ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೂವಿವರ್ಲ್ಡ್’ ಮಾಯಾಲೋಕ..ಇದು ಆಸ್ಟ್ರೇಲಿಯಾದ ಅದ್ಭುತ ಲೋಕ

Last Updated 4 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಸುಂದರ ಪ್ರಕೃತಿ, ನಯನ ಮನೋಹರ ಬೀಚ್‌ಗಳು, ಸೀ ವರ್ಲ್ಡ್, ಕುರುಂಬಿನ್ ಪಕ್ಷಿಧಾಮ, ಒಂದೇ ಎರಡೇ...ಗೋಲ್ಡ್‌ಕೋಸ್ಟ್‌ನ ಮೂವಿವರ್ಲ್ಡ್‌ ಭೇಟಿ ಒಂದು ಅವಿಸ್ಮರಣೀಯ ಅನುಭವ.

ಆಸ್ಟ್ರೇಲಿಯಾದ ಪುಟ್ಟ ನಗರ ಗೋಲ್ಡ್‌ಕೋಸ್ಟ್. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ನಗರ ಚಿಕ್ಕದಾದರೂ ಇಲ್ಲಿ ಅಪರೂಪದ ಪ್ರವಾಸಿ ತಾಣಗಳಿವೆ. ಅವುಗಳಲ್ಲೊಂದು ಮಾಯಾಸದೃಶ ‘ಮೂವಿವರ್ಲ್ಡ್’.

ಟಿಕೆಟ್‌ ಕೊಂಡು ‘ಮೂವಿವರ್ಲ್ಡ್‌’ ಪ್ರವೇಶಿಸಿದರೆ, ಇಂದ್ರನಗರಿ ಕಂಡಂತಾಗುತ್ತದೆ. ಸಾವಿರಾರು ಎಕರೆ ಜಾಗದಲ್ಲಿ ಅಲ್ಲಲ್ಲೇ ಹಲವು ಪ್ರದರ್ಶನಗಳು ನಡೆಯುತ್ತಿರುತ್ತವೆ. ಫೋಟೊ ಪ್ರದರ್ಶನಗಳು, ವಿಶ್ರಮಿಸಲು ಆಸನಗಳು, ಕುಡಿಯಲು ಪರಿಶುದ್ಧನೀರು, ಮರದ ತಂಪೆಲರು, ಕ್ಯಾಂಟೀನ್‌ಗಳು, ಸ್ವಚ್ಛ ನಿರ್ವಹಣೆಯ ಶೌಚಾಲಯಗಳು, ಸಿನಿಮಾ ಕುರಿತ ದಾಖಲೆ ಮಾಹಿತಿಗಳು, ಒಟ್ಟಂದದಲ್ಲಿ ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರನ್ನು ತನ್ನ ತೋಳ ತೆಕ್ಕೆಗೆ ಆಕರ್ಷಿಸುವ ಸ್ಥಳ ಈ ಮೂವಿವರ್ಲ್ಡ್.

ಇಲ್ಲಿ ಒಂದೆಡೆಯಿಂದ ಇನ್ನೊಂದೆಡೆ ಹೋಗಲು ರಿಂಗ್ ರಸ್ತೆಯ ಹಳಿಯಲ್ಲಿ ಸದಾ ತಿರುಗುವ ಪುಟಾಣಿ ರೈಲುಗಳಿವೆ. ಪ್ಲಾಟ್‍ಫಾರಂ ನಂಬರ್, ಪ್ರದರ್ಶನಗಳ ಸ್ಥಳ ಹಾಗೂ ಯಾವ ಸಮಯದಲ್ಲಿ ನಡೆಯುತ್ತದೆ ಎಂಬ ಮಾಹಿತಿಯನ್ನು ಮುದ್ರಿಸಿರುವ ಮ್ಯಾಪ್ ಕೈಯಲ್ಲಿ ಹಿಡಿದು ಎಲ್ಲಿ ಬೇಕೆಂದರಲ್ಲಿ ಸಂಚರಿಸಬಹುದು.

ನಾವು ಮೂವಿವರ್ಲ್ಡ್‌ಗೆ ಭೇಟಿ ನೀಡಿದಾಗ ಒಂದೆಡೆ ಪ್ರದರ್ಶನ ನಡೆಯುತ್ತಿತ್ತು. ಅದರ ಹೆಸರು ‘ಸ್ಟಂಟ್ ಡ್ರೈವರ್’. ನಾವು ಸಿನಿಮಾದಲ್ಲಿ ನೋಡುವಂತಹ ರೋಮಾಂಚಕಾರಿ ಚೇಸಿಂಗ್, ಫೈಟ್, ಕಾರ್ ಜಂಪಿಂಗ್‍ಗಳನ್ನು ಫೈಟರ್ಸ್‌ಗಳು, ಇಲ್ಲಿನ ಚಿಕ್ಕಜಾಗದಲ್ಲೇ ಮೈನವಿರೇಳುವಂತೆ ಪ್ರದರ್ಶಿಸುತ್ತಾರೆ. ಪ್ರಾಣವನ್ನೇ ಪಣವಾಗಿಟ್ಟವರಂತೆ ಆಕ್ಷನ್‌ನಲ್ಲಿ ಪಾಲ್ಗೊಳ್ಳುತ್ತಾರೆ. ಈ ಪ್ರದರ್ಶನ ನೋಡಿ, ಯುವ ಸಮೂಹದವರು ಹುಚ್ಚೆದ್ದು ಕುಣಿಯುತ್ತಿರುತ್ತಾರೆ.

ಮತ್ತೊಂದೆಡೆ ‘3ಡಿ ಸಿನಿಮಾ’ ಪ್ರದರ್ಶನ. ಆ ಥಿಯೇಟರ್‌ನಲ್ಲಿ ಎಲ್ಲವೂ ಕಣ್ಣೆದುರು ಬಂದಂತೆ, ಗಿಣಿ ನಮ್ಮ ತಲೆಯ ಮೇಲೆ ಹಾರಿದಂತೆ, ಡೈನೋಸಾರ್‌ ಮುಂದಿನ ಆಸನಕ್ಕೆ ಹಾರಿದಂತೆ ಕಾಣುತ್ತದೆ. ನಿಮಿಷಗಳ ಈ ಪ್ರದರ್ಶನ ಆಹ್ಲಾದಕರ. ಇನ್ನೊಂದು 10 ನಿಮಿಷಗಳ ‘ಹಾರರ್ ಶೋ’. ತಲಾ ಎರಡು ಆಸನಗಳಿರುವ ಹಲವು ಬೋಗಿಗಳ ಪುಟಾಣಿ ರೈಲಿನಲ್ಲಿ ಇಬ್ಬಿಬ್ಬರನ್ನೇ ಕೂರಿಸಿ ಒಟ್ಟಿಗೆ ರೈಲ್ ಅನ್ನು ಗುಹೆಯಂತಹ ಸೆಟ್ಟಿಂಗ್‍ನಲ್ಲಿ ಕಳುಹಿಸುತ್ತಾರೆ. ಚಲಿಸುವ ರೈಲಿನ ಎದುರಿಗೆ ಭೂತ, ಮಂತ್ರವಾದಿ, ಹುಲಿ, ಡೈನೋಸಾರ್, ಕಳ್ಳ ಏನೇನೋ ಬಂದು ಹೆದರಿಸಿದಂತಾಗಿ ಎದೆ ಝಲ್ ಎನ್ನುತ್ತದೆ.

ಮುಂದೆ ಮತ್ತೊಂದು ಪ್ರದರ್ಶನ. 10 ನಿಮಿಷಗಳ 4ಡಿ ಚಲನಚಿತ್ರ. ಇಲ್ಲಿ ನಾವು ಆಸನಗಳಲ್ಲಿ ಗಟ್ಟಿಯಾಗಿ ಕೂರದಿದ್ದರೆ ಕೆಳಗೆ ಉರುಳುವುದು ನಿಶ್ಚಿತ. ಎರಡು ಗುಂಪಿನ ನಡುವೆ ಯುದ್ಧ. ನಮ್ಮ ಎದೆಗೇ ಬಂದೂಕು ಇಟ್ಟಂತೆ. ಕಿವಿಯ ಪಕ್ಕದಲ್ಲಿಯೇ ಗುಂಡು ಹೋದಂತೆ ಫಿರಂಗಿಗಳ ಮೊರೆತ. ಪುನಃ ಪುನಃ ಕುಳಿತ ಆಸನ ನಡುಗುತ್ತದೆ, ಎತ್ತಿ ಹಾಕುತ್ತದೆ, ತಲೆಯ ಮೇಲೆ ಮಳೆ ಬಂದರೆ ನಮ್ಮ ತಲೆಯ ಮೇಲೂ ಹನಿ ಬೀಳುವಂತೆ, ಅಲ್ಲಿ ಬೆಂಕಿ ಹೊತ್ತಿದರೆ ನಮ್ಮ ಸೀಟುಗಳ ಅಡಿಯಿಂದ ಹೊಗೆ ಹೊರ ಹೊಮ್ಮಿದಂತಹ ಅನುಭವ! ಪ್ರೇಕ್ಷಕ ಗಣ ಸಂತಸದಿಂದ ಹೊರಗಡಿಯಿಡುತ್ತಾರೆ.

ಇನ್ನೊಂದು ಭರ್ಜರಿ ಶೋ ‘ಸ್ಕೂಬಿಡೂ...’. ನೆನಪಿಡಿ ಈ ಪ್ರದರ್ಶನ ಭಯಪಡುವವರಿಗೆ, ದುರ್ಬಲ ಹೃದಯಿಗಳಿಗಲ್ಲ! ಇದರಲ್ಲಿಯೂ ಪುಟಾಣಿ ರೈಲು, ತಲಾ ಇಬ್ಬರಂತೆ ಕೂರಿಸಿ ಬೀಳದಂತೆ ಭದ್ರವಾಗಿ ಪಟ್ಟಿಹಾಕಿ ರೈಲು ಆರಂಭಿಸುತ್ತಾರೆ. ಸಣ್ಣ ಸಂದುಗೊಂದಿ, ಕಗ್ಗತ್ತಲು, ಮೇಲೆ, ಕೆಳಗೆ, ಹಿಂದೆ, ಮುಂದೆ ಬಳುಕುವ ರೈಲು ಕ್ರಮೇಣ ಅಧಿಕ ವೇಗದಲ್ಲಿ ಸಾಗುತ್ತದೆ. ಒಮ್ಮೆ ಬೆಟ್ಟದೆತ್ತರ, ಕೂಡಲೇ ಪ್ರಪಾತಕ್ಕಿಳಿದಂತೆ, ರೈಲು ನಿಂತಾಗ ಅಬ್ಬಾ! ನಾವಿನ್ನೂ ಬದುಕಿದ್ದೇವೆ ಎನ್ನುವ ಭಾವ. ಮೈಯೆಲ್ಲ ಬೆವತು ಹೋಗಿರುತ್ತದೆ. ಹೃದಯವೇ ಬಾಯಿಗೆ ಬಂದಂತಾಗುತ್ತದೆ. ಅಲ್ಲಿಂದ ಹೊರ ಬಂದು ಕುಳಿತಾಗ ಬ್ರಹ್ಮಾನಂದ.

ಹೊರಗೆ ರಸ್ತೆಯಲ್ಲಿ ಬಾಲಿವುಡ್‍ನ ಜನಪ್ರಿಯ ಸಿನೆಮಾ ಪಾತ್ರಗಳಾದ ‘ಜೋಕರ್’, ‘ಸೂಪರ್‌ಮ್ಯಾನ್’, ‘ಸ್ಪೈಡರ್‌ಮ್ಯಾನ್’ಗಳಂತೆ ವೇಷ ಧರಿಸಿ ಕಟ್ಟುಮಸ್ತಿನ ಯುವಕರು ನಿಂತಿರುತ್ತಾರೆ. ಅವರೊಂದಿಗೆ ನಿಂತು ಫೋಟೊ ತೆಗೆಸಿಕೊಳ್ಳಬಹುದು. ಒಂದು ಚೆಂದದ ಕೈ ಚೀಲದೊಂದಿಗೆ ಫೋಟೊ ಉಚಿತ! ಇಷ್ಟಲ್ಲದೇ ಮೂವಿವರ್ಲ್ಡ್‌ನಲ್ಲಿ ಇನ್ನೂ ನೋಡುವುದು ಬಹಳ ಇರುತ್ತದೆ. ಆದರೆ, ಎಲ್ಲವನ್ನೂ ಒಂದೇ ದಿನದಲ್ಲಿ ನೋಡಲು ಅವರು ಕೊಡುವ 10 ಗಂಟೆಗಳು ಯಾತಕ್ಕೂ ಸಾಲದು.

ಸುಂದರ ಪ್ರಕೃತಿ, ನಯನ ಮನೋಹರ ಬೀಚ್‌ಗಳು, ಸೀ ವರ್ಲ್ಡ್, ಕುರುಂಬಿನ್ ಪಕ್ಷಿಧಾಮ, ಒಂದೇ ಎರಡೇ. ಗೋಲ್ಡ್‌ಕೋಸ್ಟ್‌ನ ಮೂವಿವರ್ಲ್ಡ್‌ ಭೇಟಿ ಒಂದು ಅವಿಸ್ಮರಣೀಯ ಅನುಭವವೆನಿಸಿ ಮಗದೊಮ್ಮೆ ನೋಡಬೇಕೆಂಬ ಆಸೆ ಟಿಸಿಲೊಡೆಯುತ್ತಿದೆ.

ಹೋಗುವುದು ಹೇಗೆ

ಬೆಂಗಳೂರಿನಿಂದ ಹಾಂಗ್‍ಕಾಂಗ್‍ಗೆ ವಿಮಾನದಲ್ಲಿ 8 ಗಂಟೆಗಳ ಪ್ರಯಾಣ, ನಂತರ ಸಿಡ್ನಿಗೆ 11 ಗಂಟೆಗಳ ಪ್ರಯಾಣ. ಅಲ್ಲಿಂದ ಗೋಲ್ಡ್‌ಕೋಸ್ಟ್‌ಗೆ ಒಂದೂವರೆ ತಾಸುಗಳ ಪ್ರಯಾಣ.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT