ಗುರುವಾರ , ಡಿಸೆಂಬರ್ 5, 2019
24 °C

ಹಡ್ಸನ್‌ ನದಿ ದಂಡೆಯಲ್ಲಿ ಇಂಟ್ರೆಪಿಡ್ ಮ್ಯೂಸಿಯಂ

Published:
Updated:
Prajavani

ನ್ಯೂಯಾರ್ಕ್‌ನ ಹಡ್ಸನ್‌ ನದಿಯ ದಂಡೆಯ ಮೇಲಿರುವ ‘ಇಂಟ್ರೆಪಿಡ್‌’ ಮ್ಯೂಸಿಯಂನಲ್ಲಿ ಬಾಹ್ಯಾಕಾಶ ನೌಕೆಗಳು, ಯುದ್ಧ ನೌಕೆ, ವಿಮಾನ ಮತ್ತು ಸಬ್‌ಮೆರಿನ್‌ಗಳ ಪ್ರದರ್ಶನವಿದೆ. ಜತೆಗೆ ಬಾಹ್ಯಾಕಾಶ ವಿಜ್ಞಾನಕ್ಕೆ ಸಂಬಂಧಿತ ಐತಿಹಾಸಿಕ ಸಂಗ್ರಹವೇ ಇದೆ.

‘ಇಂಟ್ರೆಪಿಡ್’ ಎನ್ನುವುದು ಅಮೆರಿಕ ನೌಕಾದಳದ ವಿಮಾನ ವಾಹಕ ಯುದ್ಧನೌಕೆ. 2600 ಅಧಿಕಾರಿ ಮತ್ತು ಸೈನಿಕರನ್ನು ಹೊತ್ತು ತಿರುಗಿದ್ದ ಈ ನೌಕೆ ಈಗ ಹಡ್ಸನ್ ನದಿಯ ದಂಡೆಯಲ್ಲಿ ಶೈಕ್ಷಣಿಕ ಗಮ್ಯದ, ಸಾಂಸ್ಕೃತಿಕ ಉದ್ದೇಶಿತ ಲಾಭರಹಿತ ವಸ್ತುಪ್ರದರ್ಶನದ ಕೇಂದ್ರವಾಗಿ ಪರಿವರ್ತಿತವಾಗಿದೆ.

ನ್ಯೂಯಾರ್ಕ್‌ನ ಮ್ಯಾನ್‌ಹಟನ್‌ನಲ್ಲಿರುವ 250 ಮೀ. ಉದ್ದ ಮತ್ತು 30 ಮೀ. ಅಗಲದ ಈ ‘ಹಡಗು ಮ್ಯೂಸಿಯಂ’ನಲ್ಲಿ ಬಾಹ್ಯಾಕಾಶ ನೌಕೆ, ಸ್ಪೇಸ್ ಕ್ಯಾಪ್ಸೂಲ್, ಬಾಹ್ಯಾಕಾಶ ನಿಲ್ದಾಣ, ಕಂಟ್ರೋಲ್ ಯುನಿಟ್ ಮತ್ತಿತರ ಬಾಹ್ಯಾಕಾಶ ವಿಜ್ಞಾನಕ್ಕೆ ಸಂಬಂಧಿಸಿದ ಯಂತ್ರಗಳ ಸಂಗ್ರಹವೇ ಇದೆ. ಜತೆಗೆ ಅನೇಕ ಯುದ್ಧ ವಿಮಾನಗಳಿವೆ. ಸಂಗ್ರಹ, ಪ್ರದರ್ಶನ ಮತ್ತು ಕಾರ್ಯಕ್ರಮಗಳಿಂದ ಗಗನ ಸಂಬಂಧಿ ಐತಿಹಾಸಿಕ ಸಂಗತಿಗಳೊಂದಿಗೆ, ವೈಮಾನಿಕ ಸಾಧನೆಗಳನ್ನು ಇಲ್ಲಿ ಪರಿಚಯಿಸಲಾಗುತ್ತದೆ. ಮಕ್ಕಳಾದಿಯಾಗಿ ಎಲ್ಲರಿಗೂ ಬಾಹ್ಯಾಕಾಶ ವಿಜ್ಞಾನದ ಇತಿಹಾಸ ಮತ್ತು ಸೇವೆಗಳ ಕುರಿತಾಗಿ ಜಾಗೃತಿಯ ಅರಿವು ಮೂಡಿಸುವುದು ಈ ಮ್ಯೂಸಿಯಂ ತೆರೆದಿರುವ ಉದ್ದೇಶ.

ಮ್ಯೂಸಿಯಂ ಪ್ರವೇಶಿಸುತ್ತಿದ್ದಂತೆ...

ಇಷ್ಟೆಲ್ಲ ಮಾಹಿತಿ ಪಡೆದಿದ್ದ ನಾವು, ಇಂಟ್ರೆಪಿಡ್‌ ಮ್ಯೂಸಿಯಂ ಪ್ರವೇಶಿಸಿದೆವು. ಸೆಕ್ಯುರಿಟಿ ಚೆಕ್ ಮಾಡಿಕೊಂಡು ನೌಕಾವಾಹನ ದಲ್ಲಿ ಮ್ಯೂಸಿಯಂ ಪ್ರವೇಶಿಸುತ್ತಿದ್ದಾಗ ಮಿಶನ್ ಕಂಟ್ರೋಲ್ ಯುನಿಟ್ ಮತ್ತು ಎಂಟರ್‌ಪ್ರೈಸ್‌ ಬಾಹ್ಯಾಕಾಶ ನೌಕೆಯಲ್ಲಿದ್ದ ಗಗನಯಾನಿಗಳ ನಡುವೆ ಉಡಾವಣೆಯ ವೇಳೆ ನಡೆದ ನೈಜ ಸಂಭಾಷಣೆಗಳು ಕಿವಿಗೆ ಬಿತ್ತು. ಈ ದನಿಯು ನನಗೆ ಭಾರತೀಯ ಗಗನಯಾನಿ ರಾಕೇಶ ಶರ್ಮಾ ಬಾಹ್ಯಾಕಾಶದಿಂದ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರೊಂದಿಗೆ ಮಾತನಾಡಿದ ಸಂದರ್ಭವನ್ನು ನೆನಪಿಸಿತು.

ಅಮೆರಿಕ ಎಂಟರ್‌ಪ್ರೈಸ್ ಮತ್ತು ರಷ್ಯಾದ ಸೋಯೇಜ್‌ ಬಾಹ್ಯಾಕಾಶ ನೌಕೆಗಳನ್ನು ಪ್ರತ್ಯಕ್ಷ ಕಾಣುವ ಸುಯೋಗ ಈ ಮ್ಯೂಸಿಯಂನಲ್ಲಿದೆ. ನಾಸಾದ ಬಾಹ್ಯಾಕಾಶ ನೌಕೆಗಳ ಇತಿಹಾಸ ಗಳೊಂದಿಗೆ ಅವುಗಳ ವಿವಿಧ ಮಾದರಿಗಳು ಇಲ್ಲಿವೆ. ಸೈನ್ಯದ ಗೂಢಚಾರಿ ರಡಾರ್‌ ವಿಮಾನಗಳು, ಚಿಕ್ಕ ಚಿಕ್ಕ ಜಾಗದಲ್ಲಿ ಬಚ್ಚಿಡಬಹುದಾದ ರೆಕ್ಕೆಗಳನ್ನು ಮಡಿಸುವ ವಿಮಾನಗಳಿವೆ. ಮಿಸೈಲ್ ಲೋಡೆಡ್ ವಿಮಾನಗಳು, ನಿಂತಲ್ಲಿಂದಲೇ ಗಗನಕ್ಕೆ ಹಾರುವ ನೇರವಾಗಿ ನಿಗದಿತ ಗುರಿಯಲ್ಲಿ ಇಳಿಯುವ...ಹೀಗೆ ಜಗತ್ತಿನ ವೈಮಾನಿಕ ಲೋಕದ ಅಪರೂಪದ ವಿಮಾನಗಳು ಇಲ್ಲಿವೆ. ಬ್ರಿಟಿಷ್‌ ವಾಯುಯಾನದ ಅಪ್ರತಿಮ ವಿಮಾನ ಕೊಂಕೊರ್ಡ್, ಫೆಬ್ರುವರಿ 7, 1996ರಂದು ನ್ಯೂಯಾರ್ಕ್‌ನಿಂದ ಲಂಡನ್‌ಗೆ 5,500 ಕಿಮೀ ದೂರವನ್ನು 2 ಗಂಟೆ 52 ನಿಮಿಷ ಮತ್ತು 59 ಸೆಕೆಂಡುಗಳಲ್ಲಿ ಕ್ರಮಿಸಿದ್ದ ಮೊದಲ ಪ್ರಯಾಣಿಕ ವಿಮಾನವೂ ಇದೆ. ಈ ವಿಮಾನ 2003ರಲ್ಲಿ ತನ್ನ ಹಾರಾಟ ಸೇವೆ ನಿಲ್ಲಿಸಿತ್ತು.

ಅಚ್ಚರಿ ಹುಟ್ಟಿಸುವ ಮಾದರಿಗಳು

ತುರ್ತು ಕರೆ ಬಂದ ಕೂಡಲೇ ಪೈಲೆಟ್‌ಗಳು ಹಡಗಿನ ಮೇಲಕ್ಕೆ ಏರಿ ತಮ್ಮ ತಮ್ಮ ವಿಮಾನದ ಸಮೀಪ ತೆರಳಲು ಎಸ್ಕಲೇಟರ್ ಇದೆ. ಆ ಕಾಲದಲ್ಲೇ ಈ ವ್ಯವಸ್ಥೆ ಇದ್ದಿದ್ದು ಅಚ್ಚರಿ ಮೂಡಿಸಿತು. ದಿನದ ಪ್ರತಿ ಕ್ಷಣವೂ ಸುಮಾರು ಇಪ್ಪತ್ತು ಪೈಲೆಟ್‌ಗಳು ಯುದ್ಧ ಸನ್ನದ್ಧರಾಗಿ ಕುಳಿತಿರುತ್ತಿದ್ದ ‘ರೆಡಿ ಟು ಸ್ಟ್ರೈಕ್’ ವಿಭಾಗವೂ ಇಲ್ಲಿದೆ. ಇದನ್ನು ಗಮನಿಸಿದರೆ ಈ ಹಡಗಿನ ಸನ್ನದ್ಧತೆಯನ್ನು ಊಹಿಸಬಹುದು. ಸಿಬ್ಬಂದಿಯ ರಕ್ಷಣಾ ಉದ್ದೇಶದಿಂದ ತುರ್ತು ಪರಿಸ್ಥಿತಿಗಳಲ್ಲಿ ತಳ ಅಂತಸ್ತುಗಳಿಂದ ಮೇಲೇರಿ ಬರಲು ಅಲ್ಲಲ್ಲಿ ಏಣಿ /ಮೆಟ್ಟಿಲುಗಳೂ ಇವೆ.

ಅಮೆರಿಕದ ಭೂಸೇನೆ, ವಾಯುದಳ, ಮತ್ತು ನೌಕಾದಳ ಕೋಸ್ಟ್‌ ಗಾರ್ಡ್‌ ಸಹಿತ ದೇಶ ವಿದೇಶಗಳಿಗೆ ಹಾರಾಟ ನಡೆಸಿರುವ ಯುದ್ಧ ವಿಮಾನಗಳಿವೆ. ಎರಡನೆಯ ಮಹಾಯುದ್ಧದಲ್ಲಿ ಬಳಸಿದ ವಿಮಾನಗಳಿಂದ ಹಿಡಿದು ಇತ್ತೀಚಿನ ಅವೆಂಜರ್‌ ಟಾರ್ಪೆಡೊ ಬಾಂಬರ್‌ವರೆಗೆ, ಮಿಗ್ ವಿಮಾನಗಳಿಂದ ಹಿಡಿದು ಎಫ್ 16, ಬ್ಲ್ಯಾಕ್‌ ಬರ್ಡ್ ಮತ್ತು ಶೀತಲ ಸಮರ ಕಾಲದ ಗೂಢಚಾರಿ ವಿಮಾನ, ರಡಾರ್ ವಿಮಾನಗಳೂ ಇಲ್ಲಿವೆ.

ಇತ್ತೀಚೆಗೆ ಭಾರತದ ಪುಲ್ವಾಮಾ ಉಗ್ರ ದಾಳಿಯ ಸಂದರ್ಭದಲ್ಲಿ ಪಾಕಿಸ್ತಾನವು ಅಮೆರಿಕದ ಪ್ರತಿಷ್ಠಿತ ಎಫ್ - 16 ಯುದ್ಧವಿಮಾನಗಳ ಮೂಲಕ ಪ್ರತಿ ದಾಳಿಗೆ ಮುಂದಾದಾಗ ಭಾರತೀಯ ಪೈಲಟ್ ಅಭಿನಂದನ್ ತನ್ನ ಮಿಗ್ ಫೈಟರ್ ಜೆಟ್‌ನಿಂದ ಹೊಡೆದುರುಳಿಸಿದ್ದು ನೆನಪಿರಬಹುದು. ಇಲ್ಲಿರುವ ಅಂತಹುದೇ ಇನ್ನೊಂದು ಎಫ್–16 ವಿಮಾನದ ಮುಂದೆ ನಾವಿದ್ದೆವು. ಈ ಮ್ಯೂಸಿಯಂನಲ್ಲಿ ಮಾದರಿಗಳ ಪ್ರದರ್ಶನದ ಜತೆಗೆ ಥಿಯೇಟರ್‌ನಲ್ಲಿ ಬಾಹ್ಯಾಕಾಶ ವಿದ್ಯಮಾನಗಳ ಸಾಕ್ಷ್ಯಚಿತ್ರ ತೋರಿಸಿದರು. ಬಾಹ್ಯಾಕಾಶದ ಮಾಹಿತಿ, ಮಾದರಿಗಳ ಜತೆಗೆ, ಬಾಹ್ಯಾಕಾಶ ನೌಕೆಯಲ್ಲಿ ತೊಡುವ ವೇಷಭೂಷಣಗಳೂ ಇಲ್ಲಿವೆ.

ಸ್ಪೇಸ್ ಶೆಟಲ್ ಪೆವಿಲಿಯನ್

ಗಗನ ನೌಕೆಗಳ ಉಡ್ಡಯನಕ್ಕೆ ಕಾರಣವಾಗಿದ್ದ ನಾಸಾದ ಆರ್ಬಿಟರ್‌ ಮಾದರಿಯನ್ನು ಇಲ್ಲಿ ಇಡಲಾಗಿದೆ. ಹದಿನೇಳು ಕ್ರಿಯಾತ್ಮಕ ಪ್ರದರ್ಶನದ ಶಾಖೆಗಳಲ್ಲಿ ಮೂಲಕೃತಿಗಳು, ಚಿತ್ರಗಳು, ಆಡಿಯೊ ಮತ್ತು ಪ್ರೇಕ್ಷಕರನ್ನು ವಿಜ್ಞಾನದತ್ತ ಕೊಂಡೊಯ್ಯುವ ಸಾಕ್ಷ್ಯಚಿತ್ರಗಳು ಮತ್ತು ಎಂಟರ್‌ಪ್ರೈಸ್‌ ಹಡಗಿನ ಮತ್ತು ಬಾಹ್ಯಾಕಾಶ ಶೆಟಲ್ ನೌಕೆಯ ಯುಗದ ವಿವಿಧ ರೋಚಕ ಯಂತ್ರೋಪಕರಣಗಳು ಪ್ರದರ್ಶನದಲ್ಲಿವೆ. ಇಂಟ್ರೆಪಿಡ್ 4ಡಿ ಸ್ಪೇಸ್ ಅನುಭವ ಪಡೆಯುವ ಕ್ಯಾಬಿನ್ ಇಲ್ಲಿದೆ. ಬಾಹ್ಯಾಕಾಶ ಕೇಂದ್ರ(ಐಎಸ್ಎಸ್)ದಲ್ಲಿನ ವಾತಾವರಣದ ವಾಸ್ತವವನ್ನು ಅರಿಯಲು ಗುರುತ್ವಶೂನ್ಯದ ಅನುಭವವನ್ನೂ ಪಡೆಯಬಹುದು. ಇವುಗಳಿಗೆ ಪ್ರತ್ಯೇಕ ಶುಲ್ಕವಿರುತ್ತದೆ.

ಇದನ್ನೂ ಓದಿ: ಐಷಾರಾಮಿ ಸಾಗರಯಾನಕ್ಕೆ ‘ಸ್ಕಾರ್ಲೆಟ್ ಲೇಡಿ’

ಇಲ್ಲಿನ ಮತ್ತೊಂದು ವಿಶೇಷ: ಹಲವು ಅಂತಸ್ತುಗಳಲ್ಲಿರುವ ಈ ಇಂಟ್ರೆಪಿಡ್ ನೌಕೆಯಿಂದ ವಿಮಾನಗಳು, ಬಾಹ್ಯಾಕಾಶ ನೌಕೆಗಳ ನಿರ್ವಹಣೆ ಅಥವಾ ಸಾಗಣೆ ಕಾರಣಕ್ಕಾಗಿ ಇಳಿಸುವ ಸಂದರ್ಭದಲ್ಲಿ ಒಂದು ಡೆಕ್‌ನ ಭಾಗ (80 ಅಡಿ ಉದ್ದ*80 ಅಡಿ ಅಗಲ) ಎಲಿವೇಟರಿನಂತೆ ಕೆಲಸ ಮಾಡುವುದನ್ನು ಪ್ರವಾಸಿಗರಿಗೆ ಪ್ರಾತ್ಯಕ್ಷಿಕೆ ತೋರಿಸುತ್ತಾರೆ. ಅದಕ್ಕಾಗಿ ಪ್ರವಾಸಿಗರನ್ನು ಈ ಡೆಕ್‌ನ ಮೇಲೆ ನಿಲ್ಲಿಸಿ, ಅದನ್ನು ನೆಲ ಅಂತಸ್ತಿಗೆ ಇಳಿಸಿ ಮತ್ತೆ ಮೇಲೆ ತರುತ್ತಾರೆ. ಈ ಅನುಭವ ಪ್ರವಾಸಿಗರನ್ನು ರೋಮಾಂಚನಗೊಳಿಸುತ್ತದೆ.

 

ಗ್ರೋಲರ್ ಸಬ್‌ಮೆರಿನ್

ಇದರ ಪಕ್ಕದಲ್ಲೇ ಗ್ರೋಲರ್ ಸಬ್‌ಮೆರಿನ್ ಮ್ಯೂಸಿಯಂ ಇದೆ. ಇದರಲ್ಲಿ ಕೇವಲ ಎರಡೂವರೆ ಅಡಿ ಅಗಲದ ಕಿಂಡಿ
ಗಳಂತಹ ಕಾರಿಡಾರಿನಲ್ಲಿ 97ಮೀಟರ್‌ ಉದ್ದಕ್ಕೂ ಹಲವು ಕಂಪಾರ್ಟ್‌ಮೆಂಟ್‌ಗಳಿವೆ. ಅದರಲ್ಲಿ ಇಡೀ ಜಲಾಂತರ್ಗಾ ಮಿಯು ಕಾರ್ಯನಿರ್ವಹಿಸುತ್ತಿದ್ದ ರೀತಿಯನ್ನು ಕಣ್ಣಾರೆ ಕಾಣುವ ಅವಕಾಶವಿದೆ. 1958 ರಿಂದ 1964ರವರೆಗೆ ನ್ಯೂಕ್ಲಿಯರ್ ವಾರ್ ಹೆಡ್ಸ್‌ಗಳನ್ನು ಹೊತ್ತು ರಷ್ಯನ್‌ ಗಡಿಯಲ್ಲಿ ಕಾರ್ಯನಿರ್ವಹಿಸಿ ಈಗ ಇದೂ ಮ್ಯೂಸಿಯಂ ಆಗಿ ನಿಂತಿದೆ. ನ್ಯೂಯಾರ್ಕ್‌ಗೆ ‍ಪ್ರವಾಸ ಹೋದಾಗ ತಪ್ಪದೇ ಇಲ್ಲಿಗೆ ಭೇಟಿ ನೀಡಿ ವಿನೂತನ ಅನುಭವ ಪಡೆಯಿರಿ.

ಹೋಗುವುದು ಹೇಗೆ ?

ನ್ಯೂಯಾರ್ಕ್‌ನ ಪಶ್ಚಿಮ ಮ್ಯಾನ್‌ಹಟನ್‌ನ ಪಿಯರ್‌ ನಂಬರ್ 86, 12ನೆಯ ಅವೆನ್ಯೂ, 46ನೆಯ ಸ್ಟ್ರೀಟ್‌, ಹಡ್ಸನ್ ನದಿಯ ದಂಡೆಯಲ್ಲಿದೆ. ನ್ಯೂಯಾರ್ಕ್ನ ಮೆಟ್ರೊ ಸಿಟಿಯಲ್ಲಿರುವ ಈ ಮ್ಯೂಸಿಯಂಗೆ ಎಲ್ಲ ಸ್ಥಳಗಳಿಂದಲೂ ಕಾರ್‌ ಅಥವಾ ಟ್ಯಾಕ್ಸಿ ಮೂಲಕ ಅರ್ಧ ಗಂಟೆಯಲ್ಲಿ ತಲುಪಬಹುದು. ಪ್ರವೇಶ ಶುಲ್ಕ 33 ಡಾಲರ್‌. ಆನ್‌ಲೈನ್‌ನಲ್ಲೂ ಟಿಕೆಟ್ ಪಡೆಯಬಹುದು.

ಪ್ರತಿಕ್ರಿಯಿಸಿ (+)