ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಶ್ರವರ್ಣದ ವಿಶ್ವಪಥದಲ್ಲಿ..

Last Updated 28 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಪ್ಯಾರಿಸ್ ಭೇಟಿಯ ನನ್ನ ಮೊದಲ ತೋಚಿಕೆ– ಅಲ್ಲಿನ ಮಿಶ್ರ ಜನಾಂಗೀಯ ಚಹರೆ. ವಿಮಾನದೊಳಗೆ ಕುಳಿತಿರುವಾಗ ಅತ್ತಿತ್ತ ನೋಡಿದರೆ ನನಗೆ ಮಿಶ್ರವರ್ಣೀಯ ದಂಪತಿ, ಮಕ್ಕಳು, ಯುವಕ, ಯುವತಿಯರೇ ಕಾಣಿಸಿಕೊಳ್ಳುತ್ತಿದ್ದರು. ಎರಡನೇ ಮಹಾಯುದ್ಧದ ನಂತರ ಯೂರೋಪ್‌ ಬಿಳಿಯಾಗಿ ಉಳಿದಿಲ್ಲ. ಜನಸಂಖ್ಯೆಯ ಕೊರತೆಯನ್ನು ನೀಗಿಸಿಕೊಳ್ಳಲು ವಿಶ್ವವನ್ನೇ ಆದರದಿಂದ ತಬ್ಬಿಕೊಂಡ ಜನ ಅವರು. ಬಿಳಿಯ ಗಂಡ, ಕರಿಯ ಹೆಂಡತಿ ಅಥವಾ ಬಿಳಿಯ ಹೆಂಡತಿ, ಕರಿಯ ಗಂಡ ಮತ್ತು ಅವರ ಗೋಧಿವರ್ಣದ ಮಕ್ಕಳು ನನ್ನ ಗಮನ ಸೆಳೆದರು. ಅವರನ್ನು ನೋಡುವುದೇ ಚೆಂದವೆನಿಸುತ್ತಿತ್ತು.

ಇದೇ ಚಿತ್ರಣ ನನಗೆ ಪ್ಯಾರಿಸ್ ನಗರ ಸುತ್ತುವಾಗಲೂ ಕಂಡಿತು. ಹಲವು ತಲೆಮಾರುಗಳ ನಂತರದ ಈ ರೀತಿಯ ಮಿಶ್ರವರ್ಣೀಯ ಚಹರೆ ಮತ್ತಷ್ಟು ಹೊಳಪು ಪಡೆದುಕೊಂಡಿದೆ. ಪ್ರಾಯಶಃ ಪೋಷಕರು ವಯಸ್ಕ ಮಕ್ಕಳಿಗೆ ಕೊಡುವ ಸ್ವಾತಂತ್ರ್ಯವೇ ಇದಕ್ಕೆ ಕಾರಣವಿರಬಹುದು. ಕೊರೊನಾ ವೈರಸ್ ಆ ಯುವಜನತೆಯನ್ನು ಧೃತಿಗೆಡಿಸಿದಂತೆ ನನಗೆ ಕಾಣಿಸಲಿಲ್ಲ. ಆ ಕೊರೆಯುವ ಚಳಿಯಲ್ಲಿ ಚೊಕ್ಕವಾದ ರಸ್ತೆಬದಿಯಲ್ಲಿ ಉದ್ದುದ್ದ ಕೋಟು ಧರಿಸಿ, ಗಡಚಿಕ್ಕುವ ಸಂಗೀತದೊಂದಿಗೆ ತಣ್ಣನೆಯ ಬಿಯರು ಹೀರುತ್ತಾ, ರಾತ್ರಿಗಳನ್ನು ಕಳೆಯುತ್ತಿದ್ದ ಅವರು ಬೋದಿಲೇರ್‌ನ ಸಂತತಿ ಎನಿಸುತ್ತಿತ್ತು.

ನಾನು ಮಾರ್ಚ್ 10ರಂದು ವಿಮಾನ ಏರುವ ಹಿಂದಿನ ದಿನ ಆಂಧ್ರಪ್ರದೇಶದ ನತದೃಷ್ಟೆ ಅಮೃತಾಳ ರಾಕ್ಷಸ ಅಪ್ಪ ಮಾರುತಿ ರಾವ್ ಆತ್ಮಹತ್ಯೆ ಮಾಡಿಕೊಂಡಿದ್ದ. ದಲಿತ ಯುವಕ ಪ್ರಣಯ್, ವೈಶ್ಯ ಜಾತಿಯ ಅಮೃತಾಳನ್ನು ಪ್ರೀತಿಸಿ ಮದುವೆಯಾಗಿದ್ದ. ಮೂರು ತಿಂಗಳ ಬಸುರಿ ಹೆಂಡತಿಯನ್ನು ವೈದ್ಯರಲ್ಲಿ ತೋರಿಸಿಕೊಂಡು ಹಿಂದಿರುಗುವಾಗ ಸುಪಾರಿ ಕೊಲೆಗಡುಕರು ಪತ್ನಿಯ ಎದುರೇ ಪ್ರಣಯ್‌ನನ್ನು ಬರ್ಬರವಾಗಿ ಕೊಂದುಬಿಟ್ಟರು. ಹೊಟ್ಟೆಯಲ್ಲಿ ಒಂದು ಜೀವ ಹೊತ್ತುಕೊಂಡಿದ್ದ ಮಗಳ ಮತ್ತು ಹುಟ್ಟಲಿರುವ ಮೊಮ್ಮಗುವಿನ ಭವಿಷ್ಯವನ್ನು ಸಿಗರೇಟಿನ ತುಂಡಿನಂತೆ ಎಡಗಾಲಿನಿಂದ ಹೊಸಕಿ ಹಾಕಿಬಿಟ್ಟಿದ್ದ ಆ ಕ್ರೂರಿ ಅಪ್ಪ. ಇದು ನನ್ನನ್ನು ಬಹುವಾಗಿ ಕಾಡುತ್ತಿತ್ತು.

ಅಸಹನೆಯನ್ನು, ದ್ವೇಷವನ್ನು, ಕ್ರೌರ್ಯವನ್ನು ಗರ್ಭೀಕರಿಸಿಕೊಂಡಿರುವ ಜಾತಿಪದ್ಧತಿಯಿಂದ ಲಾಭ ಪಡೆದುಕೊಳ್ಳುತ್ತಿರುವವರಿಗೆ, ಅದರಿಂದೇನೂ ತೊಂದರೆಯಿಲ್ಲ ಎಂದು ನಂಬಿಕೊಂಡಿರುವವರಿಗೆ ಇದು ಅರ್ಥವಾಗುವ ವಿಷಯವಲ್ಲ (ಇದನ್ನು ಬರೆಯುತ್ತಿರುವಾಗ ರಾಜಸ್ಥಾನದ ಹಳ್ಳಿಯೊಂದರಲ್ಲಿ ಮಾಲಿ ಹುಡುಗಿಯೊಂದಿಗೆ ಓಡಿಹೋದ ದಲಿತ ಯುವಕನ 17 ವರ್ಷದ ತಮ್ಮನನ್ನು ಕೊಲೆ ಮಾಡಲಾಗಿದೆ). ಕೊಲ್ಲುವುದು, ಕೊಲ್ಲಿಸುವುದು ಸುಲಭವಿರಬಹುದು; ಆದರೆ ಅದನ್ನು ಜೀರ್ಣಿಸಿಕೊಳ್ಳುವುದು ಸುಲಭವಲ್ಲ ಎಂಬುದನ್ನು ಮಾರುತಿರಾವ್ ಪ್ರಕರಣ ಸ್ಪಷ್ಟವಾಗಿ ಹೇಳುತ್ತಿದೆ. ಮನುಷ್ಯನ ಮೂಲ ಪ್ರವೃತ್ತಿಗಳು ಒಂದೇ ಆದರೂ ನಾವೇ ಸೃಷ್ಟಿಸಿಕೊಂಡ ನಿಯಮಗಳು ಬದುಕನ್ನು ಹೇಗೆ ಬದಲಿಸಿಬಿಡುತ್ತವೆ ಎಂಬುದನ್ನು ಹೇಳಲು ಈ ಹೋಲಿಕೆ ಕೊಡಬೇಕಾಯಿತು.

ಪ್ಯಾರಿಸ್ ನಡೆದಾಡುವ ನಗರ. ಅಷ್ಟು ವಿಸ್ತೃತವಾದ ವಾಸ್ತುಶಿಲ್ಪೀಯ ನಗರ ವಿಶ್ವದಲ್ಲಿ ಬೇರೊಂದಿಲ್ಲ. ನಮಗೆ ಬೇಕಾದ ಸ್ಥಳವನ್ನು ಮೆಟ್ರೊದಲ್ಲಿ ಕ್ಷಿಪ್ರವಾಗಿ ತಲುಪಿ ಅಲ್ಲಿಂದ ಕಾಲ್ನಡಿಗೆಯಲ್ಲಿ ಊರು ಸುತ್ತುವುದು ಚೇತೋಹಾರಿ ಅನುಭವ. 120 ವರ್ಷಗಳ ಹಿಂದೆಯೇ(1900) ನೆಲಮಾಳಿಗೆಯಲ್ಲಿ ಎರಡು ಅಂತಸ್ತಿನ ರೈಲು ಮಾರ್ಗವನ್ನು ಕಟ್ಟಿರುವುದು ಅಲ್ಲಿನ ಮೆಟ್ರೊ ವೈಶಿಷ್ಟ್ಯ. ಒಂದು ಒಳಉಂಗುರ ರಸ್ತೆಯ ಪರಿದಿಯಲ್ಲಿ ಸುತ್ತು ಹೊಡೆದರೆ, ಇನ್ನೊಂದು ಪ್ಯಾರಿಸ್ಸಿನ ಉಪನಗರಗಳಿಗೆ ಸಾಗಿಬರುತ್ತದೆ. ರೈಲುಗಳು ಈಗ ಹಳೆಯದಾಗಿದ್ದು ಹೆಚ್ಚು ಸದ್ದು ಮಾಡುತ್ತವೆ. ಇದಕ್ಕೆ ಹೋಲಿಸಿದರೆ ಬೆಂಗಳೂರಿನ ಮೆಟ್ರೊ ಅತ್ಯಾಧುನಿಕವಾಗಿ ಕಾಣಿಸುತ್ತದೆ.

ಪ್ಯಾರಿಸ್ಸಿನಲ್ಲಿ ನೋಡಲೇಬೇಕಾದ ಮ್ಯೂಸಿಯಂ ಲೂಎ, ಕೊರೊನಾ ವೈರಸ್‌ನಿಂದಾಗಿ ಆಗಲೇ ಮುಚ್ಚಿತ್ತು. ನಮಗೆ ಮ್ಯೂಸಿಯಂ ದೋರ‍್ಸೇ ನೋಡಲು ದಕ್ಕಿತು. ಒಂದು ಹಳೆಯ ರೈಲ್ವೆ ಸ್ಟೇಷನ್‌ ಅನ್ನು 1977ರಲ್ಲಿ ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ. ಚಿತ್ರಕಲೆ, ಶಿಲ್ಪಕಲೆ, ಛಾಯಾಚಿತ್ರಗಳು ಹೀಗೆ ವೈವಿಧ್ಯಮಯವಾದ ಪಾಶ್ಚಾತ್ಯ ಕಲೆಯ ಸಂಗ್ರಹಗಳು ಅಲ್ಲಿ ನೋಡಲು ಸಿಗುತ್ತವೆ. ಅಲ್ಲಿಂದ ಒಂದೆರಡು ಕಿ.ಮೀ. ಅಂತರದಲ್ಲಿ ನೋತ್ರೆ ದೇಮ್ ಎಂಬ ಪ್ರಖ್ಯಾತ ಚರ್ಚ್ ಇದೆ. ಅದು ಸಂಪೂರ್ಣ ಸುಟ್ಟು ಹೋಗಿದ್ದು, ಈಗ ದುರಸ್ತಿಯಲ್ಲಿದೆ. ಅದನ್ನು ಹೊರಗಿನಿಂದಲೇ ನೋಡಿದೆವು. ಪ್ಯಾರಿಸ್ಸಿನ ವಿಶೇಷವೆಂದರೆ ಅದರ ಮಧ್ಯಭಾಗದಲ್ಲಿ ಹರಿದು ನಗರವನ್ನು ಎರಡು ಹೋಳಾಗಿಸುವ ಸೀನ್ ನದಿ. ನದಿಯ ಉದ್ದಕ್ಕೂ ಇಬ್ಬದಿಯನ್ನು ಕೂಡಿಸಲು ಸೇತುವೆಗಳನ್ನು ನಿರ್ಮಿಸಲಾಗಿದೆ.

ನಾವು ನೋಡಿದ ಮತ್ತೊಂದು ಐತಿಹಾಸಿಕ ಸ್ಥಳ ಶೇಕ್ಸ್‌ಪಿಯರ್ ಅಂಡ್ ಕಂಪನಿ. ಸಿಲ್ವಿಯಾ ಬೀಚ್ ಎಂಬ ಅಮೆರಿಕನ್ ಮಹಿಳೆ 1919ರಲ್ಲಿ ಸ್ಥಾಪಿಸಿದ ಪುಸ್ತಕ ಮಳಿಗೆ ಅದು. ವಿಶಾಲವಾದ ಹಳೆಯ ಪುಸ್ತಕದ ಅಂಗಡಿ ಹಾಗೂ ಗ್ರಂಥಾಲಯ. ಖ್ಯಾತನಾಮರಾದ ಎಜ್ರಾ ಪೌಂಡ್, ಅರ‍್ನೆಸ್ಟ್ ಹೆಮಿಂಗ್ವೇ, ಗರ್ಟ್ರೂಡ್ ಸ್ಟೇನ್ ಮುಂತಾದವರು ಎಡತಾಕುತ್ತಿದ್ದ ಜಾಗ. ಜೇಮ್ಸ್ ಜಾಯ್ಸ್‌ನ ಯೂಲಿಸಿಸ್ 1922ರಲ್ಲಿ ಪ್ರಥಮ ಮುದ್ರಣ ಕಂಡದ್ದು ಅಲ್ಲಿಯೇ. ಒಳಹೋಗುವವರು ಇಂತಹ ಮಾಹಿತಿಗಳನ್ನು ಕೇಳಿಯೇ ರೋಮಾಂಚನಗೊಳ್ಳುತ್ತಿದ್ದರು. ಅಲ್ಲಿ ಕೆಲ ಸಮಯ ಕಳೆದದ್ದು ಸಾರ್ಥಕ ಗಳಿಗೆ ಎನಿಸಿತು.

‘ಪ್ಲೇಸ್ ದ ಲಾ ರಿಪಬ್ಲಿಕ್’ ಮತ್ತೊಂದು ಅದ್ಭುತ ಸ್ಮಾರಕ. ಫ್ರ್ಯಾನ್ಸಿನ ರೂಪಕವಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಗಳನ್ನು ಸಾರುವ ಮರಿಯಾನಳ ಪ್ರತಿಮೆಯನ್ನು ಕಡೆದು ನಿಲ್ಲಿಸಲಾಗಿದೆ. ನಮ್ಮ ಟೌನ್ ಹಾಲಿನಂತೆ ಎಲ್ಲ ಚಳವಳಿ/ ಪ್ರತಿಭಟನೆಗಳ ಉಗಮ ಮತ್ತು ಅಂತ್ಯ ಅಲ್ಲಿಯೇ.

ಬ್ರಿಟನ್ನಿನ ಸಂಸ್ಥೆಯೊಂದು ದಲಿತ, ಆದಿವಾಸಿ ಸಾಹಿತ್ಯ ಮತ್ತು ಪ್ರದರ್ಶನ ಕಲೆಗಳ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಿಕೊಂಡುಬರುತ್ತಿದೆ. ಈ ಬಾರಿ ಹೈದರಾಬಾದಿನ ಮುಸ್ಲಿಂ ಕವಯಿತ್ರಿ ಜಮೀಲಾ ನಿಷತ್ ಮತ್ತವರ ಫ್ರೆಂಚ್ ಅನುವಾದಕಿ ಉಮಾ ಶ್ರೀಧರ್, ಜಾರ್ಖಂಡ್ ರಾಜ್ಯದ ಆದಿವಾಸಿ ಕವಯಿತ್ರಿ ಜೆಸಿಂತಾ ಕಾರ‍್ಕೆಟ್ಟಾ ಮತ್ತು ನಾನು ಆಹ್ವಾನಿತರಾಗಿದ್ದೆವು. ಜೆಸಿಂತಾ ಮತ್ತು ನನ್ನ ಅನುವಾದಕರಾದ ಅನ್ನೀ ಮೌಂಟ್ ಮತ್ತು ಜೂಡಿತ್ ಮಿಷ್ರಾಹಿ ಬರಾಕ್ ಪ್ಯಾರಿಸ್ಸಿನವರೇ. ಕವಿಗೋಷ್ಠಿಗಳು ಸಾರ್ವಜನಿಕ ಗ್ರಂಥಾಲಯಗಳಲ್ಲಿ ಏರ್ಪಾಡಾಗಿದ್ದವು. ಅಚ್ಚುಕಟ್ಟಾದ, ಸುಂದರ ಗ್ರಂಥಾಲಯಗಳನ್ನು ಸರ್ಕಾರವೇ ನಡೆಸುತ್ತದೆ.

ನಾನು ಹೊರಡುವ ಕೆಲ ದಿನಗಳ ಮುಂಚೆ, ಮಾರ್ಚ್ 20ರಂದು ಪ್ರಾರಂಭವಾಗಬೇಕಾಗಿದ್ದ ಯೂರೋಪಿನ ವಿಖ್ಯಾತ ಪ್ಯಾರಿಸ್ ಬುಕ್‌ಫೇರ್‌ ಅನ್ನು ಕೊರೊನಾ ವೈರಸ್ ಕಾರಣದಿಂದಾಗಿ ರದ್ದುಗೊಳಿಸಿದ್ದರು. ಈ ವರ್ಷ ಇಂಡಿಯಾ, ಗೌರವಾನ್ವಿತ ಅತಿಥಿಯಾಗಿತ್ತು. ಮಾರ್ಚ್‌ 19ರಂದು ನನಗೂ ಮತ್ತು ಆದಿವಾಸಿ ಕವಿ ಜೆಸಿಂತಾಗೂ ಸೋರ‍್ಬೋನ್ ವಿಶ್ವವಿದ್ಯಾಲಯದಲ್ಲಿ ಕವಿತಾ ವಾಚನಕ್ಕೆ ಆಹ್ವಾನವಿತ್ತು. ನನಗೆ ಅದನ್ನು ಮುಗಿಸಿ, ಬುಕ್‌ಫೇರ್ ಸುತ್ತು ಹೊಡೆದು ಬರುವ ಆಲೋಚನೆಯಿತ್ತು. ಆದರೆ, ವೈರಸ್ ಕಾರಣದಿಂದಾಗಿ ಬೇಗ ಹಿಂದಿರುಗಬೇಕೆನ್ನುವ ಒತ್ತಡವಿದ್ದು ನಾನು ಬರಲಾಗುವುದಿಲ್ಲ ಎಂದು ಹೇಳಿದೆ. ಟಿ.ಎಸ್. ಎಲಿಯಟ್ ಓದಿದ ಆ ವಿಶ್ವವಿದ್ಯಾಲಯದಲ್ಲಿ ಪದ್ಯ ಓದುವ ಅವಕಾಶವನ್ನು ಕಳೆದುಕೊಂಡೆನಲ್ಲ ಎಂಬ ಬೇಸರವಿತ್ತು. ನಂತರ ಅವರೂ ಕಾರ್ಯಕ್ರಮವನ್ನು ರದ್ದು ಮಾಡಿದರು.

ನಮ್ಮ ಆಯೋಜಕರಿಗೆ ಕವಿಗೋಷ್ಠಿಗಳನ್ನು ರದ್ದು ಮಾಡುವ ಮನಸ್ಸಿಲ್ಲದೆ ನಮ್ಮನ್ನು ಇಲ್ಲಿಂದ ಹೊರಡಲು ಪುಸಲಾಯಿಸುತ್ತಿದ್ದರು. ಆದರೂ, ಅವರಿಗೆ ಜನ ಬರುವರೋ ಇಲ್ಲವೋ ಎಂಬ ದಿಗಿಲಿತ್ತು. ಜನರು ಬಂದರು, ಕುತೂಹಲದಿಂದ ಚರ್ಚೆಗಿಳಿದರು. ಭಾರತೀಯ ಸಂಜಾತರು ಮತ್ತು ವಿದ್ಯಾರ್ಥಿಗಳೂ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿದ್ದರು. ಪ್ಯಾರಿಸ್ ಜಗತ್ತಿನ ಸಾಂಸ್ಕೃತಿಕ ನಗರಿ; ತನ್ನ ಜೀವಂತಿಕೆಯನ್ನು ಹೀಗೆ ತೋರ್ಪಡಿಸಿಕೊಂಡದ್ದು ಸೋಜಿಗವೆನಿಸಲಿಲ್ಲ.

ಫ್ರೆಂಚ್ ಕವಿ ವಿಕ್ಟರ್ ಹ್ಯೂಗೊ, ಮೂರನೆಯ ನೆಪೋಲಿಯನ್ ಕುರಿತು ಬರೆದ ಪ್ರಖ್ಯಾತ ಕವಿತೆ ‘ನನ್ನ ಕೊನೆಯ ಮಾತು’ ಹೀಗೆ ಪ್ರಾರಂಭವಾಗುತ್ತದೆ.

ಮನುಷ್ಯನ ಮನಃಸ್ಸಾಕ್ಷಿ ಸತ್ತಿದೆ ಮತ್ತು ಬಯಲಾಗಿದೆ
ರಕ್ತಸಿಕ್ತ ಕಲೆಗಳು ಮೆತ್ತಿದ ನಿರಂಕುಶ ಪ್ರಭುವಿನ ಇತ್ತೀಚಿನ ನರಮೇಧ
ಅವನು ಗದ್ದುಗೆಯನ್ನು ಏರುವುದಿಲ್ಲ, ದಾರಿತಪ್ಪಿದ
ಶಿಕಾರಿ, ಪಟ್ಟದಿಂದುರುಳಿ ಬೀಳುವ ತನಕ!

ಇದು ಎಲ್ಲ ಕಾಲಕ್ಕೂ ಎಲ್ಲೆಲ್ಲೂ ಸಲ್ಲುವ ಮಾತಿನಂತಿದೆ. ಸಭಿಕರ ಪ್ರಶ್ನೆಗಳು ಭಾರತದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆಯೇ ಹೆಚ್ಚಾಗಿದ್ದವು. ದಲಿತ, ಆದಿವಾಸಿ, ಮುಸ್ಲಿಂ ತ್ರಿವಳಿಗಳೇ ಬೇಟೆಗಳು ಎಂದು ತಿಳಿದಿದ್ದ ಅವರಿಗೆ ನಾವು ಆ ತ್ರಿವಳಿಗಳ ಪ್ರತಿನಿಧಿಗಳಾಗಿ ಕಂಡದ್ದು ಆಶ್ಚರ್ಯವಿಲ್ಲ. ಅಂಬೇಡ್ಕರ್ ಕುರಿತು ಸಂಶೋಧನೆ ನಡೆಸುತ್ತಿರುವ ಉತ್ತರಪ್ರದೇಶದ ದಲಿತ ಹೆಣ್ಣುಮಗಳೊಬ್ಬಳು ತನ್ನ ಫ್ರೆಂಚ್ ಗಂಡನೊಂದಿಗೆ ಸಭೆಗೆ ಬಂದಿದ್ದನ್ನು ನೋಡಿ, ‘ಇದಲ್ಲವೇ ಮನುಜಮತ...’ ಎನ್ನಿಸಿತು. ಈ ವಿಶ್ವಪಥಕ್ಕೆ ‘ಜಾತಿ ಭಾರತ’ದಲ್ಲಿ ಪ್ರವೇಶವಿಲ್ಲ!

ಒಂದು ದಿನ ಊಟಕ್ಕೆಂದು ಹೋಟೆಲ್‌ಗೆ ಹೋಗಿದ್ದೆವು. ಅಲ್ಲಿ ಸ್ಟಾರ್ಟರ್ ಮತ್ತು ಮೆಯಿನ್ ಡಿಷ್ ಎಂದು ಆರ್ಡರ್ ಕೊಡುತ್ತಾರೆ. ನನಗೆ ಎರಡರಲ್ಲಿ ಒಂದನ್ನು ಮಾತ್ರ ತಿನ್ನಲು ಸಾಧ್ಯವಾಗುತ್ತಿತ್ತು. ಡೆಸರ್ಟ್ ಅನ್ನು ಮುಟ್ಟುತ್ತಿರಲಿಲ್ಲ. ನಾನು ಸ್ಟಾರ್ಟರ್ ಇರಬಹುದೆಂದು ಮೀನಿನ ಸೂಪ್ ಹೇಳಿದೆ. ಮಾಣಿ ಎಷ್ಟೊಂದು ಮೀನಿನ ತುಂಡುಗಳಿರುವ ಒಂದು ದೊಡ್ಡ ಬೋಗುಣಿಯನ್ನು ತಂದಿಟ್ಟ! ನನಗೆ ಅರ್ಧವನ್ನೂ ತಿನ್ನಲಾಗಲಿಲ್ಲ, ಬಿಟ್ಟೆ. ಅದು ವ್ಯರ್ಥವಾಗಬಾರದೆಂದು ನನ್ನ ಹೋಸ್ಟ್ ಜೂಡಿತ್, ‘ನನ್ನ ಮಗಳು ತಿನ್ನುತ್ತಾಳೆ’ ಎಂದು ಪ್ಯಾಕ್ ಮಾಡಿಸಿಕೊಂಡರು. ‘ಹೀಗೆ ತಿನ್ನುವುದು ಉಚ್ಛಿಷ್ಠ ಪಂಚ ಮಹಾಪಾತಕಗಳಲ್ಲಿ ಒಂದು’ ಎಂದು ಭ್ರಮಿಸಿರುವ ನನ್ನ ದೇಶದಲ್ಲಿ, ಕೆಳಜಾತಿಯವನೊಬ್ಬನ ಎಂಜಲನ್ನು ತಿನ್ನುವುದುಂಟೆ?! ನನ್ನ ಕಣ್ಣುಗಳು ನೀರು ತುಂಬಿಕೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT