ಮೆಕ್ಕೆಜೋಳಕ್ಕೆ ಗರಿಷ್ಠ ಧಾರಣೆ..!

ಸೋಮವಾರ, ಮೇ 20, 2019
30 °C
2017–18ಕ್ಕಿಂತ ದುಪ್ಪಟ್ಟು ಆವಕ; ಸ್ಥಳೀಯ ರೈತರಿಗಿಲ್ಲ ಬೆಲೆ ಹೆಚ್ಚಳದ ಅನುಕೂಲ

ಮೆಕ್ಕೆಜೋಳಕ್ಕೆ ಗರಿಷ್ಠ ಧಾರಣೆ..!

Published:
Updated:
Prajavani

ವಿಜಯಪುರ: ವಿಜಯಪುರ ಎಪಿಎಂಸಿ ಮಾರುಕಟ್ಟೆ ಇತಿಹಾಸದಲ್ಲೇ ಮೊದಲ ಬಾರಿಗೆ ಮೆಕ್ಕೆಜೋಳದ ಬೆಲೆ ದುಬಾರಿಯಾಗಿದೆ. ಪ್ರತಿ ಕ್ವಿಂಟಲ್‌ ಮೆಕ್ಕೆಜೋಳ ₹ 2300ರ ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ.

ಹಿಂದಿನ ವರ್ಷವಿಡಿ ಮೆಕ್ಕೆಜೋಳದ ಉತ್ಪನ್ನ ವಿಜಯಪುರ ಜಿಲ್ಲೆಯ ರೈತರ ಕೈಗೆ ಸಿಗದಾಗಿದೆ. ಮುಂಗಾರಿ, ಹಿಂಗಾರಿ ಎರಡೂ ಬೆಳೆಯೂ ಕೈ ಸುಟ್ಟಿವೆ. ಭೀಕರ ಬರದ ಹೊಡೆತಕ್ಕೆ ಹೊಲದಲ್ಲೇ ಒಣಗಿದೆ. ಬಹುತೇಕ ಕಡೆ ರಾಶಿಯೇ ನಡೆಯಲಿಲ್ಲ. ಒಟ್ಟಾರೆ ರೈತ ಸಮೂಹಕ್ಕೆ ಮೆಕ್ಕೆಜೋಳದ ಉತ್ಪನ್ನವೇ ಸಿಗದಾಗಿದೆ. ಬೇಸಿಗೆ ಬೆಳೆಯ ಬಗ್ಗೆ ಮಾತನಾಡುವಂತೆಯೇ ಇಲ್ಲ.

ಮಳೆಗಾಲದ ರಾಶಿಯ ಹಂಗಾಮು ಅಕ್ಟೋಬರ್‌ನಿಂದ ನಡೆಯಲಿದೆ. ಬೇಸಿಗೆ ಬೆಳೆಯ ಸುಗ್ಗಿ ಹಂಗಾಮು ಏಪ್ರಿಲ್‌ಗೆ ಆರಂಭಗೊಳ್ಳಬೇಕು. ಆದರೆ ಈ ಬಾರಿ ಎರಡೂ ಬಾರಿಯ ಹಂಗಾಮು ಆರಂಭಗೊಳ್ಳಲೇ ಇಲ್ಲ. ಜಿಲ್ಲೆಯ ಮೆಕ್ಕೆಜೋಳದ ಬೆಳೆಗಾರರು ಮಾರುಕಟ್ಟೆಗೆ ಮಾರಾಟಕ್ಕೆಂದು ತಮ್ಮ ಉತ್ಪನ್ನವನ್ನೇ ತರಲಿಲ್ಲ. ನೀರಾವರಿ ಆಶ್ರಿತ ಬೆಳೆಗಾರರಿಗೆ ಮಾತ್ರ ಬಂಪರ್‌ ಬೆಲೆಯ ಲಾಭ ದೊರೆತಿದೆ.

ಆವಕದಲ್ಲಿ ದುಪ್ಪಟ್ಟು: 2017–18ನೇ ಸಾಲಿನಲ್ಲಿ ವಿಜಯಪುರ ಎಪಿಎಂಸಿಗೆ 2,24,431 ಕ್ವಿಂಟಲ್‌ ಮೆಕ್ಕೆಜೋಳ ಆವಕಗೊಂಡಿತ್ತು. ಧಾರಣೆ ಪ್ರತಿ ಕ್ವಿಂಟಲ್‌ಗೆ ₹ 1000ದಿಂದ ₹ 1560ರವರೆಗೂ ನಡೆದಿತ್ತು.

2018–19ನೇ ಸಾಲಿನಲ್ಲಿ 4,02,646 ಕ್ವಿಂಟಲ್‌ ಮೆಕ್ಕೆಜೋಳ ವಿಜಯಪುರ ಮಾರುಕಟ್ಟೆಗೆ ಬಂದಿದೆ. ಧಾರಣೆ ಸಹ ದುಪ್ಪಟ್ಟುಗೊಂಡಿದೆ. ವರ್ಷವಿಡಿ ಪ್ರತಿ ಕ್ವಿಂಟಲ್‌ಗೆ ₹ 1000ದಿಂದ ₹ 2000ರವರೆಗೂ ಬೆಲೆಯಿದ್ದು, ಈ ಬಾರಿ ಬೆಳೆಗಾರರಿಗೆ ಬಂಪರ್ ದರ ದೊರೆತಿದೆ ಎಂದು ವಿಜಯಪುರ ಎಪಿಎಂಸಿಯ ಕಾರ್ಯದರ್ಶಿ ವಿ.ರಮೇಶ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಏಪ್ರಿಲ್‌ನಲ್ಲಿ ಬೇಸಿಗೆ ಹಂಗಾಮು ಆರಂಭ. ಆದರೆ ಜಿಲ್ಲೆಯ ವ್ಯಾಪ್ತಿಯಲ್ಲಿ ಉತ್ಪನ್ನವೇ ಬಾರದಾಗಿದೆ. ಇದರ ಪರಿಣಾಮ ಬೆಲೆಯಲ್ಲೂ ಕೊಂಚ ಹೆಚ್ಚಳವಾಗಿದೆ. ಪ್ರತಿ ಕ್ವಿಂಟಲ್‌ಗೆ ₹ 1800ರಿಂದ ₹ 2300 ಧಾರಣೆ ಸಿಕ್ಕಿದೆ. ವಾರದಿಂದ ಬಿಹಾರದ ಉತ್ಪನ್ನ ವಿಜಯಪುರ ಮಾರುಕಟ್ಟೆಗೆ ದಾಂಗುಡಿಯಿಟ್ಟಿದ್ದರಿಂದ, ಕ್ವಿಂಟಲ್‌ಗೆ ₹ 100 ಇಳಿಮುಖಗೊಂಡಿದೆ’ ಎಂದು ಅವರು ಹೇಳಿದರು.

‘ವಿಜಯಪುರ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಖರೀದಿಯ ಬೃಹತ್‌ ವ್ಯಾಪಾರಿಗಳಿದ್ದಾರೆ. ಹಲ ವರ್ಷಗಳಿಂದ ಇವರು ಮೆಕ್ಕೆಜೋಳದೊಂದಿಗೆ ನಂಟು ಹೊಂದಿದ್ದು, ದೇಶದ ವಿವಿಧೆಡೆ ತಮ್ಮದೇ ವ್ಯಾಪಾರ ಜಾಲ ಹೊಂದಿದ್ದಾರೆ. ಇದರ ಪರಿಣಾಮ ಸ್ಥಳೀಯವಾಗಿ ಕಿಂಚಿತ್ ಉತ್ಪನ್ನ ಇರದಿದ್ದರೂ; ಹೊರಭಾಗದಿಂದ ಅಪಾರ ಪ್ರಮಾಣದಲ್ಲಿ ಉತ್ಪನ್ನ ಆವಕಗೊಳ್ಳುತ್ತಿದೆ.

ರಾಜ್ಯದ ದಾವಣಗೆರೆ ಭಾಗ, ನೆರೆಯ ಮಹಾರಾಷ್ಟ್ರ, ಉತ್ತರ–ಪಶ್ಚಿಮ ಭಾರತದ ವಿವಿಧ ಭಾಗಗಳಿಂದಲೂ ಮೆಕ್ಕೆಜೋಳ ನಮ್ಮಲ್ಲಿಗೆ ಬರುತ್ತಿದೆ. ಮಾರುಕಟ್ಟೆಯ ಬದಲು ನೇರವಾಗಿ ಈ ಬೃಹತ್ ವ್ಯಾಪಾರಿಗಳ ಗೋದಾಮು ತಲುಪುತ್ತಿದೆ’ ಎಂದು ರಮೇಶ ತಿಳಿಸಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !