ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘5 ಡಿ’ನಲ್ಲಿ ಹಾಲೆಂಡ್‌ ನೋಡಿ..

Last Updated 21 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಆಕಾಶಕ್ಕೆ ನೆಗೆದ ವಿಮಾನ ಒಮ್ಮೆಲೆ ಸಮುದ್ರಕ್ಕೆ ಇಳಿಯುತ್ತಿದ್ದಂತೆಯೇ ತೆರೆಗಳ ನೀರು ತಲೆಗೆ ಸಿಡಿದು ಗಾಬರಿಯಿಂದ ಕಣ್ಮುಚ್ಚಿದ್ದೇ ತಡ, ವಿಮಾನ ಮೇಲೇರಿ ಟುಲಿಪ್ ಹೂಗಳ ಹೊಲದ ಮೇಲೆ ಸಂಚರಿಸುತ್ತಿತ್ತು. ಹೂವುಗಳ ಪರಿಮಳ ನಾಸಿಕವನ್ನು ಸವರುತ್ತಿತ್ತು. ನಾವು ಕುಳಿತ ಆಸನ ವಾಲಿದಂತಾಗಿ ಇನ್ನೇನು ಕೆಳಗೆ ಬೀಳುತ್ತೇವೆ ಎಂದು ಕೂಗುವ ಹೊತ್ತಿಗೆ ನಮ್ಮ ಕೆಳಗಡೆ ರನ್‌ವೇಯಲ್ಲಿ ವಿಮಾನವೊಂದು ಸಾಗುತ್ತಿತ್ತು.

ಇಂತಹ ಹಲವು ವಿಸ್ಮಯಗಳಿಗೆ ಸಾಕ್ಷಿಯಾಗಿದ್ದು ಆ್ಯಮ್‌ಸ್ಟರ್‌ಡ್ಯಾಂನಲ್ಲಿರುವ ‘ದಿಸ್ ಈಸ್ ಹಾಲಂಡ್‌’ ಎಂಬ ‘5 ಡಿ ಫ್ಲೈಟ್ ಅನುಭವ’ ನೀಡುವ ಪ್ರವಾಸಿ ತಾಣ.

ಭಾನುವಾರದ ಕಾರಣ, ಸೊಸೆ ದಿವ್ಯ ನಿಮಗೆ ಒಂದು ತಾಸಿನಲ್ಲಿ ನೆದರ್ಲೆಂಡ್‌ ತೋರಿಸುತ್ತೇನೆ ಬನ್ನಿ ಎಂದು ಪತ್ನಿ ಪ್ರತಿಮಾಳೊಂದಿಗೆ ನನ್ನನ್ನು ಕರೆದುಕೊಂಡು ಬಂದಳು. ಈಗಾಗಲೇ ಈ ದೇಶ ಸುತ್ತಿದ್ದ ನಮಗೆ ಒಂದು ತಾಸಿನ ಪ್ರವಾಸದ ಬಗ್ಗೆ ಆಶ್ಚರ್ಯವಾಯಿತು.

ಹೀಗೆ ಯೋಚಿಸುತ್ತಾ ಹೊರಟ ನಾವು ಆ್ಯಮ್‌ಸ್ಟರ್‌ಡ್ಯಾಂ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ನಿಂತೆವು. ಎದುರಿಗಿದ್ದ ಐಜೆ ನದಿಯನ್ನು ಲಾಂಚ್ ಮೂಲಕ ದಾಟಿ(ಪ್ರಯಾಣ ಉಚಿತ), ಮತ್ತೊಂದು ಬದಿಗೆ ಬಂದಾಗ ಸಿಗುವುದೇ ಇಪ್ಪತ್ನಾಲ್ಕು ಮೀಟರ್ ಎತ್ತರದ ಸಿಲಿಂಡರ್ ಆಕಾರದ ಬೃಹತ್ ಕಟ್ಟಡ. ಇದುವೇ ಒಂದು ಗಂಟೆಯಲ್ಲಿ ನೆದರ್ಲೆಂಡ್ ದೇಶವನ್ನು ವಿಮಾನ ಹಾರಾಟದ ಮೂಲಕ ಪರಿಚಯಿಸುವ ವಿಶಿಷ್ಟ ಕೇಂದ್ರ.

ಕೇಂದ್ರ ಪ್ರವೇಶಿಸುವ ಮುನ್ನ ಕಟ್ಟಡದ ಮೊದಲ ಮಹಡಿ ಯಲ್ಲಿರುವ ಕಿಯಾಕ್ಸ್‌ಗಳಲ್ಲಿನ ಪ್ರಶ್ನೆಗಳಿಗೆ ಉತ್ತರ ಆಯ್ಕೆ ಮಾಡಬೇಕಿತ್ತು. ಇದೊಂದು ರೀತಿ ನೆದರ್ಲೆಂಡ್ ಅರಿಯುವ ಪ್ರಯತ್ನ.

ಕಿಯಾಸ್ಕ್‌ನಲ್ಲಿ ಉತ್ತರ ನೀಡಿ, ಗೋಲಾಕಾರದ ಈ ಕಟ್ಟಡ ಪ್ರವೇಶಿಸಿದೆವು. ಇಲ್ಲಿ ಎರಡು ವಿಭಾಗದಲ್ಲಿಯ ಒಳ ಸುತ್ತುಗಳಲ್ಲಿ, ಪರದೆಯ ಮೂಲಕ ನೆದರ್ಲೆಂಡ್ ಹುಟ್ಟಿದ ಕಥೆ, ವಿಂಡ್ ಮಿಲ್ ಅನ್ವೇಷಣೆ, ಸಮುದ್ರದ ಭೂಮಿಯನ್ನು ಗೆಲ್ಲುವ ವಿಧಾನ, ನದಿ ಮುಖಜ ಭೂಮಿಯಲ್ಲಿ ನಡುಗಡ್ಡೆ ನಿರ್ಮಾಣ, ಡಚ್ ವಾಟರ್ ಲೈನ್ ರಚನೆ, ಜನರೇ ವಾಸಿಸಲು ಸಾಧ್ಯವಾಗದ ಜಲಾನಯನದಲ್ಲಿ ಜಲ ಮಾರ್ಗ ರಚಿಸಿ, ವಾಣಿಜ್ಯ ವಹಿವಾಟು ಕೇಂದ್ರವಾಗಿಸುವ ಇತಿಹಾಸವನ್ನು ಅನಿಮೇಶನ್ ಮತ್ತು ಸಂಯೋಜನೆಗೊಂಡ ಚಿತ್ರಗಳ ಮೂಲಕ ಆಸಕ್ತಿದಾಯಕವಾಗಿ (ಇಂಗ್ಲೀಷ್ ಉಪಶೀರ್ಷಿಕೆಯೊಂದಿಗೆ) ವಿವರಿಸಲಾಗುತ್ತದೆ. ಅವೆಲ್ಲವನ್ನೂ ನೋಡಿಕೊಂಡು, ನಾಲ್ಕನೆಯ ವಿಭಾಗಕ್ಕೆ ಪ್ರವೇಶಿಸಿದೆವು.

ಅದು ನಕ್ಷತ್ರಗಳು ಹರಡಿಕೊಂಡ ಬೃಹತ್ತಾದ ಆಕಾಶ ಕಾಯದ ಗೋಳ. ಅಲ್ಲಿ 40 ಪ್ರವಾಸಿಗರು ಆಸೀನರಾಗಲು ವಿಮಾನದಲ್ಲಿರುವಂತೆ ಸೀಟುಗಳಿದ್ದವು. ಸೀಟು ಬೆಲ್ಟ್‌ಗಳಿಂದ ನಮ್ಮನ್ನು ಬಂಧಿಸಿದ ನಂತರ ಹಾಲೆಂಡ್‌ ಮೇಲೆ ಹಕ್ಕಿಯಂತೆ ಹಾರುವ ವಿಮಾನ ಸಿಮ್ಯುಲೇಶನ್ ಪ್ರಕ್ರಿಯೆ 5 ಡೈಮೆನ್ಷನ್‌ನಲ್ಲಿ ಆರಂಭವಾಯಿತು. ತಂಪು ವಾತಾವರಣದಲ್ಲಿ ಎತ್ತರದಲ್ಲಿ ಹಾರುತ್ತಿರುವ ಅನುಭವವಾಗುತ್ತಿರುವಂತೆಯೇ ನೆದರ್ಲೆಂಡ್‌ ಅರಮನೆ, ಕಾಲುವೆಗಳ ಜಾಲ, ಪ್ರಾಚೀನ ಸುಂದರ ಕಟ್ಟಡಗಳನ್ನು ಕಣ್ತುಂಬಿಕೊಂಡೆವು. ಅತೀ ವೇಗದಲ್ಲಿ ಚಲಿಸಿ, ರೋಟಡ್ರ್ಯಾಮ್ ಬಂದರು, ಡನ್ಹೇಗ್ ನ್ಯಾಯಾಲಯ, ಡಚ್ ಕರಾವಳಿ, ಮಿನಿಯೇಚರ್‌ಗಳಲ್ಲಿಯ ಆ್ಯಮ್‌ಸ್ಟರ್‌ಡ್ಯಾಂ ತೋರುವ ಮದುರ ಡೋಮಾ, ಪುರಾತನ ವಿಂಡ್ ಮಿಲ್ ಗ್ರಾಮ- ಝಾನ್ಸೆ ಸ್ಕ್ಯಾನ್‌ದಲ್ಲಿ ಸಹ ಸುತ್ತಾಡಿಸಿದಂತೆ ಭಾಸವಾಯಿತು. ಸಮುದ್ರದ ಭೋರ್ಗರೆತ ಅಬ್ಬರದ ನೀರು ನಮ್ಮನ್ನು ತಾಗುವಾಗಿನ ಬೆರಗಂತೂ ಅದ್ಭುತವಾಗಿತ್ತು.

ಬಿರುಗಾಳಿಗೆ ತಿರುಗುವ ಗಾಳಿಯಂತ್ರದ ಹತ್ತಿರ ಹಾಯುವಾಗ ಗಾಳಿ ನಮ್ಮ ಮುಖಕ್ಕೆ ರಾಚಿದಂತಾಗುತ್ತದೆ. ಮಂಜುಗಡ್ಡೆಯಲ್ಲಿಯ ಸ್ಕೇಟಿಂಗ್ ಆಟ ನೋಡುತ್ತಿದ್ದಂತೆಯೇ ಮಂಜಿನ ಕಣಗಳು ಮೈಗೆ ಸ್ಪರ್ಶವಾದಂತನಿಸಿತು. ಗ್ರಾಮೀಣ ನೆದರ್ಲೆಂಡ್‌ನ ಹೊಲ ಮನೆಗಳು, ಆಕರ್ಷಕ ಭೂದೃಶ್ಯಗಳ ಸುತ್ತಾಟದಲ್ಲಿ ವೈವಿಧ್ಯವಿತ್ತು. ಈ ದೇಶದಲ್ಲಿ ಯುನೆಸ್ಕೊ ಗುರುತಿಸಿದ ಪಾರಂಪರಿಕ ತಾಣಗಳು ಸೇರಿದಂತೆ 22 ವಿಭಿನ್ನ ಪ್ರವಾಸಿ ಸ್ಥಳಗಳ ಸೌಂದರ್ಯ, ಶ್ರೀಮಂತಿಕೆಯನ್ನು ಒಂಬತ್ತು ನಿಮಿಷಗಳ ಈ ವಿಮಾನಯಾನದಲ್ಲಿ ಸನಿಹದಿಂದ ನೋಡುವ ಅವಕಾಶ ದೊರೆಯಿತು. ವಿಶೇಷವೆಂದರೆ ನೆದರ್ಲೆಂಡ್‌ನ ಬೇಸಿಗೆ, ಮಳೆಗಾಲ, ಚಳಿಗಾಲದ ದೃಶ್ಯಗಳ ರೋಮಾಂಚನ ಅನುಭವವಾಯಿತು..

ಇತ್ತೀಚಿನ ತಂತ್ರಜ್ಞಾನ ಬಳಸಿ 5 ಡಿ ಫ್ಲೈಟ್ ಸಿಮ್ಯುಲೇಟರ್ ಅನುಭವದ ಈ ಕೇಂದ್ರವನ್ನು 2017ರಲ್ಲಿ 18 ದಶಲಕ್ಷ ಯುರೊ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ವಿಶೇಷ ಸಂಚಾರದಲ್ಲಿಯ ಅಪ್ಯಾಯಮಾನವಾದ ದೃಶ್ಯಗಳನ್ನು ಹೆಲಿಕಾಪ್ಟರ್‌ ಕೆಳಭಾಗದಲ್ಲಿ ವಿಶೇಷ ಕ್ಯಾಮೆರಾ ಅಳವಡಿಸಿ ಚಿತ್ರೀಕರಿಸಲಾಗಿದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT