ಭಾನುವಾರ, ಅಕ್ಟೋಬರ್ 25, 2020
24 °C
ಚಂದ್ರಂಪಳ್ಳಿ, ಗಾಣಗಾಪುರ, ಘತ್ತರಗಾ, ಸನ್ನತಿಗೆ ಪ್ರವಾಸಿರು, ಭಕ್ತರ ಲಗ್ಗೆ

ಕೊರೊನಾ ಲಾಕ್‌ಡೌನ್ ತೆರವು: ಪ್ರವಾಸೋದ್ಯಮಕ್ಕೆ ಮತ್ತೆ ಹೊಸ ಕಳೆ

ಮನೋಜಕುಮಾರ್‌ ಗುದ್ದಿ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಕೊರೊನಾ ಲಾಕ್‌ಡೌನ್‌ ಕೊನೆಯಾಗಿ ಜನರ ಮುಕ್ತ ಸಂಚಾರಕ್ಕೆ ಅವಕಾಶ ದೊರೆಯುತ್ತಿದ್ದಂತೆಯೇ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಹೊಸ ಕಳೆ ಮೂಡಿದೆ.

ಅದರಲ್ಲೂ, ಜಿಲ್ಲೆಯಲ್ಲಿ ಕಳೆದ ಮೂರು ದಶಕಗಳಲ್ಲಿ ಕಂಡು ಕೇಳರಿಯದಷ್ಟು ಭಾರಿ ಮಳೆ ಸುರಿದಿದ್ದರಿಂದ ಎಲ್ಲ ಭೀಮಾ, ಕಾಗಿಣಾ, ಕಮಲಾವತಿ ನದಿಗಳು ಭರ್ತಿಯಾಗಿ ಹರಿದಿದ್ದರಿಂದ ಜಲಾಶಯಗಳು ಭರ್ತಿಯಾಗಿ ಬಿಸಿಲ ನಾಡು ಮಲೆಯ ಬೀಡಾಗಿ ಪರಿವರ್ತನೆಗೊಂಡಿದೆ. ಕಣ್ಣು ಹಾಯಿಸಿದಲ್ಲೆಲ್ಲ ಭೂರಮೆ ಹಸಿರು ಸೀರೆಯುಟ್ಟು ಕಂಗೊಳಿಸುತ್ತಿದ್ದಾಳೆ.

ಚಿಂಚೋಳಿ ತಾಲ್ಲೂಕಿನ ಚಂದ್ರಂಪಳ್ಳಿ, ಗೊಟ್ಟಂಗಟ್ಟ, ತೆಲಂಗಾಣ–ಕರ್ನಾಟಕ ಗಡಿಯಲ್ಲಿರುವ ಎತ್ತಿಪೋತಾ ಜಲಪಾತವನ್ನು ನೋಡಲು ಪ್ರವಾಸಿಗರು ಸ್ವಂತ ಕಾರು, ಬೈಕ್‌ಗಳಲ್ಲಿ ವಾರಾಂತ್ಯದ ವೇಳೆಯಲ್ಲಿ ಲಗ್ಗೆ ಇಡುತ್ತಿದ್ದಾರೆ. ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ ನಿರ್ವಹಿಸುತ್ತಿರುವ ಕಾಟೇಜ್, ಅತಿಥಿ ಗೃಹಗಳು ಹಾಗೂ ಯಾತ್ರಿ ನಿವಾಸಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಅಫಜಲಪುರ ತಾಲ್ಲೂಕಿನ ದೇವಲಗಾಣಗಾಪುರದ ದತ್ತಾತ್ರೇಯ ದೇವರು, ಘತ್ತರಗಾ ಭಾಗ್ಯವಂತಿದೇವಿ ದರ್ಶನಕ್ಕೆ ಈಗಾಗಲೇ ಭಕ್ತರು ಬರುತ್ತಿದ್ದು, ಅವರನ್ನು ನಿಯಂತ್ರಿಸುವುದೇ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಅರ್ಚಕರಿಗೆ ಸವಾಲಾಗಿದೆ.

ಕಲಬುರ್ಗಿಯ ಬಹಮನಿ ಕೋಟೆ, ಬುದ್ಧ ವಿಹಾರ, ಶರಣಬಸವೇಶ್ವರ ದೇವಸ್ಥಾನ, ಖಾಜಾ ಬಂದಾನವಾಜ್ ದರ್ಗಾದಂತಹ ಧಾರ್ಮಿಕ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚಳವಾಗಿವೆ.

ಅಂತರ್ ಜಿಲ್ಲಾ ಹಾಗೂ ಅಂತರರಾಜ್ಯ ಸಂಚಾರಕ್ಕೆ ವಾಹನಗಳ ಓಡಾಟಕ್ಕೆ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸಿದ್ದರಿಂದ ಸಾರಿಗೆ ಸಂಸ್ಥೆಯ ಬಸ್‌ಗಳು, ಟ್ಯಾಕ್ಸಿ ವಾಹನಗಳ ಚಾಲಕರು ನಿಟ್ಟುಸಿರು ಬಿಟ್ಟಿದ್ದು, ಜನರೂ ಮೊದಲಿನಂತೆ ಸಾರಿಗೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯು ಲಭ್ಯ ಅನುದಾನದಲ್ಲಿ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲು ಸಿದ್ಧತೆ ನಡೆಸಿದೆ. ಯಾತ್ರಿ ನಿವಾಸದಂತಹ ಕಟ್ಟಡಗಳನ್ನು ಶೀಘ್ರ ಮುಗಿಸಿ ಅವುಗಳನ್ನು ಸಂಬಂಧಪಟ್ಟ ಇಲಾಖೆ, ಟ್ರಸ್ಟ್‌ಗಳಿಗೆ ಹಸ್ತಾಂತರಿಸಲಾಗುತ್ತಿದೆ.

ಲಾಕ್‌ಡೌನ್‌ ತೆರವುಗೊಳ್ಳುತ್ತಿದ್ದಂತೆಯೇ ಹೋಟೆಲ್‌ಗಳು ಆರಂಭವಾಗಿವೆ. ಹೀಗಾಗಿ, ವಾರಾಂತ್ಯದಲ್ಲಿ ಪ್ರವಾಸಕ್ಕೆ ತೆರಳುವವರಿಗೆ ಊಟದ ಚಿಂತೆಯೂ ಕಡಿಮೆಯಾಗಿದೆ. ಸಾರಿಗೆ ಸಂಸ್ಥೆ ಕೆಲ ದಿನಗಳಿಂದ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಗೋವಾಕ್ಕೆ ಬಸ್‌ ಸಂಚಾರ ಆರಂಭಿಸಲಾಗಿದೆ.

ಗೈಡ್‌ಗಳ ಕೊರತೆ: ಐತಿಹಾಸಿಕ ಪರಂಪರೆ ಹೊಂದಿರುವ ಚಿತ್ತಾಪುರ ತಾಲ್ಲೂಕಿನ ಸನ್ನತಿ, ನಾಗಾಂವಿಯಲ್ಲಿ ಗೈಡ್‌ಗಳನ್ನು ನಿಯೋಜಿಸಿಲ್ಲ. ಭಾರತೀಯ ಸರ್ವೇಕ್ಷಣ ಇಲಾಖೆ (ಎಎಸ್‌ಐ) ನಿಯೋಜಿಸಿದ ಕಾವಲುಗಾರರನ್ನು ಹೊರತುಪಡಿಸಿ ಇಲ್ಲಿ ಬೇರೆ ಗೈಡ್‌ಗಳು ಇರುವುದಿಲ್ಲ. ಇದರಿಂದ ದೂರದ ಜಿಲ್ಲೆಗಳಿಂದ ಅಶೋಕ ಸಾಮ್ರಾಟನ ನೆಲೆಸಿದ ಐತಿಹ್ಯವಿರುವ ಸನ್ನತಿಯನ್ನು ನೋಡಲು ಬಂದವರಿಗೆ ಸೂಕ್ತ ಮಾಹಿತಿಯೇ ಸಿಗುವುದಿಲ್ಲ. ಹಂಪಿ, ಬಾದಾಮಿಯಲ್ಲಿರುವಂತೆ ಇಲ್ಲಿಯೂ ಗೈಡ್‌ಗಳನ್ನು ನಿಯೋಜಿಸಿದರೆ ಸಾಕಷ್ಟು ಮಾಹಿತಿ ಪಡೆಯಬಹುದು ಎಂಬುದು ಪ್ರವಾಸಿಗರ ಅನಿಸಿಕೆ.

ಅಭಿಪ್ರಾಯಗಳು...

ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಪ್ರವಾಸಿ ತಾಣವಾದ ಚಂದ್ರಂಪಳ್ಳಿ ಜಲಾಶಯದ ದಂಡೆಯ ಮೇಲೆ ವನ್ಯಜೀವಿ ಧಾಮ (ಅರಣ್ಯ ಇಲಾಖೆ) ನಿರ್ಮಿಸಿದ ಕಾಟೇಜ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ.‌ ಅಧಿಕಾರಿಗಳು, ಉದ್ಯಮಿಗಳು, ರಾಜಕಾರಣಿಗಳು ಹಾಗೂ ಸಾಹಿತಿಗಳು ಕಾಟೇಜ್ ಕಾದಿರಿಸಿ ಒಂದೆರಡು ದಿನ‌ ಪ್ರಕೃತಿಯ ರಮ್ಯನೋಟ ಕಣ್ತುಂಬಿಕೊಂಡು ಮರಳುತ್ತಿದ್ದಾರೆ. ಇನ್ನಷ್ಟು ಕಾಟೇಜ್ ಹೆಚ್ಚಿಸುವುದರ ಜತೆಗೆ ದೋಣಿ ವಿಹಾರ ಆರಂಭಿಸುವಂತೆ ಪ್ರವಾಸಿಗರು ಬೇಡುತ್ತಿದ್ದಾರೆ.

-ಸಂಜೀವಕುಮಾರ ಚವ್ಹಾಣ, ವಲಯ ಅರಣ್ಯಾಧಿಕಾರಿ, ವನ್ಯಜೀವಿ ಧಾಮ, ಚಿಂಚೋಳಿ

***

2015ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ₹ 86.38 ಕೋಟಿ ವೆಚ್ಚದ ಕಾಮಗಾರಿಗಳು ನಡೆಯುತ್ತಿವೆ. ಅವುಗಳಲ್ಲಿ ಯಾತ್ರಾ ಸ್ಥಳಗಳಿಗೆ ಸಂಪರ್ಕ ರಸ್ತೆ ನಿರ್ಮಾಣ, ಯಾತ್ರಿ ನಿವಾಸಗಳ ನಿರ್ಮಾಣ, ಪ್ರವಾಸಿಗಳಿಗೆ ಕುಡಿಯುವ ನೀರು, ಶೌಚಾಲಯದಂತಹ ಮೂಲಸೌಕರ್ಯಗಳನ್ನು ಕಲ್ಪಿಸುವುದು ಸೇರಿವೆ

-ಪ್ರಭುಲಿಂಗ ತಳಕೇರಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ

***

ಇತ್ತೀಚೆಗೆ ಚಿಂಚೋಳಿ ಅರಣ್ಯ ಪ್ರದೇಶವನ್ನು ವನ್ಯಜೀವಿಧಾಮವೆಂದು ಘೋಷಿಸಿದ್ದು ಖುಷಿಯ ವಿಚಾರ. ಇದೊಂದು ಪ್ರವಾಸಿ ತಾಣವಾಗಿ ಬೆಳೆಯುವಲ್ಲಿ ಹಿಂದೆ ಬೀಳುತ್ತಿದೆ. ಕಾರಣಗಳು ಅನೇಕವಿರಬಹುದು. ಒಂದು ಅವಲೋಕನದ ಪ್ರಕಾರ ಅರಣ್ಯ ಒತ್ತುವರಿಯಾಗುತ್ತಿದೆ. ಇದನ್ನು ತಡೆಗಟ್ಟಿ ಇನ್ನಷ್ಟು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿದರೆ ಪ್ರವಾಸಿಗರ ಸಂಖ್ಯೆ ಹೆಚ್ಚಲಿದೆ. ಜೊತೆಗೆ ಸಸ್ಯ ಹಾಗೂ ಪ್ರಾಣಿವಿಜ್ಞಾನ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಸಂಶೋಧನೆಗಾಗಿ ಇಲ್ಲಿಗೆ ಭೇಟಿ ನೀಡಬಹುದು.

-ಡಾ. ರಾಜಾಸಮರಸೇನ ಮೋದಿ, ಸಹಾಯಕ ಪ್ರಾಧ್ಯಾಪಕ, ಕಲಬುರ್ಗಿ

***

ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದ ಬೇರೆ ರಾಜ್ಯ, ಜಿಲ್ಲೆಗಳಿಂದ ಬರುವ ಭಕ್ತರಿಗೆ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗುತ್ತಿದೆ. ರಾತ್ರಿ ಉಳಿಯಲು ಅವಕಾಶ ಕೊಡುತ್ತಿಲ್ಲ. ಸೋಂಕಿನ ಪ್ರಮಾಣ ಕಡಿಮೆಯಾದ ಮೇಲೆ ವಾಸ್ತವ್ಯಕ್ಕೆ ಅವಕಾಶ ಕೊಡುತ್ತೇವೆ. ಕೊರೊನಾ ಬರುವುದಕ್ಕೂ ಮುನ್ನ ದೇವಿ ಗುಡಿಗೆ 150ರಿಂದ 200 ಭಕ್ತರು ಬರುತ್ತಿದ್ದರು. ಈಗ 15ರಿಂದ 20 ಭಕ್ತರು ಬರುತ್ತಿದ್ದಾರೆ.

-ಸೀತಾರಾಮ ಜೋಶಿ, ಚಂದ್ರಲಾಂಬಾ ದೇವಸ್ಥಾನ ಆಡಳಿತ ಮಂಡಳಿ ಸದಸ್ಯ, ಸನ್ನತಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು