ಗುರುವಾರ , ಮೇ 6, 2021
25 °C

ಗಿರಿಗಳ ನಡುವಿನ ಎಲಗಿರಿ

ಡಾ.ಉಮಾಮಹೇಶ್ವರಿ ಎನ್. Updated:

ಅಕ್ಷರ ಗಾತ್ರ : | |

Prajavani

ಎಲಗಿರಿ ಗಿರಿಧಾಮದಂತಿರುವ ತಾಣ. ಇದನ್ನು ಎಳಗಿರಿ ಎಂದೂ ಕರೆಯುವುದುಂಟು. ಇಲ್ಲಿ ಗೌಜು ಗದ್ದಲವಿಲ್ಲದ ಪ್ರಶಾಂತ ವಾತಾವರಣವಿದೆ. ಬೆಂಗಳೂರಿಗರಿಗಂತೂ ವಾರಾಂತ್ಯದ ಎರಡು ದಿನಗಳನ್ನು ಕಳೆಯಲು ಸೂಕ್ತ ಪ್ರವಾಸಿ ತಾಣವೂ ಹೌದು. ಸುಮಾರು 30 ಚದರ ಕಿ.ಮೀ. ವಿಸ್ತೀರ್ಣವಿರುವ ಈ ಜಾಗ ಸಮುದ್ರಮಟ್ಟದಿಂದ 1110 ಮೀಟರ್ ಎತ್ತರದಲ್ಲಿದೆ.

ಬೆಂಗಳೂರಿನಿಂದ ಹೊಸೂರು ರಸ್ತೆಯಲ್ಲಿ ಕೃಷ್ಣಗಿರಿ ಮಾರ್ಗವಾಗಿ ವನಿಯಂಬಾಡಿ ರಸ್ತೆಯಲ್ಲಿ ಸಾಗಿದೆವು. ಅಲ್ಲಿನ ಟೋಲ್ ಗೇಟಿನ ಬಳಿ ಒಂದೆಡೆ ತಿರುವು ತೆಗೆದುಕೊಂಡು, ಮುಂದಕ್ಕೆ ಸಾಗಿದಾಗ, ಸ್ವಲ್ಪ ಹೊತ್ತಿನಲ್ಲೇ ಎಲಗಿರಿ ತಲುಪಿದೆವು.

ಎಲಗಿರಿ ಗಿರಿಧಾಮದಂತಿರುವ ತಾಣ. ಇದನ್ನು ಎಳಗಿರಿ ಎಂದೂ ಕರೆಯುವುದುಂಟು. ಇಲ್ಲಿ ಗೌಜು ಗದ್ದಲವಿಲ್ಲದ ಪ್ರಶಾಂತ ವಾತಾವರಣವಿದೆ. ಬೆಂಗಳೂರಿಗರಿಗಂತೂ ವಾರಾಂತ್ಯದ ಎರಡು ದಿನಗಳನ್ನು ಕಳೆಯಲು ಸೂಕ್ತ ಪ್ರವಾಸಿ ತಾಣವೂ ಹೌದು. ಸುಮಾರು 30 ಚದರ ಕಿ.ಮೀ. ವಿಸ್ತೀರ್ಣವಿರುವ ಈ ಜಾಗ ಸಮುದ್ರಮಟ್ಟದಿಂದ 1110 ಮೀಟರ್ ಎತ್ತರದಲ್ಲಿದೆ.

ಸ್ಥಳದ ಹಿನ್ನೆಲೆ

ಬ್ರಿಟಿಷರ ಕಾಲದಲ್ಲಿ ಈ ಜಾಗ ಒಬ್ಬ ಜಮೀನ್ದಾರನ ವಶದಲ್ಲಿತ್ತು. 1950ರಲ್ಲಿ ಭಾರತ ಸರ್ಕಾರ ಇದನ್ನು ವಶಪಡಿಸಿಕೊಂಡಿತು. ಮೂಲ ಜಮೀನ್ದಾರರ ಮನೆ ರೆಡ್ಡಿಯೂರು ಎಂಬ ಜಾಗದಲ್ಲಿ ಇನ್ನೂ ಇದೆ. ಇಲ್ಲಿನ 14 ಹಳ್ಳಿಗಳಲ್ಲಿ ಸುಮಾರು ದೇವಸ್ಥಾನಗಳಿವೆ. ಚರ್ಚ್‌, ಮಸೀದಿಗಳೂ ಇವೆ.

ಡಾನ್‌ಬಾಸ್ಕೊದ ಫಾದರ್ ಫ್ರಾನ್ಸಿಸ್ ಎಂಬವರು ಇಲ್ಲಿನ ಸ್ಥಳೀಯ ಜನಾಂಗದವರ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು. ಇವರು ಸ್ಥಾಪಿಸಿದ ಶಾಲೆ ಕಾಲೇಜುಗಳು ಇಲ್ಲಿನ ಜನರ ವಿದ್ಯಾಭ್ಯಾಸದಲ್ಲಿ ಸಹಕಾರಿಯಾಗಿವೆ.

ಮೇ ತಿಂಗಳಲ್ಲಿ ಬೇಸಿಗೆ ಹಬ್ಬ

ಮೇ ತಿಂಗಳಾಂತ್ಯದಲ್ಲಿ ಸರ್ಕಾರ ಇಲ್ಲಿ ಬೇಸಿಗೆ ಹಬ್ಬ ನಡೆಸುತ್ತದೆ. ಆಗ ರಂಗುಭರಿತ ಮಾರುಕಟ್ಟೆ, ಜಲಕ್ರೀಡೆಗಳು, ಶ್ವಾನ ಪ್ರದರ್ಶನಗಳಂಥ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುತ್ತವೆ. ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ವಿವಿಧೆಡೆಗಳಿಂದ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಇಲ್ಲಿನ ಅಭಿವೃದ್ಧಿಗಾಗಿ ಸರ್ಕಾರ ಹಲವು ಸಾಹಸ ಕ್ರೀಡೆಗಳ ಪಾರ್ಕ್‌ಗಳಿಗೆ ಸಮ್ಮತಿ ನೀಡಿದೆ. ಊಟಿ, ಕೊಡೈಕೆನಾಲ್‌ಗಳಷ್ಟು ಅಭಿವೃದ್ಧಿ ಹೊಂದದಿರುವುದರಿಂದ ಪ್ರವಾಸಿಗರ ಸಂಖ್ಯೆ ಕಡಿಮೆ. ಅದರಲ್ಲೂ ವಾರದ ಮಧ್ಯದಲ್ಲಂತೂ ಆ ಸಂಖ್ಯೆ ಇನ್ನೂ ವಿರಳ.

ಸ್ಥಳೀಯರಲ್ಲಿ ಹೆಚ್ಚಿನವರು ಹಿಂದುಗಳು. ಕೃಷಿ ಹಾಗೂ ಅರಣ್ಯ ಉತ್ಪನ್ನಗಳ ಸಂಗ್ರಹ ಮತ್ತು ಮಾರಾಟ ಇವರ ಜೀವನಾಧಾರ. ಇವರು ಶಿವನ ಆರಾಧಕರು. ‘ನಚ್ಚಿಯಪ್ಪನ್’ ಎಂಬುದು ಇವರು ಆರಾಧಿಸುವ ಶಿವನ ರೂಪ. ಪಾರ್ವತಿಗೆ ‘ನಚ್ಚಿಯಮ್ಮನ್’ ಎನ್ನಲಾಗುತ್ತದೆ. ಇಲ್ಲಿನ ಪ್ರಸಿದ್ಧ ಮುರುಗನ್ ದೇವಸ್ಥಾನ 1960ರಲ್ಲಿ ಆರಂಭವಾಯಿತು.

ನೇಚರ್ ಪಾರ್ಕ್‌ ಆಕರ್ಷಣೆ

2008ರಲ್ಲಿ ಈ ನೇಚರ್‌ ಪಾರ್ಕ್‌ ಆರಂಭವಾಗಿದೆ. ಇಲ್ಲಿ, ಅಕ್ವೇರಿಯಂ, ಗುಲಾಬಿ ತೋಟ, ಕೃತಕ ಜಲಪಾತ, ಸಂಗೀತ ಕಾರಂಜಿಗಳಿವೆ. ಉತ್ತಮ ಸಂಖ್ಯೆಯಲ್ಲಿ ವೀಕ್ಷಕರಿದ್ದರೆ ಸಂಗೀತ ಕಾರಂಜಿಯ ಪ್ರದರ್ಶನ ನೋಡಬಹುದು. ಸುಂದರವಾದ ವಿನ್ಯಾಸವಿರುವ ಈ ಉದ್ಯಾನದಲ್ಲಿ ಅಡ್ಡಾಡುತ್ತಾ ಆನಂದವಾಗಿ ಸಮಯ ಕಳೆಯಬಹುದು.

ಪುಂಗನೂರು ಸರೋವರ

25 ಅಡಿ ಆಳವಿರುವ ಈ ಸರೋವರವನ್ನು ಕೃತಕವಾಗಿ ನಿರ್ಮಿಸಲಾಗಿದೆ. ಇದರಲ್ಲಿ ದೋಣಿಯಾನದ ಸೌಲಭ್ಯವಿದೆ. ಸರೋವರದ ಸುತ್ತಲೂ ಕಾಲುದಾರಿ ಇರುವುದರಿಂದ ಬೆಳಿಗ್ಗೆ ವಾಯುವಿಹಾರ ಮಾಡಬಹುದು. ಈ ಸರೋವರದ ಆಸುಪಾಸಿನಲ್ಲಿ ಉದ್ಯಾನಗಳಿವೆ. ಮಕ್ಕಳು ಆಡಬಹುದಾದ ಸ್ಥಳಗಳಿವೆ. ಸುತ್ತಾ ಐಸ್‌ಕ್ರೀಂ ಸೇರಿದಂತೆ ತಿಂಡಿ–ತಿನಿಸುಗಳನ್ನು ಮಾರಾಟ ಮಾಡುವ ಸ್ಥಳಗಳಿವೆ. ಇಲ್ಲಿಂದ ಹೊರಬರುವಾಗ ಇಕ್ಕೆಲಗಳಲ್ಲಿರುವ ಅಂಗಡಿಗಳಲ್ಲಿ ಚಾಕಲೇಟ್, ಚಹಾಪುಡಿ, ಸಂಬಾರ ಪದಾರ್ಥಗಳು ಖರೀದಿಗೆ ಸಿಗುತ್ತವೆ. ಇಲ್ಲಿ ದೊರೆಯುವ ತರಕಾರಿ ಹಣ್ಣುಗಳೂ ತಾಜಾ ಇರುತ್ತವೆ.

ನಿಲವೂರು ಸರೋವರ: ಅಲ್ಲಿ, ಹೀಗೊಂದು ಹೆಸರಿನ ಸರೋವರ ಇದೆ ಎಂದು ಗೊತ್ತಾಯಿತು. ಆದರೆ, ಅದನ್ನು ಹುಡುಕಿಕೊಂಡು ಹೋಗಿ ನೋಡಿದಾಗ ಭ್ರಮನಿರಸನವಾಯಿತು. ಇದರ ನಿರ್ವಹಣೆ ಸರಿಯಾಗಿ ಇರಲಿಲ್ಲ.

ಜಲಗಂಪರೈ ಜಲಪಾತ

ಎಲಗಿರಿಯಿಂದ  5 ಕಿ.ಮೀ. ದೂರದಲ್ಲಿರುವ ಈ ಜಾಗಕ್ಕೆ ಕಾಲ್ನಡಿಗೆಯಲ್ಲಿ ಹೋಗಬಹುದು. ಆದರೆ, ಈ ಮಾರ್ಗ ಯಾವಾಗಲೂ ತೆರೆದಿರುವುದಿಲ್ಲ. ಹಾಗಾಗಿ ಬೆಟ್ಟವನ್ನಿಳಿದು ಸುತ್ತಿ ಇದರ ಬುಡಕ್ಕೆ ಬಂದು, ವಾಹನ ನಿಲ್ಲಿಸಿ ಮತ್ತೆ ಹತ್ತಬೇಕು. ಇದು ಸುಮಾರು ಒಂದು ಗಂಟೆ ಸಮಯ ತೆಗೆದುಕೊಳ್ಳುತ್ತದೆ.

ಎಲಗಿರಿಯಲ್ಲಿ ಹರಿಯುವ ಅತ್ತಾರಿ ನದಿ, ರಭಸದಿಂದ ಕೆಳಗೆ ಸುರಿದಾಗ ಉಂಟಾಗುವ ಜಲಪಾತ ಇದು. ನೀರು ಇರುವ ಕಾಲದಲ್ಲಿ ಜಲಪಾತ ಸುಂದರವಾಗಿರುತ್ತದೆ. ಅನೇಕರು ಜಲಪಾತದ ನೀರಿನಲ್ಲಿ ಪವಿತ್ರ ಸ್ನಾನ ಮಾಡಲು ಬರುತ್ತಾರೆ. ಬುಡದಲ್ಲಿರುವ ದೇವಸ್ಥಾನಗಳು ಪ್ರಸಿದ್ಧವಾದವು. ಗಣೇಶ, ಕಾರ್ತಿಕೇಯ, ದೇವಿಯರ ಗುಡಿಗಳಿವೆ. ಹಾಗೆಯೇ ಮಂಗಗಳೂ ಸಾಕಷ್ಟು ಸಂಖ್ಯೆಯಲ್ಲಿ ಇವೆ. ಇಲ್ಲಿಗೆ ಪ್ರಯಾಣಿಸುವ ದಾರಿಯುದ್ದಕ್ಕೂ ಭತ್ತ, ಕಬ್ಬು, ಹತ್ತಿ, ಬಾಳೆ ತರಕಾರಿಗಳ ಹೊಲಗಳು ಕಣ್ಮನ ಸೆಳೆಯುತ್ತವೆ.

ಸ್ವಾಮಿ ಮಲೈ ಬೆಟ್ಟ

ಇಲ್ಲಿರುವ ಬೆಟ್ಟಗಳಲ್ಲೇ ಅತಿ ಎತ್ತರವಾದ ಬೆಟ್ಟಸ್ವಾಮಿ ಮಲೈ. ಇದು ಚಾರಣಕ್ಕೆ ಪ್ರಶಸ್ತವಾದ ಸ್ಥಳ. ತುತ್ತತುದಿಯಲ್ಲಿ ನಿಂತರೆ, ಸುತ್ತಲಿನ ಕಣಿವೆಯ ದೃಶ್ಯ ನೋಡಬಹುದು.

ಇಲ್ಲಿ, ಸಾಕಷ್ಟು ಸಂಖ್ಯೆಯಲ್ಲಿ ಸಾಹಸ ಕ್ರೀಡೆಗಳು ನಡೆಯುತ್ತವೆ. ಬಂಗೀ ಜಂಪಿಂಗ್, ರಾಕ್ ಕ್ಲೈಂಬಿಂಗ್, ಝಿಪ್ ಲೈನಿಂಗ್, ಟ್ರೆಕ್ಕಿಂಗ್ ಜೊತೆಗೆ ಇನ್ನೂ ಕೆಲವು ಆಕರ್ಷಕ ಕ್ರೀಡೆಗಳಿವೆ. ಇಂಥ ಕ್ರೀಡೆಗಳನ್ನು ನಡೆಸಲೆಂದೇ ಮೌಂಟನ್ ವ್ಯೂ ಅಡ್ವೆಂಚರ್ ಪಾರ್ಕ್, ಥ್ರಿಲ್ ವ್ಯಾಲಿ, ರೋಪ್ಸ್ ಆಂಡ್‌ ನಾಟ್ಸ್ ಎಂಬ ಸಂಸ್ಥೆಗಳು ಇಲ್ಲಿವೆ. ಈ ಕ್ರೀಡೆಯಲ್ಲಿ ಆಸಕ್ತಿ ಉಳ್ಳವರು ದಿನವಿಡೀ ಇಲ್ಲಿ ಕಳೆಯಬಹುದು. ವಸತಿ ಗೃಹಗಳಲ್ಲಿ ಸಾಹಸ ಕ್ರೀಡೆಗಳ ಬಗ್ಗೆ ಮಾಹಿತಿ ದೊರೆಯುತ್ತದೆ.

ವಿಶಾಲವಾದ ರಸ್ತೆಗಳು ಪ್ರಶಾಂತ ವಾತಾವರಣದ ನಡುವೆ ನಡೆಯುವುದೇ ಒಂದು ಸೊಬಗು. ಆದರೆ, ಮಂಗಗಳು ಮತ್ತು ಹಾವುಗಳು ಇರುವುದರ ಬಗ್ಗೆ ಅಲ್ಲಲ್ಲೇ ಸೂಚನಾ ಫಲಕಗಳಿರುತ್ತವೆ. ಅದನ್ನು ನೋಡಿಕೊಂಡು, ಸೂಕ್ತ ಎಚ್ಚರಿಕೆ ತೆಗೆದುಕೊಳ್ಳುವುದು ಅವಶ್ಯ.

ಹೋಗುವುದು ಹೇಗೆ?

ಬೆಂಗಳೂರಿನಿಂದ 120 ಕಿ. ಮೀ ದೂರವಿದೆ ಎಲಗಿರಿ. ಬೆಂಗಳೂರಿನಿಂದ ನೇರ ಬಸ್‌ ಸಂಪರ್ಕವಿಲ್ಲ. ಹೊಸೂರು, ಕೃಷ್ಣಗಿರಿಗೆ ಹೋಗಿ, ಅಲ್ಲಿಂದ ಬಸ್ ಬದಲಾಯಿಸಬೇಕು.

ಜೋಳಾರಪೆಟ್ಟೈ, ಎಲಗಿರಿಗೆ ಸಮೀಪದ ರೈಲ್ವೆನಿಲ್ದಾಣ. ಇಲ್ಲಿಂದ ಟ್ಯಾಕ್ಸಿ ಮೂಲಕ ಎಲಗಿರಿ ತಲುಪಬಹುದು. 20 ರಿಂದ 21 ಕಿಲೋಮೀಟರ್ ಆಗಬಹುದು. ಚೆನ್ನೈ, ಕೃಷ್ಣಗಿರಿ, ವನಿಯಂಬಾಡಿ, ತಿರುಪತ್ತೂರು, ವೆಲ್ಲೂರು ಕಡೆಗಳಿಂದ ಎಲಗಿರಿಗೆ ಸಾಕಷ್ಟು ಬಸ್ಸುಗಳಿವೆ.

ಊಟ– ವಸತಿ

ಎಲಗಿರಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹೋಟೆಲ್‌ಗಳಿವೆ. ಸಸ್ಯಾಹಾರದ ಹೋಟೆಲ್‌ಗಳು ಕಡಿಮೆ. ಉಳಿದಂತೆ ವಾಸ್ತವ್ಯಕ್ಕೆ ಸಾಕಷ್ಟು ರೆಸಾರ್ಟ್‌ಗಳಿವೆ. ನಾವು ತಂಗಿದ್ದು ಸ್ಟರ್ಲಿಂಗ್ ರೆಸಾರ್ಟ್‌ನಲ್ಲಿ. ಕುಮಾರ ರಾಜಾ ಪ್ಯಾಲೇಸ್ ಎಂಬುದು ಇಲ್ಲಿನ ಮುಖ್ಯ ತಂಗುದಾಣ ಹಾಗೂ ಹೋಟೆಲ್. ಇಂಥ ರೆಸಾರ್ಟ್‌ಗಳು ಜೇಬಿಗೆ ಭಾರ ಎನ್ನಿಸುತ್ತವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು