದೊಡ್ಡ ರಾಜ್ಯ ಹವಾಯ್‌. ಇದನ್ನು ‘ದಿ ಬಿಗ್ ಐಲ್ಯಾಂಡ್’ ಎನ್ನುತ್ತಾರೆ. ಇದು ವಿಭಿನ್ನ ಭೂ ದೃಶ್ಯಗಳಿಂದ ಕೂಡಿರುವ ಅನನ್ಯ ತಾಣ. ಇಲ್ಲಿ ಕರಾವಳಿ ಕಾಡುಗಳ ನಡುವಿನ ಉಷ್ಣತೆಯ ಹವಾಮಾನದಿಂದ ಹಿಡಿದು ಮೌನಕೀಯ ಇಳಿಜಾರುಗಳನ್ನು (ಜ್ವಾಲಮುಖಿ ಪ್ರದೇಶ) ಹೊಂದಿರುವ ಹಿಮಪಾತದ ಶಿಖರಗಳವರೆಗೆ ಪ್ರತ್ಯೇಕ ಹವಾಮಾನ ವಲಯಗಳಿವೆ.

ಪೆಸಿಫಿಕ್ ಸಾಗರದಲ್ಲಿನ ದ್ವೀಪ ಸಮುದಾಯದಲ್ಲಿರುವ ಅಮೆರಿಕ ಸಂಯುಕ್ತ ಸಂಸ್ಥಾನದ ಈಶಾನ್ಯ, ಜಪಾನಿನ ಆಗ್ನೇಯ ಭಾಗದಲ್ಲಿರುವ ಇದರ ರಾಜಧಾನಿ ಹೊನೊಲುಲು. ನಾವು ಅಮೆರಿಕದ ಸ್ಯಾನ್‍ಫ್ರಾನ್ಸಿಸ್ಕೊ ದಿಂದ ಹವಾಯಿಯ ಕೈಲ-ಕೋನಾಗೆ ಸುಮಾರು 6 ಗಂಟೆ ವಿಮಾನದಲ್ಲಿ ಪ್ರಯಾಣ ಮಾಡಿದ್ದೆವು. ಕೋನಾ ಕರಾವಳಿ ಉದ್ದಕ್ಕೂ ರೌದ್ರರಮಣೀಯ ದೃಶ್ಯಗಳು. ವೈಕೊಲೊವಾದ ರೆಸಾರ್ಟ್ ಪ್ರದೇಶದೊಳಗಿರುವ ಪಂಚತಾರಾ ರೆಸಾರ್ಟ್‌ಗಳಲ್ಲಿ ಕಾಣುತ್ತಿದ್ದ ಸೂರ್ಯನ ಬೆಳಕು ಮರಳುಗಳ ರಾಶಿ ಕಂಡು ಅಚ್ಚರಿ ಎನಿಸಿತು.

ಇಲ್ಲಿಗೆ ಬರುವವರು ಪ್ರಕೃತಿ ಪ್ರೇಮಿಗಳಾದರೆ ಅಕಾಕಾ ಜಲಪಾತದ ಮೋಹಕವನ್ನು ಕಣ್ತುಂಬಿಸಿಕೊಳ್ಳುತ್ತಾರೆ. ಶಾಂತವಾದ ಪ್ರಾಸಂಗಿಕ ಅನುಭವವನ್ನು ಬಯಸುವವರು ಹಿಲೊ ನಗರಕ್ಕೆ ಭೇಟಿ ನೀಡುತ್ತಾರೆ. ಇಡೀ ದ್ವೀಪದ ಭೂಮಿಯ ವೈಚಿತ್ರ್ಯವನ್ನು ನೋಡ ಬಯಸುವವರು ಹವಾಯಿಯ ಜ್ವಾಲಾಮುಖಿ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿ ಲಾವಾ ಟ್ಯೂಬ್‍ಗಳ ಪ್ರವೇಶದ ಅನುಭವ ಪಡೆಯುತ್ತಾರೆ. ಸಾಹಸಿಗರು ಜೀವಂತ ಜ್ವಾಲಾಮುಖಿಗಳನ್ನು ಮುಖತಃ ಕಂಡು ಹೊಸದಾಗಿ ಸೇರ್ಪಡೆಗೊಂಡ ಬೀಚ್‍ಗಳಲ್ಲಿ ಕಾಲಕಳೆಯುತ್ತಾರೆ.

ಕೋನಾದ ರಾಜ ಕಾಮೆಹಮೆಹಾ ತನ್ನ ಅಂತಿಮ ವರ್ಷಗಳನ್ನು ಕೈಲುವಾಕೋನಾದಲ್ಲಿ ಕಳೆದನಂತೆ. 1778ರಲ್ಲಿ ಕ್ಯಾಪ್ಟನ್ ಜೇಮ್ಸ್ ಕುಕ್ ಈ ದ್ವೀಪಕ್ಕೆ ಮೊದಲು ಭೇಟಿಕೊಟ್ಟಿದ್ದು, ಅಲ್ಲಿಯೇ ಅವನು ಕೊಲ್ಲಲ್ಪಟ್ಟ. ಅವನ ನೆನಪಾಗಿ ಕಿಲಾಕೆಕುವಾ ಕೊಲ್ಲಿಯ ದಕ್ಷಿಣದ ಪುಹೋನುವಾ ಒ ಹೊನೌನೌ ಎಂಬ ರಾಷ್ಟ್ರೀಯ ಉದ್ಯಾನವನವಿದೆ. ಕೋನಾವು ಆಳವಾದ ಸಮುದ್ರ ಮೀನುಗಾರಿಕೆಗೆ ಪ್ರಸಿದ್ಧ. ದಕ್ಷಿಣ ಕೋನಾದ ಶಾಂತ ಮತ್ತು ತಿಳಿಯಾದ ನೀರು ಸ್ನಾಕ್ರ್ಲಿಂಗ್, ಡೈವಿಂಗ್, ನೌಕಾಯಾನ, ಡಾಲ್ಫಿನ್ ಮತ್ತು ಹಾನು ಆಮೆಗಳ ದರ್ಶನಕ್ಕೆ ಹೇಳಿ ಮಾಡಿಸಿದಂತಿದೆ.

ಕಡಲ ತೀರದ ಸೊಬಗು

ಹವಾಯಿ ದ್ವೀಪದ ಕಡಲತೀರಗಳು ಅದ್ಭುತವಾಗಿವೆ. ಅಲ್ಲಿರುವ ಪಿಚ್ ಕಪ್ಪುಮರಳು, ಸ್ಫಟಿಕ ಹಸಿರು ಮರಳು, ಒರಟಾದ ಬಿಳಿ ಮರಳು, ಅಲೆಗಳು.. ಇವೆಲ್ಲ ವರ್ಷಪೂರ್ತಿ ಇರುತ್ತವೆ. ಇಲ್ಲಿ ವರ್ಷಪೂರ್ತಿ ಪ್ರವಾಸಿಗರು ಇರುತ್ತಾರೆ. ಹವಳ ಮತ್ತು ಲಾವಾ ಬಂಡೆಗಳಿಂದ ಕೂಡಿರುವ ಹೊಸ ಬೀಚ್‍ಗಳು ಅದ್ವಿತೀಯವಾಗಿವೆ. ವಿಶ್ವದ ಏಕೈಕ ಹಸಿರು ಮರಳಿನ ಕಡಲತೀರ ‘ಗ್ರೀನ್ ಸ್ಯಾಂಡ್ ಬೀಚ್‌’ ಅಥವಾ ‘ಪಾಪಕೋಲಿಯಬೀಚ್’ ಸೊಗಸಾಗಿದೆ. ‘ಪುನುಲುಯ ಬೀಚ್’ನ ಕಪ್ಪು ಮರಳುಗಳಲ್ಲಿ, ಸೂರ್ಯನ ಬೆಳಕಿಗಾಗಿ ಹಪಹಪಿಸುವ ಪ್ರಸಿದ್ಧ ಹವಾಯಿ ಕಡಲಾಮೆಗಳನ್ನು ವೀಕ್ಷಿಸಬಹುದು.

‘ಹಪುನಾಬೀಚ್’– ಕುಟುಂಬ ಸಮೇತ ಸುತ್ತಾಡಲು ಇರುವ ಮತ್ತೊಂದು ಜನಪ್ರಿಯ ತೀರ. ‘ಮಣಿನಿಯೋವಾಲಿ’ ಕಡಲತೀರ ಸುಂದರವಾದ ಸಣ್ಣ ಮರಳಿನ ದಂಡೆ.

ವಾರಾಂತ್ಯದಲ್ಲಿ ಹೆಚ್ಚು ಸಂದಣಿ ಇರುವ ತೀರವೆಂದರೆ ‘ಕುವಾ ಬೇ ಬೀಚ್’. ಇಲ್ಲಿ ವಿಶ್ರಾಂತಿ ಕೊಠಡಿಗಳಿವೆ. ಈ ಕೊಠಡಿಗಳಲ್ಲಿ ಸಕಲ ಸೌಲಭ್ಯಗಳಿವೆ. ಇದೊಂದು ರೀತಿಯ ಸುಸಜ್ಜಿತ ಸೌಲಭ್ಯವಿರುವ ಕಡಲತೀರ.

ಈ ಹವಾಯಿ ದ್ವೀಪದಲ್ಲಿ ಅದ್ಭುತ ಕಡಲತೀರ ಮಾತ್ರವಲ್ಲ, ದ್ವೀಪದುದ್ದಕ್ಕೂ ಒಂದಕ್ಕೊಂದು ಕೊಂಡಿ ಯಾಗಿ ಧುಮ್ಮಿಕ್ಕುವ ಜಲಧಾರೆಗಳಿಗೂ (ಕ್ಯಾಸ್ಕೇಡಿಂಗ್ ಜಲಪಾತ) ಪ್ರಸಿದ್ಧಿ.

ರೈನ್‌ಬೊ ಜಲಪಾತ

ಹಿಲೊ ನಗರದ ವೈಲುಕು ರಿವರ್ ಸ್ಟೇಟ್ ಪಾರ್ಕ್‍ನಲ್ಲಿ ‘ರೈನ್‍ಬೊ’ ಜಲಪಾತವಿದೆ. ಹಿಲೊದಿಂದ ವೈಪಿಯೋ ವ್ಯಾಲಿಗೆ ಹೋಗುವ ದಾರಿಯಲ್ಲಿ ಟೀ, ಶುಂಠಿ ಸಸ್ಯರಾಶಿಗಳ ಜೊತೆ ಜೊತೆಗೆ ವಿನೂತನ ಪಕ್ಷಿಗಳ ವೀಕ್ಷಣೆಯೊಂದಿಗೆ ಸಣ್ಣ ಫುಟ್‌ಪಾತ್‌ನಲ್ಲಿ ಕಂಡು ಕಾಣದಂತೆ ಜೂಟಾಟವಾಡುವ ‘ಅಕಾಕಾ ಫಾಲ್ಸ್’ನ ಸುಂದರನೋಟವನ್ನು ಕಣ್ತುಂಬಿಸಿ ಕೊಳ್ಳಬಹುದು. ಸಮೀಪದಲ್ಲೇ ಕಾಹುನಾ ಎಂಬ ಜಲಪಾತ ವಿದೆ. ಮೋಹಕ ‘ಉಮಾಮಾ ಜಲಪಾತ’ ಅನನ್ಯ ಟ್ರಿಪಲ್ ಡೆಕ್ಕರ್ ಜಲಪಾತವಾಗಿದ್ದು ಇಲ್ಲಿ ಈಜು ಮತ್ತು ಕಯಾಕ್ ಸಾಹಸ ಮಾಡಬಹುದು. ಅಲ್ಲದೆ ‘ಹಿಯಿಲಾ, ವೈಲೈಕಹಿ, ಕಾಕೌಕಿ, ಲಾಹೋಮೆನೆ ಫಾಲ್ಸ್’ ಎಂಬ ಜಲಪಾತಗಳೂ ಕೂಡ ಪ್ರಸಿದ್ಧವಾಗಿದೆ.

ಹವಾಯಿಯನ್ ದ್ವೀಪಗಳು ಉಷ್ಣವಲಯದ ಕಾಡುಗಳ ಸ್ವರ್ಗವಲ್ಲ. ಲಾವಾ ಹರಿದು ಇಳಿಯುವಿಕೆ ನಿಂತಾಗ ಗುಹೆ ರೂಪುಗೊಳ್ಳುತ್ತದೆ. ಲಾವಾ ನದಿಯು ಕ್ರಮೇಣ ಘನ ಗೋಡೆಗಳನ್ನು ಮತ್ತು ಚಾವಣಿಯನ್ನು ನಿರ್ಮಿಸಿದಾಗ ಲಾವಾ ಗುಹೆಗಳು ಉಂಟಾಗುತ್ತವೆ. ಲಾವಾ ಟ್ಯೂಬ್‌ಗಳಲ್ಲಿ ‘ಥರ್ಸ್ಟನ್ ಲಾವಾ ಟ್ಯೂಬ್’. ‘ಹ್ಯೂ ಹ್ಯೂ ಟ್ಯೂಬ್’. ‘ಕೌಮಾನಾಗುಹೆ’. ‘ಕುಲಾ ಕೈ ಕವನ್ರ್ಸ ಗುಹೆ’ ಮತ್ತು ‘ಕಜುಮುರಾ ಗುಹೆ’ಗಳು ಪ್ರಮುಖವು. ಒಂದೊಂದು ಗುಹೆಯಲ್ಲಿ ಒಂದೊಂದು ವೈಶಿಷ್ಟ್ಯತೆಯಿದ್ದು ಗುಹೆಗಳ ಪ್ರವೇಶ ಆಸಕ್ತಿದಾಯಕವಾಗಿರುತ್ತದೆ.

‘ಹವಾಯಿ ಜ್ವಾಲಾಮುಖಿಗಳ ರಾಷ್ಟ್ರೀಯ ಉದ್ಯಾನವನ’ ಸಕ್ರಿಯ ಜ್ವಾಲಾಮುಖಿಯೊಂದಿಗೆ ಸಂದರ್ಶಕರು ಮುಖಾಮುಖಿಯಾಗುವ ವಿಶ್ವದ ಕೆಲವೇ ಸ್ಥಳಗಳಲ್ಲಿ ಒಂದು. ‘ಗುರಾಣಿ’ ಹವಾಯಿಯ ಮುಖ್ಯ ಜ್ವಾಲಾಮುಖಿ. ಅವು ಲಾವಾ ಹರಿವುಗಳನ್ನು ನಿಧಾನವಾಗಿ ಇಳಿಜಾರು, ಗುರಾಣಿ ತರಹದ ಪರ್ವತಗಳನ್ನುರೂಪಿಸುತ್ತದೆ. 1984ರಲ್ಲಿ ಸ್ಪೋಟಗೊಂಡ ‍‘ಮೌನಲೋಮ’ ಇದಕ್ಕೆ ಉತ್ತಮ ಉದಾಹರಣೆ.

ಜ್ವಾಲಾಮುಖಿಗಳ ಕಥೆ..

ಹವಾಯ್‌ ದ್ವೀಪದಲ್ಲಿ ನಿರಂತರವಾಗಿರುವ ಜ್ವಾಲಾಮುಖಿಗಳೆಂದರೆ ಹುವಾಲಾಲೈ, ಕಿಲೂಯೆ ಮತ್ತು ಮೌನಕ. ಲೀಹಿ, ಒವಾಹು. ಹಲೀಕಲಾ ಮತ್ತು ಕಿಲಾವಿಯಾ. 1996 ರಿಂದ ಸ್ಫೋಟಗೊಂಡ ಸೀಮೌಂಟ್ ಹೊಸ ದ್ವೀಪವನ್ನು ಈ ಸರಣಿಗೆ ಸೇರಿಸಬಹುದು. 1983ರಿಂದ ನಿರಂತರವಾಗಿ ಸ್ಫೋಟಗೊಳ್ಳುತ್ತಿರುವ ‘ಕಿಲಾವಿಸ್ಫೋಟ’ ಸುಮಾರು 250 ದಶಲಕ್ಷ ಘನ ಮೀಟರ್ ಲಾವಾ ಮತ್ತು ಬೂದಿಯನ್ನು ಹೊರಹಾಕುತ್ತಲಿದೆ.

ಹೋಗುವುದು ಹೇಗೆ

ಬೆಂಗಳೂರಿನಿಂದ ಸ್ಯಾನ್‌ಫ್ರಾನ್ಸಿಸ್ಕೊಗೆ ವಿಮಾನ ಸೌಲಭ್ಯವಿದೆ. ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ಹವಾಯ್‌ ದ್ವೀಪಗಳಿಗೆ ಪ್ರವಾಸ ಕರೆದೊಯ್ಯಲು ಅನೇಕ ಟ್ರಾವೆಲ್‌ ಏಜೆನ್ಸಿಗಳಿವೆ. ಗೂಗಲ್‌ನಲ್ಲಿ ಹುಡುಕಿದರೆ, ಆನ್‌ಲೈನ್‌ ಬುಕ್ಕಿಂಗ್ ವ್ಯವಸ್ಥೆಯೂ ಸಿಗಬಹುದು. ಸ್ಯಾನ್‌ಫ್ರಾನ್ಸಿಸ್ಕೊದಿಂದ ಹವಾಯ್‌ಗೆ ವಿಮಾನದಲ್ಲಿ ಆರುಗಂಟೆ ಪ್ರಯಾಣ.

ಹವಾಯ್‌ನಲ್ಲಿ ತಂಗಲು ವ್ಯವಸ್ಥಿತವಾದ ಐಶಾರಾಮಿ ರೆಸ್ಟೊರೆಂಟ್‌ಗಳಿವೆ. ಸಸ್ಯಾಹಾರಿ ಹೋಟೆಲ್‌ಗಳೂ ಇವೆ. ಸುತ್ತಾಡಲು ಉತ್ತಮ ಬಾಡಿಗೆ ಕಾರುಗಳಿವೆ. ಆನ್‌ಲೈನ್‌ಲ್ಲಿ ಬಾಡಿಗೆ ಕಾರುಗಳನ್ನು ಬುಕ್‌ ಮಾಡಿಡಬಹುದು. ಇದರಿಂದ ಸಮಯ ಉಳಿತಾಯವಾಗುತ್ತದೆ. ಅಮೆರಿಕದ 50 ನೇ ಹೊಸ ರಾಜ್ಯವಾದ ಹವಾಯ್‌ ಸಂಪೂರ್ಣ ದ್ವೀಪಗಳಿಂದಾದ ಏಕೈಕರಾಜ್ಯ. ಹವಾಯಿಯನ್ನು ಪ್ರವೇಶಿಸಲು ಯು.ಎಸ್‍ನ ವೀಸಾ ಕಡ್ಡಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT