ಸೋಮವಾರ, ಜೂನ್ 27, 2022
26 °C

'ನಮ್ ಊಟವೇ ಚಂದ' ದಕ್ಷಿಣ ಭಾರತದ ವಿವಿಧ ಬಗೆಯ ಊಟ!

ಶ್ರೀರಂಜನಿ Updated:

ಅಕ್ಷರ ಗಾತ್ರ : | |

Prajavani

ನಾವು ವರ್ಷಗಳ ಹಿಂದೆ ಒಂದು ವಾರ ಉತ್ತರ ಭಾರತದ ಗೋಲ್ಡನ್ ಟ್ರಯಾಂಗ್ಯುಲರ್ ಪ್ರವಾಸಕ್ಕೆ ಹೋಗಿದ್ದೆವು. ನಮ್ಮ ಪ್ರವಾಸ ನಿಶ್ಚಯವಾದಾಗ ಮಗಳು- ‘ಅಮ್ಮಾ, ನನಗೇನಿದ್ರೂ ಅಲ್ಲಿ ರೋಟಿ, ಕುಲ್ಚಾ, ಕರಿ. ಅಥೆಂಟಿಕ್ ಆಗಿ ಅಲ್ಲಿ ಮಾಡ್ತಾರೆ. ಹೀಗಾಗಿ ನೋ ಅನ್ನ, ಸಾರು’ ಅಂತ ತಾಕೀತು ಮಾಡಿದಳು. ‘ಆಯ್ತಮ್ಮಾ, ನಿಂಗೇನು ಬೇಕು ಅದನ್ನೇ ತಿನ್ನು, ಅದ್ರೆ ಹೊಟ್ಟೆ ಮಾತ್ರ ಹಾಳು ಮಾಡ್ಕೋಬೇಡ’ ಅಂತ ಒಪ್ಪಿಗೆ ಕೊಟ್ಟೆ. ಆದರೂ ಅವಳು ಹೇಳಿದ್ದನ್ನು ನೋಡಿಕೊಂಡು, ಯಾವುದಕ್ಕೂ ಇರಲಿ ಎಂದು ವಾಮಿಸ್ಟಾಪ್, ಓಆರ್‍ಎಸ್‌ನಂತಹ ಔಷಧಗಳನ್ನು ಬ್ಯಾಗ್‌ನಲ್ಲಿಟ್ಟುಕೊಂಡೆ.

ಮಟಮಟ ಮಧ್ಯಾಹ್ನ ವಿಮಾನ ದೆಹಲಿಯಲ್ಲಿ ಇಳಿಯಿತು. ಊಟಕ್ಕೆಂದು ಹೋಟೆಲ್ ಒಳಗೆ ಕಾಲಿಡುತ್ತಲೇ ‘ಅಮ್ಮಾ, ನೆನಪಿದೆ ಅಲ್ವಾ’ ಅಂದಳು. ‘ಸರಿ, ಆರ್ಡರ್‌ ಮಾಡು’ ಎಂದೆ. ರೋಟಿ, ಕರಿ ಬಂತು. ಈರುಳ್ಳಿ, ಸೌತೆಕಾಯಿ ಕಚ್ಚಿಕೊಳ್ಳುತ್ತಾ, ಚಪ್ಪರಿಸುತ್ತಿದ್ದಳು ಅವಳು. ಮುಂದಿನ ನಾಲ್ಕೂ ದಿನಗಳು ಆಲೂ ಪರಾಟಾ, ಆಚಾರಿ, ಫುಲ್ಕಾ.. ಹೀಗೆ ಅಲ್ಲಿನ ಆಹಾರ ತಿನ್ನುತ್ತಾ ಅನ್ನದ ಮುಖ ನೋಡದಂತಾಯಿತು. ಅಪರೂಪಕ್ಕೊಮ್ಮೆ ಅನ್ನ ಕಂಡರೂ ಅದು ಸರಿಯಾಗಿ ಬೆಂದಿರದೆ ಮೊಸರಿನಲ್ಲಿ ಕಲಿಸಿಕೊಂಡಾಗ ಅನ್ನ ಬೇರೆ ಮೊಸರು ಬೇರೆ ಆಗುತ್ತಿತ್ತು. ಅಗಿಯಲು ಬಲು ಕಷ್ಟವಾಗುತ್ತಿತ್ತು. ಹೀಗಾಗಿ ನಾವು ಕೂಡ ಅನ್ನವಿಲ್ಲದೆ ದಿನ ಕಳೆಯುವಂತಾಯಿತು.

ರಾಜಸ್ಥಾನದ ಜೈಪುರಕ್ಕೆ ಬಂದಾಗ ಪ್ರವಾಸ ಮುಗಿಯಲು ಕೊನೆ ಎರಡು ದಿನಗಳಿತ್ತು. ರಾತ್ರಿ ಊಟಕ್ಕೆ ಹೋಗುವಾಗ, ‘ಅಮ್ಮಾ ದಾರಿಯಲ್ಲಿ ಉಡುಪಿ ರೆಸ್ಟೋರೆಂಟ್ ಅಂತ ಬೋರ್ಡ್ ನೋಡಿದೆ’ ಅಂದಳು. ಯಾಕೋ ರೈಲು ಹಳಿಗೆ ಬರ್ತಾ ಇದೆ ಅನ್ನಿಸಿತು. ‘ಇಲ್ಲಿ ರಾಜಸ್ಥಾನಿ ಕಡಿ, ಕಿಚಡಿ, ಕಚೋರಿ, ಘೇವರ್ ಎಲ್ಲಾ ಅಥೆಂಟಿಕ್ ಆಗಿ ಇರುತ್ತೆ. ಕಡಿ ಇಲ್ಲಿದು ಸಿಗ್ನೇಚರ್ ಡಿಶ್’ ಎಂದೆ. ‘ಅಯ್ಯೋ ಅದು ನಮ್‌ ಸೆಂಟ್ರಲ್ ಮಾಲ್‌ನಲ್ಲೂ ಸಿಗುತ್ತೆ’ ಎಂದಳು ಮಗಳು. ಮರುದಿನ ‘ಸೌತ್ ಇಂಡಿಯನ್ ರೆಸ್ಟೋರೆಂಟ್ ನಿಯರ್ ಬೈ ಮಿ’ ಎಂದು ಸರ್ಚ್ ಮಾಡುತ್ತಿದ್ದಳು. ‘ಹುರ‍್ರಾ.. ದಾಸ್ ಪ್ರಕಾಶ್ ಇಲ್ಲೆ 2ಕಿ.ಮೀ ದೂರದಲ್ಲಿದೆ’– ಎಂದು ಖುಷಿಯಿಂದ ಕೂಗಿದಳು. ಆವತ್ತು ವರ್ಷದ ಕೊನೇ ದಿನ. ‘ಇವತ್ತು ಪಾರ್ಟಿ’ ಎಂದು ಮಸಾಲಾ ದೋಸೆ, ಇಡ್ಲಿ ಎಂದು ಎರಡೆರಡು ಸಾರಿ ಆರ್ಡರ್ ಮಾಡಿದ್ದೇ ಮಾಡಿದ್ದು. ಎಲ್ಲರ ಬಟ್ಟಲಲ್ಲೂ ಸೌತ್ ಇಂಡಿಯನ್ ಥಾಲಿ ರಾರಾಜಿಸುತ್ತಿತ್ತು.

ಆಹಾಹಾ, ಅನ್ನ ಸಾರು, ಹುಳಿ ಕಾಣದೆ ಎಷ್ಟು ದಿನವಾಗಿತ್ತೋ(ಆಗಿದ್ದು ಬರೀ 4ದಿನಗಳು ಮಾತ್ರ!) ಎಂದು ಬರಗೆಟ್ಟವರಂತೆ ಚಪ್ಪರಿಸಿದ್ದೇ ಚಪ್ಪರಿಸಿದ್ದು. ಅವಳೊಬ್ಬಳು ಮಾತ್ರವಲ್ಲ, ನಾವೆಲ್ಲ. ‘ಏನೇ ಹೇಳಿ ನಮ್ಮ ದಕ್ಷಿಣದ ಆಹಾರದ ರುಚಿ ಉತ್ತರದವರಿಗೆ ಬಾರದು’ ಎಂದು ಗೊಣಗಿದರು ನನ್ನವರು. ಹೋಟೆಲ್‌ನಿಂದ ಹೊರಬೀಳುವಾಗ ‘ಡರ್’ ಎಂಬ ಸಂತೃಪ್ತಿಯ ತೇಗು ‘ನಮ್ಮ ಅಡುಗೆ ನಮಗೆ ರುಚಿ’ ಎಂಬುದಕ್ಕೆ ಹೆಬ್ಬೆಟ್ಟು ಒತ್ತಿತ್ತು !

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು