ಚಾಮರಾಜನಗರ ನಗರಸಭೆ: ಮೂಲಸೌಕರ್ಯ ಕಲ್ಪಿಸುವುದಕ್ಕೆ ಆದ್ಯತೆ

7
ಚಾಮರಾಜನಗರ ನಗರಸಭೆಯ ಒಂದನೇ ವಾರ್ಡ್‌ ಸದಸ್ಯೆ ನೀಲಮ್ಮ ಮಾತು

ಚಾಮರಾಜನಗರ ನಗರಸಭೆ: ಮೂಲಸೌಕರ್ಯ ಕಲ್ಪಿಸುವುದಕ್ಕೆ ಆದ್ಯತೆ

Published:
Updated:
Deccan Herald

 

* ನಿಮ್ಮ ಗೆಲುವಿಗೆ ಕಾರಣಗಳೇನು?

ಉ: ಈ ಹಿಂದೆಯೂ ನಾನು ಇದೇ ವಾರ್ಡ್‌ ಅನ್ನು ಪ್ರತಿನಿಧಿಸಿದ್ದೆ. ಎಲ್ಲ ವರ್ಗದ, ಕೋಮಿನ ಜನರ ವಿಶ್ವಾಸವನ್ನು ಗಳಿಸಿದ್ದೇನೆ. ನನ್ನ ಅಣ್ಣ ಮಹದೇವ ಅವರು ಕೂಡ ವಾರ್ಡ್‌ ಸದಸ್ಯರಾಗಿದ್ದರು. ಆಗ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್‌ ಕಂಬಗಳ ಅಳವಡಿಕೆ, ಬಡವರಿಗೆ ವಿವಿಧ ಮಾಸಾಶನವನ್ನು ಕೊಡಿಸುದೂ ಸೇರಿದಂತೆ ಹಲವು ಜನಪರ ಕೆಲಸಗಳನ್ನು ಮಾಡಿದ್ದರು. ಇವೆಲ್ಲವೂ ಈ ಚುನಾವಣೆಯಲ್ಲಿ ನನ್ನ ಕೈಹಿಡಿದಿದೆ.

* ನಿಮ್ಮ ವಾರ್ಡ್‌ನಲ್ಲಿ ಏನೆಲ್ಲ ಸಮಸ್ಯೆಗಳಿವೆ ಎಂದು ನಿಮಗೆ ಅನ್ನಿಸುತ್ತದೆ?

ಉ: ಚಾಮರಾಜನಗರದಲ್ಲೇ ನನ್ನದೇ ದೊಡ್ಡ ವಾರ್ಡ್‌. ಬಡವರು ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಜನರೇ ಇಲ್ಲಿ ಹೆಚ್ಚಾಗಿದ್ದಾರೆ. ಸಮಸ್ಯೆಗಳು ತುಂಬಾ ಇವೆ. ರಸ್ತೆ ಮತ್ತು ಒಳಚರಂಡಿಗಳದ್ದು ದೊಡ್ಡ ಸಮಸ್ಯೆ. ಸೋಮವಾರ ಪೇಟೆಯ ಬಡಾವಣೆಗಳಲ್ಲಿ ಎಲ್ಲೂ ಸರಿಯಾದ ರಸ್ತೆ ಇಲ್ಲ. ಒಳಚರಂಡಿ ಕಾಮಗಾರಿ ನಡೆದಿದೆಯಾದರೂ, ನೀರು ಅದರಲ್ಲಿ ಸರಿಯಾಗಿ ಹರಿಯುವುದಿಲ್ಲ. ‌ಚರಂಡಿ ವ್ಯವಸ್ಥೆಯೂ ಅಷ್ಟಕಷ್ಟೇ. ಬಡವರಿಗೆ ಸರಿಯಾದ ಮನೆ ಇಲ್ಲ. ಚಿಕ್ಕ ಮನೆಗಳಲ್ಲೇ 8–10 ಜನರು ವಾಸಿಸುತ್ತಿದ್ದಾರೆ. ವಾರ್ಡ್‌ನ ಬಹುತೇಕ ಕುಟುಂಬಗಳು ತಮ್ಮ ಆಸ್ತಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಹೊಂದಿಲ್ಲ. ಇದರ ಜೊತೆಗೆ ಕುಡಿಯುವ ನೀರಿನ ಸಮಸ್ಯೆಯೂ ಇದೆ. ಸೋಮವಾರಪೇಟೆ ಬಳಿ 125 ನಿವೇಶನಗಳ ಹೊಸ ಬಡಾವಣೆ ಇದೆ. ಅದಕ್ಕೆ ನೀರಿನ ವ್ಯವಸ್ಥೆ ಆಗಿಲ್ಲ.

* ತಕ್ಷಣಕ್ಕೆ ಏನು ಮಾಡಬೇಕೆಂದಿದ್ದೀರಿ?

ಉ: ನನ್ನ ವಾರ್ಡ್‌ನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇಲ್ಲ. ಅದನ್ನು ಸ್ಥಾಪಿಸಬೇಕಿದೆ. ಎಲ್ಲರ ಮನೆಗಳಲ್ಲಿ ಶೌಚಾಲಯಗಳಿಲ್ಲ. ಜಾಗ ಇದ್ದವರು ಕಟ್ಟಿಸಿಕೊಂಡಿದ್ದಾರೆ. ಉಳಿದವರು ಇನ್ನೂ ಬಯಲಯನ್ನೇ ಆಶ್ರಯಿಸಿದ್ದಾರೆ. ಸಮುದಾಯ ಅಥವಾ ಸಾರ್ವಜನಿಕ ಶೌಚಾಲಯಗಳನ್ನು ತುರ್ತಾಗಿ ನಿರ್ಮಿಸಬೇಕಾಗಿದೆ.

* ನೀವು ಹಾಕಿಕೊಂಡಿರುವ ಇನ್ನಿತರ ಯೋಜನೆಗಳು...

ಉ: ವಾರ್ಡ್‌ನಾದ್ಯಂತ ಉತ್ತಮವಾದ ರಸ್ತೆ ನಿರ್ಮಾಣ ಆಗಬೇಕು. ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಬೇಕು. ನಿವೇಶನ ಖಾತೆ ಇಲ್ಲದವರಿಗೆ ಅದನ್ನು ಮಾಡಿಸಿಕೊಡುವ ಕೆಲಸ ಮಾಡಬೇಕು. ಕೆಲವು ಕಡೆ ಬೀದಿ ದೀಪದ ವ್ಯವಸ್ಥೆ ಇಲ್ಲ. ಅದನ್ನು ಮಾಡಬೇಕಿದೆ. ಸೋಮವಾರ ಪೇಟೆಯ ಮೂರು ಕಡೆಗಳಲ್ಲಿ ಹೈಮಾಸ್ಟ್‌ ದೀಪ ಅಳವಡಿಸಬೇಕು ಎಂಬ ಯೋಚನೆ ಇದೆ. ಕುಡಿಯುವ ನೀರು ಪೂರೈಕೆಯಾಗದ ಪ್ರದೇಶಗಳಲ್ಲಿ ಕೊಳವೆ ಬಾವಿ ಕೊರೆಸಿ ತೊಂಬೆ ಅಳವಡಿಸಲು ಯೋಜನೆ ಹಾಕಿಕೊಂಡಿದ್ದೇನೆ. ತೀರಾ ಹಿಂದುಳಿದ ಕಡು ಬಡವರಿಗೆ ನಿವೇಶನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

* ವಾರ್ಡ್‌ ಸ್ವಚ್ಛತೆಗೆ ಏನು ಕ್ರಮ ಕೈಗೊಳ್ಳುತ್ತೀರಿ?

ಸ್ವಚ್ಛತೆಯ ಸಮಸ್ಯೆ ಇರುವುದು ಹೌದು. ಬೀದಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ನಗರಸಭೆಯಲ್ಲಿ ಪೌರಕಾರ್ಮಿಕರ ಕೊರತೆ ಇದೆ. ನನ್ನ ವಾರ್ಡ್‌ಗೆ ಮೂವರು ಸಿಬ್ಬಂದಿ ಮತ್ತು ಒಂದು ಗಾಡಿಯ ಅಗತ್ಯವಿದೆ. ಅಲ್ಲಲ್ಲಿ ಕಸದ ಡಬ್ಬಗಳನ್ನು ಇಡಲಾಗುವುದು. ಜೊತೆಗೆ ಶೌಚಾಲಯಗಳ ನಿರ್ಮಾಣ ಆಗಬೇಕು.

ಎರಡನೇ ಬಾರಿ ಸದಸ್ಯೆ

ಈಗ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿರುವ 1ನೇ ವಾರ್ಡ್‌ ಅನ್ನು ನೀಲಮ್ಮ ಪ್ರತಿನಿಧಿಸುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ 2008ರಲ್ಲಿ (ಆಗ ಈ ವಾರ್ಡ್‌ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು) ಅವರು ಗೆದ್ದಿದ್ದರು. 2013ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಅವರು ಸೋಲು ಕಂಡಿದ್ದರು. 2003ರಲ್ಲಿ ಇದೇ ವಾರ್ಡ್‌ನಿಂದ ಅವರ ಅಣ್ಣ ಎಸ್‌.ಮಹದೇವ ಗೆದ್ದಿದ್ದರು.

ನೀಲಮ್ಮ ಅವರ ದೂರವಾಣಿ ಸಂಖ್ಯೆ: 96116 10817.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !