ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿಗರ ಕೈಬೀಸುತ್ತಿದೆ ಜೋಳದ ರಾಶಿ ಗುಡ್ಡ

ಆಗಾಗ ಬಿದ್ದ ಮಳೆಯಿಂದ ಅಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಗುಡ್ಡ
Last Updated 28 ಆಗಸ್ಟ್ 2020, 7:01 IST
ಅಕ್ಷರ ಗಾತ್ರ

ಮಧುಗಿರಿ: ತಾಲ್ಲೂಕಿನ ಹೊಸಹಳ್ಳಿ ಸಮೀಪವಿರುವ ಜೋಳದ ರಾಶಿ ಗುಡ್ಡ ಅಚ್ಚಹಸಿರಿನಿಂದ ಕಂಗೊಳಿಸುತ್ತಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

ತಾಲ್ಲೂಕಿನಲ್ಲಿ ಆಗೊಮ್ಮೆ ಈಗೊಮ್ಮೆ ಸುರಿಯುತ್ತಿರುವ ‌ಮಳೆಗೆ ಜೋಳದ ರಾಶಿ ಗುಡ್ಡ ಹಸಿರಿನ ಸೀರೆಯಿಂದ ಹೊದಿಕೆ ಮಾಡಿದಂತೆ ಕಾಣುತ್ತಿದೆ. ವಿವಿಧ ಜಿಲ್ಲೆಯ ನೂರಾರು ಜನ ನಿತ್ಯ ಗುಡ್ಡದ ಚಾರಣ ಕೈಗೊಂಡು ಅಲ್ಲಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಗುಡ್ಡದಲ್ಲಿ ಅಲ್ಲಲ್ಲಿ ಬೆಳೆದಿರುವ ಮರಗಳು ಮೆರುಗು ನೀಡುತ್ತಿವೆ. ಗುಡ್ಡದ ತುದಿಯ ಭಾಗದವರೆಗೂ ಪ್ರವಾಸಿಗರು ಚಾರಣ ಕೈಗೊಂಡಿರುವ ಹೆಜ್ಜೆಯ ಮಾರ್ಗ ಗುಡ್ಡದ ಮೆರುಗನ್ನು ಹೆಚ್ಚಿಸಿದೆ.

ತಾಲ್ಲೂಕಿನಲ್ಲಿಯೇ ಅಚ್ಚ ಹಸಿರಿನಿಂದ ಕೂಡಿದ ಏಕೈಕ ಗುಡ್ಡ ಎಂದರೆ ತಪ್ಪಾಗಲಾರದು. ಮಳೆಗಾಲ ಬಂದರೆ ಸಾಕು ತನ್ನ ಸೌಂದರ್ಯದಿಂದ ಜನರನ್ನು ತನ್ನತ್ತ ಆಕರ್ಷಿಸುತ್ತದೆ. ಬೇಸಿಗೆ ಸಮಯದಲ್ಲಿ ಗುಡ್ಡಕ್ಕೆ ಕೆಲ ಕಿಡಿಗೇಡಿಗಳು ಬೆಂಕಿ ಇಟ್ಟ ಪರಿಣಾಮ ಕೆಲ ಕಡೆ ಹುಲ್ಲು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಜೋಳದ ರಾಶಿ ಗುಡ್ಡವನ್ನು ಸುಂದರ ತಾಣವನ್ನಾಗಿ ಸರ್ಕಾರ ಅಭಿವೃದ್ಧಿಗೊಳಿಸಬೇಕು ಎಂದು ಗ್ರಾಮಸ್ಥರು ಹಾಗೂ ಪ್ರವಾಸಿಗರು ಆಗ್ರಹಿಸುತ್ತಾರೆ.

ಜೋಳವೆಲ್ಲ ರಾಶಿಯಾದ ಕಥೆ

ಹಲವಾರು ವರ್ಷಗಳ ಹಿಂದೆ ಮಹಿಳೆಯೊಬ್ಬರು ಜೋಳವನ್ನು ತೂರಲಾಗದೇ ಜೋಳವೆಲ್ಲ ಜೋಳದ ರಾಶಿಯಾಗಲಿ, ಕೂಗೆಲ್ಲಾ (ಹೊಟ್ಟು) ಕೂವಿನ ಕಲ್ಲಾಗಲಿ ಎಂದು ಶಾಪ ನೀಡಿದ್ದರಂತೆ. ಅಂದಿನಿಂದಲೂ ಈ ಗುಡ್ಡ ಜೋಳದ ರಾಶಿಯಂತೆ ಕಾಣುತ್ತಿದೆ ಎಂದು ಗ್ರಾಮದ ಹಿರಿಯರು ಕಥೆ ಹೇಳುತ್ತಾರೆ.

ಗುಡ್ಡಕ್ಕೆ ಹೀಗೆ ಬನ್ನಿ

ಮಧುಗಿರಿ ಪಟ್ಟಣದ ಶಿರಾ ಮಾರ್ಗದ ರಸ್ತೆಯಿಂದ ಡಿ.ವಿ.ಹಳ್ಳಿ ಗ್ರಾಮದ ಬಲಗಡೆಗೆ ತುಂಗೋಟಿ ಗ್ರಾಮದ ರಸ್ತೆಗೆ ತೆರಳಬೇಕು. ಅಲ್ಲಿಂದ 3 ಕಿ.ಮೀ. ಕ್ರಮಿಸಿದರೆ ಹೊಸಹಳ್ಳಿ ಗ್ರಾಮದ ಸಮೀಪ ಜೋಳದ ರಾಶಿ ಗುಡ್ಡ ಕಾಣಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT