ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್ - ಗಾಂಧಿ ನಾಡಲ್ಲಿ ಸುಂದರ ಸ್ಮಾರಕ

Last Updated 25 ಸೆಪ್ಟೆಂಬರ್ 2019, 19:31 IST
ಅಕ್ಷರ ಗಾತ್ರ

ಅಹಮದಾಬಾದ್‍ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಗಳನ್ನು ನೋಡಿಕೊಂಡು ಬರಲು ಇತ್ತೀಚೆಗೆ ಹೋಗಿದ್ದೆವು. ಹುಬ್ಬಳ್ಳಿಯಿಂದ ಬೆಳಿಗ್ಗೆ 9.30ಕ್ಕೆ ವಿಮಾನದ ಮೂಲಕ ಹೊರಟು ಒಂದೂವರೆ ಗಂಟೆಯಲ್ಲಿ ಅಹಮದಾಬಾದ್ ತಲುಪಿದ್ದೆವು.

ವಿಮಾನ ಏರ್‌ಪೋರ್ಟ್‌ನಲ್ಲಿ ಇಳಿಯುತ್ತಿದ್ದಾಗ ಕೆಳಗಡೆ ಹಚ್ಚ ಹಸಿರಿನ ಲ್ಯಾಂಡ್‌ಸ್ಕೇಪ್, ಅಂಕುಡೊಂಕಾಗಿ ಸಾಗುತ್ತಿರುವ ಸಾಬರಮತಿ ನದಿ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿತ್ತು. ವಿಮಾನದಿಂದ ಇಳಿದು ಏರ್‌ಪೋರ್ಟ್‌ ಲಾಂಜ್‌ ಪ್ರವೇಶಿಸಿದಾಗ ‘ವೈಷ್ಣವ ಜನತೋ ತೇನೆ ಕಹಿಯೆರೆ’ ಎಂಬ ಮಂದವಾದ ಸಂಗೀತ ತೇಲಿ ಬರುತ್ತಿತ್ತು. ಅಲ್ಲಿಂದ ಅಹಮದಾಬಾದ್ ನಗರದತ್ತ ಹೊರಟಾಗ ವಿಪರೀತ ಎನ್ನುವಷ್ಟು ವಾಹನಗಳ ದಟ್ಟಣೆ, ಚಾಲಕರ ಧಾವಂತ, ಹಾರನ್‍ಗಳ ಸದ್ದು ಕಿರಿ ಕಿರಿ ಇವೆಲ್ಲದರ ನಡುವೆಯೂ ಅಹಮದಾಬಾದ್ ನಗರದಲ್ಲಿ ಏನೋ ಒಂದು ಆಕರ್ಷಣೆ ಇದೆ ಎನ್ನಿಸುತ್ತಿತ್ತು.

ಅಹಮದಾಬಾದ್‍ನ ಆಹಾರದ ರುಚಿಯ ಬಗ್ಗೆ ಕೇವಲ ಕೇಳಿದ್ದೆ. ಆದರೆ. ಅಲ್ಲಿ ಊಟ ಮಾಡಿದ ಮೇಲೆ, ನಾನು ಕೇಳಿದ್ದು ಸತ್ಯ ಎನ್ನಿಸಿತು. ಮುಂದೆ, ಸಂಜೆ ಹೊತ್ತಿನಲ್ಲಿ ಮಗಳು ಕೆಲ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಕರೆದೊಯ್ದಿದ್ದಳು. ಆಗ ನಾವು ಭೇಟಿ ನೀಡಿದ್ದು ಏಳು ಶತಮಾನಗಳನ್ನು ಕಂಡ ಜಾಮಿ (ಜಾಮ) ಮಸೀದಿಗೆ. ಅದು ಅಹಮದಾಬಾದ್‍ನ ಐಕಾನ್ ಎಂಬಂತೆ ಭಾಸವಾಗಿತ್ತು. ಅದರೊಳಗಿದ್ದ ಶಿಲ್ಪಕಲೆ ಎಂಥವರನ್ನೂ ಮಂತ್ರ ಮುಗ್ಧಗೊಳಿಸುತ್ತದೆ.

ಜಾಮಿ ಮಸೀದಿಯು ಹಳೆ ಅಹಮದಾಬಾದ್ ಪ್ರದೇಶದ ಮಾಣಿಕ್ ಚೌಕ್‍ನಲ್ಲಿದೆ. ಇದು ಅತ್ಯಂತ ಜನ ನಿಬಿಡ ಪ್ರದೇಶ. ಅತ್ಯಂತ ಚಟುವಟಿಕೆಯುಳ್ಳ ಪೇಟೆ. ರಾತ್ರಿ ಎರಡು ಗಂಟೆಯವರೆಗೂ ವ್ಯಾಪಾರ ವಹಿವಾಟು ನಡೆದಿರುತ್ತದೆ. ಇದರ ಮಧ್ಯದಲ್ಲಿಯೇ ಪಶ್ಚಿಮ ದಿಕ್ಕಿಗೆ ಜಾಮೀ ಮಸೀದಿಯ ಮುಖ್ಯ ದ್ವಾರವಿದೆ. ಆಯತಾಕಾರದಲ್ಲಿರುವ ಈ ಮಸೀದಿಯಲ್ಲಿ ಅಗಲವಾದ ಮೈದಾನವಿದೆ. 25,000 ಜನರು ಇಲ್ಲಿ ಒಟ್ಟಿಗೆ ಕುಳಿತು ನಮಾಜ್ ಮಾಡಬಹುದು. ಮೈದಾನ ಸಂಪೂರ್ಣ ಕಲ್ಲಿನ ಹಾಸಿನಿಂದ ಕೂಡಿದೆ. ಮಧ್ಯದಲ್ಲಿ ವಿಶಾಲವಾದ ಕೊಳವಿದೆ. ನಮಾಜ್‌ಗೆ ಬರುವ ಭಕ್ತರು ಇಲ್ಲಿ ಶುಚಿರ್ಭೂತರಾಗಿ ನಮಾಜ್‍ಗೆ ತೆರಳುತ್ತಾರೆ. ಸುತ್ತಲೂ ವಿಶಾಲವಾದ ಪ್ರಾಕಾರವಿದ್ದು 300 ಕಲ್ಲಿನ ಕಂಬಗಳಿಂದ ನಿರ್ಮಿತವಾಗಿದೆ. ಒಟ್ಟು 15 ಗುಮ್ಮಟಗಳಿವೆ. ನಾಲ್ಕೂ ದಿಕ್ಕಿಗೂ 40 ಮೀಟ ನಷ್ಟು ಎತ್ತರದ ಮಿನಾರ್‌ಗಳಿವೆ. ಮೇಲೆ ಏರಲು 120 ಮೆಟ್ಟಿಲುಗಳಿವೆ. ಮಿನಾರ್ ಮೇಲೆ ನಿಂತರೆ ಅಹಮದಾ ಬಾದ್ ನಗರದ ವಿಹಂಗಮ ನೋಟ ಕಾಣುತ್ತದೆ.

ಜಾಮಿ ಮಸೀದಿಯು 1424ರಲ್ಲಿ ಸುಲ್ತಾನ್ ಅಹಮದ್ ಷಾ ನಿರ್ಮಿಸಿದ ದರ್ಗಾ. ಆಗ ರಾಜ ಮನೆತನಕ್ಕೆ ಮಾತ್ರ ಮೀಸಲಾಗಿದ್ದ ಈ ಮಸೀದಿಯು ಹಿಂದೂ ಹಾಗೂ ಮುಸ್ಲಿಂ ಎರಡೂ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ಕಾರಣ ಹಲವಾರು ಹಿಂದೂ ಹಾಗೂ ಜೈನ ಮಂದಿರಗಳನ್ನು ನೆಲಸಮ ಮಾಡಿದಾಗ ಅಲ್ಲಿ ದೊರೆತ ಕಲಾತ್ಮಕ ಕಂಬ, ಶಿಲ್ಪಗಳನ್ನು ಸಂಗ್ರಹಿಸಿ ಈ ಕಟ್ಟಡ ನಿರ್ಮಾಣಕ್ಕೆ ಉಪಯೋಗಿಸಿಕೊಳ್ಳಲಾಗಿದೆ. ಹೀಗಾಗಿ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಪುರಾತನ ದೇವಾಲಯವೊಂದಕ್ಕೆ ಬಂದಿದ್ದೇವೇನೋ ಎಂಬ ಅನುಭವವಾಗುತ್ತದೆ.

ಒಟ್ಟು ಮೂರು ದಿಕ್ಕಿಗೆ ಪ್ರವೇಶ ದ್ವಾರಗಳಿವೆ. ಉತ್ತರದಲ್ಲಿ ಮೂರು ಕಮಾನುಗಳ ದ್ವಾರವಿದ್ದು ಇದಕ್ಕೆ ತೀನ್ ದರವಾಜಾ ಎಂದೂ ಕರೆಯುತ್ತಾರೆ. ಪಶ್ಚಿಮ ದಿಕ್ಕಿನಲ್ಲಿ ಸುಲ್ತಾನ ಅಹಮದ್ ಷಾ ಹಾಗೂ ಆತನ ಮಗನಾದ ಅಹಮದ್ ಷಾ ಮತ್ತು ಮೊಮ್ಮಗ ಕುತುಬುದ್ದೀನ್ ಅಹಮದ್ ಷಾ(1) ಅವರ ಗೋರಿಗಳಿವೆ. ಅಲ್ಲದೇ ಇವರ ರಾಣಿಯರ ಗೋರಿಗಳೂ ಕೂಡ ಇಲ್ಲಿವೆ. ಈ ಭಾಗದಲ್ಲಿ ಸ್ತ್ರೀಯರ ಪ್ರವೇಶ ನಿಷೇಧಿಸಲಾಗಿದೆ

ಹಳದಿ ಬಣ್ಣದ ಮರಳುಗಲ್ಲನ್ನು ಉಪಯೋಗಿಸಿ ನಿರ್ಮಿಸಿದ ಈ ಮಸೀದಿಯ ವಾಸ್ತುಶಿಲ್ಪ ನೈಪುಣ್ಯದಿಂದ ಕೂಡಿದೆ. ಇಷ್ಟೊಂದು ಭವ್ಯವಾದ ಮಸೀದಿಯನ್ನು ಇದೇ ಮೊದಲ ಬಾರಿ ನಾವು ನೋಡಿದ್ದು. ಇದರ ಆವರಣದಲ್ಲಿ ಕುಳಿತರೆ ಒಂದು ರೀತಿಯ ಧ್ಯಾನಸ್ಥ ಸ್ಥಿತಿ ನಮ್ಮನ್ನು ಆವರಿಸಿಕೊಳ್ಳುತ್ತದೆ.

1819ರಲ್ಲಿ ಘಟಿಸಿದ ಭೂಕಂಪಕ್ಕೆ ಸಿಲುಕಿ ಎರಡು ಮುಖ್ಯ ಮಿನಾರ್‌ಗಳು ನಾಶವಾದರೂ ಅದರ ಕೆಳಭಾಗ ಹಾಗೇ ಉಳಿದುಕೊಂಡಿವೆ. ಆವರಣದಲ್ಲಿ ಹಾಗೂ ಸುತ್ತಮುತ್ತ ಸೂಕ್ತ ನಿರ್ವಹಣೆ ಇಲ್ಲದೇ ಇದ್ದದ್ದು ಬೇಸರವೆನಿಸಿತು.

ಈ ಭವ್ಯ ಸ್ಮಾರಕದ ಹೊರಗೆ ಅತ್ಯಂತ ನಿಕಟವಾಗಿ ಕಟ್ಟಡಗಳ ನಿರ್ಮಾಣದಿಂದ ಮಸೀದಿಯ ಅಂದ ಕಡಿಮೆಯಾಗಿದೆ. ನಮ್ಮಲ್ಲಿ ಎಷ್ಟೋ ವಿಶ್ವ ವಿಖ್ಯಾತ ಸ್ಮಾರಕಗಳು, ಪ್ರೇಕ್ಷಣೀಯ ಸ್ಥಳಗಳು ನಿರ್ವಹಣೆಯ ಕೊರತೆಯಿಂದ ಸೊರಗಿವೆ. ರಾಷ್ಟ್ರೀಯ ಸ್ಮಾರಕವಾಗಿ ಗುರುತಿಸಿಕೊಂಡಿರುವ ಜಾಮಿ ಮಸೀದಿ ಸದಾ ನೆನಪಲ್ಲಿ ಉಳಿಯುವಂತಹದ್ದು.

ಚಿತ್ರಗಳು: ಸಾಧ್ವಿ ಚಂದ್ರಕೇಸರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT