ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿನ್‍ಲ್ಯಾಂಡ್‌: ಸುಂದರ ದೇಶ ಸುಂದರಿಯರ ವಶ!

Last Updated 18 ಜುಲೈ 2020, 19:30 IST
ಅಕ್ಷರ ಗಾತ್ರ

ಯೂರೋಪ್‌ ಖಂಡದ ಉತ್ತರಕ್ಕೆ ಒಂದು ಸಣ್ಣ ದೇಶವಿದೆ. ಅದೇ ಫಿನ್‍ಲ್ಯಾಂಡ್‌. ಅದನ್ನು ನೋಡಿದ ಯಾರು ಬೇಕಾದರೂ, ಅದು ಫಿನ್‍ಲ್ಯಾಂಡ್‌ ಅಲ್ಲ; ಫೈನ್‌ಲ್ಯಾಂಡ್‌ ಎಂದು ಉದ್ಘರಿಸುತ್ತಾರೆ. ಏಕೆಂದರೆ ಅದು ಅಷ್ಟು ಸುಂದರವಾಗಿದೆ. ಪ್ರಾಕೃತಿಕ ನೈಜತೆಯನ್ನು ತನ್ನ ಒಡಲಲ್ಲಿ ಉಳಿಸಿಕೊಂಡಿದೆ. ಫಿನ್‍ಲ್ಯಾಂಡ್‌ಗೆ ಇನ್ನೊಂದು ಅಡ್ಡ ಹೆಸರೂ ಇದೆ. ಅದು ‘ಸಾವಿರ ಸರೋವರಗಳ ನಾಡು’ ಎಂಬುದು. ಅಲ್ಲಿ 60 ಸಾವಿರಕ್ಕೂ ಹೆಚ್ಚು ಸರೋವರಗಳಿವೆ. ಇಡೀ ದೇಶದ ಶೇಕಡ 10ರಷ್ಟು ಕ್ಷೇತ್ರದಲ್ಲಿ ಸರೋವರಗಳು ಇವೆಯಂತೆ.

ಬರೀ ಸರೋವರಗಳಲ್ಲ ಇಡೀ ದೇಶವೇ ಪ್ರಾಕೃತಿಕ ಸೌಂದರ್ಯದಿಂದ ತುಂಬಿ ತುಳುಕಾಡುತ್ತದೆ. ಅದಕ್ಕೆ ಕಾರಣ ಅಲ್ಲಿನ ಕಡಿಮೆ ಜನಸಂಖ್ಯೆ. ಕಡಿಮೆ ಜನ, ಹೆಚ್ಚು ನಿಸರ್ಗ ಎಂದರೆ ಸುಂದರವಾಗದೇ ಇರುತ್ತದೆಯೇ! ನಿಸರ್ಗದ ನಾಶಕ್ಕೆ ಮನುಷ್ಯನ ಹಸ್ತಕ್ಷೇಪವೇ ಪ್ರಮುಖ ಕಾರಣ. ಅದು ಫಿನ್‍ಲ್ಯಾಂಡ್‌ನ‌ಲ್ಲಿ ತೀರಾ ಕಡಿಮೆ ಇದೆ. ಅಲ್ಲಿ ಬೇಸಾಯಕ್ಕೆ ಬಳಕೆಯಾದ ಭೂಮಿ ಇಲ್ಲವೇ ಇಲ್ಲ ಎನ್ನುವಷ್ಟು ಇದೆಯಂತೆ. ಶೇಕಡ 78ರಷ್ಟು ನೆಲವನ್ನು ಕಾಡೇ ಆವರಿಸಿದೆ. ಕಾಡೆಂದರೆ ಕುರುಚಲ ಕಾಡಲ್ಲ; ದಟ್ಟವಾದ ಕಾಡು. ಜನಸಂಖ್ಯೆ ಸುಮಾರು 55 ಲಕ್ಷ.

ಇದೇನೂ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ ಹೊಸ ದೇಶವಲ್ಲ. 1917ರಲ್ಲಿಯೇ ರಷ್ಯಾದ ಮುಷ್ಟಿಯಿಂದ ಬಿಡಿಸಿಕೊಂಡು ಸ್ವತಂತ್ರವಾಯಿತು. ಈ ದೇಶಕ್ಕೆ ಶತಮಾನಕ್ಕೂ ಮೀರಿದ ಇತಿಹಾಸ ಇದೆ. ಈ ಸುಂದರ ದೇಶಕ್ಕೂ ಈ ಸುಂದರಿಯರಿಗೂ ಒಂದು ಬಗೆಯ ಅವಿನಾಭಾವ ಸಂಬಂಧ. ಇಡೀ ಜಗತ್ತಿನಲ್ಲಿ ಫಿನ್‍ಲ್ಯಾಂಡ್‌ ತನ್ನ ಪಾರ್ಲಿಮೆಂಟ್‌ಗೆ ಮಹಿಳೆಯರನ್ನು ಆರಿಸಿ ಕಳಿಸಿದ ಮೊದಲ ದೇಶ ಎಂಬ ಕೀರ್ತಿಗೆ ಭಾಜನವಾಗಿದೆ. ಆ ನಂತರ ಈ ದೇಶವನ್ನು ಇಬ್ಬರು ಮಹಿಳೆಯರು ಎರಡು ಚಿಕ್ಕ ಅವಧಿಗೆ ಪ್ರಧಾನಮಂತ್ರಿಗಳಾಗಿ ಆಳಿದ್ದರು ಎಂಬುದು ಉಲ್ಲೇಖನಾರ್ಹ.

ಆ ದೇಶದ ಮಹಿಳಾ ಪ್ರಾತಿನಿಧ್ಯದ ಸಂಪ್ರದಾಯವನ್ನು ಮುನ್ನಡೆಸಲು, ಸನ್ನಾ ಮರಿನ್ ಎಂಬ ಮಹಿಳೆ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾಳೆ. ಆಕೆ ಆ ದೇಶದ ಮೂರನೇಯ ಮಹಿಳಾ ಪ್ರಧಾನ ಮಂತ್ರಿ. 5 ಬೇರೆ ಬೇರೆ ಪಕ್ಷಗಳ, ಸಂಯುಕ್ತ ಸರ್ಕಾರದ ನಾಯಕಿಯಾಗಿ ಹೊರಹೊಮ್ಮಿದ್ದೊಂದು ವಿಶೇಷವೇ! ಸದ್ಯದ ಸರ್ಕಾರ ಪ್ರತಿನಿಧಿಸುವ ಆ ಐದೂ ಪಕ್ಷಗಳ ನಾಯಕರು ಮಹಿಳೆಯರೇ ಎಂಬುದು ವಿಶೇಷ. ಅವರಲ್ಲಿ ನಾಲ್ವರು 35 ವರ್ಷ ವಯೋಮಿತಿಯಲ್ಲಿ ಇರುವವರು. ಮರಿನ್ ಸಚಿವ ಸಂಪುಟದಲ್ಲಿ ಇರುವ 19 ಜನ ಮಂತ್ರಿಗಳಲ್ಲಿ 7 ಜನ ಮಾತ್ರ ಪುರುಷರು. ಉಳಿದವರು ಸ್ತ್ರೀಯರು.

ಸನ್ನಾ ಮರಿನ್ ರಾಜಕೀಯ ಕುಟುಂಬದಿಂದ ಬಂದವಳಲ್ಲ. ಹಣವಂತಳೂ ಅಲ್ಲ. ಹಳ್ಳಿಯ ತೀರ ಬಡ ಕುಟುಂಬದಿಂದ ಬಂದು, ಹಲವು ಸಂಕಷ್ಟಗಳನ್ನು ಎದುರಿಸಿ ಈ ಎತ್ತರಕ್ಕೆ ಏರಿದ್ದು ನಿಜಕ್ಕೂ ಕುತೂಹಲಕರ ಸಂಗತಿ. ಸನ್ನಾ ಚಿಕ್ಕವಳಿದ್ದಾಗಲೇ ಅವಳ ತಂದೆ-ತಾಯಿ ಬೇರೆಯಾದರು. ‘ಅಪ್ಪನ ವಿಪರೀತ ಕುಡಿತವೇ ಅದಕ್ಕೆ ಕಾರಣ’ ಎಂದು ಸನ್ನಾ ಒಂದೆಡೆ ಹೇಳಿಕೊಂಡಿದ್ದಾಳೆ. ‘ನಮ್ಮ ಮನೆಯಲ್ಲಿ ಸಾಕಷ್ಟು ಹಣವಿರಲಿಲ್ಲ. ಆದರೆ ನನಗೆ ನಮ್ಮ ಮನೆಯಿಂದ ದೊರೆತ ಪ್ರೀತಿಗೇನೂ ಕೊರತೆ ಇರಲಿಲ್ಲ’ ಎಂದು ಅವಳೇ ಬರೆದುಕೊಂಡಿದ್ದಾಳೆ.

15 ವರ್ಷದವಳಿದ್ದಾಗಲೇ ಸನ್ನಾ ಬೇಸಿಗೆ ರಜೆಯಲ್ಲಿ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಹೈಸ್ಕೂಲ್‌ ಸೇರಿದ ಮೇಲೆ ಮನೆ ಮನೆಗೆ ಪತ್ರಿಕೆಗಳನ್ನು ಹಾಕುತ್ತಿದ್ದಳು. ಪದವೀಧರೆಯಾದ ಮೇಲೆ ಕ್ಯಾಶಿಯರ್ ಆಗಿ ಕೆಲಸ ಮಾಡಿದಳು. 20ನೇ ವರ್ಷಕ್ಕೇ ರಾಜಕೀಯದಲ್ಲಿ ಸಕ್ರಿಯಳಾದಳು. 27ನೇ ವಯಸ್ಸಿಗೆ ಟೆಂಪರ್ ಎಂಬ ಪಟ್ಟಣದ ಅಧ್ಯಕ್ಷಳಾದಳು. ಮೂರು ವರ್ಷಗಳ ನಂತರ ಫಿನ್‌ಲ್ಯಾಂಡ್‌ ದೇಶದ ಸಂಸತ್ ಸದಸ್ಯೆಯಾದಳು. ಆಮೇಲೆ ಮಂತ್ರಿಯೂ ಆದಳು. ಈಗ ಅವಳು ಆ ದೇಶದ ಪ್ರಧಾನ ಮಂತ್ರಿ. ಅಷ್ಟೇ ಅಲ್ಲ ಇಡೀ ವಿಶ್ವದ ಅತ್ಯಂತ ಕಿರಿಯ ವಯಸ್ಸಿನ ಮಹಿಳಾ ಪ್ರಧಾನಿ ಎಂಬ ಕೀರ್ತಿಯನ್ನೂ ಪಡೆದಿದ್ದಾಳೆ.

ಅವಳ ಜತೆಗೆ ಅವಳ ಮಂತ್ರಿಮಂಡಲದಲ್ಲಿ 12 ಜನ ಸುಂದರಿಯರಿದ್ದಾರೆ. ಸುಂದರ ದೇಶ, ಸುಂದರಿಯರ ಕೈವಶವಾಗುವ ಮೂಲಕ ತನ್ನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ ಎಂದು ಹೇಳಬಹುದು. ಅಷ್ಟೇ ಅಲ್ಲ ಆ ಸುಂದರಿಯರ ಸಾಧನೆ ಇಡೀ ಜಗತ್ತಿನ ಮಹಿಳಾ ಲೋಕಕ್ಕೊಂದು ಹೆಮ್ಮೆಯ ಗರಿಯನ್ನು ಮೂಡಿಸಿದೆ. ನಾರಿಲೋಕ ಇನ್ನಾರಿಗೂ ಕಡಿಮೆ ಇಲ್ಲ ಎಂಬುದನ್ನು ಸಾಬೀತುಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT