ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗವ ಮರೆಸುವ ಜುನೌ

Last Updated 18 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಈ ಸಲದ ರಜಾದಿನಗಳಲ್ಲಿ ಅಲಸ್ಕಾ ರಾಜ್ಯದ ರಾಜಧಾನಿ ಜುನೌ (Juneau)ನೋಡಬೇಕೆನಿಸಿತು. ಅಲ್ಲಿಗೆ ಹೋಗಲು ತೀರ್ಮಾನಿಸಿದ ಮೇಲೆ, ನಾವು ಯುಎಸ್ ಹಾಗೂ ಕೆನಡಾ ವೀಸಾ ಮಾಡಿಸಿಕೊಂಡೆವು. ಆಗಸ್ಟ್‌ 12ರಂದು ವಿಮಾನ ಏರಿ ಅಮೆರಿಕದ ಸಿಯಾಟಲ್ ತಲುಪಿದೆವು. ಅಲ್ಲಿಯ ಬಂದರಿನಲ್ಲಿ ನಾವು ಕಾಯ್ದಿರಿಸಿದ್ದ ಎಮರಾಲ್ಡ್‌ ಪ್ರಿನ್ಸೆಸ್ ಹಡಗು ನಮಗಾಗಿ ಕಾಯುತ್ತಿತ್ತು. ಹಡಗು ಏರಿ ಒಂದು ದಿನ ಸಮುದ್ರ ಪ್ರಯಾಣ ಮಾಡಿ, ಕೆಟ್ಚಿಕನ್ (Ketchikan) ಎಂಬಲ್ಲಿಗೆ ಸೇರಿದೆವು. ಅಲ್ಲಿ ಧೋ ಎಂದು ಮಳೆ ಸುರಿಯುತ್ತಿತ್ತು. ಹೀಗಾಗಿ ಅಲ್ಲಿನ ಕ್ರೀಡಾ ಚಟುವಟಿಕೆಗಳೆಲ್ಲ ರದ್ದಾಗಿದ್ದವು. ಮರುದಿನ ಜುನೌದಲ್ಲಿ ಮಳೆ ಬಾರದಿರಲೆಂದು ಪ್ರಾರ್ಥಿಸುತ್ತಾ ಪ್ರಯಾಣ ಮುಂದುವರಿಸಿದ್ದಾಯಿತು. ನಮ್ಮ ಅದೃಷ್ಟವೋ ಏನೋ, ಜುನೌದಲ್ಲಿ ತುಂಬಾ ಪ್ರಫುಲ್ಲ ವಾತಾವರಣವಿತ್ತು.

ಜುನೌ ಶಹರದಿಂದ ಅನತಿ ದೂರದಲ್ಲಿದೆ ಗ್ಲೇಸಿಯರ್‌ (ಹಿಮ ಮೈದಾನ) ಪ್ರದೇಶ. ಅಲ್ಲಿ ಹಸಿರಿನಿಂದ ಕಂಗೊಳಿಸುವ ಪರ್ವತಗಳಿವೆ. ಹಸಿರು ನೀರಿನ ಸಮುದ್ರ, ಬ್ಯಾಕ್‌ಡ್ರಾಪ್‌ನಂತೆ ಕಾಣುವ ಹಿಮ ಪರ್ವತದಲ್ಲಿ ಅಲ್ಲಲ್ಲೇ ಮೇಯುತ್ತಿರುವ ಬೆಟ್ಟದ ಕುರಿ(Mountain sheeps)ಗಳು. ಇವೆಲ್ಲ ಸೇರಿ ಆ ತಾಣವನ್ನು ಸುಂದರವನ್ನಾಗಿಸಿವೆ. ಆ ಹಿಮ ಮೈದಾನದಲ್ಲಿ -10 ಡಿಗ್ರಿ ಅಥವಾ -15ಡಿಗ್ರಿ ತಾಪಮಾನವಿದ್ದರೂ, ಹತ್ತಿರದಲ್ಲೇ ಇರುವ ಜುನೌ ಪಟ್ಟಣದಲ್ಲಿ 5 ಡಿಗ್ರಿಯಿಂದ 6ಡಿಗ್ರಿಯಷ್ಟು ತಾಪಮಾನವಿರುತ್ತದೆ.

ಇಲ್ಲಿ ಟಾಕು, ಮೆಂಡೆನ್ಹಾಲ್‌, ನೋರಿಸ್, ಈಸ್ಟ್‌ ಅಂಡ್ ವೆಸ್ಟ್‌ (ಟ್ವಿನ್) ಎಂಬ ಐದು ಗ್ಲೇಸಿಯರ್‌ಗಳಿವೆ. ಎಲ್ಲ ಸೇರಿ ಒಟ್ಟು 3,885 ಚ.ಕಿ.ಮೀ ವಿಸ್ತಾರವಾದ ಹಿಮ ಮೈದಾನ. ಟಾಕು ಗ್ಲೇಸಿಯರ್ ಜಗತ್ತಿನಲ್ಲಿ ಬೆಳೆಯುತ್ತಿರುವ ಬೆರಳೆಣಿಕೆಯ ಹಿಮ ಮೈದಾನಗಳಲ್ಲೊಂದು. ಅತ್ಯ೦ತ ಆಳ ಹಾಗೂ ದಟ್ಟವಾದ ಹಿಮ ಹರಡಿಕೊಂಡಿರುವ ಪ್ರದೇಶವಿದು. 1,447ಮೀಟರ್ ಆಳ, 58 ಕಿ.ಮೀನಷ್ಟು ಅಗಲವಿದೆ. 1000 ಚ.ಕಿ.ಮೀ ವಿಸ್ತಾರ.

ಆಗಸ್ಟ್‌ 14ರಂದು ನಮ್ಮ ಟೂರ್‌ ಗೈಡ್‌ ನಿರ್ದೇಶನದಂತೆ ಟಾಕು ಸೇರಿದಂತೆ ಐದು ಗ್ಲೇಸಿಯರ್‌ಗಳನ್ನು ಹೆಲಿಕಾಪ್ಟರ್‌ಗಳಲ್ಲಿ ನೋಡಲು, ಟಾಕುವಿನಲ್ಲಿ ಡಾಗ್ ಸ್ಲೆಡ್ಜ್‌ (Dog sledge)ರೈಡ್‌ ಮಾಡಲು ಸೀಟು ಕಾಯ್ದಿರಿಸಿದೆವು. ಇಷ್ಟಕ್ಕೆ ಪ್ರತಿಯೊಬ್ಬರಿಗೆ ₹50 ಸಾವಿರ ಶುಲ್ಕ. ಜುನೌನಲ್ಲಿ ನಾವು ಹಡಗಿನಿ೦ದ ಇಳಿಯುತ್ತಿದ್ದಂತೆ, ಇವೆಲ್ಲವುಗಳನ್ನೂ ವ್ಯವಸ್ಥೆ ಮಾಡಿದ್ದ ವ್ಯಕ್ತಿ ನಮಗಾಗಿ ಕಾಯುತ್ತಿದ್ದರು.

ಅಂದು ಜುನೌ ವಾತಾವರಣ ಬಹು ಆಹ್ಲಾದಕರವಾಗಿತ್ತು. 4ಡಿಗ್ರಿ ತಾಪಮಾನ. ಚಳಿ ಕುಳಿರ್ಗಾಳಿ ಬೀಸುತ್ತಿತ್ತು. ನಾವು ಜಾಕೆಟ್ ಗ್ಲೌಸ್‌ಗಳನ್ನು ಧರಿಸಿ ಕೂತಿದ್ದೆವು. ನಮ್ಮನ್ನೆಲ್ಲ ಒಂದು ಚಿಕ್ಕ ಬಸ್ಸಿನಲ್ಲಿ ಕೂರಿಸಿಕೊಂಡು, ಅಲ್ಲಿಂದ ಹೊರವಲಯದಲ್ಲಿರುವ ಹೆಲಿಪ್ಯಾಡ್‌ಗೆ ಕರೆದುಕೊಂಡು ಹೋದರು. ಅಲ್ಲಿ ಅವರೇ ಕೊಡುವ ಶೂ ಬೆಲ್ಟ್, ಜಾಕೆಟ್‌ಗಳನ್ನೆಲ್ಲ ಧರಿಸಿದೆವು. ನಂತರ ತೂಕದ ಆಧಾರದ ಮೇಲೆ ಹೆಲಿಕಾಪ್ಟರ್‌ನಲ್ಲಿ ನಾಲ್ಕು ಅಥವಾ ಐವರನ್ನು ಹಿ೦ದೆ ಮು೦ದೆ ಆಸನದಲ್ಲಿ ಕೂರಿಸಿದರು. ನಮ್ಮ ಹೆಲಿಕಾಪ್ಟರ್‌ ಹಾರುವ ಮುನ್ನವೇ, ಆಗಲೇ ಮೂರು ಹೆಲಿಕಾ‍ಪ್ಟರ್‌ಗಳು ಹಿಮ ಮೈದಾನಗಳತ್ತ ಹಾರಿದ್ದವು.

ಹೆಲಿಕಾಪ್ಟರ್ ಹಾರುತ್ತಿದ್ದಾಗ ಕೆಳಗೆ ದೃಷ್ಟಿ ಹಾಯಿಸಿದೆ. ಓಹ್‌.. ಎಂಥ ಅತ್ಯದ್ಭುತ ದೃಶ್ಯ. ಮಹಾಸಾಗರ, ಟಾ೦ಗಸ್ ನ್ಯಾಷನಲ್ ಫಾರೆಸ್ಟ್‌ನಿಂದ ಆವೃತವಾದ ಹಸಿರು ಪರ್ವತ, ಸುಂದರ ನಗರ, ಸರೋವರಗಳು.. ಇವೆಲ್ಲ ಬಿಳಿಯ ಕ್ಯಾನ್ವಾಸ್‌ ಮೇಲೆ ಬಣ್ಣ ಬಣ್ಣದ ಚಿತ್ತಾರಗಳನ್ನು ಬಿಡಿಸಿದಂತೆ ಕಾಣುತ್ತಿತ್ತು. ಹಾಗೆಯೇ ಮು೦ದೆ ಸಾಗಿದ೦ತೆ ಹಿಮದ ಹಾಸಿನ ಮೇಲೆ ಬೆಟ್ಟದ ಕುರಿಗಳು ಮೇಯುತ್ತಿರುವ ದೃಶ್ಯವಂತೂ, ಮುತ್ತುಗಳನ್ನು ಜೋಡಿಸಿಟ್ಟಂತೆ ಕಾಣುತ್ತಿತ್ತು. ಹಿಮಾಚ್ಛಾದಿತ ಪರ್ವತಗಳನ್ನು ಕಂಡಾಗ ಮನಸ್ಸು ಕುಣಿದಾಡಿತು.

ಹಾರಾಡುತ್ತಿದ್ದ ಹೆಲಿಕಾಪ್ಟರ್‌ ಅನ್ನು ಹಿಮ ಮೈದಾನದ ನಡುವೆ ನಿಲ್ಲಿಸಿದರು. ಅಲ್ಲಿ ಚಿಕ್ಕ ಚಿಕ್ಕ ಟೆಂಟ್‌ಗಳು ಕಂಡವು. ಅದರ ಹೊರಗಡೆ ನೂರಾರು ಅಲಾಸ್ಕನ್ ಹಸ್ಕಿ ನಾಯಿಗಳು, ಸೊಕ್ಕಿನಿ೦ದ ಆರ್ಭಟಿಸುತ್ತಿದ್ದವು. ಅವುಗಳನ್ನು ನಿರ್ವಹಿಸಲು ಎರಡು ಮೂರು ಮಂದಿ ಚೆಂದದ ಹುಡುಗಿಯರು ಜತೆಗೆ ಒಬ್ಬರು ಸೂಪರ್‌ವೈಸರ್‌ ಇದ್ದರು. ಅವರೆಲ್ಲ ಕೊರೆಯುವ ಹಿಮದ ಮಧ್ಯೆ ಅದೇ ಕ್ಯಾಂಪ್‌ಗಳಲ್ಲಿ ವಾಸಿಸುತ್ತಾರಂತೆ. ವಾರದಲ್ಲೊಮ್ಮೆ ಜುನೌಗೆ ಹೋಗಿ ಬರುತ್ತಾರಂತೆ. ವರ್ಷದಲ್ಲಿ ಆರು ತಿ೦ಗಳು ಅಲ್ಲೇ ವಾಸ. ಇನ್ನಾರು ತಿಂಗಳು ಹಿಮ ಹೆಚ್ಚಾಗುವ ಕಾರಣ, ನಾಯಿಗಳನ್ನು ಹೆಲಿಕಾಪ್ಟರ್‌ಗಳಲ್ಲಿ ಕೂಡಿಸಿಕೊಂಡು ಜುನೌಗೆ ಹೋಗುತ್ತಾರಂತೆ. ಅಲ್ಲಿ೦ದ ಅವರವರ ಊರಿಗೆ ತೆರಳುತ್ತಾರೆ.

ನಾವು ಡಾಗ್ ಸ್ಲೆಡ್ಜ್‌ ಗಾಡಿಯಲ್ಲಿ ಕುಳಿತೆವು. ನಾನು ಮತ್ತು ನನ್ನ ಪತಿ ಒಂದೊಂದು ಕುರ್ಚಿಯಲ್ಲಿ ಕುಳಿತೆವು. ಅದರ ಚಾಲನೆಗೆ ಹಾಗೂ ಬ್ರೇಕ್ ಹಿಡಿದು ನಿಲ್ಲಿಸಲು ಡಾಗ್ ಪಳಗಿಸುವ ತರುಣಿ ಇದ್ದಳು. ಎಂಟು ಅಲಾಸ್ಕನ್ ಹಸ್ಕಿ ನಾಯಿಗಳು ಆ ಬಂಡಿಯನ್ನು ಎಳೆದುಕೊಂಡು ಜೋರಾಗಿ ಓಡುತ್ತಿದ್ದವು. ಅವು ಓಡುತ್ತಿದ್ದ ರಭಸಕ್ಕೆ ಒಮ್ಮೊಮ್ಮೆ ಎದೆ ಝಲ್‌ ಎನ್ನುತ್ತಿತ್ತು. ನಾವು ನಾಲ್ಕು ಕಿ.ಮೀ ದೂರ ಸಾಗಬೇಕಿತ್ತು. ಓಡುವ ಗಾಡಿಗೆ ಬ್ರೇಕ್ ಹಾಕಿದರೂ ನಾಯಿಗಳು ಓಡಬೇಕೆಂದು ಕೂಗೇ ಕೂಗುತ್ತಿದ್ದವು. ಆ ವೇಗದ ಓಟದ ನಡುವೆಯೂ ಸುತ್ತಲಿನ ಹಿಮದ ಹಾಸನ್ನು ನೋಡಿದ ನಮಗೆ ಖುಷಿಯೋ ಖುಷಿ. ಆ ಖುಷಿಯಲ್ಲಿ ಕೊರಡಿನಂತೆ ಮರಗಟ್ಟುತ್ತಿರುವ ಕೈಕಾಲುಗಳ ಬಗ್ಗೆಯೂ ಗಮನವಿಡದೇ, ನಾನು ಫೋಟೊ ತೆಗೆಯುತ್ತಿದ್ದೆ.

ನಾವು ಸುರಕ್ಷಿತವಾಗಿ ಕ್ಯಾ೦ಪ್ ತಲುಪಿದ ಮೇಲೆ, ಹಿಮದ ಮೇಲೆ ಬೈಕ್ ಸವಾರಿಗೆ ಸಿದ್ಧರಾದೆವು. ಅದಕ್ಕೆ ‘ಸ್ಕಿಡೂ’ ಎನ್ನುತ್ತಾರೆ. ಇದೊಂದು ರೀತಿಯ ಖುಷಿ ಕೊಟ್ಟಿತು. ಇಷ್ಟೆಲ್ಲ ಸುತ್ತಾಡುವಷ್ಟರಲ್ಲಿ ನಮ್ಮ ಸಮಯ ಮುಗಿದಿತ್ತು. ಚಳಿಗಾಳಿಯಿಂದಾಗಿ ನಮಗೂ ಅಲ್ಲಿ ನಿಲ್ಲಲು ಕಷ್ಟವಾಗುತ್ತಿತ್ತು. ಅಷ್ಟರಲ್ಲಿ ನಮ್ಮ ಹೆಲಿಕಾಪ್ಟರ್ ಬಂತು. ಒಲ್ಲದ ಮನಸ್ಸಿನಿ೦ದ ಹೊರಟೆವು.‌ ಜುನೌಗೆ ವಾಪಾಸಾದಾಗ ಸಂಜೆ 5.30. ಹಾಗೆಯೇ ಬಸ್‌ ಏರಿ ಜುನೌ ಶಹರ ನೋಡಲು ಹೊರಟೆವು.

ಜುನೌ ಪುಟ್ಟ ಶಹರ. ಅಲ್ಲಿರುವುದು ನಾಲ್ಕು ರಸ್ತೆಗಳು. ಜನ ಸಂಖ್ಯೆ ವಿರಳ. ಅ೦ಗಡಿಗಳಲ್ಲಿ ಪ್ರವಾಸಿಗರು ಮಾತ್ರ ಕಾಣುತ್ತಿದ್ದರು. ಇಲ್ಲಿ ಮುತ್ತು ರತ್ನ, ಹವಳಗಳ ಅ೦ಗಡಿಗಳಿವೆ. ಇಲ್ಲೆಲ್ಲ ಭಾರತೀಯ ಮೂಲದವರು ಇರುತ್ತಾರೆ. ಕೆರೇಬಿಯನ್ ದ್ವೀಪಗಳಿಂದ ವರ್ಷದ ಆರು ತಿಂಗಳು ಮುತ್ತು, ಹವಳಗಳ ವ್ಯಾಪಾರಕ್ಕಾಗಿ ಇಲ್ಲಿಗೆ ಬರುತ್ತಾರಂತೆ. ಮೇ – ಸೆಪ್ಟೆಂಬರ್‌ವರೆಗೆ ಇಲ್ಲಿಗೆ ಬರುವ ಹಡಗುಗಳೊಂದಿಗೆ ವ್ಯಾಪಾರಸ್ಥರು ಬರುತ್ತಾರೆ.

ಜುನೌದಲ್ಲಿಯೂ ಭಾರತೀಯ ಹೋಟೆಲ್‌ಗಳಿವೆ. ನಾವು ಸ್ಯಾಫ್ರನ್‌ ಇಂಡಿಯನ್ ಕಂಫರ್ಟ್‌ ಎಂಬ ರೆಸ್ಟೊರೆಂಟ್‌ನಲ್ಲಿ ಚಹಾ ಕುಡಿದು, ಸಮೋಸಾ ಮೆದ್ದು ನಂತರ ಮರಳಿದೆವು. ಸೆಕ್ಯುರಿಟಿ ಚೆಕ್ ಮುಗಿಸಿ ಹಡಗು ಏರಿದೆವು. ರಾತ್ರಿ 10ಕ್ಕೆ ಊಟ ಮುಗಿಸಿ, ನಿದ್ದೆಗೆ ಜಾರುವಾಗ, ಸಮುದ್ರದಲ್ಲಿ ಬೃಹತ್‌ ಅಲೆಗಳು ಎದ್ದು, ವಾತಾವರಣ ಪ್ರಕ್ಷುಬ್ಧವಾಯಿತು. ಹಡಗು ಅತ್ತಿತ್ತ ಹೊರಳಾಡುತ್ತಿತ್ತು. ಆಗ ನಮ್ಮ ಎದೆಯಲ್ಲೂ ತಳಮಳ. ಆದರೆ ಇಂಥವೆಲ್ಲ ಇಲ್ಲಿ ಸಾಮಾನ್ಯವಂತೆ. ಈ ಘಟನೆಯಿಂದಾಗಿ ಹಡಗಿನಲ್ಲಿದ್ದ ಥಿಯೇಟರ್‌ನಲ್ಲಿ ನಡೆಯುತ್ತಿದ್ದ ಸಿನಿಮಾ ಪ್ರದರ್ಶನವನ್ನು ಅರ್ಧಕ್ಕೆ ನಿಲ್ಲಿಸಿದರು. ಮುಂದೆ ಎರಡು ತಾಸಿನ ನ೦ತರ ಸಮುದ್ರ ಶಾ೦ತವಾಯಿತು. ಹಾಗಾಗಿ ನಿಶ್ಚಿ೦ತೆಯಿ೦ದ ನಿದ್ದೆಗೆ ಜಾರಿದೆವು.

ಬೆಳಿಗ್ಗೆ ಆರು ಗಂಟೆಗೆ ಹಡಗು ಸ್ಕಾಗ್ವೇ(Skagway) ತಲುಪಿತು. ಅಲ್ಲಿಂದ ವಿಕ್ಟೋರಿಯಾ ಮೂಲಕ ಮರಳಿ ಸಿಯಾಟಲ್‌ಗೆ ಬಂದೆವು. ಮನೆ ತಲುಪಿದರೂ ಜಗವನ್ನೇ ಮರೆಸುವಂತಹ ಜುನೌ ಪ್ರವಾಸದ ನೆನಪುಗಳು ಮಾತ್ರ ಕಾಡುತ್ತಲೇ ಇದ್ದವು.

ಚಿತ್ರಗಳು: ಲೇಖಕರವು

ಬಾಕ್ಸ್

ಜುನೌ ನಗರ ಹೀಗಿದೆ...

ಜುನೌ, ಅಮೆರಿಕದ ದೊಡ್ಡ ರಾಜ್ಯ ಅಲಾಸ್ಕಾದ ರಾಜಧಾನಿ. 8,430 ಚ.ಕಿ.ಮೀ ವಿಸ್ತಾರವಿದೆ. ಅಲಸ್ಕಾದಲ್ಲಿ ಆಂಕರೇಜ್ ನಗರ ಬಿಟ್ಟರೆ ಇದೇ ದೊಡ್ಡ ನಗರ.

ಇದರಲ್ಲಿ 1,430 ಚ. ಕಿ.ಮೀನಷ್ಟು ನೀರಿದೆ. ಇಲ್ಲಿಯ ಜನಸ೦ಖ್ಯೆ ಹಳ್ಳಿಗಳನ್ನೂ ಸೇರಿ ಒಟ್ಟು ಒಂದು ಲಕ್ಷವಿದೆ.

ನಗರದ ಜನಸಂಖ್ಯೆ 32,100. ಮೇ ತಿಂಗಳಿನಿಂದ ಸೆಪ್ಟೆಂಬರ್‌ವರೆಗೂ ಇಲ್ಲಿಗೆ ಹಡಗುಗಳು ಸಂಚಾರ ಮಾಡುವುದರಿಂದ, ಹೆಚ್ಚು ಪ್ರವಾಸಿಗರು, ವ್ಯಾಪಾರಸ್ಥರು ಬಂದು ಹೋಗುತ್ತಾರೆ. ಆಗ ಆರು ಸಾವಿರದಷ್ಟು ಜನಸಂಖ್ಯೆ ಹೆಚ್ಚಳವಾಗುತ್ತದೆ.

ಜುನೌದಲ್ಲಿ ಭಾರತೀಯ ಹೋಟೆಲ್‌, ರೆಸ್ಟೊರೆಂಟ್‌ಗಳಿವೆ.

ಮುತ್ತು ರತ್ನ, ಹವಳಗಳ ಅ೦ಗಡಿಗಳಿವೆ. ಕೆರಿಬಿಯನ್‌ ದ್ವೀಪದಿಂದ ವ್ಯಾಪಾರಸ್ಥರು ಇಲ್ಲಿಗೆ ಬರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT