ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಜಪಾನ್‌ ಟೀ

Last Updated 25 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಪ್ರವಾಸಿಗರನ್ನು ಸೆಳೆಯುವ ಜಪಾನೀಯರ ಚಹಾ ಉದ್ಯಾನವಿದೆ (Japanese Tea Garden). ಸ್ಯಾನ್‌ಫ್ರಾನ್ಸಿಸ್ಕೊ ನಗರದ ಗೋಲ್ಡನ್ ಗೇಟ್ ಪಾರ್ಕ್‌ನ ಸರಹದ್ದಿನಲ್ಲಿದೆ.

ಹೆಸರು ಕೇಳಿದಾಗ, ‘ಈ ಉದ್ಯಾನದಲ್ಲಿ ಬಹುಶಃ ಚಹಾ ಗಿಡಗಳನ್ನು ಬೆಳೆಯಬಹುದು’ ಎನ್ನಿಸುತ್ತದೆ ಅಲ್ಲವಾ ? ಖಂಡಿತಾ, ಇಲ್ಲಿ ಚಹಾ ಬೆಳೆಯುವುದಿಲ್ಲ. ಆದರೆ, ಬಗೆಬಗೆಯ ರುಚಿಭರಿತ ಚಹಾ ತಯಾರಿಸುತ್ತಾರೆ. ಚಳಿ ಚಳಿಯಲ್ಲಿ ವೈವಿಧ್ಯಮಯ ಚಹಾವನ್ನು ಹೀರಬಹುದು.

ಚಹಾ, ಜಪಾನೀಯರ ನೆಚ್ಚಿನ ಪೇಯ. ರಾತ್ರಿ ಧ್ಯಾನದ ಸಮಯದಲ್ಲಿ ಬೌದ್ಧ ಸಂತರು ಎಚ್ಚರವಿರಬೇಕಿತ್ತು. ಅದಕ್ಕಾಗಿ ಸದಾ ಬಿಸಿನೀರು ಇರುತ್ತಿತ್ತು. ಆದರಲ್ಲಿ ಚಹಾ ತಯಾರಿಸುತ್ತಿದ್ದರು. ವಿವಿಧ ರುಚಿಯ ಚಹಾ ತಯಾರಿಕೆಯಲ್ಲೂ ಅವರು ನಿಪುಣರಾಗಿದ್ದರು.

ತಂಪು ತಂಪಾಗಿರುವ ಈ ಉದ್ಯಾನದ ಒಳಹೊಕ್ಕರೆ ರೆಫ್ರಿಜಿರೇಟರ್ ಒಳಗಿರುವಂತೆ ಭಾಸವಾಗುತ್ತದೆ. ಅಷ್ಟು ಚಳಿ. ಆದರೆ, ಅಲ್ಲಿ ಮಳೆಯಿರುವುದಿಲ್ಲ. ಹಿಮಪಾತವೂ ಇಲ್ಲ. ಆದರೆ ಅಲ್ಲಿರುವ ಪುಟ್ಟ ಸರೋವರ, ಕುಬ್ಜ ಹಾಗೂ ಎತ್ತರ ನಿಂತ ವೃಕ್ಷಗಳು, ಹಕ್ಕಿಗಳು, ಅಲ್ಲಿನ ವಾತಾವರಣವನ್ನು ತಣ್ಣಗಿಟ್ಟಿವೆ.

18ನೇ ಶತಮಾನದ ಉದ್ಯಾನವಿದು

ಇದು→ಕ್ರಿಶ1894 ರಲ್ಲಿ ನಿರ್ಮಾಣವಾಯಿತು. ಆಗ ವಿಶ್ವ ವ್ಯಾಪಾರ ಮೇಳದ ಸಂದರ್ಭದಲ್ಲಿ ಇದು ಒಂದು ಪುಟ್ಟಗ್ರಾಮವಾಗಿತ್ತು. ನಂತರ ಮಕಾಟೊ ಹಗಿವಾರ ಎಂಬ ಭೂದೃಶ್ಯ ವಿನ್ಯಾಸ ತಜ್ಞ ಇದನ್ನು ನಾಲ್ಕೂವರೆ ಸಾವಿರ ಡಾಲರ್‌ಗಳಿಗೆ ಖರೀದಿಸಿದ. ಅವನೇ ಈ ಉದ್ಯಾನವನ್ನು ನಿರ್ವಹಿಸಿ ಅಭಿವೃದ್ಧಿಪಡಿಸಿದ‌ ಎಂಬ ಹಿನ್ನೆಲೆಯಿದೆ.

ಈ ಉದ್ಯಾನದಲ್ಲಿ ಆಕರ್ಷಕ ಪಗೋಡ, ಕೊಳ, ಶಿಲಾದೀಪಸ್ಥಂಭ, ಕುಬ್ಜವೃಕ್ಷಗಳು ಮತ್ತು ಶಾಂತ ಮನಸ್ಥಿತಿಯ ಬುದ್ಧ ವಿಗ್ರಹಗಳು ಕಾಣಸಿಗುತ್ತವೆ. ಪಗೋಡ, ಬೌದ್ಧ ಸಂತರ ಸಮಾಧಿ. ಈ ವಿನ್ಯಾಸದಲ್ಲಿ ಬಹು ಛಾವಣಿಗಳಿವೆ. ವರ್ಣಮಯವಾಗಿವೆ. ಭಾರತೀಯ ಸಾಧುಸಂತರಿಗೆ ಕಟ್ಟಿದ ಸಮಾಧಿಗಳನ್ನು ನೋಡಿಯೇ ಈ ಮಾದರಿಗೆ ಪ್ರೇರಣೆ ಪಡೆಯಲಾಯಿತು. ಅಲ್ಲಿನ ಉಬ್ಬು ಅಕ್ಷರಗಳ ಶಾಸನವೇ ಈ ಸಂಗತಿ ತಿಳಿಸುತ್ತದೆ.

ಹೊಸ ಲೋಕದ ಅನಾವರಣ

ನಡೆಯುವ ಹಾದಿಯ ಅಕ್ಕಪಕ್ಕ ಒಂದೆರಡು ದೀಪಸ್ಥಂಭ ಕಾಣಸಿಗುತ್ತವೆ. ಶಿಲೆಯಿಂದ ನಿರ್ಮಿಸಿದ ಇವು ಆ ಹಸಿರಿನ ಹಿನ್ನೆಲೆಯಲ್ಲಿ ಕಣ್ಣಿಗೆ ಮುದನೀಡುತ್ತವೆ. ಪುಟ್ಟ ಸರೋವರ, ಈಜುವ ಬಾತುಕೋಳಿಗಳು. ಚಿಲಿಪಿಲಿಗುಟ್ಟುವ ಹಕ್ಕಿಗಳು. ತಿಳಿಯಾಗಿ ನಿಂತ ನೀರಲ್ಲಿ ಕಾಣುವ ಕುಬ್ಜವೃಕ್ಷಗಳ ಪ್ರತಿಬಿಂಬ, ನೀಲಗಗನ. ನಯನ ಮನೋಹರ. ಮೈಮರೆತು ಬಿಡುವ ಕ್ಷಣವದು. ಈ ನಿಸರ್ಗ ಸೌಂದರ್ಯದ ನಡುವೆ ವಧುವರರ ಫೋಟೊ ಸೆಷನ್ ನಡೆಯುತ್ತಿರುತ್ತದೆ. ಅಷ್ಟೇ ಅಲ್ಲ ಪ್ರವಾಸಿಗರೂ ಕೂಡ ಜಪಾನಿ ಕಟ್ಟಡ ವಿನ್ಯಾಸದ ಹಿನ್ನೆಲೆ ಬರುವಂತೆ ಫೋಟೊ ಕ್ಲಿಕ್ಕಿಸುತ್ತಾರೆ.

ಸೌಂದರ್ಯ ಸವಿಯುತ್ತಾ ಹೆಜ್ಜೆಹಾಕಬೇಕು. ಥಟ್ಟನೆ ನಮ್ಮ ಬಲಬದಿಗೆ ಶಾಂತಮೂರ್ತಿ ಗೌತಮ ಬುದ್ಧ ಕಣ್ಸೆಳೆಯುತ್ತಾನೆ. ಅಲ್ಲಿಗೆ ಸದಾ ಭೇಟಿ ನೀಡುವ ಬೌದ್ಧರ ಸಮೂಹ ‘ಬುದ್ಧಂ ಶರಣಂ ಗಚ್ಛಾಮಿ..’ ಎಂದು ಮೆಲುದನಿಯಲ್ಲಿ ಉದ್ಗರಿಸುವುದು ಕೇಳಿಸುತ್ತದೆ. ಕಣ್ಣು ಹಾಯಿಸಿದಂತೆಲ್ಲ ಹಸಿರೋ ಹಸಿರು.ಮೈತುಂಬಾ ಮೊಗ್ಗು ಮುಡಿದ ಗಿಡಗಳು.

ಚಿತ್ತಾಕರ್ಷಕ ಮಾದರಿಯಲ್ಲಿ ಉದ್ಯಾನದ ಬಳಸು ಹಾದಿ. ಹೆಜ್ಜೆ ಹಾಕುತ್ತಿದ್ದರೆ ನೆಲವೂ ಕೂಡ ಮೃದು. ಇಷ್ಟೆಲ್ಲ ಆದ ಮೇಲೆ ಚಹಾ ಗೃಹದಲ್ಲಿ ವಿವಿಧ ಬಗೆಯ ಸ್ವಾದವುಳ್ಳ ಚಹಾಸೇವನೆ. ಅದರೊಂದಿಗೆ ಉದ್ಯಾನದ ಭೇಟಿಗೆ ಪೂರ್ಣ ವಿರಾಮ ಸಿಗುತ್ತದೆ.

ಸ್ಯಾನ್‌ಫ್ರಾನ್ಸಿಸ್ಕೊಗೆ ಹೋದಾಗ ಈ ಉದ್ಯಾನದಲ್ಲಿ ಬಿಸಿಬಿಸಿ ಸ್ವಾದಭರಿತ ಚಹಾ ಹೀರುವುದನ್ನ ಮರೆಯಬೇಡಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT