ಖಾಸಗಿ ಬಸ್ ದರ್ಬಾರ್!

ಶನಿವಾರ, ಏಪ್ರಿಲ್ 20, 2019
31 °C

ಖಾಸಗಿ ಬಸ್ ದರ್ಬಾರ್!

Published:
Updated:

ಬಸವನಗುಡಿಯ ಸೌತ್ ಎಂಡ್ ಸರ್ಕಲ್‌ನ ಡಾ.ಪಾರ್ವತಮ್ಮ ರಾಜಕುಮಾರ್ ರಸ್ತೆಯಲ್ಲಿ ಟ್ರಾಫಿಕ್‌ ಸಮಸ್ಯೆಗೆ ಎಸ್ಆರ್‌ಎಸ್‌ ಖಾಸಗಿ ಟ್ರಾವೆಲ್ಸ್‌ನ ಬಸ್‌ಗಳೇ ಮೂಲ. 

ನಿತ್ಯವೂ ಬೆಳಿಗ್ಗೆ 6ರಿಂದ 9.30ರ ತನಕ ಪಾರ್ವತಮ್ಮ ರಾಜಕುಮಾರ್ ರಸ್ತೆಯಲ್ಲಿ ಈ ಬಸ್‌ಗಳು ಸಾಲಾಗಿ ನಿಲ್ಲುವ  ಹಾವಳಿಯಿಂದಾಗಿ ಸಾರ್ವಜನಿಕರು ಸುಗಮ ಸಂಚಾರಕ್ಕೆ ಪರದಾಡುವಂತಾಗಿದೆ. ಇದೇ ರಸ್ತೆಯನ್ನು ಶಾಲಾ ವಾಹನಗಳು, ಬಿಎಂಟಿಸಿ ಬಸ್‌ಗಳು, ಕಚೇರಿಗೆ ತೆರಳುವ ನೌಕರರ ವಾಹನಗಳು ಬಳಸುತ್ತವೆ. ಈ ಎಲ್ಲದರಿಂದ ಸಂಚಾರ ದಟ್ಟಣೆಯಾಗಿ ಸಾರ್ವಜನಿಕರು ತಾಳ್ಮೆ ಕಳೆದುಕೊಳ್ಳುವಂತಾಗಿದೆ. 

ಬೆಳಿಗ್ಗೆಯೇ ದೂರದ ಊರುಗಳಿಂದ ಖಾಸಗಿ ಬಸ್‌ಗಳು ಇದೇ ರಸ್ತೆಯಲ್ಲಿರುವ ಎಸ್‌ಆರ್‌ಎಸ್‌ ಖಾಸಗಿ ಬಸ್‌ ಡಿಪೊಗೆ ನಿಲುಗಡೆಗಾಗಿ ಬರುತ್ತವೆ. ಈ ಸಮಯದಲ್ಲಿ ರಸ್ತೆಯುದ್ದಕ್ಕೂ ಬಸ್‌ಗಳು ಕ್ಯೂ ನಿಂತಿರುತ್ತವೆ. ಉದ್ದನೆಯ ಬಸ್‌ಗಳು ಟರ್ನಿಂಗ್ ತೆಗೆದುಕೊಳ್ಳುವ ತನಕ ಸಾರ್ವಜನಿಕರು ತಮ್ಮ ವಾಹನಗಳನ್ನು ನಿಲ್ಲಿಸಿಕೊಂಡು ಕಾಯಬೇಕು.

ಈ ರಸ್ತೆಯ ಮತ್ತೊಂದು ಬದಿಯಲ್ಲಿ ಹೋಟೆಲ್‌ಗಳು, ಬ್ಯಾಂಕ್‌, ಸುರಾನ ಕಾಲೇಜು ಸೇರಿದಂತೆ ಕಚೇರಿಗಳೂ ಇವೆ. ಕಾಲೇಜು ಮತ್ತು ಕಚೇರಿಗಳ ಮುಂದಿನ ಪಾರ್ಕಿಂಗ್‌ ಜಾಗದಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗಿರುತ್ತದೆ. ಸಾರ್ವಜನಿಕರು ಬಸ್‌ ಮತ್ತು ಪಾರ್ಕಿಂಗ್ ವಾಹನಗಳ ನಡುವಿನ ಸ್ವಲ್ಪ ಜಾಗದಲ್ಲಿ ಸರ್ಕಸ್ ಮಾಡಿಕೊಂಡು ವಾಹನ ಚಲಾಯಿಸಬೇಕು. ಖಾಸಗಿ ಬಸ್‌ ಚಾಲಕರು ಮತ್ತು ಸಾರ್ವಜನಿಕರ ನಡುವೆ ಮಾತಿನ ಚಕಮಕಿಯೂ ನಡೆಯುತ್ತದೆ. ಅಪಘಾತಗಳೂ ಸಂಭವಿಸಿವೆ ಎನ್ನುತ್ತಾರೆ ಇಲ್ಲಿನ ನಾಗರಿಕರು.

ಪೊಲೀಸರ ಅಲಕ್ಷ್ಯ

ಸಾರ್ವಜನಿಕರಿಗೆ ಸಂಚಾರದಟ್ಟಣೆ ಉಂಟು ಮಾಡುತ್ತಿರುವ ಈ ಸ್ಥಳ ಡೆಪ್ಯುಟಿ ಕಮೀಷನರ್ ಆಫ್ ಪೊಲೀಸ್ (ಡಿಸಿಪಿ), ಅಸಿಸ್ಟೆಂಟ್ ಕಮೀಷನರ್ ಆಫ್ ಪೊಲೀಸ್ (ಎಸಿಪಿ) ಕಚೇರಿಗೆ ಕೂಗಳತೆಯಲ್ಲಿದೆ. ಆದರೆ, ಇದುವರೆಗೂ ಟ್ರಾಫಿಕ್ ಪೊಲೀಸರ ಗಮನಕ್ಕೇ ಬಂದಿಲ್ಲ ಎನ್ನುವುದು ಸ್ಥಳೀಯರ ಅಚ್ಚರಿ.

‘ಪೊಲೀಸರ ಕಣ್ಣೆದುರೇ ಖಾಸಗಿ ಬಸ್‌ಗಳು ಸಾರ್ವಜನಿಕ ರಸ್ತೆಯನ್ನು ಆಕ್ರಮಿಸಿದರೂ ಇಲಾಖೆ ಕಣ್ಮುಚ್ಚಿ ಕುಳಿತಿದೆ.  ಟ್ರಾಫಿಕ್ ಪೊಲೀಸ್‌ನವರು ಬೆಳಿಗ್ಗೆ ಇಲ್ಲಿಗೆ ಬಂದು ನೋಡಿದರೆ ಸಾರ್ವಜನಿಕರ ಸಮಸ್ಯೆ ಏನೆಂದು ಅರ್ಥವಾಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ದ್ವಿಚಕ್ರ ವಾಹನ ಸವಾರ ನವೀನ್. 

‘ರಸ್ತೆಯಲ್ಲೇ ಬಸ್‌ಗಳ ನಿಲುಗಡೆಯಿಂದಾಗಿ ಸಂಚಾರದಟ್ಟಣೆ ಹೆಚ್ಚಾಗಿ ವಾಹನಗಳು ಮುಂದೆ ಹೋಗಲು ಆಗುವುದಿಲ್ಲ. ವಾರಾಂತ್ಯದಲ್ಲಿ ಈ ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ’ ಎನ್ನುತ್ತಾರೆ ಅಂಗಡಿಯೊಂದರ ಮಾಲೀಕ ಉಸ್ಮಾನ್. 

ಪರ್ಯಾಯ ರೂಪಿಸಿ

‘ಖಾಸಗಿ ಬಸ್‌ಗಳ ನಿಲುಗಡೆ ಸಮಸ್ಯೆ ನಿತ್ಯವೂ ಇದೆ. ಪರ್ಯಾಯ ರೂಪಿಸಿದರಷ್ಟೇ ಇದಕ್ಕೆ ಮುಕ್ತಿ’ ಎನ್ನುವುದು  ವಿಜಯಾ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಕಪಿಲೇಶ್ ಕೆ.ಆರ್ ಅವರ ಅಭಿಪ್ರಾಯ.‌

ಅಂಬುಲೆನ್ಸ್‌ಗೂ ದಾರಿ ಇಲ್ಲ

‘ಎಸ್ಆರ್‌ಎಸ್ ಬಸ್‌ಗಳ ನಿಲುಗಡೆಯ ಸಮಸ್ಯೆ ಬರೀ ಬೆಳಗಿನ ಜಾವವಷ್ಟೇ ಅಲ್ಲ, ಸಂಜೆಯೂ ಸಂಚಾರ ದಟ್ಟಣೆಗೆ ಕಾರಣವಾಗಿದೆ. ಶಾಲಾ–ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಈ ರಸ್ತೆಯಲ್ಲಿ ವಾಹನ ಚಲಾಯಿಸಲು ಅಡೆತಡೆಯಾಗಿದೆ. ಈಚೆಗಷ್ಟೆ ಒಂದು ಅಂಬುಲೆನ್ಸ್ ರೋಗಿಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿತ್ತು. ಅವರಿಗೆ ತುರ್ತು ಚಿಕಿತ್ಸೆ ಬೇಕಿತ್ತು. ರಸ್ತೆಯಲ್ಲಿ ಹೋಗಲು ಜಾಗವಿಲ್ಲದೇ ಅಂಬುಲೆನ್ಸ್ ಚಾಲಕ ಪರದಾಡಬೇಕಾಯಿತು. ಈ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳಿರುತ್ತವೆ. ನಿತ್ಯವೂ ಓಡಾಡುವ ಬಿಎಂಟಿಸಿ 60 ಎ ಬಸ್‌ ಈ ದಾರಿಯಲ್ಲಿ ಸಾಗಲು ಹರಸಾಹಸ ಪಡಬೇಕಾಗುತ್ತದೆ. ಡಿಪೋದೊಳಗೆ ಹೋಗಲು–ಬರಲು ಒಂದು ಬಸ್‌ಗೆ ಕನಿಷ್ಠ ಐದರಿಂದ ಎಂಟು ನಿಮಿಷವಾದರೂ ಬೇಕು. ಒಂದಲ್ಲ ಎರಡಲ್ಲ ಸಾಲುಸಾಲು ನಿಂತಿರುವ ಈ ಬಸ್‌ಗಳು ಸಾಗಲು ಬಹು ಸಮಯ ಹಿಡಿಯುತ್ತದೆ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ’ ಎಂದು ವಿವರಿಸುತ್ತಾರೆ ಸುರಾನ ಕಾಲೇಜು ವಿದ್ಯಾರ್ಥಿ ವಿನಯ್ ದೇಶಪಾಂಡೆ. 

 ಟ್ರಾಫಿಕ್ ಪೊಲೀಸ್ ನಿಯೋಜನೆ

‘ಎಸ್‌ಆರ್‌ಎಸ್ ಬಸ್‌ಗಳ ನಿಲುಗಡೆಯ ಬಗ್ಗೆ ಮಾಹಿತಿ ತಿಳಿದಿದೆ. ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ದೂರು ಕೂಡಾ ದಾಖಲಿಸುತ್ತಿದ್ದೇವೆ. ಆ ಸ್ಥಳಕ್ಕೆ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಿ, ಸಾರ್ವಜನಿಕರಿಗೆ ಸಂಚಾರ ದಟ್ಟಣೆ ಉಂಟಾಗದಂತೆ ಕ್ರಮ ಕೈಗೊಳ್ಳುತ್ತೇವೆ’ ಎಂದರು ಬಸವನಗುಡಿ ಟ್ರಾಫಿಕ್ ಪೊಲೀಸ್ ಸ್ಟೇಷನ್‌ನ ಸಬ್ ಇನ್‌ಸ್ಟೆಕ್ಟರ್ ಕಪ್ಪಣ್ಣ. 

ಎಚ್ಚರ ವಹಿಸುತ್ತೇವೆ

ಎಸ್‌ಆರ್‌ಎಸ್‌ ಬಸ್‌ಗಳ ನಿಲುಗಡೆಯಿಂದಾಗಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ರಸ್ತೆಯಲ್ಲಿ ಬಸ್ ನಿಲ್ಲಿಸದಂತೆ ಎಚ್ಚರ ವಹಿಸುತ್ತೇವೆ.

–ರುದ್ರಯ್ಯ, ಎಸ್‌ಆರ್‌ಎಸ್ ಟ್ರಾವೆಲ್ಸ್‌ ಬಸ್ ಡಿಪೊ ಮ್ಯಾನೇಜರ್

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !