ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಮರೆಸುವ ಮಲಾಗ: ಪರ್ವತಗಳ ನಡುವಿನ ವಿಸ್ಮಯ ಸ್ಪೇನ್‌ ದೇಶ

Last Updated 13 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಸ್ಪೇನ್‌ ದೇಶದ ಮಲಾಗ ನಗರ, ಖ್ಯಾತ ಚಿತ್ರಕಾರ ಪಿಕಾಸೊ ಜನ್ಮಸ್ಥಳ. ಪರ್ವತಗಳ ನಡುವೆ ಮೈದೆಳೆದಿರುವ ಈ ನಗರವನ್ನು ಸುತ್ತಾಡುತ್ತಿದ್ದರೆ ಹಣ್ಣು, ಹೂವುಗಳ ಲೋಕವೇ ನಮ್ಮ ಜತೆ ಸಾಗುವಂತೆ ಭಾಸವಾಗುತ್ತದೆ.

ಐರೋಪ್ಯ ಒಕ್ಕೂಟ ರಾಷ್ಟ್ರಗಳಲ್ಲೇ ಸುಂದರವಾದ ದೇಶ ಸ್ಪೇನ್. ಇಲ್ಲಿನ ಕರಾವಳಿ ಪ್ರದೇಶ, ಸಾಲಾಗಿರುವ ಬೆಟ್ಟಗುಡ್ಡಗಳು, ತುಂಬಿ ತುಳುಕುವ ಆಲಿವ್, ಕಿತ್ತಳೆ ತೋಟಗಳು, ಇಸ್ಲಾಂ‌ - ಕ್ರಿಶ್ಚಿಯನ್ ಇತಿಹಾಸ ಸಾರುವ ವೈಭವೋಪೇತ ಸ್ಮಾರಕಗಳು, ಅರಮನೆ, ಮಸೀದಿ, ಚರ್ಚ್‌ಗಳು, ಧಗೆಗೆ ಸವಾಲಾಗಿ ನಿಲ್ಲುವ ‘ವೈಟ್‌ ವಿಲೇಜ್’ಗಳು, ಐಷಾರಾಮಿ ವಿಹಾರಿ ತಾಣಗಳಿಂದಾಗಿ, ಸ್ಪೇನ್‌ ಪ್ರವಾಸಿಗರ ಸ್ವರ್ಗವಾಗಿದೆ.

ಇಂಥ ಸ್ವರ್ಗದಂತಹ ತಾಣದ ತುಣುಕು ಮಲಾಗ ನಗರ. ಇದಕ್ಕೆ ಮಾಲಗಾ ಎಂದೂ ಕರೆಯುವುದುಂಟು. ಇದು ಸ್ಪೇನ್‌ ದೇಶದ ದಕ್ಷಿಣಭಾಗದ ‘ಕೋಸ್ಟಾಡೆಲ್-ಸೋಲ್‌’ನ ಹೆಬ್ಬಾಗಿಲಂತಿರುವ ನಗರ. ಮೂಲನಿವಾಸಿಗಳಾದ ಅಂದಲೂಸಿಯನ್ನರ ನೆಲೆಯಾಗಿತ್ತು. ಇದು ಸ್ಪೇನ್‌ನ ಆರನೇ ಪ್ರಮುಖ ನಗರ.

ಈ ನಗರದಲ್ಲಿ ಉದ್ದಕ್ಕೂ ಹಾಯಾಗಿ ಮಲಗಿರುವ ಕರಾವಳಿ ತೀರಗಳು, ಮುದಗೊಳಿಸುವ ಕಡಲತೀರಗಳು, ಒಡಲ ತುಂಬಿರುವ ಐತಿಹಾಸಿಕ ಸ್ಮಾರಕಗಳು.. ಇವೆಲ್ಲ ಇರುವ ಕಾರಣದಿಂದಲೇ ಮಲಾಗವನ್ನು ‘ಕೋಸ್ಟಾಡೆಲ್ ಸೋಲ್’ನ ಆತ್ಮ ಎನ್ನುತ್ತಾರೆ. ಚರಿತ್ರೆಯಿಂದ ಸಮೃದ್ಧವಾಗಿ, ಚಿತ್ರ ಗ್ಯಾಲರಿಗಳಿಂದ ಯುವ ಹೃದಯಗಳಿಗೆ ಹತ್ತಿರವಾಗಿರುವ ಮಲಾಗ ಒಂದು ಬಂದರು ನಗರಿ. ಅಷ್ಟೇ ಅಲ್ಲ, ಪ್ರಖ್ಯಾತ ಚಿತ್ರಕಲಾಕಾರ, ಶಿಲ್ಪಿ, ಕವಿ, ಡಿಸೈನರ್ ‘ಪ್ಯಾಬ್ಲೋ ಪಿಕಾಸೊ’ನ ಜನ್ಮಸ್ಥಳ.

ಸ್ಪೇನ್‌ ಪ್ರವಾಸದ ವೇಳೆ ಮಲಾಗ ನಗರಕ್ಕೆ ಭೇಟಿ ನೀಡಿದ್ದೆವು. ಆಗ ಮಧ್ಯಾಹ್ನವಾಗಿತ್ತು. ನಾವು ಮಲಾಗದ ಪ್ರಮುಖ ಚೌಕವೊಂದರಲ್ಲಿ ಇಳಿದೆವು. ಸುಡುಸುಡು ಬಿಸಿಲು. ಆದರೆ ಬೀಸುವ ಗಾಳಿ, ಯಾವುದೋ ಹಣ್ಣಿನ ಕಂಪೊಂದು ನವಿರಾಗಿ ನಮ್ಮ ಮೂಗಿಗೆ ತಾಗಿ ಹೋಗುತ್ತಿತ್ತು. ಧಗೆ ಹೆಚ್ಚು ಕಾಡಲಿಲ್ಲ. ಹಾಗೆ ಮೂಗು ಸವರಿದ್ದು ಕಿತ್ತಳೆ ಹಣ್ಣಿನ ಕಂಪು. ವಿಶ್ವದಲ್ಲೇ ಕಿತ್ತಳೆ ಬೆಳೆಯುವಲ್ಲಿ ಮಲಾಗ ಆರನೇ ಸ್ಥಾನದಲ್ಲಿದೆ.

ಈ ನಗರದ ಸುತ್ತ ಎಲ್ಲಿ ನೋಡಿದರೂ ಅಲ್ಲಿ ಕೇಸರಿ ಹಣ್ಣುಗಳ ಗೊಂಚಲನ್ನೇ ಹೊತ್ತ ಮರಗಳು ಕಣ್ಣು ಕುಕ್ಕುತ್ತವೆ. ಆದರೆ, ಇವು ಅಷ್ಟು ಸಿಹಿಯಾಗಿರಲಿಲ್ಲ. ಜತೆಗೆ ಹೇರಳವಾದ ಆಲಿವ್‌ ಮರಗಳ ರಾಶಿಯೇ ಇದೆ. ಆಲಿವ್ ಬೆಳೆಯಲ್ಲೂ ಸ್ಪೇನ್‌ ದೇಶ, ಗ್ರೀಸ್ ನಂತರದ ಸ್ಥಾನದಲ್ಲಿದೆ.

ಇಡೀ ನಗರವೇ ರೆಸಾರ್ಟ್ ಮಾದರಿಯಲ್ಲಿದೆ. ಒಂಥರಾ ಪರ್ವತದ ತೊಡೆಯಲ್ಲಿ ಆಸೀನವಾಗಿರುವಂತೆ ನಿರ್ಮಾಣವಾಗಿದೆ. ಹೀಗಾಗಿ, ಪ್ರತಿಯೊಂದು ಜಾಗಕ್ಕೂ ಏರುತ್ತಲೇ ಸಾಗಬೇಕು. ಸಮತಟ್ಟಾದ ಜಾಗದಲ್ಲಿ ಅಗಲವಾದ ರಸ್ತೆಗಳಿವೆ. ರಸ್ತೆಗಳ ಎರಡೂ ಬದಿಗಳಲ್ಲಿ ತಂಪು ನೀಡುವ ಮರಗಳಿವೆ. ನಮ್ಮಲ್ಲಿರುವಂತೆ ಎಲ್ಲೆಲ್ಲೂ ಕಣ್ಣು ಸೆಳೆವ ಬಿಳಿ, ಕೆಂಪು ಕಣಗಿಲೆ, ರತ್ನಗಂಜಿ, ದಾಸವಾಳ, ಬೋಗನ್ವಿಲ್ಲಾ, ಪಾಮ್‌ಟ್ರೀಗಳು ಕಾಣುತ್ತವೆ.

ನಾವು ಕುಳಿತಿದ್ದ ಬಸ್‌ ಏರುಹಾದಿಯಲ್ಲಿ ಹೊರಟಿತು. ಅದು ಚಿಕ್ಕದಾದ ಏರು ರಸ್ತೆ. ರಸ್ತೆಯ ಇಕ್ಕೆಲಗಳಲ್ಲಿ ಹೂವುಗಳೊಂದಿಗೆ ಬೀಗುವ ಪುಟ್ಟ ಪುಟ್ಟ ಮೋಹಕ ಮನೆಗಳು ಕಂಡವು. ಬೆಟ್ಟದ ತುದಿಯಲ್ಲಿ ‘ವ್ಯೂ ಪಾಯಿಂಟ್’ ಇತ್ತು. ಬಸ್‌ ಇಳಿದು ವ್ಯೂ ಪಾಯಿಂಟ್‌ನಲ್ಲಿ ನಿಂತಾಗ ಎದುರಿಗೇ ನೀಲಸಾಗರ, ಪೋರ್ಟ್, ನೌಕೆಗಳು, ಅಬ್ಬಾ ಮನಸೂರೆಗೊಳ್ಳುವ ಚೇತೋಹಾರಿ ದೃಶ್ಯ. ಕಡಲ ನೀಲಿ, ಬಾನಿನ ನೀಲಿಯೊಡನೆ ಪೈಪೋಟಿಗೆ ನಿಂತಂತೆ ಭಾಸವಾಗುವಾಗುತ್ತಿತ್ತು. ಆಗ ಅನ್ನಿಸಿದ್ದು, ‘ಈ ಮಲಾಗ ನಗರ ಪ್ರವಾಸಿಗರನ್ನು ಕನಿಷ್ಠ ಒಂದು ವಾರವಾದರೂ ವಾಸ್ತವ್ಯ ಹೂಡುವಂತೆ ಮಾಡುತ್ತದೆ’ ಎಂದು.

ವಿದೇಶವೆಂದರೆ ಚರ್ಚ್‌ ಭೇಟಿ ಸಾಮಾನ್ಯ. ಹಾಗೇ, ಇಲ್ಲೊಂದು ಅಂದಲೂಸಿಯನ್ನರ ರೆನೈಸ್ಸಾನ್ಸ್ ಕಾಲದ ವೈಭವೋಪೇತ ರೋಮನ್ ಕ್ಯಾಥೊಲಿಕ್‌ ಕೆಥಡ್ರೆಲ್ ಇತ್ತು. ಅಲ್ಲಿಗೆ ಭೇಟಿ ನೀಡಿದೆವು. 16-18ನೇ ಶತಮಾನದಲ್ಲಿ ನಿರ್ಮಾಣವಾದ ಈ ಕೆಥೆಡ್ರೆಲ್ ಒಳಗೆ ಅನೇಕ ಚ್ಯಾಪೆಲ್(ಚಿಕ್ಕ ಚರ್ಚ್)ಗಳಿವೆ. ಅದ್ಭುತವಾದ ಕಲಾಕೃತಿಗಳು, ಪೇಂಟಿಂಗ್‌ಗಳಿವೆ. ಆಲ್ಟರ್‌ಗಳಿಂದ ಸಮೃದ್ಧವಾದ ಈ ಕೆಥೆಡ್ರಲ್, ಎರಡು ಗೋಪುರಗಳ ನಕ್ಷೆಯಲ್ಲಿ ಯೋಜಿತಗೊಂಡರೂ, ಒಂದು ಗೋಪುರ ಅಪೂರ್ಣವಾಗಿದ್ದು, ‘ದಿ ಒನ್ ಆರ್ಮ್ಡ್‌ ವುಮನ್’ ಎನ್ನುವ ಅಡ್ಡ ಹೆಸರೊಂದನ್ನೂ ಹೊತ್ತಿದೆ.

ಇಲ್ಲೊಂದು ರೋಮನ್ ಆಂಫಿಥಿಯೇಟರ್ ಇದೆ. ಅದರ ಪಕ್ಕಕ್ಕೇ ಗಮನ ಸೆಳೆಯುತ್ತೆ ಭವ್ಯ ಸ್ಮಾರಕ ‘ಅಲ್ಕಜಾಬಾ ಫೋರ್ಟ್ ಪ್ಯಾಲೇಸ್’. ಈ ಕೋಟೆ ಅರಮನೆಯ ಕೆಂಪು ಮೆಟ್ಟಿಲುಗಳೇರುತ್ತಾ, ಸುತ್ತಲಿನ ಅರಮನೆ ಹಾಲ್, ಕಮಾನುಗಳು, ಕಾರಂಜಿಗಳು, ಮಲ್ಲಿಗೆ-ಕಿತ್ತಳೆ-ಆಲಿವ್-ಬೋಗನ್‌ವಿಲ್ಲಾಗಳ ಹಚ್ಚಹಸಿರನ್ನು ನೋಡುತ್ತಾ ಒಂದು ಕ್ಷಣ ಅಲ್ಲೇ ಕಳೆದು ಹೋದೆವು.

ಈ ಅಲ್ಕಜಾಬಾ ಎದುರಿಗೇ ಪಿಕಾಸೊ ಮ್ಯೂಸಿಯಂ ಇದೆ. ಅಲ್ಲಿಗೆ ಹೋಗಲು ಅವನ ಮಗನ ಬಾರ್ ರೆಸ್ಟೊರೆಂಟ್‌ ಒಳಗಿಂದಲೇ ಹೋಗಬೇಕು. ಆದರೆ, ಮ್ಯೂಸಿಯಂ ರಜೆ ಇದ್ದ ಕಾರಣ ಆ ಕಲಾವಿದನ ಚಿತ್ರಗಳನ್ನು ನೋಡಲಾಗಲಿಲ್ಲ.

ಮಲಾಗದಲ್ಲಿ ಹೆಚ್ಚು ಬಿಸಿಲು. ಆದರೂ, ಹತ್ತಿರದಲ್ಲೇ ಇದಕ್ಕೆ ಸವಾಲೆಸೆಯುವಂತಹ ‘ವೈಟ್‌ ವಿಲೇಜ್’ಗಳಿವೆ. ಸಮುದ್ರ ತಟದ, ಗುಡ್ಡಗಳಲ್ಲಿ ರಚನೆಯಾಗಿರುವ ಈ ಪುಟ್ಟ ವಿಲೇಜ್‌ಗಳ ಮನೆಗಳು ಬಿಳುಪು ಗೋಡೆ, ಕೆಂಪು ಛಾವಣಿ ಹೊಂದಿವೆ. ಎಲ್ಲವೂ ಒತ್ತೊತ್ತಾಗಿ ಜೋಡಣೆಯಾಗಿವೆ. ಜತೆಗೆ ಕಲಾತ್ಮಕವಾಗಿವೆ. ಪ್ರವಾಸಿಗರು ಮುಗಿಬಿದ್ದು ಇಲ್ಲಿ ವಿಹರಿಸಲು ಬರುತ್ತಾರೆ. ಈ ಎಲ್ಲ ವಿಶೇಷಗಳ ಜತೆಗೆ ಇಲ್ಲಿಯ ‘ತಾಪಸ್’ ಎಂಬ ಸ್ಥಳೀಯ ಖಾದ್ಯ, ಸಿಹಿವೈನ್ ಸವಿಯುವ ಪ್ರವಾಸಿಗರ ಮನೋಲ್ಲಾಸ ಕನಸಿನ ಲೋಕಕ್ಕೆ ಜಾರಿಸುತ್ತವೆ.

ನಗರದಲ್ಲಿ ಓಡಾಡಲು ಹಾಫ್‌ಆನ್ ಹಾಫ್‌ಆಫ್ ಬಸ್, ಟೂರ್ ಬಸ್, ಬಾಡಿಗೆಯ ಬೈಕ್, ಸೈಕಲ್ ಹೀಗೆ ಅನೇಕ ಸೌಲಭ್ಯಗಳಿವೆ. ಪ್ರವಾಸಿಗರ ಬೇಡಿಕೆ ಹೆಚ್ಚಾದಾಗ, ಈ ನಗರ ದುಬಾರಿಯಾಗುತ್ತದೆ. ಹಣ ಸೋರಿಸುವ ಜಾಗವಂತೆ. ಸ್ಪೇನ್‌ ದೇಶಕ್ಕೆ ಹೋದರೆ, ಮರೆಯದೇ ಮಲಾಗ ನೋಡಿ ಬನ್ನಿ. ಎಚ್ಚರದಿಂದ ಖರ್ಚು ಮಾಡಿ.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT