ಮಂಗಳವಾರ, ಅಕ್ಟೋಬರ್ 22, 2019
25 °C
ಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಜಿಲ್ಲಾ ಕ್ರೀಡಾಕೂಟಕ್ಕೆ ಚಾಲನೆ

ಅಂಬಿಕ, ವಿಲಿಯಂ ಜಾಯ್‌ಗೆ ವೈಯಕ್ತಿಕ ಪ್ರಶಸ್ತಿ

Published:
Updated:
Prajavani

ಚಾಮರಾಜನಗರ: ಎರಡು ದಿನಗಳ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟಕ್ಕೆ ಗುರುವಾರ ಚಾಲನೆ ದೊರಕಿತು.

ಮೊದಲ ದಿನ ನಡೆದ ಪ್ರೌಢಶಾಲಾ ವಿಭಾಗದ ಅಥ್ಲೆಟಿಕ್ಸ್‌ನ ಬಾಲಕಿಯರ ವಿಭಾಗದಲ್ಲಿ ಕೊಳ್ಳೇಗಾಲದ ಆಗಸ್ಟಿನ್‌ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಅಂಬಿಕ ಮತ್ತು ಬಾಲಕರ ವಿಭಾಗದಲ್ಲಿ ಹನೂರಿನ ತೋಮಿಯರ್‌ ಪಾಳ್ಯದ ಸಂತ ಥಾಮಸ್‌ ಗ್ರಾಮಾಂತರ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ವಿಲಿಯಂ ಜಾಯ್‌ ಅವರು ವೈಯಕ್ತಿಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಅಂಬಿಕ ಅವರು 800 ಮೀ, 1,500 ಮೀ, 3,000 ಮೀಟರ್‌ ಓಟದಲ್ಲಿ ಮೊದಲ ಬಹುಮಾನ ಗಳಿಸುವ ವೈಯಕ್ತಿಕ ಪ್ರಶಸ್ತಿಗೆ ಮುತ್ತಿಟ್ಟರು. 

ಡಿಸ್ಕಸ್‌ ಎಸೆತ ಮತ್ತು ಜಾವೆಲಿನ್‌ ಎಸೆತದಲ್ಲಿ ಮೊದಲ ಸ್ಥಾನ ಪಡೆದ ವಿಲಿಯಂ ಜಾಯ್‌, ಬಾಲಕರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್‌ ಆಗಿ ಹೊರಹೊಮ್ಮಿದರು. 

‘ಶುಕ್ರವಾರ ಹಿರಿಯ ಪ್ರಾಥಮಿಕ ವಿಭಾಗದ ಸ್ಪರ್ಧೆಗಳು ನಡೆಯಲಿವೆ. ಜಿಲ್ಲಾ ಮಟ್ಟದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಗೆದ್ದವರು. ಮೈಸೂರು ವಿಭಾಗೀಯ ಮಟ್ಟದಲ್ಲಿ (ಎಂಟು ಜಿಲ್ಲೆಗಳು) ನಡೆಯುವ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕ ಪಿ.ಮಂಜುನಾಥ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಉದ್ಘಾಟನೆ: ಇದಕ್ಕೂ ಮುನ್ನ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. 

‘ಶಿಕ್ಷಣದಲ್ಲಿ ಪಾಠದ ಜೊತೆ ಆಟಕ್ಕೂ ಮಹತ್ವ ಇದೆ. ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಉನ್ನತ ಮಟ್ಟಕ್ಕೆ ಹೋಗುವುದಕ್ಕೆ ಅವಕಾಶ ಇದೆ. ಎಲ್ಲರ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿ ಮುಂದಿನ ಹಂತಕ್ಕೆ ಹೋಗಬೇಕು’ ಎಂದು ಶಿವಮ್ಮ ಹಾರೈಸಿದರು. 

ಸಿ.ಪುಟ್ಟರಂಗಶೆಟ್ಟಿ ಅವರು ಮಾತನಾಡಿ, ‘ಆಟದಲ್ಲಿ ಸೋಲು ಗೆಲುವು ಸಹಜ. ಮಕ್ಕಳು ಉತ್ಸಾಹದಿಂದ ಪಾಲ್ಗೊಳ್ಳಬೇಕು. ಸ್ಪರ್ಧೆಗಳಿಗೆ ತೀರ್ಪುಗಾರರಾಗಿರುವವರು ತಾರತಮ್ಯ ಮಾಡದೇ ಸರಿಯಾಗಿ ತೀರ್ಪು ನೀಡಬೇಕು. ನೈಜ ಕ್ರೀಡಾ ಪ್ರತಿಭೆಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು. 

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬೋಯರ್‌ ಹರ್ಷಲ್‌ ನಾರಾಯಣರಾವ್‌ ಅವರು ಮಾತನಾಡಿ, ‘ಮಕ್ಕಳಲ್ಲಿರುವ ಕ್ರೀಡಾ ಆಸಕ್ತಿ ಮತ್ತು ಪ್ರತಿಭಯನ್ನು ಹೊರ ತೆಗೆಯಲು ಇದು ಅತ್ಯುತ್ತಮ ವೇದಿಕೆ’ ಎಂದು ಅಭಿಪ್ರಾಯಪಟ್ಟರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕ ಪಿ.ಮಂಜುನಾಥ್‌, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಚಲುವಯ್ಯ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ನೇತ್ರಾವತಿ, ಶಿಕ್ಷಣ ಅಧಿಕಾರಿಗಳಾದ ಮಲ್ಲಿಕಾರ್ಜುನ, ಪ್ರಕಾಶ್‌ ಮತ್ತಿತರರು ಇದ್ದರು.

‘ಮಳೆಯಿಂದಾಗಿ ಕಾಮಗಾರಿ ವಿಳಂಬ’
₹4 ಕೋಟಿ ವೆಚ್ಚದಲ್ಲಿ ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿ ಕಾಮಗಾರಿ ಆರಂಭವಾಗಿದೆ. ಮಳೆಯ ಕಾರಣದಿಂದ ಸ್ವಲ್ಪ ವಿಳಂಬವಾಗಿದೆ. ಮುಂದಿನ ವರ್ಷ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಪೂರ್ಣಗೊಳಿಸಲಾಗುವುದು’ ಎಂದು ಪುಟ್ಟರಂಗಶೆಟ್ಟಿ ಹೇಳಿದರು. 

‘ಕ್ರೀಡಾ ಇಲಾಖೆಯ ಅಧಿಕಾರಿಗಳು ಅಭಿವೃದ್ಧಿ ಕೆಲಸಗಳ ಮೇಲ್ವಿಚಾರಣೆಯನ್ನು ಸರಿಯಾಗಿ ಮಾಡುತ್ತಿಲ್ಲ. ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು’ ಎಂದು ವೇದಿಕೆಯಲ್ಲಿದ್ದ ಇಲಾಖೆಯ ಸಹಾಯಕ ನಿರ್ದೇಶಕ ಚಲುವಯ್ಯ ಅವರಿಗೆ ಶಾಸಕರು ಸೂಚಿಸಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)