ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಚೆನ್‌ಸ್ಟೈನ್ ಪುಟಾಣಿ ರಾಷ್ಟ್ರದಲ್ಲಿ

Last Updated 3 ಜುಲೈ 2019, 19:30 IST
ಅಕ್ಷರ ಗಾತ್ರ

ಕಳೆದ ಜೂನ್ ತಿಂಗಳಲ್ಲಿ ಯುರೋಪ್ ಪ್ರವಾಸ ಹೋಗಿದ್ದೆವು. ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಲಿಚೆನ್‌ಸ್ಟೈನ್‌ ಎಂಬ ಪುಟಾಣಿ ದೇಶದ ಹೆಸರು ಸೇರಿತ್ತು. ಅಲ್ಲಿವರೆಗೂ ಆ ಹೆಸರನ್ನು ಕೇಳೇ ಇರಲಿಲ್ಲ. ಹಾಗಾಗಿ ಆ ದೇಶ ನೋಡುವ ಕುತೂಹಲ ಹೆಚ್ಚಾಗಿತ್ತು.

ಇದು ಸ್ವಿಡ್ಜರ್ಲೆಂಡ್‌ ಮತ್ತು ಆಸ್ಟ್ರಿಯಾ ದೇಶಗಳ ನಡುವೆ ಅಡಕಿರಿಸಿಕೊಂಡ, ಯುರೋಪಿನ ಮಧ್ಯ ಭಾಗದಲ್ಲಿದೆ. ಸ್ವಿಡ್ಜರ್ಲೆಂಡ್‌ ನೋಡಿಕೊಂಡು ಝೂರಿಚ್‌ನಿಂದ ಹೊರಟು ವಡೂಝ್ ಎಂಬ ಪಟ್ಟಣ ತಲುಪಿದಾಗಲೇ ಗೊತ್ತಾಗಿದ್ದು ನಾವು ಲಿಚೆನ್‌ಸ್ಟೈನ್ ದೇಶದಲ್ಲಿದ್ದೇವೆಂದು. ಏಕೆಂದರೆ ಯೂರೋಪಿನ ದೇಶಗಳ ನಡುವೆ ಗಡಿಗಳಿಲ್ಲ, ಚೆಕ್‌ಪೋಸ್ಟ್‌ಗಳಿಲ್ಲ.

ಬಸ್ಸಿನಿಂದಿಳಿದಾಗ ಕಂಡದ್ದು ಹಿಮಾಚ್ಛಾದಿತ ಆಲ್ಪೈನ್ ಪರ್ವತಗಳ ಸಾಲುಗಳು. ಆಹ್ಲಾದಕರ ವಾತಾವರಣದ ನಡುವೆ ಸ್ವಚ್ಛ ಹಾಗೂ ಶುಭ್ರವಾದ ರಸ್ತೆಗಳು ನಮ್ಮನ್ನು ಸ್ವಾಗತಿಸಿದವು. ಇಷ್ಟು ಚಂದದ ರಸ್ತೆ ಇದ್ದರೂ ಪಟ್ಟಣದೊಳಗೆ ಬೃಹತ್ ವಾಹನಗಳಿಗೆ ಪ್ರವೇಶವಿರಲಿಲ್ಲ. ಸಣ್ಣ ವಾಹನಗಳು ಮತ್ತು ಸೈಕಲ್‌ಗಳೇ ಇಲ್ಲಿನ ಸಂಚಾರ ಸಾಧನಗಳು.

ಪ್ರಮುಖ ರಸ್ತೆಯಲ್ಲಿ ಹೆಜ್ಜೆ ಹಾಕುತ್ತಿದ್ದಾಗ, ನಾವೊಂದು ಬಯಲು ಕಲಾ ಗ್ಯಾಲರಿಯಲ್ಲಿದ್ದಂತೆ ಭಾಸವಾಗುತ್ತಿತ್ತು. ಏಕೆಂದರೆ, ರಸ್ತೆಯ ಬದಿಯಲ್ಲಿ ಅಂಥ ವಿಶಿಷ್ಟ ಕಲಾಕೃತಿಗಳನ್ನು ಜೋಡಿಸಿಟ್ಟಿದ್ದರು. ಮನಮೋಹಕ ಹೂಗಿಡಗಳ ಅಲಂಕಾರ, ಗುಂತೆರ್ ಸ್ಟಿಲ್ಲಿಂಗ್‍ನ ‘ಆಫ್ರಿಕನ್ ಕಿಂಗ್’ ಎಂಬ ಮುಖವಾಡದಂತಹ ಕಲಾಕೃತಿ, ಚಾಕೋಲೇಟ್‌ನಿಂದ ಮಾಡಿರುವಂತೆ ಭಾಸವಾಗುವ ‘ಸ್ಲೀಪಿಂಗ್ ಲೇಡಿ’, ಕುದುರೆ, ಕರಡಿಗಳಂತಹ ಮುಖವಾಡ, ಪ್ರತಿಕೃತಿಗಳು ಪಟ್ಟಣವನ್ನು ಕಲೆಯಿಂದಲೇ ಅಲಂಕಾರ ಮಾಡಿ ಬಿಟ್ಟಿದ್ದವು. ಹಾಗೆ ಹೆಜ್ಜೆ ಹಾಕುತ್ತಾ ಮುಂದಿರುವ ಬೆಟ್ಟವನ್ನು ಕತ್ತೆತ್ತಿ ನೋಡಿದರೆ, ಮೇಲೊಂದು ಬೃಹತ್‌ ಹಳೆಯ ಕಟ್ಟಡ ಕಂಡಿತು. ಅದೇ ವಡೂಝ್ ಅರಮನೆ. ಆ ದೇಶದ ಯುವರಾಜ ವಾಸಿಸುವ ಸ್ಥಳವೆಂದೂ ತಿಳಿದು ಬಂತು. ಅದನ್ನು ಹತ್ತಿರದಿಂದ ನೋಡುವ ಕಾಲಾವಕಾಶ ನಮಗಿರಲಿಲ್ಲ.

ಪೋಸ್ಟ್‌ ಮತ್ತು ನ್ಯಾಷನಲ್‌ ಮ್ಯೂಸಿಯಂ
ಪೋಸ್ಟ್‌ ಮತ್ತು ನ್ಯಾಷನಲ್‌ ಮ್ಯೂಸಿಯಂ

ನ್ಯಾಷನಲ್‌ ಮ್ಯೂಸಿಯಂನತ್ತ...

ನಾವು ಲಿಚೆನ್‌ಸ್ಟೈನ್‌ ರಾಷ್ಟ್ರೀಯ ವಸ್ತುಸಂಗ್ರಹಾಲಯ ನೋಡಲು ಹೊರಟಿದ್ದೆವು. ಅದನ್ನು ಕುನ್‌ಸ್ಟ್ರಾಮ್‌ ಎಂದು ಕರೆಯುತ್ತಾರೆ. ಇದು ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ. ಸ್ವಿಸ್ ವಾಸ್ತುಶಿಲ್ಪಿಗಳಾದ ಮೋರ್ಗರ್, ಡೆಜೆಲೊ ಮತ್ತು ಕೆರೆಜ್ ಅವರು ನವೆಂಬರ್ 2000ದಲ್ಲಿ ಈ ಕಟ್ಟಡವನ್ನು ಪೂರ್ಣಗೊಳಿಸಿಕೊಟ್ಟರು. ಇದಕ್ಕೆ ಕಪ್ಪು ಪೆಟ್ಟಿಗೆ ಎಂದು ಕರೆಯುತ್ತಾರೆ. ಈ ಮ್ಯೂಸಿಯಂನಲ್ಲಿ ಸಾಂಸ್ಕೃತಿಕ ಮತ್ತು ಇತಿಹಾಸವನ್ನು ಬಿಂಬಿಸುವ ಅನೇಕ ಸಮಕಾಲೀನ ಮತ್ತು ನವೀನ ಕಲಾಕೃತಿಗಳನ್ನು ಜೋಡಿಸಲಾಗಿದೆ. ಚಂದ್ರಯಾನಕ್ಕೆ ಸಂಬಂಧಪಟ್ಟ ಮಾದರಿಗಳು, ಚಂದ್ರನಿಂದ ತಂದ ಕಲ್ಲುಗಳು, ಅಣಬೆಯ ಕಲಾಕೃತಿ ಸೇರಿದಂತೆ ವಿವಿಧ ಬಗೆಯ ಹಲವಾರು ಕಲಾಕೃತಿಗಳು ನೋಡುಗರ ಗಮನ ಸೆಳೆಯುತ್ತವೆ.

1930 ರಲ್ಲಿ ಪ್ರಾರಂಭವಾದ ಅಂಚೆ ಸಂಗ್ರಹಾಲಯವು 2006 ರಿಂದ ರಾಷ್ಟ್ರೀಯ ವಸ್ತುಸಂಗ್ರಹಾಲಯದ ಭಾಗವಾಗಿದೆ. ಇಲ್ಲಿ 19ನೇ ಶತಮಾನದ ಆರಂಭದಲ್ಲಿ ಅಂಚೆ ಇಲಾಖೆ ಹೇಗಿತ್ತು ಎಂದು ತಿಳಿಸುವ ಅನೇಕ ವಸ್ತುಗಳನ್ನು ಪ್ರದರ್ಶಿಸಲಾಗಿದೆ. ಆ ಕಾಲದ ಅಂಚೆ ಗಾಡಿ, ಅಂಚೆ ಪೇದೆ ಮತ್ತು ಆತ ಉಪಯೋಗಿ ಸುತ್ತಿದ್ದ ಸೈಕಲ್ಲು, ಲಕೋಟೆಗಳಿವೆ. ತೂಕ ಮಾಡಲು ಬಳಸುತ್ತಿದ್ದ ತಕ್ಕಡಿ ಮತ್ತು ಬಟ್ಟು(ತೂಕದ ಕಲ್ಲು)ಗಳಿವೆ. ವಿಶೇಷ ಅಂಚೆ ಲಕೋಟೆಗಳೂ ಇವೆ.

ಮುಂದೆ ಸಾಗಿದಂತೆ ಮತ್ತೊಂದು ಖಾಸಗಿ ಸಂಗ್ರಹಾಲಯ ಮತ್ತು ಮಾರಾಟ ಕೇಂದ್ರ ಸಿಕ್ಕಿತು. ಇಲ್ಲಿಂದ ಸ್ವಲ್ಪವೇ ದೂರದಲ್ಲಿರುವ ವಡೂಝ್ ಚರ್ಚ್‌ ಇನ್ನೊಂದು ಪ್ರಮುಖ ಸ್ಥಳ. ನವ್ಯ ಗೋಥಿಕ್ ಶೈಲಿಯ ಕಟ್ಟಡ 1874ರಲ್ಲಿ ಫ್ರೆಡ್ರಿಕ್ ವಾನ್ ಸ್ಮಿಡ್ತ್ ಕಟ್ಟಿಸಿದುದು. ಮೊದಲು ಚರ್ಚ್ ಆಗಿತ್ತು. 1997 ರಿಂದ ರೋಮನ್ ಕ್ಯಾಥೋಲಿಕ್ ಕ್ಯಾಥೊಡ್ರೆಲ್ ಆಗಿ ಬಡ್ತಿ ಪಡೆದಿದೆ. ಇದರ ಜತೆಗೆ ವಿದ್ಯುತ್ ಮತ್ತು ಕೃಷಿಗೆ ಸಂಬಂಧಪಟ್ಟ ಮ್ಯೂಸಿಯಂಗಳು, ಗುಟೆನ್‌ಬರ್ಗ್ ಅರಮನೆ ಮತ್ತು ಕೆಂಪು ಅರಮನೆಗಳೂ ಬೇರೆ ಬೇರೆ ಸ್ಥಳಗಳಲ್ಲಿವೆ. ನಾಲ್ಕಾರು ಗಂಟೆಗಳಲ್ಲಿ ಸುತ್ತಿ ಬರಬಹುದಾದ ಪುಟ್ಟ ದೇಶದ ಈ ಪ್ರವಾಸ ಬಹುಕಾಲ ನೆನಪುಳಿಯಬಹುದಾದ ಅನುಭವವನ್ನು ನೀಡುತ್ತದೆ.

ಲಿಚೆನ್‌ಸ್ಟೈನ್‌– ಆಸಕ್ತ ಮಾಹಿತಿ

ಲಿಂಚೆನ್‌ಸ್ಟೈನ್‌ ವಿಶ್ವದ ಚಿಕ್ಕರಾಷ್ಟ್ರಗಳ ಪೈಕಿ ಆರನೆಯದು. 2017ರ ಜನಗಣತಿಯ ಪ್ರಕಾರ ಜನಸಂಖ್ಯೆ 38547. ವಡೂಝ್ ಇಲ್ಲಿನ ರಾಜಧಾನಿ. ಒಟ್ಟು 11 ಮುನಿಸಿಪಾಲಿಟಿಗಳಿವೆ.

ರ‍ೈನ್ ನದಿಯು ಸ್ವಿಡ್ಜರ್‌ಲ್ಯಾಂಡ್ ಮತ್ತು ಲಿಚೆನ್‌ಸ್ಟೈನ್ ದೇಶಗಳನ್ನು ಬೇರ್ಪಡಿಸುತ್ತದೆ. ಯುರೋಪಿಯನ್ ಆಲ್ಪ್ಸ್ ಪರ್ವತಗಳ ತಪ್ಪಲಿನಲ್ಲಿದೆ. ಅಲ್ಪೈನ್ ದೇಶವಾಗಿರುವುದರಿಂದ ಇಲ್ಲಿ ಚಳಿಗಾಲದ ಕ್ರೀಡೆಗಳನ್ನು ಹೆಚ್ಚಾಗಿ ಆಡುತ್ತಾರೆ. ಮಧ್ಯಕಾಲೀನ ಯುಗದ ಅರಮನೆಗಳು, ಪರ್ವತ ಪ್ರದೇಶಗಳು ಈ ದೇಶದ ವಿಶೇಷತೆಗಳು, ರಾಜಧಾನಿ ವಡೂಝ್‌ ಸಾಂಸ್ಕೃತಿಕ ಮತ್ತು ಆರ್ಥಿಕ ಕೇಂದ್ರ. 1818ರಲ್ಲಿ ಪ್ರಿನ್ಸ್ ಜೋಹಾನ್ ಕಾಲದಲ್ಲಿ ಸಂವಿಧಾನ ಅಸ್ತಿತ್ವಕ್ಕೆ ಬಂತು. ಜುಲೈ 1984ರಿಂದ ಮಹಿಳೆಯರಿಗೂ ಮತ ಹಾಕಲು ಅವಕಾಶ ಕೊಡುವುದರ ಮೂಲಕ ಮಹಿಳಾ ಮತದಾನಕ್ಕೆ ಅವಕಾಶ ಕೊಟ್ಟ ಕೊನೆಯ ರಾಷ್ಟ್ರವೆಂದೆನಿಸಿಕೊಂಡಿತು.

ಈ ಪಟ್ಟಣದಲ್ಲಿ 250ಕಿ.ಮೀ ನಷ್ಟು ಉದ್ದದ ರಸ್ತೆ, 90 ಕಿ.ಮೀಯಷ್ಟು ಸೈಕಲ್ ಪಥಗಳಿವೆ. ಸಿಡ್ಜರ್‌ಲ್ಯಾಂಡ್‌ ಮತ್ತು ಆಸ್ಟ್ರಿಯಾ ನಡುವಿನ ರೈಲು ಮಾರ್ಗದಲ್ಲಿ 9.50 ಕಿ.ಮೀನಷ್ಟು ದಾರಿ ಲಿಚೆನ್‌ಸ್ಟೈನ್ ಮೂಲಕ ಹಾದುಹೋಗಿದೆ. ಇಡೀ ದೇಶಕ್ಕೆ ಒಂದೇ ಒಂದು ಆಸ್ಪತ್ರೆ ವಡೂಝ್‌ನಲ್ಲಿದೆ. ಒಂದು ಟಿವಿ ಸ್ಟೇಷನ್ ಮತ್ತು ಒಂದು ರೇಡಿಯೊ ಸ್ಟೇಷನ್‌ ಇದೆ.

ಸಂಗೀತ ಮತ್ತು ನಾಟಕಗಳು ಲಿಚೆನ್‌ಸ್ಟೈನ್ ಸಂಸ್ಕೃತಿಯ ಭಾಗವಾಗಿವೆ. ಹಲವಾರು ಸಂಗೀತ ಮಂಡಳಿಗಳು, ನಾಟಕ ಸಂಘಗಳು ಇವೆ. ‘ವಾರ್ಷಿಕ ಗಿಟಾರ್ ದಿನಾಚರಣೆ’ಯೂ ಇಲ್ಲುಂಟು. ದೇಶದ ರಾಷ್ಟ್ರೀಯ ರಜಾ ದಿನದಂದು ಎಲ್ಲಾ ಪ್ರಜೆಗಳನ್ನು ಅರಮನೆಗೆ ಆಮಂತ್ರಿಸಲಾಗುತ್ತದೆ. ಅಲ್ಲವರಿಗೆ ಬಿಯರ್ ಆತಿಥ್ಯವೂ ಉಂಟಂತೆ.

ಆಫ್ರಿಕಾದ ರಾಜನ ಕಂಚಿನ ಪ್ರತಿಮೆ
ಆಫ್ರಿಕಾದ ರಾಜನ ಕಂಚಿನ ಪ್ರತಿಮೆ

ತಲುಪುವುದು ಹೇಗೆ ?

ಯೂರೋಪ್‌ ಪ್ರವಾಸ ಹೋದವರು, ಸ್ವಿಡ್ಜರ್‌ಲ್ಯಾಂಡ್ ನೋಡಿಕೊಂಡು ಲಿಚೆನ್‌ಸ್ಟೈನ್‌ ಗೆ ಬರಬಹುದು. ಆದರೆ ಇಲ್ಲಿಗೆ ವಿಮಾನ ನಿಲ್ದಾಣವಿಲ್ಲ. ಬಲ್ಜರ್ಸ್ ಹೆಲಿಪೋರ್ಟ್ ಮಾತ್ರವಿದೆ. ಹತ್ತಿರದ ವಿಮಾನ ನಿಲ್ದಾಣಗಳೆಂದರೆ ಸ್ವಿಡ್ಜರ್‌ಲೆಂಡ್‌ನ ಜೂರಿಕ್ - 115 ಕಿ.ಮೀ, ಜರ್ಮನಿಯ Friedrichshafen Airport- 85 ಕಿ.ಮೀ ಮತ್ತು ಆಸ್ಟ್ರಿಯಾದ ಸೇಂಟ್‌ ಗ್ಯಾಲೆನ್‌ ಆಲ್ಟೆನ್ರಿನ್ ವಿಮಾನ ನಿಲ್ದಾಣ (St. Gallen-Altenrhein Airport )- 53 ಕಿ.ಮೀ ದೂರವಿದೆ. ವಿಮಾನ ನಿಲ್ದಾಣಗಳಿಂದ ರೈಲು, ಬಸ್ ಮತ್ತು ಟ್ಯಾಕ್ಸಿಗಳಲ್ಲಿ ಲಿಚೆನ್‌ಸ್ಟೈನ್‌‌ನ ರಾಜಧಾನಿ ವಡೂಝ್ ತಲುಪಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT