ಮಂಗಳವಾರ, ನವೆಂಬರ್ 19, 2019
23 °C

ಡಿಕೆಶಿ ಬಿಡುಗಡೆಗೆ ದರ್ಗಾದಲ್ಲಿ ಪ್ರಾರ್ಥನೆ

Published:
Updated:
Prajavani

ಚಿಕ್ಕಬಳ್ಳಾಪುರ: ಶಾಸಕ ಡಿ.ಕೆ.ಶಿವಕುಮಾರ್ ಅವರು ಬೇಗ ಬಂಧನದಿಂದ ಮುಕ್ತರಾಗಬೇಕು ಎಂದು ಕಾಂಗ್ರೆಸ್ ಮುಖಂಡರು ಶುಕ್ರವಾರ ನಗರದ ಎಂ.ಜಿ.ರಸ್ತೆಯಲ್ಲಿರುವ ಮಿಸ್ಕಿನ್ ಷಾ ಸೈಲಾನಿ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕೆಪಿಸಿಸಿ ಸದಸ್ಯ ಎಸ್‌.ಪಿ.ಶ್ರೀನಿವಾಸ್, ‘ಶಿವಕುಮಾರ್ ಬಂಧನ ಅಧಿಕಾರ ದುರ್ಬಳಕೆಯ ಪರಮಾವಧಿ. ಇಡಿ ದಾಳಿ, ವಿಚಾರಣೆ ಇವೆಲ್ಲವೂ ರಾಜಕೀಯವಾಗಿ ವೇಗವಾಗಿ ಬೆಳೆಯುತ್ತಿದ್ದ ಅವರ ವರ್ಚಸ್ಸನ್ನು ಜನ ಮನದಿಂದ ಅಳಿಸಲು ಮಾಡಿದ ದ್ವೇಷದ ಕ್ರಮಗಳಾಗಿವೆ’ ಎಂದು ಆರೋಪಿಸಿದರು.

‘ಶಿವಕುಮಾರ್ ಅವರು ದೇಶ ಬಿಟ್ಟು ಓಡಿ ಹೋಗಲು ತಯಾರಿ ನಡೆಸಿರಲಿಲ್ಲ. ಅವರೊಬ್ಬ ಮಹತ್ವಾಕಾಂಕ್ಷಿ ರಾಜಕಾರಣಿ, ಸಮಾಜ ಸೇವಕ ಮತ್ತು ಯಶಸ್ವಿ ಉದ್ಯಮಿ ಆಗಿದ್ದಾರೆ. ಅವರಿಗೆ ಸಮಸ್ಯೆಯ ವಿರುದ್ಧ ಸಂಘರ್ಷ ಮಾಡಿ ಗೊತ್ತೇ ಹೊರತು, ಎಂದೂ ಸವಾಲುಗಳೊಂದಿಗೆ ರಾಜಿಯಾದವರಲ್ಲ. ದಿಢೀರನೇ ತನಿಖೆಗೆ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂಬ ನೆಪ ಒಡ್ಡಿ ಅವರ ಬಂಧನ ಮಾಡಿದ್ದು ಒಂದು ರಾಜಕೀಯ ಷಡ್ಯಂತ್ರ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕಾನೂನುಗಳನ್ನು ದೇಶದ ಅಭ್ಯುದಯ ಹಾಗೂ ಪ್ರಗತಿಗಾಗಿ ಬಳಸಬೇಕು. ಅದನ್ನು ಬಿಟ್ಟು ತನ್ನ ಪಕ್ಷಕ್ಕೆ ಸೇರದವರನ್ನು ವೈರಿಯಂತೆ ನೋಡುವುದು ಮತ್ತು ಷಡ್ಯಂತ್ರದ ಮುಖಾಂತರ ತೇಜೋವಧೆ ಮಾಡುವುದು ಜನತಂತ್ರ ವ್ಯವಸ್ಥೆಯನ್ನೇ ದಿವಾಳಿಗೆ ತಂದು ಸರ್ವಾಧಿಕಾರವನ್ನು ಸ್ಥಾಪಿಸುವುದಾಗಿದೆ. ಇದಕ್ಕೆಲ್ಲ ಪ್ರಧಾನಿ ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ ಮತ್ತು ಬಿಜೆಪಿ ನಾಯಕರೇ ನೇರ ಕಾರಣ’ ಎಂದು ಆಪಾದಿಸಿದರು.

ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಕಾರ್ಯದರ್ಶಿ ಅಮಾನುಲ್ಲಾ, ರಾಜ್ಯ ಹಿಂದುಳಿದ ವರ್ಗಗಳ ಕಾಂಗ್ರೆಸ್ ಕಾರ್ಯದರ್ಶಿ ನಾರಾಯಣಸ್ವಾಮಿ, ದರ್ಗಾ ಸಮಿತಿ ಅಧ್ಯಕ್ಷ ಇಕ್ಬಾಲ್, ಮುಖಂಡರಾದ ಮಹಮ್ಮದ್ ದಾವೂದ್, ಮಂಚನಬಲೆ ಇಸ್ಮಾಯಿಲ್, ರಾಜಶೇಖರ್, ಜಯರಾಂ, ಲಕ್ಷ್ಮಣ್, ಮಿಥುನ್, ಕೃಷ್ಣಪ್ಪ, ಬಾಬಾಜಾನ್, ದೀಪು, ಮುದಾಸಿರ್, ಹಮೀಮ್, ಅನಿಲ್, ಷಾ ಸಾಬ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)