ತಾಯಿಯಿಂದಲೇ ಗರ್ಭಿಣಿ ಮಗಳ ಮರ್ಯಾದೆಗೇಡು ಹತ್ಯೆ

7

ತಾಯಿಯಿಂದಲೇ ಗರ್ಭಿಣಿ ಮಗಳ ಮರ್ಯಾದೆಗೇಡು ಹತ್ಯೆ

Published:
Updated:
Deccan Herald

ನಿಡಗುಂದಿ (ವಿಜಯಪುರ): ಸುಕ್ಷೇತ್ರ ಯಲಗೂರ ಗ್ರಾಮದಲ್ಲಿ ಗರ್ಭಿಣಿ ಮಹಿಳೆಯ ಕತ್ತು ಸೀಳಿ ಮಂಗಳವಾರ ಮುಸ್ಸಂಜೆ ಕೊಲೆ ಮಾಡಲಾಗಿದ್ದು, ತಾಯಿಯೇ ಮರ್ಯಾದೆಗೇಡು ಹತ್ಯೆ ನಡೆಸಿದ್ದಾರೆ ಎಂದು ದೂರಲಾಗಿದೆ.

ರೇಣುಕಾ ಶಂಕ್ರಪ್ಪ ನಾಯ್ಕ್‌ (24) ಹತ್ಯೆಗೀಡಾಗಿರುವ ಗರ್ಭಿಣಿ.

ರೇಣುಕಾ ಶಂಕ್ರಪ್ಪ ನಾಯ್ಕ್‌ (ಹಾಲುಮತ) ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಶಿರವಾರ ಗ್ರಾಮದವರು. ಈಕೆಯ ಪತಿ ಶಂಕ್ರಪ್ಪ ನಾಯ್ಕ್ (ಲಂಬಾಣಿ) ದೇವದುರ್ಗ ತಾಲ್ಲೂಕಿನ ಮುಕ್ಕಲಗುಡ್ಡ ತಾಂಡಾದವರು. ಎರಡು ವರ್ಷದಿಂದ ಯಲಗೂರ ಗ್ರಾಮದಲ್ಲಿ ನೆಲೆಸಿದ್ದರು. ಶಂಕ್ರಪ್ಪ ನಾಯ್ಕ್‌ ನಿಡಗುಂದಿಯಲ್ಲಿ ಮೊಬೈಲ್‌ ಅಂಗಡಿ ನಡೆಸುತ್ತಿದ್ದಾರೆ.

‘ರೇಣುಕಾ, ನಾನು ಪಿಯುಸಿ ಓದುವಾಗಲೇ ಪರಸ್ಪರ ಪ್ರೀತಿಸಿದ್ದೆವು. ಮನೆಯವರ ವಿರೋಧವಿದ್ದುದರಿಂದ ಎರಡು ವರ್ಷದ ಹಿಂದೆ ವಿವಾಹವಾಗಿ, ಊರು ತೊರೆದು ಬಂದು ಯಲಗೂರದಲ್ಲಿ ನೆಲೆಸಿದ್ದೆವು. ಪತ್ನಿಯ ಕುಟುಂಬದವರು ಸದಾ ಕೊಲೆ ಮಾಡುವುದಾಗಿ ಹೇಳುತ್ತಿದ್ದರು.

ಆದರೂ ರೇಣುಕಾ, ಗರ್ಭಿಣಿಯಾಗಿದ್ದರಿಂದ ಕೆಲ ದಿನಗಳ ಹಿಂದಷ್ಟೇ ತನ್ನ ತಾಯಿಯನ್ನು ನಾವು ವಾಸವಿದ್ದ ಯಲಗೂರಿಗೆ ಕರೆಸಿಕೊಂಡಿದ್ದರು. ನನ್ನ ಪತ್ನಿಯನ್ನು ಕೊಲೆಗೈಯುವ ಉದ್ದೇಶದಿಂದಲೇ, ಆಕೆಯ ತಾಯಿ ಮಾರೆವ್ವ ಮಹಾದೇವ ಪೂಜಾರಿ, ತನ್ನ ಪರಿಚಯದ ಇಬ್ಬರನ್ನು ನಾವಿದ್ದ ಮನೆಗೆ ಕರೆಸಿಕೊಂಡು, ನಾನು ಕೆಲಸಕ್ಕೆ ಹೋಗಿದ್ದ ಸಂದರ್ಭ ಹರಿತ ಆಯುಧದಿಂದ ಮೂವರು ಸೇರಿ ಕೊಲೆ ಮಾಡಿ ಪರಾರಿಯಾಗಿದ್ದಾರೆ’ ಎಂದು ಶಂಕ್ರಪ್ಪ ನಾಯ್ಕ್‌ ನಿಡಗುಂದಿ ಪೊಲೀಸರಿಗೆ ದೂರು ನೀಡಿದ್ದಾರೆ.

‘ನಾಲ್ಕು ತಿಂಗಳು ಗರ್ಭಿಣಿಯಾಗಿದ್ದ ರೇಣುಕಾ, ಈಚೆಗಷ್ಟೇ ತನ್ನ ತಾಯಿ ಮಾರೆವ್ವನನ್ನು ತನ್ನಲ್ಲಿಗೆ ಕರೆಸಿಕೊಂಡಿದ್ದರು. ಈ ಸಂದರ್ಭ ಆಕೆಯ ಸಹೋದರ ಮಲ್ಲಿಕಾರ್ಜುನ ಪೂಜಾರಿ, ತಂಗಿಯ ಗಂಡ ರಮೇಶ ಗೋಲಿ ಸಹ ಬಂದಿದ್ದರು. ಮಾರೆವ್ವ ಮಗಳ ಮನೆಯಲ್ಲೇ ಉಳಿದಳು. ಉಳಿದವರಿಬ್ಬರು ವಾಪಸ್‌ ಹೋಗಿದ್ದರು.

ಮಂಗಳವಾರ ಶಂಕ್ರಪ್ಪ ನಿಡಗುಂದಿಗೆ ಹೋಗಿದ್ದರು. ವಾಹನದಲ್ಲಿ ಇಬ್ಬರು ಪುರುಷರು ಮನೆ ಬಳಿ ಬಂದಿಳಿದಿದ್ದರು. ಕೆಲ ಹೊತ್ತಿನಲ್ಲೇ ಮಾರೆವ್ವನನ್ನು ಕರೆದುಕೊಂಡು ಗಾಬರಿಯಿಂದ ಹೋದರು. ಮನೆಗೆ ಹೋಗಿ ನೋಡಿದರೆ ರೇಣುಕಾಳ ಕೊಲೆಯಾಗಿತ್ತು. ತಕ್ಷಣವೇ ಶಂಕ್ರಪ್ಪಗೆ ವಿಷಯ ಮುಟ್ಟಿಸಿದೆವು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

**

ರೇಣುಕಾಳ ತಾಯಿ ಕೊಲೆ ನಂತರ ನಾಪತ್ತೆಯಾಗಿದ್ದಾರೆ. ಇದು ಸಂಶಯ ಮೂಡಿಸಿದೆ. ಆರೋಪಿಗಳನ್ನು ಬಂಧಿಸಿದ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ.
–ಎಸ್‌.ಯು.ಮಹೇಶ್ವರಗೌಡ, ಡಿವೈಎಸ್‌ಪಿ, ಬಸವನಬಾಗೇವಾಡಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !