ತಿಲಕ ಇಟ್ಟರೆ ಸ್ವರ್ಗವು ಸಿಗದು!

ಬುಧವಾರ, ಮಾರ್ಚ್ 20, 2019
31 °C

ತಿಲಕ ಇಟ್ಟರೆ ಸ್ವರ್ಗವು ಸಿಗದು!

Published:
Updated:
Prajavani

ಎಲ್ಲಾ ಕಡೆ ದೇಶಪ್ರೇಮ ಉಕ್ಕಿ ಹರಿತಿರುವಾಗ, ಹುತಾತ್ಮ ಸೈನಿಕರ, ಉಗ್ರರ ಹೆಣಗಳ ಮೇಲೆ ಹೊಲಸು ರಾಜಕೀಯ ನಡಿತಿರುವಾಗ, ಮೈತ್ರಿ ಸರ್ಕಾರದ ಅತಿರಥ ಮಹಾರಥರು ಸೀಟು ಭಿಕ್ಷೆ ಬೇಡುತ್ತಿರುವಾಗ, 22 ಸೀಟು ಬಿಜೆಪಿ ಜೋಳಗಿ ಒಳಗ್‌ ಬಿದ್ದಂಗ್ಹ ಅಂತ ಹೇಳಿದ್ದು ಜಾಗತಿಕ ಸುದ್ದಿ ಆಗಿರುವಾಗ, ಬುದ್ಧಿಜೀವಿಗಳನ್ನ ಪೇಜಾವರ ಶ್ರೀಗಳು ಟೀಕಿಸಿದಾಗಲೂ ಪ್ರಭ್ಯಾನ ಸುಳಿವs ಕಂಡಿರಲಿಲ್ಲ. ಏನಾಯ್ತು ಇಂವ್ಗ ಧಾಡಿ ಅನ್ನೊ ಚಿಂತಿ ಒಳ್ಗ ಅವ್ನ ಮನಿಗೆ ಹೋಗಿ, ‘ಮನ್ಯಾಗ್‌ ಅದಾನ ಏನವಾ’ ಅಂತ ಕೇಳ್ದೆ. ‘ಒಂದ್‌ ವಾರದಿಂದ ಅವ್ರು ಪತ್ತೇನ ಇಲ್ರಿ’ ಅಂದ್ಳು ಪಾರೋತಿ. ‘ಏನಾತಬೆ. ಕುಂಭಮೇಳದ ಪುಣ್ಯಸ್ನಾನ ಹೆಸರ್‌ನ್ಯಾಗ್‌ ದೇಶಾಂತರ ಹೋಗ್ಯಾನ ಏನ್‌’ ಎಂದು ಪ್ರಶ್ನಿಸಿದೆ.

‘ಅಯ್ಯ, ಇಲ್ರಿ, ಅಂಥದ್ದು ನನ್ನ ನಸೀಬನ್ಯಾಗ್‌ ಇಲ್ಲ. ರಾಜ್ಯದಾಗ 22 ಸೀಟ್‌ ಗೆಲ್ಸಿ ‘ನಮೋ’ ಅವರನ್ನ ಮತ್ತ ಪಿಎಂ ಮಾಡೋತನಕ ವಿಶ್ರಾಂತಿ ತಗೊಳ್ಳುದಿಲ್ಲ, ಮನಿಗೂ ಹೋಗುದಿಲ್ಲ ಅಂತ ಆಡಿಯೋರಪ್ಪನವ್ರು ಆಣಿ ಮಾಡ್ಯಾರಲ‍್ರಿ. ನಿಮ್ಮ ಚೆಡ್ಡಿ ದೋಸ್ತ್‌ನೂ ತಲ್ಯಾಗ್‌ ಅದ್ನ ತುಂಬ್ಕೊಂಡಾರ‍್ರಿ. ಅದಕ್ಕಂತ ಬಿಜೆಪಿಯವ್ರ ಮನಿ ಮ್ಯಾಲೆ ಬಾವುಟ ಹಾರಿಸುವ, ಕಾಂಗ್ರೆಸ್‌ – ಜೆಡಿಎಸ್‌ನವ್ರನ್ನ ಬಿಜೆಪಿಗೆ ಎಳಕೊಂಡುಬರೊ ಕೆಲ್ಸದಾಗ ತೊಡಗ್ಯಾರಿ. ಮನಿಗಿ ಬರಾಕ್‌ ಪುರುಸೊತ್ತು ಇಲ್ಲಂತ ಶಾಖಾ ಕಚೇರಿ ಒಳ್ಗ ವಸ್ತಿ ಒಗದಾರ‍್ರಿ’ ಅಂದ್ಳು.

‘ಭೇಶ್‌ ಆತ್‌ ಬಿಡವ್ವಾ. ಅಲ್ಲೆ ಎಲ್ಲೇರ ಸಿಗ್ತಾನೇನ್‌ ನೋಡ್ತೀನಿ’ ಅಂತ ಹೇಳಿ ಅವ್ನ ಧ್ಯಾನದಾಗ ಬಜಾರ್‌ ಕಡೆ ಹೊಂಟಾಗ್‌, ಹಣೆಗೆ ಢಾಳಾಗಿ ತಿಲಕ ಧರಿಸಿದ ಪ್ರಭ್ಯಾ, ಗಕ್ಕನೆ ಎದುರಿಗೆ ಸಿಕ್ಕ. ನನ್ನ ಹಣಿಗೆ ಕುಂಕ್ಮಾ ಹಚ್ಚಾಕ್‌ ಬಂದ. ಸೆಲ್ಫಿ ವಿತ್‌ ತಿಲಕ್‌ ತಗೋಳ್ಳಾಕ್‌ ಅವ್ಸರಾನೂ ಮಾಡ್ದಾ.

‘ಏಯ್‌ ತಡಿಯೋ ಮಾರಾಯಾ. ಹಣ್ಯಾಗ್ ಕುಂಕ್ಮಾ ಹಚ್ಕೊಂಡವರನ್ನ ನೋಡಿದ್ರ ಅಂಜಿಕಿ ಬರ್ತದ ಅಂತ ಸಿದ್ರಾಮಣ್ಣ ಹೇಳ್ಯಾರಲ್ಲ’ ಎಂದೆನ್ನುತ್ತ ದೂರ ಸರಿದೆ.

‘ರಾಗಾ’, ಕುಂಕ್ಮಾ ಹಚ್ಚೊಂಡ್‌ ಗುಡಿ ಗುಂಡಾರ್‌ ಸುತ್ತುವಾಗ್‌ ಸಿದ್ರಾಮಣ್ಣಗ ಅಂಜಿಕಿ ಬರ್ಲಿಲ್ಲೇನ್‌’ ಅಂತ ಕಿಚಾಯಿಸಿದ.

‘ಸಿದ್ರಾಮಣ್ಣ ಹೇಳಿರೋದು ದೇವಸ್ಥಾನಕ್ಕೆ ಭೇಟಿ ಕೊಡೊ ಸಾಚಾ ಭಕ್ತರ ಬಗ್ಗೆ ಅಲ್ಲ. ಕ್ರಿಮಿನಲ್‌ ಕೃತ್ಯ ಎಸಗಿದ ಕಾವಿ, ಅನೈತಿಕ ಪೊಲೀಸ್‌ಗಿರಿ ಮಾಡೊ ಕುಂಕುಮಧಾರಿಗಳಂತಹ ನಕಲಿ ಭಕ್ತರ ಬಗ್ಗೆ. ಟ್ವೀಟ್‌ಗಳನ್ನ ಸ್ವಲ್ಪ ಲಕ್ಷ್ಯ ಕೊಟ್ಟು ಓದು. ಕುಂಕ್ಮಾ ವಿಷ್ಯಾ ಬಿಡು. ನೀ ಏನ್‌ ಮನಿ ಮಠಾ ಬಿಟ್ಟು 22ರ ಶಪಥದ ಹಿಂದ ಬಿದ್ದಿಯಂತs’ ಅಂತ ವಿಷಯಾಂತರ ಮಾಡ್ದೆ.

‘ಹ್ಞೂಂನೋ ಮಾರಾಯಾ. ಏನರ್‌ ಮಾಡಿ 22 ಗೆಲ್ಲಲೇಬೇಕು. ಅವಾಗರ, ಆಪರೇಷನ್‌ ಮಾಡ್ದ ಸಿಎಂ ಆಗ್ಬಹುದು ಅನ್ನೋದು ನಮ್ಮ ಸಾಹೇಬ್ರ ಕನಸ್‌ ಆಗೇದ. ಅದ್ಕ, ಬಿಜೆಪಿಗೆ ಸೇರ್ಪಡೆಯಾಗುವವರಿಗೆ ಗಾಳ ಹಾಕೋದು ಬೂತ್‌ ಪ್ರಮುಖರ ಕೆಲ್ಸಾ ಅಂತ ಹೇಳ್ಯಾರ. ಹಿಂಗಾಗಿ ನನಗ್‌ ತುರ‍್ಸೊಲ್ಲಾಕ್ಕೂ ಪುರುಸೊತ್ತಿಲ್ಲದ್ಹಂಗ್‌ ಆಗೇದ್‌. ಕಾಂಗ್ರೆಸ್‌, ಜೆಡಿಎಸ್‌ನವ್ರಿಗೆ ಆಸೆ ತೋರ‍್ಸಿ ಕರ್ಕೊಂಡ್‌ ಬರೂದ ದೊಡ್ಡ ಕೆಲ್ಸ ಆಗೇತಿ’ ಅಂದ.

‘ಅಲ್ಲಲೇ, ಕಾಂಗ್ರೆಸ್‌ ಮುಕ್ತ ಭಾರತ್‌ ಮಾಡೋದು ನಮೋ ಮತ್ತು ಚಾಣಕ್ಯನ ಗುರಿ ಆಗಿತ್ತಲ್ಲ. ಅದ್ಕ ಎಳ್ಳು ನೀರು ಬಿಟ್ಟೀರಿ ಅಂದ್ಹಂಗಾತು’ ಎಂದೆ.

‘ಏನ್‌ ನಿನ್ ಮಾತಿನ ಅರ್ಥಾ. ಒಗಟ್‌ ಥರಾ ಮಾತಾಡ್‌ಬೇಡ’ ಎಂದು ಮುಖ ಸಿಂಡರಿಸಿದ.

‘ಇದ್ರಾಗ್‌ ಒಗಟ್‌ ಏನ್‌ ಅದಲೇ, ಕಾಂಗ್ರೆಸ್‌ ಮುಕ್ತ ದೇಶ ಮಾಡಾಕ್‌ ಹೊಂಟವ್ರು, ಕಾಂಗ್ರೆಸ್‌ನವರನ್ನ ಬಿಜೆಪಿಗೆ ಸೇರಿಸಿಕೊಂಡ್ರ ಭಾರತ್‌ ಮುಕ್ತ ಅಲ್ಲ, ಬಿಜೆಪಿ ಯುಕ್ತ ಕಾಂಗ್ರೆಸ್‌ ಆಗ್ತದಲ್ಲಲೇ. ನಿಮ್ಮ ಪರಿವಾರನ ಕಾಂಗ್ರೆಸ್‌ ಆಗ್ತದಲ್ಲ’ ಎಂದು ಕಾಲೆಳೆದೆ.

‘ಏಯ್‌, ಅವೆಲ್ಲ ಬರೀ ಭಾಷ್ಣಾ ಮಾಡಾಕ್‌ ಅಷ್ಟ ಸರಿ. ಅದೇನೊ ಅಂತಾರಲ್ಲ, ಆಚಾರ್‌ ಹೇಳಾಕ್‌, ಬದನಿಕಾಯಿ ತಿನ್ನಾಕ. ಹಂಗs 22 ಸೀಟ್‌ ಗೆಲ್ಲಬೇಕಂದ್ರ ಬಿಜೆಪಿ ಯುಕ್ತ ಕಾಂಗ್ರೆಸ್‌ ಮಾಡುದು ಅನಿವಾರ್ಯ. ಅದ್ಕ ನಮ್ಮ ಸಾಹೇಬ್ರು ತಮ್ಮ ಮನಿಗೂ ಹೋಗಲಾರ‍್ದ ಹಗಲು ರಾತ್ರಿ ಕೆಲ್ಸಾ ಮಾಡಾಕತ್ತಾರ್‌’ ಅಂದ ಹುರುಪಿನಿಂದ.

‘ನೀ ಏನ್‌ ಬುದ್ಧಿಜೀವಿನಾ ಇಲ್ಲಾ ಲದ್ದಿ ಜೀವಿನಾ’ ಅಂತ ದಿಢೀರನೆ ಹೊಸ ಪ್ರಶ್ನೆ ಒಗ್ದಾ.

‘ನಾ ಎರಡೂ ಅಲ್ಲ. ಸಾಮಾನ್ಯ ಜೀವಿ. ಯಾಕ್‌ ಈ ಅನುಮಾನ ಅಂತ’ ಕೇಳ್ದೆ.

‘ಬುದ್ಧಿಜೀವಿಗಳಿಗೆ ದೇಶಾಭಿಮಾನ ಇಲ್ಲಂತ ಪೇಜಾವರ ಶ್ರೀಗಳು ಹೇಳ್ಯಾರಲ್ಲ ಅದ್ಕ ಸುಮ್ನ ಕೇಳ್ದೆ’ ಎಂದ.

‘ಲೇ, ಮಾತಿಗೆ ತಪ್ಪಿದವರ ಮಾತ್ನ ತಲಿಗಿ ಹಚ್ಕೊಬ್ಯಾಡ’ ಎಂದೆ.

‘ಯಾಕಪಾ’ ಅಂದ.

‘ಅಯೋಧ್ಯೆ ನಮ್ಮ ತಾಯಿ ಇದ್ಹಂಗ್‌, ಆಕಿನ್ನ ಮರೆಯೋದಿಲ್ಲ, ಈ ಬಾರಿ ರಾಮ ಮಂದಿರ ಕಟ್ಟತೀವಿ ಅಂತ ಮೂರು ತಿಂಗಳ ಹಿಂದ್‌ ಟೊಂಕಕಟ್ಟಿ ಹೇಳಿದ್ದ ಶ್ರೀಗಳು ಈಗ ತೆಪ್ಪಗಾಗ್ಯಾರ್‌’ ಎಂದೆ.

ಅದ್ಕ ಪ್ರಭ್ಯಾ ಕಮಕ್‌ ಕಿಮಕ್‌ ಅನ್ನಲಿಲ್ಲ.

ಅದೇ ಹೊತ್ತಿಗೆ ರೇಡಿಯೊದಾಗ್‌ ಸತ್ಯಹರಿಶ್ಚಂದ್ರ ಚಿತ್ರದ ವೀರಬಾಹು ಹಾಡಿದ, ‘ಕುಲದಲ್ಲಿ ಕೀಳ್ಯಾವುದೊ ಹುಚ್ಚಪ್ಪಾ...’ ಹಾಡ್‌ ಕೇಳಿ ಬರಾಕತ್ತು. ...ತಿಲಕ ಇಟ್ಟರೆ ಸ್ವರ್ಗವು ಸಿಗದು, ವಿಭೂತಿ ಬಳಿದರೆ ಕೈಲಾಸ ಬರದು... ಸಾಲಿನ ನೆನಪ್‌ನ್ಯಾಗ್‌..., ‘ಶೋಭಕ್ಕ  ಹಣೆಗೆ ಢಾಳಾಗಿ ವಿಭೂತಿ ಬಳಿದುಕೊಂಡು ಅದರ ಮ್ಯಾಲ್ ತಿಲಕ ಇಟ್ಕೊಂಡು ಸಮ್ಮಿಶ್ರ ಸೆಲ್ಫಿ ಕ್ಲಿಕ್ಕಿಸಿಕೊಂಡರೆ ಬರಬೇಕಾದ ವೋಟು ಕೂಡ ಬರಲಿಕ್ಕಿಲ್ಲ, ‘ಗೋಬ್ಯಾಕ್‌ ಶೋಬಕ್ಕ’ ಕಾಯಂ ಆಗ್ಬಹುದು’ ಎಂದು ನನ್ನಷ್ಟಕ್ಕೆ ಗೊಣಗಿಕೊಳ್ಳುತ್ತ ಪ್ರಭ್ಯಾನ ಬೀಳ್ಕೊಟ್ಟು ಮನೆಯತ್ತ ಹೆಜ್ಜೆ ಹಾಕಿದೆ.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !