ಬುಧವಾರ, ಏಪ್ರಿಲ್ 21, 2021
27 °C

ಕುರುಕ್ಷೇತ್ರದ ಕುರುಹುಗಳು

ಅರ್ಜುನ್ ಶಣೈ Updated:

ಅಕ್ಷರ ಗಾತ್ರ : | |

Prajavani

ದೆಹಲಿಯಿಂದ ಹರಿಯಾಣದ ಕುರುಕ್ಷೇತ್ರಕ್ಕೆ ಪ್ರವಾಸ ಹೊರಟು ನಿಂತಾಗ ನಮ್ಮ ಸೆಕ್ಯುರಿಟಿ ಗಾರ್ಡ್,
ಕುರುಕ್ಷೇತ್ರದ ಬಗೆಗಿರುವ ಪುರಾಣದ ಕಥೆಗಳನ್ನು ಹೇಳಿದ. ಅದರಲ್ಲಿ ಹಿಂಸೆ, ಭೀಭತ್ಸ, ಧರ್ಮ-ಅಧರ್ಮಗಳ ನಡುವಿನ ಸಮರ ಎಲ್ಲವೂ ಇತ್ತು. ಅವರ ಮಾತು ನಮ್ಮನ್ನು ‘ಅಲ್ಲಿಗ್ಯಾಕೆ ಹೋಗ್ತೀರಿ’ ಎಂದು ಕೇಳುವಂತಿತ್ತು. ಆದರೆ, ಆತ ನೀಡಿದ ವಿವರಣೆಯಿಂದಾಗಿ, ಕುರುಕ್ಷೇತ್ರ ನೋಡುವ ಕುತೂಹಲ ಹೆಚ್ಚಾಯಿತು.
ದೆಹಲಿಯಿಂದ ಕುರುಕ್ಷೇತ್ರಕ್ಕೆ ಪ್ರಯಾಣ ಬೆಳೆಸಿದೆ. ಆ ಊರು ಸುತ್ತುವಾಗ ಒಂದಷ್ಟು ಇತಿಹಾಸ, ಮತ್ತೊಂದಿಷ್ಟು ಪುರಾಣದ ಕಥೆಗಳು ತೆರೆದುಕೊಂಡವು. ಇಡೀ ಊರು ಒಂದು ಅದ್ಭುತ ಪ್ರೇಕ್ಷಣೀಯ ಸ್ಥಳವಾಗಿ ಕಂಡಿತು.

ವಿಶೇಷವೆನಿಸುವ ಬ್ರಹ್ಮಸರೋವರ

ಕುರುಕ್ಷೇತ್ರದಲ್ಲಿ ಬ್ರಹ್ಮಸರೋವರ ಪ್ರಮುಖ ಪ್ರವಾಸಿ ತಾಣ. ಪುರಾಣದಲ್ಲಿ ಈ ಸರೋವರದ ಬಗ್ಗೆ ವಿಶೇಷ ಸ್ಥಾನವಿದೆ. ಸೃಷ್ಟಿಕರ್ತ ಬ್ರಹ್ಮ ಈ ಜಾಗದಲ್ಲಿ ತನ್ನ ಮೊಟ್ಟಮೊದಲ ಯಜ್ಞವನ್ನು ಕೈಗೊಂಡಿದ್ದ ಎಂಬ ನಂಬಿಕೆ ಇದೆ. ಕುರುಕ್ಷೇತ್ರ ಯುದ್ಧದ ಗೆಲುವಿನ ಬಳಿಕ ಯುಧಿಷ್ಠಿರ ಈ ಸರೋವರದ ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ ವಿಜಯಸ್ತಂಭ ನೆಟ್ಟಿದ್ದಾನೆ ಎಂಬ ಕಥೆ ಹೇಳುತ್ತಾರೆ ಜನ.

ಇತಿಹಾಸದ ಪುಟಗಳನ್ನು ತೆರೆದರೆ, ದೇಶದಲ್ಲಿ ಮುಸಲ್ಮಾನರ ಆಳ್ವಿಕೆಯ ವೇಳೆ ಈ ಸರೋವರಕ್ಕಿಳಿದರೆ ತೆರಿಗೆ ವಸೂಲು ಮಾಡುತ್ತಿದ್ದರು. 1567ರಲ್ಲಿ ಅಕ್ಬರ್ ಇಲ್ಲಿಗೆ ಭೇಟಿ ನೀಡಿದಾಗ, ಈ ವ್ಯವಸ್ಥೆ ತೆಗೆದುಹಾಕಿದ. ಔರಂಗಜೇಬನ ಆಳ್ವಿಕೆಯಲ್ಲಿ ಪುನಃ ಅದನ್ನು ಹೇರಲಾಯಿತು. ಮುಂದೆ 18ನೇ ಶತಮಾನದ ಆರಂಭದಲ್ಲಿ ಮರಾಠರಿಂದ ಈ ವಸೂಲಿ ವ್ಯವಸ್ಥೆಗೆ ಪೂರ್ಣ ಅಂತ್ಯ ಹಾಡಲಾಯಿತು. ಅಕ್ಬರ್ ಆಸ್ಥಾನದ ಕವಿ ಅಬುಲ್ ಫಜಲ್ ಈ ಸರೋವರದ ವಿಹಂಗಮ ದೃಶ್ಯವನ್ನು ನೋಡಿ ಇದನ್ನು ‘ಲಘು ಸಮುದ್ರ’ ಎಂದು ಬಣ್ಣಿಸಿದ್ದನು. ಅಷ್ಟೇ ಅಲ್ಲ, ಇಲ್ಲಿ ಸೂರ್ಯ ಗ್ರಹಣದಂದು ಸ್ನಾನ ಮಾಡಿದರೆ ಅದು ಸಾವಿರಾರು ಅಶ್ವಮೇಧಯಾಗ ಮಾಡಿದಷ್ಟೇ ಫಲ ನೀಡುವುದು ಎಂಬ ನಂಬಿಕೆಯಿದೆ. ಮಾತ್ರವಲ್ಲ, ಇದು ಏಷ್ಯಾದಲ್ಲಿಯೇ ಇದು ಅತಿದೊಡ್ಡ ಮಾನವ ನಿರ್ಮಿತ ಸರೋವರ ಎಂಬ ಖ್ಯಾತಿ ಪಡೆದಿದೆ.

ಮುಂದಿನ ನನ್ನ ಪಯಣ ಹನುಮಾನ್‌ ಮಂದಿರದತ್ತ. ಈ ದೇವಾಲಯುದಲ್ಲಿ ಕಂಚಿನ ರಥ, ದ್ರೌಪದಿಯ ಬಾವಿಯಂತಹ ಪ್ರಮುಖ ಕ್ಷೇತ್ರಗಳಿವೆ. ಭಗವದ್ಗೀತೆಯ ಪ್ರತೀಕವಾಗಿ ಈ ಸ್ಥಳದಲ್ಲಿ ಭಾರತದ ಅತಿದೊಡ್ಡ ಕಂಚಿನ ರಥ ನಿರ್ಮಿಸಲಾಗಿದೆ. ರಥದಲ್ಲಿ ಕುಳಿತ ಶ್ರೀಕೃಷ್ಣನು ಅರ್ಜುನನಿಗೆ ಭಗವದ್ಗೀತೆ ಬೋಧಿಸುತ್ತಿರುವ ಪುತ್ಥಳಿಯನ್ನು ಕಾಣಬಹುದು.

ಸರೋವರದ ನಡುವೆ ಶಿವ ದೇಗುಲ

ಬ್ರಹ್ಮಸರೋವರದ ಮಧ್ಯಭಾಗದಲ್ಲಿ ಶಿವನ ದೇಗುಲವಿದೆ. ಹಿಂಭಾಗದಲ್ಲಿ ಒಂದು ಪವಿತ್ರ ಬಾವಿಯಿದೆ. ಈ ಬಾವಿಗೂ ವಿಶೇಷ ಮಹತ್ವವಿದೆ. ಅದನ್ನು ಚಂದ್ರ ಕೂಪ ಅಥವಾ ದ್ರೌಪದಿ ಕೂಪ ಅಂತಲೂ ಕರೆಯುತ್ತಾರೆ. ಮಹಾಭಾರತದಲ್ಲಿ ಯುದ್ಧದ ಸಂದರ್ಭದಲ್ಲಿ ದ್ರೌಪದಿ ಇಲ್ಲಿಯೇ ಪಾಂಡವರ ಒಳಿತಿಗಾಗಿ ಪ್ರಾರ್ಥಿಸಿದ್ದಳು. ಸೂರ್ಯಗ್ರಹಣದ ದಿನ ಈ ಬಾವಿಯ ನೀರು ಹಾಲಿನ ರೂಪಕ್ಕೆ ಪರಿವರ್ತನೆಯಾಗುತ್ತಿತ್ತು ಎಂದು ನಂಬಿಕೆಗಳು ಇವೆ. ಅಷ್ಟೇ ಅಲ್ಲ, ಮಹರ್ಷಿ ವ್ಯಾಸ, ವಿಶ್ವಾಮಿತ್ರರು ತಮ್ಮ ಕುಟುಂಬದ ಒಳಿತಿಗಾಗಿ ಇಲ್ಲೇ ಪ್ರಾರ್ಥನೆ ಮಾಡಿಕೊಂಡಿದ್ದರು. ಪರಶುರಾಮ ತನ್ನ ತಂದೆ ಜಮದಗ್ನಿಯ ಪಿತೃತರ್ಪಣ ಕಾರ್ಯವನ್ನು ಇದೇ ಸ್ಥಳದಲ್ಲಿ ಮಾಡಿದ್ದ.. ಹೀಗೆ ಪುರಾಣ ಕಥೆಗಳಿವೆ.

ಭಗವದ್ಗೀತೆ ಬೋಧನಾ ಸ್ಥಳ

ಮಹಾಭಾರತದಲ್ಲಿ ಎಲ್ಲಕ್ಕಿಂತ ಮುಖ್ಯವಾದುದು ಭಗವದ್ಗೀತೆಯ ಬೋಧನೆ. ಜ್ಯೋತಿಸರ್ ನಗರದ ಭಾಗದಲ್ಲಿರುವ ಭಗವದ್ಗೀತೆಯ ಬೋಧನೆಯ ಸ್ಥಳ ಕೂಡ ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿದೆ. ಒಂದು ವಿಶಾಲವಾದ ಆಲದಮರದ ಸುತ್ತಲೂ ಕಟ್ಟೆಯ ರಚನೆಯಿದೆ. ಇದರ ಕೆಳಗೆ ಶ್ರೀಕೃಷ್ಣ ಅರ್ಜುನನಿಗೆ ಗೀತೆ ಬೋಧಿಸಿದ ಎಂದು ನಂಬಲಾಗಿದೆ. ಇಲ್ಲಿ ಒಂದು ರಥದ ರಚನೆಯನ್ನು ಸಾಂಕೇತಿಕವಾಗಿ ಇರಿಸಿದ್ದಾರೆ. ಈ ಸ್ಥಳದಲ್ಲಿ ಆದಿ ಶಂಕರಾಚಾರ್ಯರು ಗೀತೆಯ ಅಭ್ಯಾಸದಲ್ಲಿ ನಿರತರಾಗಿದ್ದರೆನ್ನುವುದು ಮತ್ತೊಂದು ವಿಶೇಷ. ಶ್ರೀಕೃಷ್ಣ ತನ್ನ ವಿರಾಟ್‍ರೂಪವನ್ನು ಪ್ರದರ್ಶಿಸಿದ ಜಾಗವೂ ಇದೇ ಎಂದು ಹೇಳುತ್ತಾರೆ.

ಶ್ರೀಕೃಷ್ಣ ವಸ್ತು ಸಂಗ್ರಹಾಲಯ

ಮಥುರಾ, ದ್ವಾರಕೆಗಳು ಶ್ರೀಕೃಷ್ಣನಿಗೆ ಸಂಬಂಧಿಸಿದ ಸ್ಥಳಗಳೇ ಆಗಿದ್ದರೂ ಕುರುಕ್ಷೇತ್ರದಲ್ಲಿ ಕೃಷ್ಣನ ಇರುವಿಕೆಯನ್ನು ಸಾಬೀತು ಪಡಿಸುವಂತಹ ಹಲವು ಕುರುಹುಗಳು ಇಲ್ಲಿನ ಶ್ರೀಕೃಷ್ಣ ವಸ್ತು ಸಂಗ್ರಹಾಲಯದಲ್ಲಿವೆ. ಶ್ರೀಕೃಷ್ಣನಿಗೆ, ಮಹಾಭಾರತ ಮತ್ತು ಕುರುಕ್ಷೇತ್ರಕ್ಕೆ ಸಂಬಂಧಿಸಿದ ವಿಶೇಷ ಪ್ರಾಚ್ಯವಸ್ತುಗಳು ಇಲ್ಲಿ ಲಭ್ಯವಿವೆ.

ಕೃಷ್ಣನ ಜೀವನವನ್ನು ಸಾರುವ ಹಲವಾರು ಕರಕುಶಲ ವಸ್ತುಗಳನ್ನು, ವಿಗ್ರಹಗಳನ್ನು, ವರ್ಣಚಿತ್ರಗಳು, ಹಸ್ತಪ್ರತಿಗಳು, ಫಲಕಗಳನ್ನು, ನೆನಪಿನ ಕಾಣಿಕೆಗಳನ್ನು ಮತ್ತು ಇನ್ನಿತರ ಕಲಾವಸ್ತುಗಳನ್ನು ತನ್ನಲ್ಲಿ ಒಳಗೊಂಡಿದೆ.

ಮಥುರಾ, ದ್ವಾರಕೆ ಮತ್ತು ಹರಿಯಾಣಾದ ಹಲವಾರು ಪ್ರದೇಶಗಳಲ್ಲಿ ಸಿಕ್ಕಿರುವ ಸುಮಾರು ಐದು ಸಾವಿರ ವರ್ಷಗಳ ಹಿಂದಿನ ಅವಶೇಷಗಳನ್ನು ಇಲ್ಲಿಡಲಾಗಿದೆ. ಬೇರೆ ಬೇರೆ ಕಾಲದ ಶಿಲೆಗಳು, ಮಾನವನ ಆಯುಧ, ದಿನೋಪಯೋಗಿ ವಸ್ತುಗಳೂ ಇವೆ. ಜತೆಗೆ ವಿವರವೂ ಇದೆ. ಮುಳುಗಿ ಹೋಗಿದೆ ಎನ್ನಲಾಗುವ ದ್ವಾರಕೆಯ ಕುರುಹುಗಳೂ ಇಲ್ಲಿ ಕಾಣ ಸಿಗುತ್ತವೆ. ಅಲ್ಲಲ್ಲಿ ಕೃಷ್ಣನ ಕುರಿತ ಸಾಕ್ಷ್ಯಚಿತ್ರಗಳ ಪ್ರದರ್ಶನವೂ ಇರುತ್ತದೆ. ಸಂಗ್ರಹಾಲಯದೊಳಗೆ ಚಿತ್ರೀಕರಣ ನಿಷಿದ್ಧ.

ಕಲ್ಪನಾ ಚಾವ್ಲಾ ತಾರಾಲಯ

ದೇಶ ಕಂಡ ಬಾಹ್ಯಾಕಾಶ ದಿಗ್ಗಜೆ ಕಲ್ಪನಾ ಚಾವ್ಲಾರ ನೆನಪಿನಲ್ಲಿ ಕಟ್ಟಿಸಿದ ಈ ತಾರಾಲಯಕ್ಕೆ ವಿಜ್ಞಾನ ಮತ್ತು ಬಾಹ್ಯಾಕಾಶದಲ್ಲಿ ಆಸಕ್ತಿಯಿರುವವರು ಭೇಟಿ ನೀಡಲೇಬೇಕು. ಈ ದಿನದಂದು ಜ್ಯೋತಿಸರ್ ನಗರದಲ್ಲಿ ಪ್ರತಿದಿನ ಸಂಜೆ ಧ್ವನಿ ಮತ್ತು ಬೆಳಕಿನ ಪ್ರದರ್ಶನವನ್ನು ಏರ್ಪಡಿಸಲಾಗುತ್ತದೆ.

ಸ್ಥಾನೇಶ್ವರ ಮಹಾದೇವ ಮಂದಿರ

ಇದು ಅತ್ಯಂತ ಪುರಾತನ ಮಂದಿರ. ಇಲ್ಲಿ ಬ್ರಹ್ಮನು ಮೊದಲು ಶಿವಲಿಂಗ ಸ್ಥಾಪಿಸಿ ಪೂಜಿಸಲು ತೊಡಗಿದ ಎಂದು ನಂಬಲಾಗಿದ್ದು ಆ ಬಳಿಕದ ಎಲ್ಲ ಮಹಾಭಾರತದ ಮಹಾಪುರುಷರಿಗೂ ಈ ಸ್ಥಳಕ್ಕೂ ನಂಟು ಕಂಡುಬರುತ್ತದೆ. 

ಒಟ್ಟಾರೆ ಈ ಕುರುಕ್ಷೇತ್ರದ ಪ್ರವಾಸ ಪುಟ್ಟಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೆ ಯಾರಿಗೂ ಬೇಸರವಾಗದ ಅದ್ಭುತ ಪ್ರವಾಸಾನುಭವವನ್ನು ನೀಡುತ್ತದೆ. ಹಿರಿಯರಿಗೆ ಪುರಾಣ, ಭಗವದ್ಗೀತೆ ಬೋಧನಾ ಸ್ಥಳ, ಬ್ರಹ್ಮಸರೋವರದಂತಹ ತಾಣಗಳು ಇಷ್ಟವಾದರೆ, ಮಕ್ಕಳಿಗೆ ತಾರಾಲಯ ಮತ್ತು ವಸ್ತು ಸಂಗ್ರಹಾಲಯ ಭರಪೂರ ಮಾಹಿತಿ ನೀಡುತ್ತವೆ. ಒಟ್ಟಾರೆಯಾಗಿ ಕುರುಕ್ಷೇತ್ರದ ಇತಿಹಾಸವೇನೇ ಇರಲಿ ಪ್ರವಾಸವಂತೂ ಪ್ರಯಾಸವಾಗದು.

ಹೋಗುವುದು ಹೇಗೆ?

ಬೆಂಗಳೂರಿನಿಂದ ದೆಹಲಿಗೆ ವಿಮಾನ ಅಥವಾ ರೈಲಿನ ಮೂಲಕ ತೆರಳಿ ಅಲ್ಲಿಂದ ಕುರುಕ್ಷೇತ್ರಕ್ಕೆ ಹೋಗಬಹುದು. ಚಂಡೀಗಡ ಕೂಡ ಕುರುಕ್ಷೇತ್ರಕ್ಕೆ ಹತ್ತಿರದ ವಿಮಾನ ನಿಲ್ದಾಣ.

ದೆಹಲಿಯಿಂದ ರಸ್ತೆಯ ಮಾರ್ಗವಾಗಿ 160 ಕಿಮೀ ದೂರವಾಗುತ್ತದೆ. 4 ಗಂಟೆ ಪ್ರಯಾಣ.

ದೆಹಲಿ- ಕುರುಕ್ಷೇತ್ರ ನಡುವೆ ರೈಲು ಪ್ರಯಾಣ ಸುಖಕರ. ಏಕೆಂದರೆ ಕೆಲವು ಎಕ್ಸ್‌ಪ್ರೆಸ್ ರೈಲುಗಳು 2 ಗಂಟೆಯೊಳಗೆ ಕುರುಕ್ಷೇತ್ರ ತಲುಪುತ್ತವೆ. ಸರಿಯಾಗಿ ಪ್ಲಾನ್ ಮಾಡಿದರೆ, ಶಿಸ್ತುಬದ್ಧವಾಗಿ ಎಲ್ಲ ಸ್ಥಳಗಳನ್ನು ನೋಡಿಬರಬಹುದು.

ಊಟ- ವಸತಿ

ಕುರುಕ್ಷೇತ್ರದಲ್ಲಿ ಊಟಕ್ಕೆ ‘ಸ್ವಾದ್-ಅಪ್ನೇಪನ್ ಕಾ’ ಎಂಬ ಹೋಟೆಲ್ ಬಹಳ ಚೆನ್ನಾಗಿದೆ. ಒಮ್ಮೆ ಭೇಟಿ ಕೊಡಿ. ಗೂಗಲ್‌ನಲ್ಲಿ ಹುಡುಕಿದರೆ ಮಾಹಿತಿ ಸಿಗುತ್ತದೆ. ಇದು ತೀರಾ ಚಿಕ್ಕದಾದ ಮತ್ತು ಚೊಕ್ಕದಾದ ಹೋಟೆಲ್. ಅದ್ಭುತ ರುಚಿಯ ಉತ್ತರಭಾರತದ ಅಡುಗೆಯ ಸ್ವಾದವನ್ನು ನೀವು ಸವಿಯುತ್ತೀರಿ. ಉತ್ತಮ ಸೇವೆ, ಪ್ರೀತಿಪೂರ್ವಕ ಆದರ, ರುಚಿಕಟ್ಟಾದ ತಿನಿಸಿನೊಂದಿಗೆ ಜೇಬಿಗೆ ಕೂಡ ಕತ್ತರಿ ಎನಿಸದಷ್ಟು ಕಡಿಮೆ ದರದ ಯೋಗ್ಯ ಹೋಟೆಲ್ ಇದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.