‘ಒತ್ತಡಗಳು ಜೀವನದ ಸವಾಲುಗಳು’

7

‘ಒತ್ತಡಗಳು ಜೀವನದ ಸವಾಲುಗಳು’

Published:
Updated:
ರಮೇಶ್‌ ಭಟ್‌

ಇ ತ್ತೀಚೆಗಷ್ಟೆ ಒಂದು ಸಿನಿಮಾ ಚಿತ್ರೀಕರಣಕ್ಕೆ ಹೋಗಿದ್ದೆ. ಆ ಚಿತ್ರದಲ್ಲಿ ನಾಯಕಿಯ ಅಪ್ಪನ ಪಾತ್ರ ನನ್ನದು. ನನ್ನ ಹೆಂಡತಿಪಾತ್ರಧಾರಿ ಬೇರೆ ಊರಿನಲ್ಲಿರುತ್ತಾಳೆ. ಅವಳು ಬರೆದಿರುವ ಎರಡು ಪುಟದ ಪತ್ರವನ್ನು ಓದುವ ದೃಶ್ಯ ನನ್ನದಾಗಿತ್ತು. ‘ಇಂದು ಆ ದೃಶ್ಯದ ಚಿತ್ರೀಕರಣ, ನೀವು ರೆಡಿಯಾಗಿ’ ಎಂದು ಹೇಳಿಹೋದರು ನಿರ್ದೇಶಕರು.

ಆದರೆ, ಆ ಪುಟಗಳಲ್ಲಿ ನೋಡಿದ್ರೆ ಏನು ಬರೆದೇ ಇರಲಿಲ್ಲ. ‘ಹೇಗಪ್ಪಾ ಓದುವುದು?’ ಎಂದುಕೊಳ್ಳುವ ಹೊತ್ತಿಗೆ ‘ನೀವು ಓದುವ ಅಗತ್ಯವಿಲ್ಲ, ಓದುವ ರೀತಿ ನಿಮ್ಮ ಮುಖದ ಹಾವಭಾವ ಇದ್ದರೆ ಸಾಕು’ ಎಂದರು. ನಾನು ಖುಷಿಯಿಂದಲೇ ಹೂಂಗುಟ್ಟಿ ಇನ್ನೇನು ಶೂಟಿಂಗ್‌ ಆರಂಭವಾಗಬೇಕು ಎನ್ನುವಾಗ, ‘ಇಲ್ಲ ಸರ್‌, ನೀವು ಓದಬೇಕು’ ಎಂದು ಇನ್ನೊಬ್ಬರು ಹೇಳಿದರು.

ಹೀಗೆ ತತ್‌ಕ್ಷಣದಲ್ಲಿ ಆಗುವ ಬದಲಾವಣೆಯಿಂದ ಆಂತಕ ಸೃಷ್ಟಿಯಾಗಿ ಒತ್ತಡವಾಗುತ್ತದೆ. ನಂತರ ಕೆಲವೇ ಹೊತ್ತಿನಲ್ಲಿ ಈ ಗೊಂದಲಗಳು ಸರಿಯಾಗಿ ಚಿತ್ರೀಕರಣವು ಮುಗಿಯಿತು ಎಂದುಕೊಳ್ಳಿ. ಆದರೆ, ಕೆಲವು ಕ್ಷಣ ಉಂಟಾದ ಒತ್ತಡವನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗದೇ ಇದ್ದಾಗ ನನ್ನ ಪೇಚಾಟ ನೆನೆಸಿಕೊಂಡರೆ ‘ಹೀಗೆಲ್ಲ ಆಗಿತ್ತಲ್ಲ’ ಎಂದು ನಗು ಬರುತ್ತದೆ.

ಈ ಒತ್ತಡ ಎನ್ನುವ ಶಬ್ದ ನನ್ನನ್ನು ಒಳಗೊಂಡು ಪ್ರತಿಯೊಬ್ಬರಲ್ಲೂ ಭಯ, ಆತಂಕಗಳನ್ನು ಉಂಟು ಮಾಡುವುದು ಸಹಜ. ಎಷ್ಟೇ ಧೈರ್ಯ ಇರುವವರೂ ಇದರಿಂದ ದಿಗಿಲುಗೊಂಡಿರುತ್ತಾರೆ. ಒತ್ತಡವನ್ನು ಎದುರಿಸಲು ಕಷ್ಟವಾಗುತ್ತದೆ ನಿಜ. ಆದರೆ ಅದನ್ನು ದಾಟಿದ ನಂತರ ನಮಗಾಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಆಗ ನಮ್ಮ ಮನಃಸ್ಥಿತಿ ಇಡೀ ಜಗತ್ತನ್ನೇ ಕಿರುಬೆರಳಲ್ಲಿ ಇಟ್ಟುಕೊಳ್ಳಬಲ್ಲೆ ಎನ್ನುವಂತಿರುತ್ತದೆ ಎಂದರೆ ತಪ್ಪಗಲಾರದು. 

ಒತ್ತಡಗಳಿಂದ ಜೀವನಪಾಠವನ್ನು ಕಲಿತಿದ್ದೇನೆ. ಈಗ ಯಾವುದನ್ನೂ ಒತ್ತಡ ಎಂದುಕೊಳ್ಳುವುದಿಲ್ಲ. ಬೆಂಗಳೂರಿನ ಟ್ರಾಫಿಕ್‌ನಲ್ಲಿ ನಾವು ಯಾವುದಾದರೂ ಸ್ಥಳಕ್ಕೆ ಸರಿಯಾದ ಸಮಯಕ್ಕೆ ಹೋಗುತ್ತೇವೆ ಎನ್ನುವುದು ಅನುಮಾನಕರ. ತಡವಾಗುತ್ತೆ ಅಂತ ಒತ್ತಡಕ್ಕೆ ಒಳಗಾಗುವುದರಿಂದ ಪ್ರಯೋಜನ ಏನಿದೆ? ಅಬ್ಬಾಬ್ಬಾ ಅಂದ್ರೆ ಹತ್ತರಿಂದ ಹದಿನೈದು ನಿಮಿಷ ತಡವಾಗಬಹುದು. ಅದಕ್ಕೆ ಯೋಚಿಸುವ ಬದಲು ‘ಸರ್‌, ಟ್ರಾಫಿಕ್‌ ಹಾಗಾಗಿ ತಡವಾಯಿತು’ ಎಂದು ಹೇಳಿ, ಅನವಶ್ಯಕವಾಗಿ ಒತ್ತಡ ಮಾಡಿಕೊಳ್ಳುವುದನ್ನು ಕಡಿಮೆ ಮಾಡಿಕೊಂಡಿದ್ದೇನೆ. 

ನಮ್ಮ ಬೆಳವಣಿಗೆಯ ಪ್ರತಿ ಹಂತದಲ್ಲಿ ಎದುರಾಗುವ ಸಮಸ್ಯೆಗಳು ಒತ್ತಡ ಎನಿಸುತ್ತವೆ. ನಮ್ಮೆಲ್ಲರ ಬದುಕು ಇದರಲ್ಲಿಯೇ ಮುಳುಗಿರುತ್ತದೆ. ಅದರಿಂದ ಹೊರಬರುವುದು ಹೇಗೆ ಎಂದು ಲೆಕ್ಕಾಚಾರ ಹಾಕುತ್ತೇವೆ. ಅದರಿಂದ ತಲೆನೋವು, ತಲೆಭಾರವಾಗುವುದು; ನಗು ಮಾಯವಾಗಿ ತಲೆ ಮೇಲೆ ಏನೋ ಬಿದ್ದಂತೆ ಇರುವುದು ಈ ಎಲ್ಲ ತರಹದ ಒತ್ತಡದ ಲಕ್ಷಣಗಳು ನಮ್ಮಲ್ಲಿ ಉಂಟಾಗುತ್ತದೆ.

ಈ ಸಮಸ್ಯೆಗೆ ಪರಿಹಾರ ಹುಡುಕುವ ಪ್ರಕ್ರಿಯೆ ಆರಂಭವಾದಾಗಿನಿಂದ ಅಂತ್ಯದವರೆಗೂ ಇದು ನಮ್ಮೊಟ್ಟಿಗೆ ಇರುತ್ತದೆ. ಈ ಪ್ರಕ್ರಿಯೆ ನಮ್ಮಲ್ಲಿ ಒತ್ತಡವನ್ನು ಹೆಚ್ಚಿಸುತ್ತದೆ. ಆದರೆ ಇದೇ ಕೊನೆವರೆಗೂ ಇರುವುದಿಲ್ಲ. ಎಲ್ಲವೂ ಸರಿಯಾಗಿ, ಪರಿಹಾರ ದೊರೆತಾಗ ಒತ್ತಡ ಕಡಿಮೆಯಾಗಿ ಮನಸ್ಸಿಗೆ ಉಲ್ಲಾಸವಾಗುತ್ತದೆ.

ಹೀಗೆಂದು ನನಗೆ ಮತ್ತೆ ಮತ್ತೆ ಒತ್ತಡ ಬರುವುದೇ ಇಲ್ಲ ಎಂದೇನಿಲ್ಲ.‌ ಪ್ರತಿಯೊಬ್ಬರ ನಿತ್ಯದ ಜೀವನದಲ್ಲಿ ಒತ್ತಡಗಳು ಚಕ್ರದಂತೆ ತಿರುಗುತ್ತಲೇ ಇರುತ್ತದೆ. ಪ್ರತಿಯೊಬ್ಬರಿಗೂ ಅದು ಬೆನ್ನು ಹತ್ತಿದ ಬೇತಾಳದ ರೀತಿಯಲ್ಲಿ ಕಾಡುತ್ತಿರುತ್ತದೆ. ಕಾಲಕ್ಕೆ ತಕ್ಕಂತೆ, ಕ್ಷೇತ್ರಕ್ಕೆ ತಕ್ಕಂತೆ ಒತ್ತಡಗಳು ಬದಲಾಗಬಹುದು. ಇದರ ಪ್ರಮಾಣ ಎಷ್ಟೇ ಇರಬಹುದು – ಅದರ ಪರಿಣಾಮ ಎಲ್ಲರಿಗೂ ಒಂದೇ. ಹಿಂದಿನ ಕಾಲಕ್ಕೆ ಹೋಲಿಸಿದರೆ ಜೀವನಮೌಲ್ಯಗಳು ಬದಲಾಗುತ್ತಬಂದಿವೆ. ಹೀಗಾಗಿ ಆಗಿನ ಕಾಲ ಬೇರೆ, ಈಗಿನ ಕಾಲ ಬೇರೆ ಎನ್ನಬಹುದಷ್ಟೆ. 

ನನ್ನ ಪ್ರಕಾರ ಒತ್ತಡ ಇಲ್ಲದೇ ಇದ್ದರೆ ಬದುಕಿನಲ್ಲಿ ಸವಾಲುಗಳೇ ಇರುವುದಿಲ್ಲ. ಒತ್ತಡವನ್ನು ಆನಂದಿಸಬೇಕು ಮತ್ತು ಅವನ್ನು ಜಯಿಸಬೇಕು. ಇದೇ ಜೀವನ. ಈ ಒತ್ತಡವನ್ನು ನಿಭಾಯಿಸಲು ತುಂಬಾ ಸರಳವಾದ ಮಾರ್ಗವೆಂದರೆ, ಯಾವುದೇ ವಿಷಯವಾಗಲಿ ಅದರ ಬಗ್ಗೆ ತುಂಬಾ ಯೋಚನೆ ಮಾಡಬಾರದು. ಕಾಲ ಎಲ್ಲವನ್ನು ನಿಭಾಯಿಸುತ್ತದೆ ಎಂದು ಬಿಡಬೇಕು. ನಾವು ಯಾವುದೋ ಒತ್ತಡದಲ್ಲಿ ಸಿಲುಕಿಕೊಂಡೇ ಅದರೊಳಗೆ ಪರಿಹಾರವನ್ನು ಹುಡುಕುವುದರಿಂದ ಪ್ರಯೋಜನವಾಗದು. ಅದು ಸರಿಹೋಗಲು ಸ್ವಲ್ಪ ಕಾಲ ಬೇಕಾಗುತ್ತದೆ.

ಒತ್ತಡದಿಂದ ನಮ್ಮ ಆರೋಗ್ಯದಲ್ಲಿಯೂ ತೊಂದರೆಗಳಾಗುತ್ತವೆ. ಹೀಗಾಗಿ ಎಲ್ಲವನ್ನೂ ನಾನು ಸರಳವಾಗಿಯೇ ತೆಗೆದುಕೊಂಡಿದ್ದೇನೆ. ಒತ್ತಡ ಇಲ್ಲದೇ ಇದ್ದರೆ ಯಾರೂ ಯಾವ ಕೆಲಸವನ್ನೂ ಮಾಡಲು ಸಾಧ್ಯವೇ ಇಲ್ಲ. ಹೀಗಾಗಿ ಒತ್ತಡ ಎಂಬುದು ನಮ್ಮ ಜೀವನದ ಬೆಳವಣಿಗೆಗೆ ಪೂರಕವಾದದ್ದು ಎಂದೇ ನಾನು ತಿಳಿದುಕೊಂಡಿದ್ದೇನೆ. ಒತ್ತಡ ಇರಬೇಕು. ಅದನ್ನು ಎದುರಿಸುವ ಛಲ ಮತ್ತು ಧೈರ್ಯ ಬೇಕು. ಅದರಿಂದ ಖಿನ್ನತೆಗೊಳಗಾಗುವ ಅಗತ್ಯವಿಲ್ಲ.

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !