ಭಾನುವಾರ, ಫೆಬ್ರವರಿ 23, 2020
19 °C

ಚಳಿಗಾಲದಲ್ಲಿ ಭೇಟಿ ನೀಡಲೇಬೇಕಾದ ತಾಣಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಡಿಸೆಂಬರ್‌ – ಜನವರಿ ತಿಂಗಳು ಅಂದರೆ ಬರೀ ಚುಮುಚುಮು ಅಲ್ಲ, ಗಡಗಡ ನಡುಗಿಸುವ ಚಳಿ. ಒಂದೊಂದು ಪ್ರದೇಶದಲ್ಲಿ ಒಂದೊಂದು ತರಹ. ಅಲ್ಲಲ್ಲ ಥರ ಥರ… ಮಾಗಿಯ ಚಳಿಯ ಸುಖಾನುಭವ ಅನುಭವಿಸಬೇಕಾದರೆ ಕೆಲವು ತಾಣಗಳಿಗೆ ನೀವು ಭೇಟಿ ನೀಡಲೇಬೇಕು. ಈ ತಾಣಗಳಲ್ಲಿ ಕೆಲವು ಕಡೆ ಹೊಸ ವರ್ಷದ ಸಂಭ್ರಮಾಚರಣೆಯೂ ಬೋನಸ್‌. ಇಂಥ ‘ಚಳಿಗಾಲದ ತಾಣ’ಗಳಲ್ಲಿರುವ ವಿಶೇಷ ಚಟುವಟಿಕೆಗಳ ಕುರಿತು ಇಲ್ಲಿ ವಿವರಿಸಿದ್ದಾರೆ.

ಮನಾಲಿ

ಕ್ರಿಸ್‌ಮಸ್‌ ತಿಂಗಳ ಚಳಿಯಲ್ಲಿ ಇಲ್ಲಿ ಕಿನ್ನರ ಲೋಕವೇ ಸೃಷ್ಟಿಯಾಗುತ್ತದೆ. ಇಲ್ಲಿನ ಗಿರಿಧಾಮದಲ್ಲಿ ಸಣ್ಣಗೆ ಹಿಮಪಾತ, ಮೈ ನಡುಗಿಸುಗ ಚಳಿ, ದಪ್ಪನೆಯ ಸ್ವೆಟರ್‌ ಹೊದ್ದು ಚಳಿ ಮತ್ತು ಪ್ರಕೃತಿಯನ್ನು ಅನುಭವಿಸುವುದೇ ಸೊಗಸು. ನವವಿವಾಹಿತರು ಮತ್ತು ಹಿಮ ಪ್ರಿಯರಿಗೆ ಸ್ವರ್ಗವಿದು.

ಏನೇನಿದೆ?

ಪ್ಯಾರಾಗ್ಲೈಡಿಂಗ್, ಐಸ್ ಸ್ಕೇಟಿಂಗ್, ರಾಫೆಲ್ಲಿಂಗ್ ಮತ್ತು ಬಂಡೆ ಹತ್ತುವ ಸಾಹಸ ಮತ್ತು ಸೋಲಾಂಗ್‌ ಕಣಿವೆ ಮತ್ತು ಕೋಶ್ಲಾ ಟ್ರೀಲೈನ್‌, ಲಾಮಾಡುಗ್‌ ಮೆಡೋಸ್‌ ಪ್ರದೇಶಗಳಲ್ಲಿ ಚಾರಣವನ್ನೂ ಮಾಡಬಹುದು.

ಈ ಅವಧಿಯಲ್ಲಿ ಇಲ್ಲಿ ಕೆಂಪು ಅಕ್ಕಿ ಅನ್ನ, ರಿವರ್‌ ಟ್ರೌಟ್‌, ಮಸಾಲೆ ಆಮ್ಲೆಟ್‌, ಸಿಡು, ಬಾಬ್ರು, ಪಟಾಂಡೆಯಂತಹ ಆಹಾರ ವೈವಿಧ್ಯದ ರುಚಿ ಸವಿಯಬಹುದು. ಬಿಡುವಾಗಿದ್ದರೆ, ಹಳೆಯ ಮನಾಲಿ ಮಾರುಕಟ್ಟೆ, ಹಿಮಾಚಲ್ ಎಂಪೋರಿಯಮ್, ಟಿಬೆಟಿಯನ್ ಮಾರುಕಟ್ಟೆ, ಮನು ಮಾರುಕಟ್ಟೆ, ದಿ ಮಾಲ್ ರಸ್ತೆಯಲ್ಲಿ ಶಾಪಿಂಗ್ ಮಾಡಬಹುದು. ಕುಲ್ಲು ಕ್ಯಾಪ್, ಟಿಬೆಟಿಯನ್ ಕರಕುಶಲ ವಸ್ತುಗಳು, ಉಣ್ಣೆ ಬಟ್ಟೆ, ಶಾಲುಗಳು, ಥಂಗ್ಕಾಗಳು ಇಲ್ಲಿ ಸಿಗುವ ವಿಶೇಷ ವಸ್ತುಗಳು.

ಹೋಗುವುದು ಹೇಗೆ?: ಹತ್ತಿರದ ವಿಮಾನ ನಿಲ್ದಾಣ ಭೂಂತಾರ್‌. ಮನಾಲಿಯಿಂದ 50 ಕಿ.ಮೀ ದೂರದಲ್ಲಿದೆ. ಇದು ದೆಹಲಿ, ಚಂಡೀಗಡ ಮತ್ತು ಶಿಮ್ಲಾಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ. ಹತ್ತಿರದ ರೈಲ್ವೆ ನಿಲ್ದಾಣ ಮನಾಲಿಯಿಂದ 285 ಕಿಲೋಮೀಟರ್ ದೂರದಲ್ಲಿರುವ ಪಠಾಣ್‌ಕೋಟ್‌ನಲ್ಲಿದೆ. ಖಾಸಗಿ ಕ್ಯಾಬ್‌ಗಳನ್ನು ಬಾಡಿಗೆಗೆ ಪಡೆಯಬಹುದು ಅಥವಾ ಮನಾಲಿ ತನಕ ಎರಡೂ ಸ್ಥಳಗಳಿಂದ ಬಸ್‌ ಮೂಲಕ ಪ್ರಯಾಣಿಸಬಹುದು.

ಡಾಲ್‌ಹೌಸಿ

ಹಿಮಾಚಲ ಪ್ರದೇಶ ರಾಜ್ಯದಲ್ಲಿರುವ ಡಾಲ್‌ಹೌಸಿ ಪಟ್ಟಣ ಚಳಿಗಾಲ ಪ್ರವಾಸದ ಪಟ್ಟಿಯಲ್ಲಿರುವ ಇನ್ನೊಂದು ತಾಣ. ಹಿಮಪದರದ ಮಧ್ಯೆ ಎದ್ದು ಕಾಣುವ ದೇವದಾರು ಮರಗಳ ಕಾಡು ನೋಡುವುದೇ ಕಣ್ಣಿಗೆ ಹಬ್ಬ. ಚಾರಣ ಪ್ರಿಯರು ರಾಷ್ಟ್ರೀಯ ಹಿಮಾಲಯನ್ ವಿಂಟರ್ ಟ್ರೆಕ್ಕಿಂಗ್ ಯಾತ್ರೆಯಲ್ಲಿ ಪಾಲ್ಗೊಳ್ಳಲು ಡಿಸೆಂಬರ್‌ನಲ್ಲಿ ಡಾಲ್‌ಹೌಸಿಗೆ ಭೇಟಿ ನೀಡಬೇಕು. 2019ರ ಜನವರಿವರೆಗೆ ಈ ಚಾರಣ ಇರುತ್ತದೆ. ಚಾರಣಕ್ಕೆ ಪ್ರವೇಶ ಶುಲ್ಕವಿದೆ.

ಚಾರಣದ ಅವಧಿ: 5 ರಾತ್ರಿ 6 ಹಗಲು. ಈ ಅವಧಿಯಲ್ಲಿ ಮದ್ರಾ, ಲುಚಿಪೋಟಿ, ಸಿಡು, ಧಾಮ್, ಅಕ್ಟೋರಿ ಎಂಬ ವಿಶೇಷ ಖಾದ್ಯಗಳ ರುಚಿ ನೋಡಬಹುದು. ಚಾರಣ ಮುಗಿಸಿ ಬಿಡುವಾದರೆ, ಗಾಂಧಿ ಚೌಕ್, ಟಿಬೆಟಿಯನ್ ಮಾರುಕಟ್ಟೆ, ಹಿಮಾಚಲ್ ಕೈಮಗ್ಗ ಮತ್ತು ಕರಕುಶಲ ಕೇಂದ್ರ ಗಳಲ್ಲಿ ಶಾಪಿಂಗ್ ಮಾಡಬಹುದು. ತಾಮ್ರ ಮತ್ತು ಬೆಳ್ಳಿಯ ದೀಪಗಳು, ಟಿಬೆಟಿಯನ್ ರತ್ನಗಂಬಳಿಗಳು, ಕುಲ್ಲು ಶಾಲುಗಳು, ಚೀಲಗಳನ್ನು ಖರೀದಿಸಬಹುದು.

ತಲುಪುವುದು ಹೇಗೆ?: ಡಾಲ್‌ಹೌಸಿಯಿಂದ 13 ಕಿ.ಮೀ ದೂರದಲ್ಲಿ ಗಗ್ಗಾಲ್‌ ವಿಮಾನ ನಿಲ್ದಾಣ ಇದೆ. ರೈಲು ಬೇಕಾದಲ್ಲಿ 80 ಕಿಲೋಮೀಟರ್ ದೂರದಲ್ಲಿರುವ ಪಠಾಣ್‌ಕೋಟ್‌ ನಿಲ್ದಾಣಕ್ಕೆ ಹೋಗಬೇಕು. ಖಾಸಗಿ ಕ್ಯಾಬ್‌ಗಳು ಬಸ್‌ಗಳು ಲಭ್ಯ ಇವೆ.

ಅವುಲಿ (ಉತ್ತರಾಖಂಡ)

ಅವುಲಿಯು ಮನಪರ್ವತ ಮತ್ತು ನಂದಾದೇವಿ ಪರ್ವತದಿಂದ ಆವೃತವಾಗಿರುವ ಪ್ರದೇಶ. ಥರಗುಟ್ಟುವ ಚಳಿಯೂ ಇದೆ. ಡಿಸೆಂಬರ್‌ನಿಂದ ಜನವರಿವರೆಗೆ ಸ್ಕೀಯಿಂಗ್‌ ಕ್ರೀಡೆ ನಡೆಯುತ್ತದೆ. ಇಲ್ಲಿಯೇ ಸ್ಕೀಯಿಂದ ತರಬೇತಿಯನ್ನೂ ಪಡೆಯಬಹುದು. ಎರಡು ಗಂಟೆಗಳ ಸ್ಕೀಯಿಂಗ್‌ಗೆ ₹500. ಗೈಡ್‌ ಬೇಕಾದರೆ ₹1ಸಾವಿರ ವೆಚ್ಚವಾಗುತ್ತದೆ. ವಾಸ್ತವ್ಯಕ್ಕೆ ₹1600ರಿಂದ ಆರಂಭಿಕ ದರವಿದೆ.

ಈ ಅವಧಿಯಲ್ಲಿ ಬೇಳೆ, ಸೊಪ್ಪು ತರಕಾರಿ, ಅನ್ನ, ಬಾಲ್‌ ಮಿಠಾಯಿಯಂತಹ ವಿಶೇಷ ಖಾದ್ಯದ ರುಚಿ ಸವಿಯಬಹುದು. ಬಿಡುವಾಗಿದ್ದರೆ ಕೈನೇಯ್ಗೆಯ ಶಾಲುಗಳು, ಉಣ್ಣೆಯ ಟೋಪಿ, ಕಂಬಳಿಯಂತಹ ವಸ್ತುಗಳನ್ನು ಶಾಪಿಂಗ್ ಮಾಡಬಹುದು.

ತಲುಪುವುದು ಹೇಗೆ?: ದೆಹಲಿಯಿಂದ ಬಸ್‌ ಮೂಲಕ ಹೃಷಿಕೇಶದವರೆಗೆ ಸಾಗಿ ನಂತರ ಟ್ಯಾಕ್ಸಿ ಮೂಲಕ ಪ್ರಯಾಣಿಸಬಹುದು. ಶೇರಿಂಗ್‌ ಟ್ಯಾಕ್ಸಿ ಸೌಲಭ್ಯವೂ ಇಲ್ಲಿದೆ. ಅಥವಾ ಜೋಷಿಮಠದಿಂದಲೂ ಕ್ಯಾಬ್‌ ಬುಕ್‌ ಮಾಡಬಹುದು. ಕೇಬಲ್‌ ಕಾರ್‌ ಸೌಲಭ್ಯವೂ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)