ಸೋಮವಾರ, ಸೆಪ್ಟೆಂಬರ್ 23, 2019
24 °C

ಹವಳ ದ್ವೀಪ ‘ಕೊಹ್ ಲಾನ್’

Published:
Updated:
Prajavani

ಬ್ಯಾಂಕಾಕ್ ಹೊರತುಪಡಿಸಿದರೆ ಥಾಯ್ಲೆಂಡಿನ ಥಳುಕು ಬಳುಕು ಕಾಣುವುದು ಪಟ್ಟಾಯದಲ್ಲಿ. ಬ್ಯಾಂಕಾಕ್‌ನಿಂದ ಎರಡು ತಾಸು ದೂರದಲ್ಲಿರುವ ಪಟ್ಟಾಯಕ್ಕೆ ಪ್ರವಾಸಕ್ಕೆ ಹೊರಟಿರೆಂದರೆ, ಸ್ನೇಹಿತವಲಯ ಅರ್ಥಗರ್ಭಿತವಾಗಿ ನಗುವುದೂ ಉಂಟು! ಆದರೆ ಆ ಎಲ್ಲ ಕಾರಣ ಅತ್ತ ಸರಿಸಿದರೆ ಮನಮೋಹಕ ಕಡಲತಡಿಯ ಸೌಂದರ್ಯ ಸವಿಯಲು ಪಟ್ಟಾಯದ ಬೀಚ್‍ಗಳಿಗೆ ಸಾಟಿ ಇಲ್ಲ.

ಪಟ್ಟಾಯದ ಮುಖ್ಯ ಬೀಚ್‍ನಿಂದ ದ್ವೀಪಗಳಿಗೆ ಹೋಗಲು ಸ್ಪೀಡ್ ಬೋಟ್ ಹಾಗೂ ಬೃಹತ್ ಹಡಗುಗಳ ಸೌಲಭ್ಯವಿದೆ. ಆರರಿಂದ ಹದಿನೈದು ಜನರ ತಂಡವಿದ್ದರೆ ಸ್ಪೀಡ್ ಬೋಟ್ ಒಳ್ಳೆಯದು. ಇದೇ ಮಾರ್ಗದಲ್ಲಿ ದೊಡ್ಡ ದೊಡ್ಡ ಪ್ಯಾಸೆಂಜರ್ ಹಡಗುಗಳೂ ಸಂಚರಿಸುತ್ತವೆ; ದರ ತೀರಾ ಕಡಿಮೆ. ಪಟ್ಟಾಯದಿಂದ ಅರ್ಧ ಹಾಗೂ ಒಂದು ದಿನದ ಪ್ರವಾಸ ಮಾಡಲು ಹಲವು ದ್ವೀಪಗಳಿವೆ. ಆ ಪೈಕಿ ಸುಮಾರು ಏಳು ಕಿಲೋಮೀಟರ್ ದೂರದಲ್ಲಿರುವ ‘ಕೊಹ್ ಲಾನ್’ ದ್ವೀಪ, ತನ್ನ ಅಪರಿಮಿತ ಸೌಂದರ್ಯದಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ಸ್ಪೀಡ್‍ ಬೋಟ್‍ನಲ್ಲಿ ಅಲ್ಲಿಗೆ ಇಪ್ಪತ್ತು ನಿಮಿಷಗಳ ದಾರಿ. ಸಾಗರದ ಬೃಹತ್ ಅಲೆಗಳ ಮೇಲೆ ತೇಲುತ್ತ ಭರ‍್ರೆಂದು ಸಾಗುವಾಗ ಸಿಗುವ ಅನುಭವ ಬಣ್ಣಿಸಲಸದಳ. ಅಷ್ಟೇ ವೇಗವಾಗಿ ಬೋಟ್‍ಗಳೂ ಇಬ್ಬರು- ಮೂವರನ್ನು ಹೊತ್ತ ‘ಬನಾನಾ’ ಬೋಟ್‍ಗಳೂ ದಿಢೀರೆಂದು ಎದುರಾಗುತ್ತವೆ. ಇನ್ನೇನು… ಡಿಕ್ಕಿ ಹೊಡೆದೇ ಬಿಟ್ಟವು ಎಂದುಕೊಳ್ಳುವಷ್ಟರಲ್ಲಿ ಕ್ಷಣಾರ್ಧದಲ್ಲಿ ನಮ್ಮ ಸ್ಪೀಡ್ ಬೋಟ್‍ ಹೊರಳಿ ಅದೇ ವೇಗದಲ್ಲಿ ಮುನ್ನುಗ್ಗುತ್ತದೆ. ಸುತ್ತಮುತ್ತಲೂ ನೀಲಿರಾಶಿ. ಆಗಾಗ್ಗೆ ದೊಡ್ಡ ಹಡಗುಗಳೂ ಆಗಸದಲ್ಲಿ ಕಾಣುವ ಪ್ಯಾರಾ ಸೇಲಿಂಗ್ ನಿರತ ಪ್ರವಾಸಿಗರೂ ಕಾಣಿಸುವುದುಂಟು!

ಕೊಹ್‍ ಲಾನ್- ಇದೊಂದು ಶುಭ್ರ ಕಡಲತೀರ. ಈ ದ್ವೀಪವನ್ನು ‘ಕೋರಲ್ ಐಲ್ಯಾಂಡ್’ (ಹವಳದ ದ್ವೀಪ) ಎಂದೇ ಕರೆಯಲಾಗುತ್ತದೆ. ನಾಲ್ಕು ಕಿಲೋ ಮೀಟರ್ ಉದ್ದದ ಇಲ್ಲಿನ ಬೀಚ್, ಸ್ಫಟಿಕಶುಭ್ರ ನೀರು ಹಾಗೂ ಬಿಳಿ ಉಸುಕಿನಿಂದ ಗಮನಸೆಳೆಯುತ್ತದೆ. ಪಟ್ಟಾಯಕ್ಕೆ ಸಾಕಷ್ಟು ದೂರ ಇರುವುದರಿಂದ ಪ್ರವಾಸಿಗರ ದಟ್ಟಣೆ ಅಷ್ಟೇನೂ ಇರುವುದಿಲ್ಲ. ಬೋಟ್ ಅಥವಾ ಹಡಗಿನ ಮೂಲಕ ಅಲ್ಲಿಗೆ ತಲುಪಿದರೆ, ಭರಪೂರ ಮನರಂಜನೆ ಕಾದಿರುತ್ತದೆ.

ಮೀನು- ಏಡಿ ಬಿಟ್ಟರೆ ಪ್ರತಿಯೊಂದು ಪದಾರ್ಥವನ್ನೂ ಪಟ್ಟಾಯದಿಂದ ತರಬೇಕು. ಹೀಗಾಗಿಯೇ ಇಲ್ಲಿ ಎಲ್ಲವೂ ದುಬಾರಿ. ಒಂದು ಲೀಟರ್ ನೀರಿನ ಬಾಟಲಿಗೆ ₹40 ತೆರಬೇಕು. ಬಗೆಬಗೆಯ ಮದ್ಯಗಳೊಂದಿಗೆ ಮೀನು, ಸಿಗಡಿ, ಏಡಿಯ ಭಕ್ಷ್ಯಗಳು ಸಾಗರ ತೀರದ ಹೋಟೆಲ್‍ಗಳಿಗೆ ಕೈಬೀಸಿ ಕರೆಯುವಂತೆ ಇರುತ್ತವೆ. ಈಜಾಡುತ್ತಿರುವಾಗಲೇ ತಿಂಡಿ-ತಿನಿಸು, ಪೇಯಗಳನ್ನು ಸರಬರಾಜು ಮಾಡುವ ವ್ಯವಸ್ಥೆಯೂ ಇಲ್ಲಿದೆ! ಸಮುದ್ರದಲ್ಲಿ ಈಜಾಡಿ, ಅನಂತರ ಸಿಹಿ ನೀರಿನಲ್ಲಿ ಸ್ನಾನ ಮಾಡಬೇಕೆಂದರೆ 25 ಲೀಟರ್ ಸಿಹಿನೀರಿಗೆ ನೂರು ರೂಪಾಯಿ ಶುಲ್ಕ. ಹೀಗಾಗಿ, ಉದ್ದನೆಯ ತೀರದಲ್ಲಿ ಸುಮ್ಮನೇ ವಾಕಿಂಗ್ ಹೋಗುವುದು ಹಾಗೂ ಶುದ್ಧ ನೀರಿನಲ್ಲಿ ಈಜಾಡುವುದು- ಇವೆರಡು ಮಾತ್ರ ಇಲ್ಲಿ ‘ಉಚಿತ’!

ಪರ್ಸ್‌ನಲ್ಲಿ ಹಣ ಇದ್ದರೆ ಮನರಂಜನೆಗೆ ಕೊನೆಯೇ ಇಲ್ಲ. ವಿಶಾಲವಾದ ಡೆಕ್‍ಗಳಲ್ಲಿ ನಿಂತು, ಅಲ್ಲಿಂದ ಆಗಸಕ್ಕೆ ಜಿಗಿಯುವ ಪ್ಯಾರಾ ಸೇಲಿಂಗ್ ರೋಮಾಂಚಕ ಅನುಭವ ಕೊಡುತ್ತದೆ. ಬಾಳೆಹಣ್ಣಿನ ಆಕಾರದ ಉದ್ದನೆಯ ಬೋಟ್‍ ಮೇಲೆ ಇಬ್ಬರೋ ಮೂವರೋ ಕೂತುಕೊಂಡರೆ, ಅದನ್ನೆಳೆದು ವಾಟರ್‍ ಬೈಕ್ ಭರ‍್ರೆಂದು ನೀರನ್ನು ಸೀಳಿಕೊಂಡು ಸಾಗುತ್ತದೆ. ವಾಪಸ್ಸು ದಡಕ್ಕೆ ಬರುತ್ತಲೇ ದಿಢೀರೆಂದು ಬೈಕ್ ಹ್ಯಾಂಡಲ್ ತಿರುಗಿಸಿ ಬನಾನಾ ಬೋಟ್‍ ಅನ್ನು ತಲೆಕೆಳಗಾಗಿ ಬೀಳಿಸಿದಾಗ ಸವಾರರು ನೀರಿನಲ್ಲಿ ಮುಳುಗಿ ‘ಹೋ…’ ಎಂದು ಬೊಬ್ಬೆ ಹೊಡೆಯುವ ನೋಟ ಸಾಮಾನ್ಯ. ಉಳಿದಂತೆ ಸ್ಕೈಡೈವಿಂಗ್, ವಿಂಡ್ ಸರ್ಫಿಂಗ್, ಸ್ಕೈ ಬೋರ್ಡಿಂಗ್‍ನಂಥ ಹಲವು ಜಲಸಾಹಸ ಕ್ರೀಡೆಗಳಿಗೆ ಅವಕಾಶವೂ ಇದೆ.

ಸಮುದ್ರ ತೀರದಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ದಟ್ಟಾರಣ್ಯ ಆರಂಭವಾಗುತ್ತದೆ. ಬೆಟ್ಟಗಳ ಬುಡದಲ್ಲಿ ರೆಸಾರ್ಟ್‌ಗಳು ಇವೆ. ಅವುಗಳ ದರ ಮಾತ್ರ ಸಾಮಾನ್ಯರ ಕೈಗೆಟುಕುವಂತಿಲ್ಲ! ಹೀಗಾಗಿ ನಾಲ್ಕೈದು ತಾಸುಗಳ ಕಾಲ ಉಳಿದುಕೊಂಡು, ಬೀಚ್‍ ಸೌಂದರ್ಯ ಸವಿದು ವಾಪಸಾಗುವುದು ಜೇಬಿಗೆ ಹಗುರ!

ಹೀಗೆ ಹೋಗಿ

ಬೆಂಗಳೂರಿನಿಂದ ಬ್ಯಾಂಕಾಕ್‍ಗೆ ನೇರ ವಿಮಾನಯಾನ ಸೌಲಭ್ಯವಿದೆ. ಕೊಲಂಬೊ ಮೂಲಕ ಹೋಗುವಿರಾದರೆ ಯಾನದ ದರ ಕಡಿಮೆಯಾಗುತ್ತದೆ. ಬ್ಯಾಂಕಾಕ್‍ನಿಂದ 150 ಕಿ.ಮೀ ದೂರದಲ್ಲಿರುವ ಪಟ್ಟಾಯ ಮೋಜು ಮಸ್ತಿಗೆ ಪ್ರಸಿದ್ಧ. ಬ್ಯಾಂಕಾಕ್‍ನಿಂದ ಕಡಿಮೆ ದರದಲ್ಲಿ ನೇರ ಬಸ್‍, ರೈಲು ಸಂಪರ್ಕ ಇದೆ. ಟ್ಯಾಕ್ಸಿ ತುಸು ದುಬಾರಿ. ಪಟ್ಟಾಯದಿಂದ ‘ಕೋಹ್ ಲಾನ್’ ದ್ವೀಪಕ್ಕೆ ಸ್ಪೀಡ್‍ ಬೋಟ್‍ಗೆ 300ರಿಂದ 400 ಬಹ್ತ್ ದರವಿದ್ದರೆ, ಪ್ರಯಾಣಿಕರ ಹಡಗುಗಳಲ್ಲಿ 20 ಬಹ್ತ್. ಪ್ಯಾರಾ ಸೇಲಿಂಗ್, ಬನಾನಾ ಬೋಟ್ ರೈಡ್‍ನಂಥ ಹಲವು ಜಲಸಾಹಸ ಕ್ರೀಡೆಗಳಿಗೆ 500 ಬಹ್ತ್‍ವರೆಗೂ ಶುಲ್ಕ ನಿಗದಿ ಮಾಡಲಾಗಿದೆ.

ಉತ್ತಮ ವಾಸ್ತವ್ಯ

ಪಟ್ಟಾಯದಲ್ಲಿ ಅಗ್ಗದ ದರದಿಂದ ಹಿಡಿದು ಐಶಾರಾಮಿ ಹೋಟೆಲ್‍ಗಳು ವಾಸ್ತವ್ಯಕ್ಕೆ ಸಿಗುತ್ತವೆ. ಬಹುತೇಕ ಹೋಟೆಲ್‍ಗಳಲ್ಲಿ ಉಚಿತ ವೈಫೈ ಸೌಲಭ್ಯ ಒದಗಿಸಲಾಗುತ್ತದೆ. ಜಗತ್ತಿನ ವಿವಿಧ ದೇಶಗಳಿಂದ ಪ್ರವಾಸಿಗರು ಲಗ್ಗೆ ಇಡುವುದರಿಂದ, ಎಲ್ಲ ಬಗೆಯ ವಯೋಮಾನದವರೂ ಇಷ್ಟಪಡುವ ನಾನಾ ದೇಶಗಳ ಊಟೋಪಚಾರ ಸಿಗುತ್ತದೆ. ಭಾರತೀಯ ಶೈಲಿಯ ಆಹಾರ, ತಿಂಡಿ ತಿನಿಸುಗಳ ಹೋಟೆಲ್‍ಗೆ ಕೊರತೆಯೇನಿಲ್ಲ. ವಾಸ್ತವ್ಯಕ್ಕೆ ಹೋಲಿಸಿದರೆ ಊಟೋಪಚಾರದ ವೆಚ್ಚ ತುಸು ಜಾಸ್ತಿ ಅನಿಸುವುದು ಉಂಟು.

Post Comments (+)