ಶುಕ್ರವಾರ, ಡಿಸೆಂಬರ್ 13, 2019
24 °C

ಕಾಡಿನ ಮಡಿಲಲ್ಲಿ ದೇವಾಲಯಗಳ ಬೀಡು ಶಿವಮೊಗ್ಗದ ಹೊಸಗುಂದ

ಎನ್.ಡಿ.ಹೆಗಡೆ Updated:

ಅಕ್ಷರ ಗಾತ್ರ : | |

ಆರುನೂರು ಎಕರೆಯಲ್ಲಿರುವ ದೇವರ ಕಾಡು, ಒಂದೇ ತಾಣಗಳಲ್ಲಿ ವಿಭಿನ್ನ ಶಿಲ್ಪಗಳ ದೇಗುಲಗಳು, ಶಾಸನಗಳ ಸಾಲು, ಬೃಹತ್ ಗಾತ್ರದ ನೂರಾರು ವರ್ಷಗಳಷ್ಟು ವಯಸ್ಸಾದ ಮರಗಳ ಗುಚ್ಛ..

ಇದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿರುವ ಐತಿಹಾಸಿಕ ಶಿಲಾದೇಗುಲದ ತಾಣ ಹೊಸಗುಂದ ಗ್ರಾಮದಲ್ಲಿ ಕಾಣುವ ಪರಿಸರ ವೈವಿಧ್ಯ.

ಇಲ್ಲಿ ಆರುನೂರು ಎಕರೆಯ ದೇವರ ಕಾಡಿದೆ. ಕಾಡಿನ ಮಡಿಲಲ್ಲಿ ಐತಿಹಾಸಿಕ ಶಿಲಾದೇಗುಲಗಳಿವೆ. ಮುಖ್ಯ ಆಲಯವಾದ ಉಮಾಮಹೇಶ್ವರ ದೇಗುಲ. ಇದು ಹೊಯ್ಸಳ ಶೈಲಿಯದ್ದು. ಈ ದೇವಾಲಯ ಮುಖಮಂಟಪ, ನವರಂಗ, ಗರ್ಭಗುಡಿ ಮತ್ತು ಪ್ರದಕ್ಷಿಣಾ ಪಥಗಳನ್ನು ಹೊಂದಿದೆ. ಮುಖಮಂಟಪದಲ್ಲಿ 20 ಕಂಬಗಳಿದ್ದು, ಮೂರು ಕಡೆಯಿಂದ ದ್ವಾರಗಳಿವೆ. ನವರಂಗದ ದ್ವಾರಕ್ಕೆ ಜಾಲಂಧ್ರಗಳಿದ್ದು, ಬದಿಯಲ್ಲಿ ಕಿಟಕಿಯಂತಹ ರಚನೆಯಿದೆ.

ಉಮಾಮಹೇಶ್ವರ ದೇಗುಲವಲ್ಲದೇ ಇಲ್ಲಿ ಕಲ್ಯಾಣ ಚಾಲುಕ್ಯರ ಶೈಲಿಯ ವೀರಭದ್ರ ದೇಗುಲ, ಕೇರಳ ಶೈಲಿಯಲ್ಲಿ ಲಕ್ಷ್ಮೀಗಣಪತಿ ದ್ರಾವಿಡ ಶೈಲಿ ಮತ್ತು ಕಂಚಿಕಾಳಮ್ಮ ದೇವಾಲಯವನ್ನೂ ನಿರ್ಮಿಸಿದ್ದಾರೆ. ಅಲ್ಲದೆ ಒಂದೇ ಸ್ಥಳದಲ್ಲಿ ಈ ಎಲ್ಲ ದೇವರ ದರ್ಶನ ಮತ್ತು ಪೂಜೆಯ ಭಾಗ್ಯ ಸಿಗುತ್ತದೆ. ಹೀಗಾಗಿ ಇದೊಂದು ಶಾಸನ, ಇತಿಹಾಸ ಅಧ್ಯಯನಕಾರರಿಗೆ, ಪ್ರವಾಸಿಗರಿಗೆ ಅತ್ಯಂತ ಆಪ್ತತೆಯ ತಾಣ.

ಸ್ಥಳ ಇತಿಹಾಸ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಗಡಿಭಾಗದಲ್ಲಿರುವ ಜೈನ ಧರ್ಮದ ಅತಿಶಯ ಮಹಾಕ್ಷೇತ್ರ ಹೊಂಬುಜ(ಹುಂಚ)ದ ಅರಸರು ಹೊಸಗುಂದ ಅರಸರ ಮೂಲ. ಶ್ರೀಬಿಲ್ಲೇಶ್ವರ ಪಾದ ಪದ್ಮಾರಾಧಕರಾದ ಹುಂಚದ ಶಾಂತರಸ ವಂಶಸ್ಥರ ಕುಟುಂಬದವರು ಒಂದು ಭಾಗವಾಗಿ ಕ್ರಿ.ಶ.900 ರ ಸುಮಾರಿನಲ್ಲಿ ಹೊಸಗುಂದಕ್ಕೆ ಬಂದರು. ಇಲ್ಲಿ ರಾಜ್ಯಕಟ್ಟಿ ಸುಮಾರು 300 ವರ್ಷಗಳ ಕಾಲ ಆಡಳಿತ ನಡೆಸಿದ್ದರು. ಕ್ರಿ.ಶ.1110 ರಿಂದ 1130 ರ ಅವಧಿಯಲ್ಲಿ ಹೊಸಗುಂದ ಅರಸರ ಆಳ್ವಿಕೆಯ ಪರ್ವ ಕಾಲವಾಗಿತ್ತು ಎಂದು ಇತಿಹಾಸಕಾರರು ದೃಢಪಡಿಸಿದ್ದಾರೆ.

ಇತಿಹಾಸಕ್ಕೆ ಸಂಬಂಧಿಸಿದಂತೆ ಹಲವು ಬಗೆಯ ಶಿಲಾ ಶಾಸನಗಳು ಇಲ್ಲಿ ದೊರೆತಿವೆ. ಈ ಬಗ್ಗೆ ಇನ್ನಷ್ಟು ಅಧ್ಯಯನ ನಡೆಯಬೇಕಾಗಿದೆ. ಐತಿಹಾಸಿಕ ಸ್ಮಾರಕಗಳು, ಕೋಟೆ ಸುತ್ತಲಿನ ಅಗಳ, ಭೂಮಿಯಲ್ಲಿ ಹೂತಿರುವ ಶಿಲಾ ಕಲ್ಲುಗಳು, ನೆಲಗಟ್ಟುಗಳು ಎಲ್ಲವೂ ಇನ್ನಷ್ಟು ಆಳ ಅಧ್ಯಯನಕ್ಕೆ ಯೋಗ್ಯವಾಗಿವೆ.

ಇದನ್ನೂ ಓದಿ: ಧುಮ್ಮಿಕ್ಕುವ ಜಲಪಾತ ಜೋಗ

ಇಲ್ಲಿನ ದೇವರ ಕಾಡಿನಲ್ಲಿ ಮುಗಿಲೆತ್ತರದ ಮರಗಳಿವೆ. ದೇಗುಲ ಸನಿಹದಲ್ಲಿರುವ ಮಾವಿನ ಮರವೊಂದು ಎಷ್ಟು ಬೃಹತ್‌ ಆಗಿದೆ ಎಂದರೆ, ಆ ಮರದ ಕಾಂಡವನ್ನು ಆರು ಮಂದಿ ಕೈ ಸರಪಳಿ ಮಾಡಿ ತಬ್ಬಿಕೊಳ್ಳುವಷ್ಟು ದೊಡ್ಡದಾಗಿದೆ.  500 ವರ್ಷಗಳಷ್ಟು ಹಳೆಯದಾದ ಗಣಪೆ ಬಳ್ಳಿ, ಅಷ್ಟೇ ವರ್ಷಗಳಷ್ಟು ಹಿರಿಯದಾದ ಮರಗಳು ಇವೆ.

ಪರಿಸರ ಸಂರಕ್ಷಣೆ ಕಾರ್ಯ

ಇಲ್ಲಿನ ಶ್ರೀಉಮಾಮಹೇಶ್ವರ ಸೇವಾ ಟ್ರಸ್ಟ್ ಹಲವು ಬಗೆಯ ಪರಿಸರ ಸಂರಕ್ಷಣಾ ಕಾರ್ಯ ನಡೆಸುತ್ತಾ ಬಂದಿದೆ. ನಿರಂತರ 5 ವರ್ಷಗಳ ಕಾಲ ಪ್ರತಿ ವರ್ಷ 108 ಜಾತಿಯ 108 ಸಸಿ ನೆಡುವ ಹಸಿರೀಕರಣ ಕಾರ್ಯ ಮುಂದುವರಿದಿದೆ. ಪರಿಸರ ಕಾರ್ಯಕರ್ತರು, ಜಲತಜ್ಞರು ಇಲ್ಲಿಗೆ ಭೇಟಿ ನೀಡಿ ಕಾರ್ಯಕ್ರಮ ನೀಡಿದ್ದಾರೆ. ಅರಣ್ಯ ಇಲಾಖೆಯ ಸಹಯೋಗದಲ್ಲಿ ಅಲ್ಲಲ್ಲಿ ಇಂಗುಗುಂಡಿ, ಚೆಕ್‌ಡ್ಯಾಂ ನಿರ್ಮಿಸಲಾಗಿದೆ. ಜಲ ಮರುಪೂರಣ, ಇಂಗುಗುಂಡಿ, ಮದಕ, ಜಲಪಾತ್ರೆ ಇತ್ಯಾದಿ ನಿರ್ಮಿಸಲಾಗಿದ್ದು ಪರಿಸರ ಸಂರಕ್ಷಣೆಯ ಬಹುದೊಡ್ಡ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ.

ಒಂದು ಕಡೆ ದೇವಾಲಯಗಳ ಬೀಡು, ಇನ್ನೊಂದೆಡೆ ದೇವರ ಕಾಡು, ಜತೆಗೆ, ಐತಿಹಾಸಿಕ ಮಾಹಿತಿ ನೀಡುವ ಶಾಸನಗಳು, ಜತೆಗೆ ಆಹ್ಲಾದಕರ ವಾತಾವರಣದಿಂದಾಗಿ ಹೊಸಗುಂದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಹೋಗುವುದು ಹೇಗೆ?

ಶಿವಮೊಗ್ಗ-ಸಾಗರ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಐಗಿನಬೈಲು ಗ್ರಾಮದ ಕೊನೆಯ ತಿರುವಿನಿಂದ ಮೂರು ಕಿ.ಮೀ.ದೂರದಲ್ಲಿ ಹೊಸಗುಂದವಿದೆ. ಶಿವಮೊಗ್ಗದಿಂದ 60 ಕಿ.ಮೀ. ಸಾಗರದಿಂದ 16 ಕಿ. ಮೀ.

ಬೆಂಗಳೂರಿಂದ ಶಿವಮೊಗ್ಗ ಮತ್ತು ತಾಳಗುಪ್ಪಕ್ಕೆ ರೈಲು ಸೌಲಭ್ಯವಿದೆ. ಬೆಂಗಳೂರು-ಶಿವಮೊಗ್ಗ –ತಾಳಗುಪ್ಪ ಮಾರ್ಗದಲ್ಲಿ ಆನಂದಪುರಂ ನಿಲ್ದಾಣವಿದೆ. ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಕ್ರಮಿಸಿದರೆ 11 ಕಿ.ಮೀ ದೂರದಲ್ಲಿದೆ. ಸಾಕಷ್ಟು ಬಸ್‌ಗಳೂ ಇವೆ.

ನ.16ರಿಂದ ಹೊಸಗುಂದ ಉತ್ಸವ

ಐತಿಹ್ಯಗಳ ಖಜಾನೆ, ಕಲೆ – ಸಂಸ್ಕೃತಿಯ ನೆಲೆಯಾಗಿರುವ ಹೊಸಗುಂದವನ್ನು ನಾಡಿಗೆ ಪರಿಚಯಿಸುವುದಕ್ಕಾಗಿ ಇದೇ ಮೊದಲ ಬಾರಿಗೆ ‘ಹೊಸಗುಂದ ಉತ್ಸವ’ವನ್ನು ಆಯೋಜಿಸಲಾಗುತ್ತಿದೆ.

ನ.16 ರಿಂದ 18ರ ವರೆಗೆ ಮೂರುದಿನಗಳ ಕಾಲ ಈ ಉತ್ಸವ ನಡೆಯಲಿದೆ. ಉತ್ಸವದಲ್ಲಿ ಕಲೆ, ಸಂಸ್ಕೃತಿ, ಜಾನಪದ, ಆಯುರ್ವೇದ, ಆಹಾರ, ಆರೋಗ್ಯ ವಿಷಯಗಳ ಕುರಿತು ಕಾರ್ಯಕ್ರಮಗಳಿವೆ.  

ಈ ಸಮಯದಲ್ಲಿ ಹೊಸಗುಂದಕ್ಕೆ ಭೇಟಿ ನೀಡಿದರೆ, ಪ್ರವಾಸವೂ ಆಯಿತು, ಉತ್ಸವವನ್ನು ನೋಡಿದಂತಾಗುತ್ತದೆ.

ಚಿತ್ರಗಳು: ಲೇಖಕರವು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು