ಗರ್ಭಧಾರಣೆ ಕುರಿತ ಕಲ್ಪನೆ ಹಾಗೂ ನಿಜಾಂಶ ಬಗ್ಗೆ ಇಲ್ಲಿದೆ ಸಮಗ್ರ ವಿವರ

7

ಗರ್ಭಧಾರಣೆ ಕುರಿತ ಕಲ್ಪನೆ ಹಾಗೂ ನಿಜಾಂಶ ಬಗ್ಗೆ ಇಲ್ಲಿದೆ ಸಮಗ್ರ ವಿವರ

Published:
Updated:

ಗರ್ಭಿಣಿಯ ಪರಿಸ್ಥಿತಿಯನ್ನು ಕ್ಲಿಷ್ಟಗೊಳಿಸುವ, ತಾಯಿ, ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವ ಕೆಲವು ತಪ್ಪು ಕಲ್ಪನೆಗಳು ಹಾಗೂ ನಿಜಾಂಶಗಳು ಇಲ್ಲಿವೆ.

* ತಪ್ಪು ಕಲ್ಪನೆ: ಗರ್ಭವನ್ನು ಧರಿಸಿದಾಗ ಇಬ್ಬರ ಆಹಾರವನ್ನು ಸೇವಿಸಬೇಕು. ಆಹಾರ ಪ್ರಮಾಣ ಹೆಚ್ಚಿಸಿಕೊಳ್ಳಬೇಕು. 
ನಿಜಾಂಶ: ಗರ್ಭದಲ್ಲಿರುವ ಮಗುವಿಗೆ ದಿನಕ್ಕೆ ಕೇವಲ 300 ಕ್ಯಾಲೊರಿ ಅಗತ್ಯವಿರುತ್ತದೆ. ಆದ್ದರಿಂದ ಆಹಾರದ ಪ್ರಮಾಣ ಹೆಚ್ಚಿಸಿಕೊಳ್ಳುವುದಕ್ಕಿಂತ ಪೌಷ್ಟಿಕಾಂಶಯುಕ್ತ ಆಹಾರ, ವಿಟಮಿನ್ ಹಾಗೂ ಪ್ರೊಟೀನ್‍ಯುಕ್ತ ಆಹಾರಸೇವನೆ ಮುಖ್ಯ.

* ತಪ್ಪು ಕಲ್ಪನೆ: ಗರ್ಭಧಾರಣೆಯ ಸಮಯದಲ್ಲಿ ಲೈಂಗಿಕ ಕ್ರಿಯೆ ಸಲ್ಲದು. ಈ ಸಮಯದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಮಗುವಿಗೆ ಅಪಾಯ. ಅವಧಿಗೆ ಮುನ್ನ ಹೆರಿಗೆಗೆ ಕಾರಣವಾಗುತ್ತದೆ. 
ನಿಜಾಂಶ: ಲೈಂಗಿಕ ಕ್ರಿಯೆಯಿಂದ ಮಗುವಿಗೆ ಯಾವುದೇ ತೊಂದರೆ ಆಗುವುದಿಲ್ಲ. ಹೊಟ್ಟೆಯ ಒಳಪದರಗಳಲ್ಲಿ ಆಮ್ನಿಯೋಟಿಕ್ ಸ್ಯಾಕ್‍ನಿಂದ ಭ್ರೂಣ ರಕ್ಷಣೆ ಪಡೆದಿರುತ್ತದೆ. ಆದರೆ ತೊಡಕಾಗದಂತೆ, ಸೂಕ್ತ ಭಂಗಿಯಲ್ಲಿ ಲೈಂಗಿಕ ಕ್ರಿಯೆ ನಡೆಸುವುದು ಅವಶ್ಯಕ. ಹೊಟ್ಟೆಯ ಮೇಲೆ ಅಧಿಕ ಭಾರ ಬೀಳದಂತೆ ನೋಡಿಕೊಳ್ಳಬೇಕಷ್ಟೆ. ಹೆರಿಗೆಗೂ ಲೈಂಗಿಕ ಕ್ರಿಯೆಗೂ ಯಾವುದೇ ಸಂಬಂಧ ಇಲ್ಲ.

* ತಪ್ಪು ಕಲ್ಪನೆ: ಥಂಡಿ ಹಾಗೂ ಹುಳಿ ಆಹಾರಸೇವನೆಯಿಂದ ಗರ್ಭಿಣಿಯರಿಗೆ ಬೇಗ ಶೀತಜ್ವರ ಬರುತ್ತದೆ. ತಾಯಿಯಾಗಲಿರುವವರು ಸಿಟ್ರಸ್ ಹಣ್ಣು, ಪಾನೀಯ, ನಿಂಬೆ, ಮೊಸರು, ಮಜ್ಜಿಗೆಯ ಸೇವನೆಯಿಂದ ದೂರವಿರಬೇಕು. ಈ ಅಂಶಗಳು ಶೀತ ತಂದು ಕೆಮ್ಮು ಉಂಟಾಗಿ ಮಗುವಿಗೆ ತೊಂದರೆಯಾಗುತ್ತದೆ. 
ನಿಜಾಂಶ: ಈ ಆಹಾರಗಳು ತಾಯಿ ಹಾಗೂ ಮಗುವಿಗೆ ಉತ್ತಮ ಪೋಷಕಾಂಶ ನೀಡುವಂಥವು. ಉದಾಹರಣೆಗೆ, ಎಲ್ಲ ರೀತಿಯ ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಸಿ ಅಂಶವಿದ್ದು, ಕಬ್ಬಿಣಾಂಶ ಅತ್ಯಗತ್ಯವಿರುವ ತಾಯಿ ಹಾಗೂ ಮಗುವಿಗೆ ಇದು ಅತಿ ಮುಖ್ಯವಾದ ವಿಟಮಿನ್ ಆಗಿದೆ. ಮೊಸರು ಹಾಗೂ ಮಜ್ಜಿಗೆ ಉತ್ತಮ ಪ್ರೊಬಯೋಟಿಕ್‍ಗಳು. ಇದು ತಾಯಿಯ ಕರುಳನ್ನು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. ಜೀರ್ಣಕ್ರಿಯೆ ಸಮರ್ಪಕವಾಗಿ ನಡೆಯುವಂತೆ ಮಾಡಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇವೆಲ್ಲವನ್ನೂ ಗರ್ಭಿಣಿಯರ ಆಹಾರಪದ್ಧತಿಯಲ್ಲಿ ಅಳವಡಿಸುವುದು ತುಂಬ ಮುಖ್ಯ.

* ತಪ್ಪು ಕಲ್ಪನೆ: ಕೇಸರಿ ತಿಂದರೆ ಮಗು ಬೆಳ್ಳಗೆ ಹುಟ್ಟುತ್ತದೆ
ನಿಜಾಂಶ: ಗರ್ಭಿಣಿಯರು ಹಾಲಿನೊಂದಿಗೆ ಕೇಸರಿ ಬೆರೆಸಿ ಕುಡಿದರೆ ಮಗು ಬೆಳ್ಳಗೆ ಹುಟ್ಟುತ್ತದೆ ಎಂಬ ನಂಬಿಕೆ ಎಷ್ಟೋ ಕುಟುಂಬಗಳಲ್ಲಿ ಇದೆ. ಆದರೆ ನಿಜವೆಂದರೆ, ಯಾವುದೇ ಆಹಾರವೂ ಮಗುವಿನ ಚರ್ಮದ ಬಣ್ಣವನ್ನು ಬದಲಾಯಿಸಲು ಸಾಧ್ಯವಿಲ್ಲ. ಚರ್ಮದ ಬಣ್ಣ ಸಂಪೂರ್ಣವಾಗಿ ಪೋಷಕರ ವಂಶವಾಹಿಗಳ ಮೇಲೆ ಅವಲಂಬಿತವಾಗಿರುತ್ತದೆ.

* ತಪ್ಪು ಕಲ್ಪನೆ: ಗರ್ಭಿಣಿಯರು ಮೀನು ತಿನ್ನಬಾರದು. ಇದರಲ್ಲಿ ಕೆಲವು ವಿಷಕಾರಿ ಅಂಶವಿದ್ದು, ಅತಿಯಾದ ಉಷ್ಣ ಹಾಗೂ ಚರ್ಮದ ಅಲರ್ಜಿ ಆಗುತ್ತದೆ.
ನಿಜಾಂಶ: ಮೀನು ಹೆಚ್ಚು ಪ್ರೊಟೀನು, ಒಮೆಗಾ 3 ಹಾಗೂ ಇನ್ನಿತರ ಅವಶ್ಯಕ ಪೋಷಕಾಂಶಗಳ ಆಗರ. ಇದು ಭ್ರೂಣದ ಮೆದುಳು ಹಾಗೂ ಕಣ್ಣಿನ ಬೆಳವಣಿಗೆಗೆ ಅತ್ಯವಶ್ಯಕ. ಆದರೆ ಅತಿ ಹೆಚ್ಚಿನ ಮರ್ಕ್ಯುರಿ ಅಂಶವಿರುವ ಶಾರ್ಕ್, ಟ್ಯೂನ, ಮ್ಯಾಕೆರಲ್ ಮೀನನ್ನು ಸೇವಿಸಬಾರದು. ಸಾರ್ಡಿನೆಸ್ -ಮಾತಿ, ಆಂಕೊವಿಸ್ -ನತೋೀಲಿ, ನೆತಿಲಿ, ಸಾಲ್ಮನ್, ರೋಹು, ಕ್ಯಾಟ್ಲಾ ಮೀನುಗಳನ್ನು ನಿಯಮಿತ ಮಟ್ಟದಲ್ಲಿ ಸೇವಿಸಬಹುದು.

* ತಪ್ಪು ಕಲ್ಪನೆ: ಗರ್ಭಿಣಿಯರಿಗೆ ಉಪ್ಪಿನಕಾಯಿ ಹಾಗೂ ಐಸ್‍ಕ್ರೀಂ ಇಷ್ಟವಾಗುತ್ತದೆ.
ನಿಜಾಂಶ: ಈ ರೀತಿಯ ಆಹಾರವನ್ನು ತಿನ್ನಬೇಕು ಎಂದು ಕೆಲವರಿಗೆ ಅನ್ನಿಸುತ್ತದೆ; ಆದರೆ ಎಲ್ಲರಿಗೂ ಅಲ್ಲ. ಗರ್ಣಿಣಿಯರು ಉಪ್ಪಿನ ಕಾಯಿಯನ್ನು ಹೆಚ್ಚು ತಿನ್ನುವುದು ಉಪ್ಪಿನ ಅಂಶಕ್ಕಾಗಿ. ಕೆಲವು ಖನಿಜಾಂಶಗಳು ಗರ್ಭವನ್ನು ಧರಿಸಿದ ಸಮಯದಲ್ಲಿ ಅಗತ್ಯವಾಗಿರುತ್ತದೆ. ಜೊತೆಗೆ ಐಸ್‍ಕ್ರೀಂ, ಸಿಹಿ ತಿಂಡಿಗಳಲ್ಲಿನ ಸಕ್ಕರೆ ಅಂಶ ದೇಹದಲ್ಲಿ ಸೆರೊಟಿನ್ ಉತ್ಪತ್ತಿ ಮಾಡಿ, ಹಿತವಾದ ಅನುಭವ ನೀಡುತ್ತದೆ. ಆದ್ದರಿಂದ ಈ ಸಮಯದಲ್ಲಿ ಇಂಥ ಆಹಾರಗಳ ಸೇವನೆಯನ್ನು ಮಾಡುತ್ತಾರೆ.

* ತಪ್ಪು ಕಲ್ಪನೆ: ಅತಿ ಬಿಸಿ ಹಾಗೂ ಖಾರದ ಪದಾರ್ಥ ತಿನ್ನುವುದರಿಂದ ಗರ್ಭಪಾತವಾಗುತ್ತದೆ.
ನಿಜಾಂಶ: ಮಿತವಾಗಿ ತಿಂದರೆ ಮಗುವಿಗೆ ಯಾವುದೇ ತೊಂದರೆ ಆಗುವುದಿಲ್ಲ. ಆದರೆ ಅತಿಯಾದ ಖಾರದ ಸೇವನೆ ಎದೆಯಲ್ಲಿ ಉರಿಯನ್ನು ಉಂಟುಮಾಡುತ್ತದೆ. 

* ತಪ್ಪು ಕಲ್ಪನೆ: ಹೊಟ್ಟೆ ಕಡಿಮೆ ಕಾಣಿಸಿಕೊಂಡರೆ ಗಂಡುಮಗು, ಮೊಡವೆ ಆದರೆ ಹೆಣ್ಣುಮಗು.
ನಿಜಾಂಶ: ಹೊಟ್ಟೆಯ ಪ್ರಮಾಣ ಆಕೆಯ ದೇಹದ ಆಕಾರವನ್ನು ಅವಲಂಬಿಸಿರುತ್ತದೆ. ಇದು ಮಗುವಿನ ಲಿಂಗದ ಸೂಚಕವಲ್ಲ. ಮೊಡವೆಗೂ ಮಗುವಿನ ಲಿಂಗನಿರ್ಧಾರಕ್ಕೂ ಸಂಬಂಧ ಇಲ್ಲ. ಇದು ಹಾರ್ಮೋನಿನ ಬದಲಾವಣೆಯ ಪರಿಣಾಮ ಅಷ್ಟೇ ಆಗಿರುತ್ತದೆ.

* ತಪ್ಪು ಕಲ್ಪನೆ: ಗರ್ಭಿಣಿಯರು ವಿಮಾನದಲ್ಲಿ ಪ್ರಯಾಣಿಸಬಾರದು
ನಿಜಾಂಶ: ಹೆರಿಗೆ ಸಮಯ ಇನ್ನೂ ಆರು ವಾರ ಇದೆ ಎನ್ನುವಾಗಲೂ ವಿಮಾನದಲ್ಲಿ ಹೋಗುವುದು ಯಾವುದೇ ರೀತಿಯಿಂದಲೂ ಹಾನಿಯಿಲ್ಲ. ಕಾಲುಗಳನ್ನು ಚಾಚಿಕೊಂಡು ಹಿಂದಕ್ಕೆ ಒರಗಿ ಆರಾಮವಾಗಿ ಕುಳಿತುಕೊಳ್ಳಬೇಕು. ಆದರೆ ಯಾವಾಗಲೂ ವಿಮಾನದಲ್ಲಿ ಪ್ರಯಾಣಿಸುವವರಾದರೆ ಎಚ್ಚರಿಕೆ ಅಗತ್ಯ.

* ತಪ್ಪು ಕಲ್ಪನೆ: ಹೆಚ್ಚು ಭಾರದ ವಸ್ತುಗಳನ್ನು ಎತ್ತಿದರೆ ಹೆರಿಗೆ ಸರಾಗವಾಗುತ್ತದೆ.
ನಿಜಾಂಶ: ಈ ಸಮಯದಲ್ಲಿ ಅತಿಯಾದ ಭಾರ ಹೊರುವುದು ದೇಹದ ಹಿಂಭಾಗದಲ್ಲಿ ನೋವು ತಂದು ಬೆನ್ನುಹುರಿಗೆ ಹಾನಿಯಾಗಬಹುದು. ಆದರೆ ಸುಸ್ತಿನ ಅನುಭವವಾಗಿಲ್ಲದಿದ್ದರೆ, ಸೂಕ್ತ ರೀತಿಯಲ್ಲಿ ಸ್ವಲ್ಪ ಭಾರವನ್ನು ಎತ್ತುವುದು ಸರಿಯೇ. ಉದಾಹರಣೆಗೆ, ದಿನಸಿ ಬ್ಯಾಗ್ ತರುವುದು, ಚಿಕ್ಕ ಮಕ್ಕಳನ್ನು ಎತ್ತಿಕೊಳ್ಳುವುದು... ಇಷ್ಟು ಭಾರವನ್ನು ಎತ್ತಬಹುದು. ಮಂಡಿ ಮೇಲೆ ಭಾರವನ್ನು ಊರಿ ತೆಗೆದುಕೊಳ್ಳಬೇಕೇ ವಿನಾ, ಹಿಂಭಾಗದ ಮೇಲೆ ಹೆಚ್ಚಿನ ಭಾರವನ್ನು ಬಿಡಬಾರದು. ಒಂದೇ ಕಡೆ ದೇಹಕ್ಕೆ ಒತ್ತಡ ಮಾಡಿಕೊಳ್ಳುವ ಬದಲು, ಎರಡೂ ತೋಳುಗಳಿಗೂ ಸಮಪ್ರಮಾಣದಲ್ಲಿ ಭಾರವನ್ನು ಬಿಡುವುದು ಸೂಕ್ತ.

Tags: 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !