ಗೆಜ್ಜೆ, ಹೆಜ್ಜೆಯಲಿ ಜೊತೆಯಾಗುವ ಒತ್ತಡ

7

ಗೆಜ್ಜೆ, ಹೆಜ್ಜೆಯಲಿ ಜೊತೆಯಾಗುವ ಒತ್ತಡ

Published:
Updated:
Deccan Herald

ನೃ ತ್ಯ ನನ್ನ ವೃತ್ತಿ ಮತ್ತು ಪ್ರವೃತ್ತಿ. ನಾನದ್ದನ್ನು ಇಷ್ಟಪಟ್ಟು ಆಯ್ದುಕೊಂಡಿದ್ದೇನೆ. ಹಾಗಾಗಿ ಪ್ರೀತಿಯಿಂದ ಮಾಡುತ್ತೇನೆ. ಪ್ರೀತಿ ಇರುವಲ್ಲಿ ಒತ್ತಡದ ಪ್ರಶ್ನೆಯೇ ಇಲ್ಲ. ಅಂದ ಮಾತ್ರಕ್ಕೆ ಒತ್ತಡದಿಂದ ಸಂಪೂರ್ಣ ಮುಕ್ತಳಾಗಿ ಬದುಕುವುದು ಅಸಾಧ್ಯ. ನಿತ್ಯದ ಗೆಜ್ಜೆ ಸಪ್ಪಳದಲ್ಲೂ, ಹೆಜ್ಜೆಯ ದನಿಯಲ್ಲೂ ಒತ್ತಡದ ಸೊಲ್ಲೊಂದು ಅಡಗಿಯೇ ಇರುತ್ತದೆ. ಅದು ಖಿನ್ನತೆಗೆ ಕಾರಣವಾಗದಂತೆ ನಿಭಾಯಿಸುವ ಜೀವನಶೈಲಿಯನ್ನು ರೂಪಿಸಿಕೊಳ್ಳಬೇಕು.

ಮನೋರಂಜನಾ ವೃತ್ತಿಯನ್ನು ಸ್ವೀಕರಿಸುವವರಿಗೆ ಒಂದು ನಿರ್ದಿಷ್ಟ ದಿನಚರಿಯನ್ನು ರೂಪಿಸಿಕೊಂಡು ಅದರಂತೆ ಗೆರೆ ಎಳೆದುಕೊಂಡು ಬದುಕುವುದು ಕಷ್ಟ ಸಾಧ್ಯ. ನಿತ್ಯದ ಪ್ರಯಾಣ, ತ್ರಾಸದಾಯಕ ಜೀವನಶೈಲಿ ಸಹಜವಾಗಿಯೇ ಒಂದಷ್ಟು ಒತ್ತಡವನ್ನು ಸೃಷ್ಟಿಸುತ್ತದೆ. 

ಕಲೆಯನ್ನು ನಂಬಿ ಬದುಕು ರೂಪಿಸಿಕೊಂಡವರು ಭಾವಜೀವಿಗಳೂ ಹೌದು. ಕೆಲವೊಮ್ಮೆ ಕೃತಕ ಎನಿಸುವಷ್ಟು ಮೆಲೊಡ್ರಾಮದ ಮೊರೆಹೋಗಬೇಕಾಗುತ್ತದೆ ಆಗಲೂ ಒತ್ತಡ ಆವರಿಸುವುದುಂಟು. 

ಎಲ್ಲಿ ಸಂತೋಷ, ನೆಮ್ಮದಿ ದೊರೆಯತ್ತದೆಯೋ ಅದೇ ಕೆಲವೊಮ್ಮೆ ಒತ್ತಡವಾಗಿಯೂ ಪರಿಣಮಿಸಬಹುದು ಎನ್ನುವುದಕ್ಕೆ ಉತ್ತಮ ನಿದರ್ಶನ ಎಂದರೆ ನಾನು ತೀರ್ಪುಗಾರರಾಗಿ ಭಾಗವಹಿಸುವ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ನೃತ್ಯ ಸ್ಫರ್ಧೆ’  ಅದು ನನಗೆ ಅತ್ಯಂತ ನೆಚ್ಚಿನ ತಾಣ. ನಾನು ಶಾಂತಿಯುತವಾಗಿ ಇರುವ ಸ್ಥಳ. ಅಲ್ಲಿನ ತಂಡದ ಶ್ರಮವನ್ನು ನೋಡುವಾಗಲೇ ನನ್ನ ದಣಿವು, ಒತ್ತಡ ಮಾಯವಾಗುತ್ತದೆ. ಆದರೆ ಅದೇ ಕೊನೆಯಲ್ಲಿ ತೀರ್ಪು ನೀಡುವಾಗ ಸ್ವಲ್ಪ ಒತ್ತಡಕ್ಕೂ ಕಾರಣವಾಗುತ್ತದೆ. 

ವೀಕ್ಷಕರಿಗೆ ಅದು ಕೇವಲ ಮೂರು ನಿಮಿಷದ ನೃತ್ಯ ಮಾತ್ರ. ಆದರೆ ನಮಗೆ ವಿವಿಧ ಅಂಶಗಳನ್ನು ಪರಿಗಣಿಸಿ ತೀರ್ಪು ನೀಡಬೇಕು. ಮಕ್ಕಳ ಆತ್ಮವಿಶ್ವಾಸ ಕುಗ್ಗದಂತೆ, ವೀಕ್ಷಕರ ನಿರೀಕ್ಷೆಗಳು ಹುಸಿಯಾಗದಂತೆ ತೀರ್ಪುನೀಡುವುದು ಒಂದು ಸವಾಲು. ಇಂತಹ ಸನ್ನಿವೇಶದಲ್ಲಿ ಒತ್ತಡವಾಗದಂತೆ ನಿರ್ವಹಿಸಬೇಕು.

ಒತ್ತಡ ನಿರ್ವಹಣೆಗೆ ನಾನು ನನ್ನೊಳಗೆ ಒಂದು ‘ಸೈಲೆಂಟ್‌ ಸ್ಪೇಸ್‌’ನ್ನು ಸೃಷ್ಟಿಸಿಕೊಂಡಿದ್ದೇನೆ. ಇದರ ಜೊತೆಗೆ ಸ್ಫೂರ್ತಿ ತುಂಬುವ ವ್ಯಕ್ತಿಗಳ ಜೀವನಗಾಥೆಗಳು, ಪುರಾಣಕ್ಕೆ ಸಂಬಂಧಿಸಿದ ಹಾಗೂ ಆಧ್ಯಾತ್ಮಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದುತ್ತೇನೆ. ಕಾಮಿಕ್‌ ಪುಸ್ತಕಗಳು, ನಾಟ್ಯಶಾಸ್ತ್ರ ಹಾಗೂ ವಿನ್ಯಾಸಕ್ಕೆ ಸಂಬಂಧಿಸಿದ ಪುಸ್ತಕಗಳು ಇಷ್ಟವಾಗುತ್ತವೆ. ನಿಗೂಢತೆಗೆ ಸಂಬಂಧಿಸಿದ, ಸೂಪರ್‌ ಮ್ಯಾನ್‌ ಸಿನಿಮಾಗಳನ್ನು ವೀಕ್ಷಿಸುತ್ತೇನೆ. ಇವುಗಳ ನನ್ನನ್ನು ಒತ್ತಡದಿಂದ ದೂರ ಇಡುತ್ತವೆ.

ನೃತ್ಯ ನನ್ನ ಸಾರ್ವಕಾಲಿಕ ಸಂಗಾತಿ. ಜೀವನೋತ್ಸಾಹ ತುಂಬುದ ರಸಾನುಭೂತಿ. ದೇಹ, ಮನಸ್ಸು, ಆಧ್ಯಾತ್ಮಗಳ ಸಂಗಮವದು. ಒತ್ತಡ ನಿರ್ವಹಣೆಗೆ ಇದಕ್ಕಿಂತ ಉತ್ತಮ ಮದ್ದಿಲ್ಲ ಎನ್ನುವುದು ನನ್ನ ಭಾವನೆ. 

ಪ್ರವಾಸ ಮತ್ತು ಪ್ರಯಾಣಗಳು ಒತ್ತಡದ ವಿಸರ್ಗಕ್ಕಿರುವ ಇನ್ನೊಂದು ಮಾರ್ಗ. ಏಕಾಂಗಿಯಾಗಿ ವಿದೇಶಗಳಿಗೆ ತೆರಳಿ ಅಲ್ಲಿನ ಕಲಾ ಪ್ರಕಾರಗಳನ್ನು ಆಸ್ವಾದಿಸುವುದೆಂದರೆ ನನಗೆ ತುಂಬಾ ಮೆಚ್ಚು.

ಕುಟುಂಬದೊಂದಿಗೆ ಸಮಯ ಕಳೆಯುವುದು ಸಹ ಬಹುತೇಕ ನನಗೆ ಒತ್ತಡ ನಿರ್ವಹಣೆಯ ಮತ್ತೊಂದು ಮಾರ್ಗ. ಅಮ್ಮ ಚಿಕ್ಕಪ್ಪರೊಂದಿಗೆ ಕಾಪಿ, ಟಿ ಕುಡಿದುಕೊಂಡು ಹರಟೆ ಹೊಡೆಯುವ ಮಜ ಬೇರೆಲ್ಲೂ ಸಿಗುವುದಿಲ್ಲ. ಕುಟುಂಬದ ಆಪ್ತತೆಯಿಂದ ಒತ್ತಡದ ಎಲ್ಲ ಭಾವವೂ ದೂರ ದೂರ.

ನನಗೆ ತುಂಬಾ ಒತ್ತಡ ಎನಿಸಿ, ದೀರ್ಘಕಾಲ ಕಾಡಿದ್ದೆಂದರೆ ನನ್ನ ತಂದೆ ಸಾವು. ಈ ನೋವಿನಿಂದ ಹೊರಬರಲು ನನಗೆ ತುಂಬಾ ಸಮಯ ಹಿಡಿಯಿತು. ಆಗ ನಾನು ಒತ್ತಡ ನಿರ್ವಹಣಾ ಸೂತ್ರಗಳು ಎಂದುಕೊಂಡ ಯಾವುವು ಪ್ರಯೋಜನವಾಗಲಿಲ್ಲ. ಕಾಲವೇ ನಿಜವಾದ  ಮದ್ದು ಎಂದೆನಿಸಿತು. ಎಂತಹದೇ ನೋವು, ಸಂಕಟ, ಒತ್ತಡಗಳನ್ನಾದರೂ ನಿವಾರಿಸುವ ಅದಮ್ಯ ಶಕ್ತಿ ಕಾಲಕ್ಕಿದೆ.

ಅತಿಯಾಗಿ ಆಧುನಿಕತೆಗೆ ತೆರೆದುಕೊಂಡಿರುವುದು ಇಂದಿನ ದಿನಗಳಲ್ಲಿ ಒತ್ತಡ ಹೆಚ್ಚಾಗಲು ಕಾರಣ. ತಂತ್ರಜ್ಞಾನಕ್ಕೆ ಎಷ್ಟು ಒಗ್ಗಿಕೊಂಡಿದ್ದೇವೆ ಎಂದರೆ ನಿಸರ್ಗವನ್ನು ಸಹ ಸಾಮಾಜಿಕ ಮಾಧ್ಯಮಗಳಲ್ಲಿ ನೋಡಿಯೇ ಆನಂದಿಸುತ್ತೇವೆ.  ಎಲ್ಲಿ ಹೇಗೆ ವರ್ತಿಸಬೇಕೆಂಬ ಸಂವೇದನೆ, ಮಾನವೀಯ ಮೌಲ್ಯಗಳನ್ನು ಕಳೆದುಕೊಂಡಿದ್ದೇವೆ. ಸಹಜ ಬದುಕಿನಿಂದ ದೂರವಾಗಿ ನಮ್ಮ ಜೀವನವನ್ನು ನಾವೇ ಕ್ಲಷ್ಟಕರವಾಗಿಸಿಕೊಂಡಿದ್ದೇವೆ.

‘ಸೆಲೆಬ್ರಿಟಿ’ ಎನ್ನುವ ಸ್ಟೇಟಸ್‌ನ ನಿರ್ವಹಿಸುವುದು ಕಷ್ಟಕರ. ಸಮಾಜ ಸೆಲೆಬ್ರಿಟಿಗಳನ್ನು ಭಿನ್ನವಾಗಿ ನೋಡುತ್ತದೆ. ಸಾಮಾನ್ಯ ಜನರಿಗಿಂತ ಹೆಚ್ಚನ್ನು ನಿರೀಕ್ಷಿಸುತ್ತದೆ ಅವರ ನಿರೀಕ್ಷೆಗೆ ಅನುಗುಣವಾಗಿ ಬದುಕುವ ಶೈಲಿ ಸದಾ ಒತ್ತಡವನ್ನು ಕೂಡಿರುತ್ತದೆ. ಕೆಲೆಯೂ ಒಂದು ವೃತ್ತಿ ಎನ್ನುವುದನ್ನು ಅರ್ಥಮಾಡಿಸಬೇಕು. ಕಲೆಯಿಂದ ಅಭಿಮಾನಿಗಳು ಸಂತೃಪ್ತಿಗೊಂಡಾಗ ಸಂತೋಷವು ಆಗುತ್ತದೆ. ಕೆಲವೊಮ್ಮೆ ಕಿರಿಕಿರಿಯೂ ಉಂಟಾಗುತ್ತದೆ. ನಮ್ಮ ಜೀವನ ಶೈಲಿಯಲ್ಲಿ ಇವೆರಡರ ಸಮತೋಲನದಿಂದ ಕೂಡಿದ್ದರಷ್ಟೇ ಒತ್ತಡ ರಹಿತ ಬದುಕು ಸಾಧ್ಯ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !