ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸದ ಸುಖವೂ.. ಕಚೇರಿ ಕೆಲಸವೂ..

Last Updated 28 ಆಗಸ್ಟ್ 2020, 19:45 IST
ಅಕ್ಷರ ಗಾತ್ರ

ಮಡಿಕೇರಿ ಬಳಿ ಹೋಂ ಸ್ಟೇ ಹೊಂದಿರುವ ಧೀರಜ್ ಸೋಮಣ್ಣ ಕಳೆದ ಮಾರ್ಚ್‌ನಲ್ಲಿ ಲಾಕ್‌ಡೌನ್‌ ಆದಾಗಿನಿಂದ ಯಾವ ಪ್ರವಾಸಿಗರೂ ಇಲ್ಲದೇ ಚಿಂತೆಗೀಡಾಗಿದ್ದರು. ಆದರೆ ಕಳೆದ ಜೂನ್‌ ಕೊನೆಯ ವಾರದಲ್ಲಿ ಬೆಂಗಳೂರು ಮಾತ್ರವಲ್ಲ, ಹುಬ್ಬಳ್ಳಿ, ಮಂಗಳೂರು, ಕೇರಳದಿಂದಲೂ ಬುಕಿಂಗ್ ಕುರಿತಂತೆ ಫೋನ್‌ ಕರೆಗಳು ಬರಲಾರಂಭಿಸಿದವು. ದೊಡ್ಡ ದೊಡ್ಡ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದವರು ಕೆಲಸದ ಜೊತೆ ವಿರಾಮ ಬಯಸಿ ಇಂತಹ ಹೋಂ ಸ್ಟೇಗಳಲ್ಲಿ ಉಳಿದುಕೊಳ್ಳಲು ಬಯಸಿದ್ದು ಸೋಮಣ್ಣನಲ್ಲಿ ಉತ್ಸಾಹ ಮೂಡಿಸಿತ್ತು; ಕೊಠಡಿಗಳಿಗೆ ಸಣ್ಣಪುಟ್ಟ ಬದಲಾವಣೆ ಮಾಡಿ, ಹೈ ಸ್ಪೀಡ್‌ ಇಂಟರ್‌ನೆಟ್‌ನ ಅನುಕೂಲವನ್ನೂ ಒದಗಿಸಿಕೊಟ್ಟರು.

ಬೆಂಗಳೂರಿನಂತಹ ನಗರಗಳಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಜಾಸ್ತಿಯಾಗುತ್ತಿದ್ದು, ಆಗಾಗ ಪ್ರವಾಸ ಮಾಡುವಂಥವರಿಗೆ ಎಲ್ಲಿಯೂ ಹೋಗಲು ಸಾಧ್ಯವಾಗದೇ ಕಟ್ಟಿ ಹಾಕಿದಂತಾಗಿದೆ. ದೂರದ ಪ್ರಯಾಣವಂತೂ ಸಾಧ್ಯವಿಲ್ಲ. ಹೀಗಾಗಿ ಕಾರಿನಲ್ಲಿ ಪಯಣಿಸುವಂತಹ ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡದಂತಹ ಪ್ರವಾಸಿ ತಾಣಗಳಿಗೆ ಕಾರ್ಪೊರೇಟ್‌ ವಲಯದ ಉದ್ಯೋಗಿಗಳು ಭೇಟಿ ನೀಡುವುದು, ವಾರಗಟ್ಟಲೆ ಅಲ್ಲಿಂದಲೇ ಕಚೇರಿ ಕೆಲಸ ಮಾಡುವುದು (ವರ್ಕ್‌ ಮತ್ತು ವೆಕೇಶನ್‌– ವರ್ಕೇಶನ್‌) ಇತ್ತೀಚಿನ ಟ್ರೆಂಡ್‌.

‘ತಿಂಗಳಿಗೊಮ್ಮೆ ವಾರಾಂತ್ಯದಲ್ಲಿ ಎರಡು ದಿನ ಕುಟುಂಬದ ಜೊತೆ ಸಣ್ಣ ಪ್ರವಾಸ ಮಾಡುವುದು ಕಳೆದ 2–3 ವರ್ಷಗಳಿಂದ ರೂಢಿ. ಇದು ಒಂದು ರೀತಿಯ ಒತ್ತಡ ನಿವಾರಕ (ಸ್ಟ್ರೆಸ್‌ ಬಸ್ಟರ್‌). ಪ್ರವಾಸ ಮಾಡದೇ ಒಂದೇ ಸಮನೆ ಕೆಲಸ ಮಾಡುತ್ತಿದ್ದರೆ, ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ’ ಎನ್ನುತ್ತಾರೆ ಕಂಪನಿಯೊಂದರ ಲೀಗಲ್‌ ಕನ್ಸಲ್ಟೆಂಟ್‌ ಅನಿರುದ್ಧ ಐತಾಳ್‌.

ಮನಸ್ಸಿಗೆ ಆಹ್ಲಾದ ನೀಡುವ ಪ್ರವಾಸ, ಓಡಾಟಕ್ಕೆ ಕಡಿವಾಣ ಹಾಕಿದ್ದು ಕೋವಿಡ್‌–19. ಈ ಸಂದರ್ಭದಲ್ಲಿ ಆತಂಕ, ಖಿನ್ನತೆ, ಗಾಬರಿ ಹೆಚ್ಚಿನವರಲ್ಲಿ ಕಂಡು ಬಂದಿದೆ. ಇವೆಲ್ಲದರಿಂದ ಆಚೆ ಬರಬೇಕಾದರೆ, ಒಂದಿಷ್ಟು ಬದಲಾವಣೆ ಬೇಕು. ಅದು ಪ್ರವಾಸದಿಂದ ಸಾಧ್ಯ ಎನ್ನುತ್ತಾರೆ ತಜ್ಞರು.

ಪ್ರವಾಸದ ಜೊತೆ ಕೆಲಸ
ಪ್ರವಾಸಕ್ಕೆ ಬೇಕಾದ ಸಾಮಗ್ರಿಗಳ ಜೊತೆ ಯಾವುದೇ ಅಡಚಣೆಯಿಲ್ಲದೇ ಕಚೇರಿ ಕೆಲಸ ಮಾಡಲು ಸಲಕರಣೆಗಳನ್ನು ಹೊಂದಿಸಿಕೊಂಡು ಈ ರೀತಿಯ ಪ್ರವಾಸ ಕಮ್‌ ಕೆಲಸಕ್ಕೆ ಹೊರಡಬಹುದು. ಕೊಡಗಿನ ರಿಮ್‌– ಜಿಮ್‌ ಮಳೆಯ ನಿನಾದಕ್ಕೆ ನಿಮ್ಮ ಲ್ಯಾಪ್‌ಟಾಪ್‌ ಕೀ ಬೋರ್ಡ್‌ನ ಟಕ ಟಕ ಸದ್ದು ಸೇರಿಸಬಹುದು. ಬಿಸಿ ಕಾಫಿಯ ಹೊಗೆಗೆ ಕಿಟಕಿಯಾಚೆ ಕಾಣುವ ಮಳೆಯಿಂದೆದ್ದ ಕಾವಳವನ್ನು ಜೋಡಿ ಮಾಡಬಹುದು.

‘ಮುಂಚೆ ಕಂಪನಿಯ ಮೀಟಿಂಗ್‌ಗೆಂದು ಉದ್ಯೋಗಿಗಳು ಬರುತ್ತಿದ್ದರು. ಆದರೆ ಈಗ ಕಂಪನಿಯ ಅಧಿಕಾರಿಗಳು ತಮ್ಮ ಕುಟುಂಬದವರ ಜೊತೆ ಬರುತ್ತಿದ್ದಾರೆ. ಅವರಿಗೆ ಬೇಕಿರುವುದು ತಡೆಯಿಲ್ಲದ ಇಂಟರ್‌ನೆಟ್‌ ಸೌಲಭ್ಯ. ಇಷ್ಟು ದಿನ ಬ್ಯುಸಿನೆಸ್‌ ಇಲ್ಲದೇ ನಷ್ಟ ಅನುಭವಿಸಿದ್ದೇವೆ. ಈಗ ಇಂತಹ ಪ್ರವಾಸಿಗರಿಂದ ಕೊಂಚ ಸುಧಾರಿಸಿಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ಚಿಕ್ಕಮಗಳೂರಿನ ಹೋಂ ಸ್ಟೇ ಒಂದರಒಡತಿ ಶೃತಿ ಗೌಡ.

ಈ ಹಿಂದೆ ಪ್ರವಾಸಕ್ಕೆಂದು ಬರುವವರು, ಮೀಟಿಂಗ್‌ಗೆಂದು ಸೇರುವವರು ಎರಡು ದಿನವಿದ್ದರೆ ಅದೇ ಹೆಚ್ಚು. ಆದರೆ ಈಗ ಪ್ರವಾಸಿ ತಾಣಗಳಿಂದಲೇ ಕೆಲಸ ನಿರ್ವಹಿಸುವವರು ವಾರಗಟ್ಟಲೆ ಉಳಿದುಕೊಳ್ಳುತ್ತಾರೆ. ದಕ್ಷಿಣದಲ್ಲಿ ಕರ್ನಾಟಕದ ಕೊಡಗು, ಚಿಕ್ಕಮಗಳೂರು ಬಿಟ್ಟರೆ ಗೋವಾ, ಕೇರಳದ ಅಲೆಪ್ಪಿ, ತೆಕ್ಕಡಿ, ಮೂನಾರ್‌, ತಮಿಳುನಾಡಿನ ಊಟಿ ಈ ತರಹದ ‘ವರ್ಕ್‌ ಫ್ರಂ ಪ್ರವಾಸಿ ತಾಣ’ಗಳಾಗಿ ಹೊರಹೊಮ್ಮಿವೆ.

ಸ್ಥಳೀಯರ ಮತ್ತು ಪ್ರವಾಸಿಗರ ಹಿತದೃಷ್ಟಿಯಿಂದ ಹೊರಗಡೆ ಸುತ್ತಾಟಕ್ಕೆ ಅಷ್ಟು ಅವಕಾಶವಿಲ್ಲ ಎನ್ನುತ್ತಾರೆ ಅನಿರುದ್ಧ. ಆದರೆ ಆಯುರ್ವೇದ ಮಸಾಜ್‌, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಿದ್ದಾರೆ. ವಿಶೇಷವಾದ ಕಷಾಯಗಳನ್ನು ಕೂಡ ಪೂರೈಸುತ್ತಾರೆ ಎಂದು ಅವರು ವಿವರಿಸುತ್ತಾರೆ. ಮಕ್ಕಳನ್ನೂ ಜೊತೆಗೆ ಕರೆದುಕೊಂಡು ಹೋದರೆ ವಿಶೇಷ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಆದಷ್ಟೂ ಸ್ವಂತ ಕಾರಿನಲ್ಲಿ ಹೋಗುವುದು ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT