ಇಲ್ಲಿ ಅವಳಿಗಿಲ್ಲ ಮೂಲಸೌಕರ್ಯ

ಮಂಗಳವಾರ, ಮೇ 21, 2019
31 °C

ಇಲ್ಲಿ ಅವಳಿಗಿಲ್ಲ ಮೂಲಸೌಕರ್ಯ

Published:
Updated:

ಖಾಸಗಿ ಅಥವಾ ಸರ್ಕಾರೀ ಸಂಸ್ಥೆ ಇರಲಿ. ಮಹಿಳೆಯರಿಗೆ ವಿಶೇಷವಾಗಿ ಮೂಲಸೌಕರ್ಯ ಒದಗಿಸುವ ವಿಷಯದಲ್ಲಿ ಉದಾಸೀನ ಮನೋಭಾವವಿದೆ. ಈ ಸಮಸ್ಯೆ ಮಹಿಳಾ ಪ್ರಯಾಣಿಕರನ್ನು ಹೈರಾಣು ಮಾಡಿ ಹಾಕುತ್ತಿದೆ. ಇದರ ಬಗ್ಗೆ ‘ಮೆಟ್ರೊ’ ನೀಡುವ ಸಾಕ್ಷಾತ್‌ ವರದಿ ಇದು.

ಸ್ಥಳ: ಕಾಳಿದಾಸ ರಸ್ತೆ, ಗಾಂಧಿನಗರ,

ಸಮಯ: ರಾತ್ರಿ 10.

ಶಿರಸಿಗಾಗಿ ಎಸ್‌ಆರ್‌ಎಸ್‌ ಬಸ್‌ನಲ್ಲಿ ಹೊರಟಿದ್ದ ವಸುಂಧರಾ (ಹೆಸರು ಬದಲಿಸಿದೆ) ಊರಿಗೆ ತಲುಪುವುದು ತಡವಾದೀತೆಂದು ಎಸ್‌ಆರ್‌ಎಸ್ ಪಿಕ್ಅಪ್ ಪಾಯಿಂಟ್ ಕಚೇರಿ ಪಕ್ಕದಲ್ಲೇ ಇದ್ದ ಶೌಚಾಲಯಕ್ಕೆ ತೆರಳಿದರು. ಅಲ್ಲಿಂದ ವಾಪಸ್ ಬರುವಾಗ ಮುಖಗಂಟಿಕ್ಕಿಕೊಂಡೇ ಹೊರಗೆ ಬಂದ ಅವರಿಗೆ ಹೊಟ್ಟೆಯಲ್ಲಿದ್ದದ್ದು ಉಮ್ಮಳಿಸಿ ಬರುವುದೊಂದೇ ಬಾಕಿ...

ಯಾಕೆ ಮೇಡಂ ಏನಾಯ್ತು? ಹುಷಾರಿಲ್ವಾ ಅಂತ ಪ್ರಶ್ನಿಸಿದರೆ, ‘ಇಲ್ಲ ಮೇಡಂ, ಟಾಯ್ಲೆಟ್ ಸ್ಥಿತಿ ನೋಡಿ ವಾಂತಿ ಬಂದ ಹಾಗಾಯ್ತು. ತುಂಬಾ ಗಲೀಜು. ಪುರುಷರಿಗೂ, ಮಹಿಳೆಯರಿಗೂ ಒಂದೇ ಟಾಯ್ಲೆಟ್. ಏನೋ ಅನಿವಾರ್ಯ ಅಂತ ಹೋಗಿಬಂದೆ’ ಅಂತ ಮೂಗಿಗೆ ದುಪಟ್ಟಾ ಅಡ್ಡ ಹಿಡಿದುಕೊಂಡೇ ತಮ್ಮ ಅನುಭವ ಹಂಚಿಕೊಂಡರು. 

–ಇದು ಬರೀ ಎಸ್‌ಆರ್‌ಎಸ್ ಖಾಸಗಿ ಟ್ರಾವೆಲ್ಸ್ ಒಂದೇ ಅಲ್ಲ ಬಹುತೇಕ  ಖಾಸಗಿ ಬಸ್ ಟ್ರಾವೆಲ್ಸ್ ಪಿಕ್‌ಅಪ್ ಪಾಯಿಂಟ್‌ಗಳ ಕಥೆ. ‌

ರಾಜಧಾನಿಯಲ್ಲಿ ನಿತ್ಯವೂ ಪರ ಊರುಗಳಿಗೆ ಸಂಚರಿಸುವ ಮಹಿಳಾ ಪ್ರಯಾಣಿಕರಿಗೆ ಖಾಸಗಿ ಬಸ್ ಪಿಕ್ಅಪ್ ಪಾಯಿಂಟ್‌ಗಳಿರಲಿ, ಮುಖ್ಯ ಕಚೇರಿಗಳಲ್ಲೇ ಮೂಲಸೌಕರ್ಯಗಳ ಕೊರತೆ ಬರಿಗಣ್ಣಿಗೆ ರಾಚುವಂತಿದೆ.

ಪುಟ್ಟ ಮಕ್ಕಳ ತಾಯಂದಿರಿಗೆ ಪ್ರತ್ಯೇಕ ತಂಗುದಾಣಗಳಿರಲಿ, ಕನಿಷ್ಠ ಶುಚಿತ್ವದ ಶೌಚಾಲಯಗಳೂ ಇಲ್ಲಿಲ್ಲ. ಶರ್ಮಾ, ವಿಶಾಲ್, ಗ್ರೀನ್ ಲೈನ್ಸ್, ಪೂಜಾ, ಸುಗಮ, ಬಿ.ಆರ್. ಟ್ರಾವೆಲ್ಸ್, ಜೀಪಿ, ಶ್ಯಾಮಲಾ, ವರ್ಷಾ, ನ್ಯಾಷನಲ್‌ ಟ್ರಾವೆಲ್ಸ್... ಹೀಗೆ ನೂರಾರು ಟ್ರಾವೆಲ್‌ಗಳ ಪಿಕ್‌ಅಪ್ ಪಾಯಿಂಟ್‌ಗಳಲ್ಲಿ ಪ್ರಯಾಣಿಕರಿಗೆ ಮೂಲಸೌಕರ್ಯಗಳದ್ದೇ ಕೊರತೆ. ಹಬ್ಬಗಳಲ್ಲಿ ಖಾಸಗಿ ಬಸ್‌ ದರವನ್ನು ಬೇಕಾಬಿಟ್ಟಿ ಏರಿಸುವ ಈ ಟ್ರಾವೆಲ್‌ಗಳು ಪ್ರಯಾಣಿಕರ ಕನಿಷ್ಠ ಮೂಲಸೌಕರ್ಯದ ಬಗ್ಗೆ ಗಮನ ಹರಿಸದಿರುವುದು ಸೋಜಿಗ. 

ಆನಂದರಾವ್ ಸರ್ಕಲ್‌ಗೂ ಖಾಸಗಿ ಟ್ರಾವೆಲ್ಸ್‌ನವರಿಗೂ ಅವಿನಾಭಾವ ಸಂಬಂಧ. ದೊಡ್ಡ ಟ್ರಾವೆಲ್ಸ್‌ನಿಂದ ಹಿಡಿದು ಸಣ್ಣಪುಟ್ಟ ಟ್ರಾವೆಲ್ಸ್‌ಗಳೂ ಈ ವೃತ್ತದಲ್ಲಿ ಕಚೇರಿಗಳನ್ನು ಹೊಂದಿವೆ. ರಾಜಧಾನಿಯ ಬಹುದೊಡ್ಡ ಪಿಕ್‌ಪಾಯಿಂಟ್ ಕೂಡಾ ಇದೇ. ಆದರೆ, ಇಲ್ಲೂ ಕೂಡಾ ಪ್ರಯಾಣಿಕರಿಗೂ ಅಕ್ಷರಶಃ ರಸ್ತೆ ಮೇಲೆ ನಿಂತು ಬಸ್‌ಗಳಿಗೆ ಕಾಯಬೇಕು. ಕೆಲವರು ಜಲಮಂಡಳಿಯ ಪೈಪ್‌ಗಳ ಮೇಲೆ ಕುಳಿತು ಬಸ್‌ಗಳಿಗೆ ಕಾಯುವ ದೃಶ್ಯವೂ ಕಾಣಸಿಗುತ್ತದೆ. ಮೆಜೆಸ್ಟಿಕ್‌ನಲ್ಲಂತೂ ಇಂಥ ಸರಣಿ ದೃಶ್ಯಾವಳಿಗಳೇ ಕಾಣುತ್ತವೆ.

***
ವಿಆರ್‌ಎಲ್

ಆನಂದರಾವ್ ವೃತ್ತದಲ್ಲಿರು ವಿಆರ್‌ಎಲ್ ಖಾಸಗಿ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕೂರಲು ಬೆಂಚುಗಳೇನೋ ಇವೆ. ಆದರೆ, ಮಹಿಳೆಯರ ಶೌಚಾಲಯ ನಿಲ್ದಾಣದ ತುದಿಭಾಗದಲ್ಲಿದೆ. ಬಸ್‌ಗಳು ಸಂಚರಿಸುವ ಮಾರ್ಗದಲ್ಲೇ ಶೌಚಾಲಯಕ್ಕೆ ಹೋಗಬೇಕು. ಮಹಿಳಾ ಶೌಚಾಲಯದ ಪಕ್ಕದಲ್ಲೇ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕೂಡಾ ಇದೆ. ಅವಘಡ ಸಂಭವಿಸಿದರೆ ಶೌಚಾಲಯಕ್ಕೆ ಹೋಗುವ ದ್ವಾರದಲ್ಲೇ ಅನಾಹುತ ಆಗುವ ಸಾಧ್ಯತೆ ಇದೆ. ‘ಇಲ್ಲಿನ ಶೌಚಾಲಯದೊಳಗೆ ಸ್ವಚ್ಛತೆ ಅಷ್ಟಕಷ್ಟೇ. ಗಬ್ಬುನಾತ. ದೊಡ್ಡವರು ಹೇಗೋ ಹೋಗಬಹುದು. ಪುಟ್ಟ ಮಕ್ಕಳನ್ನು ಕರೆದುಕೊಂಡು ಹೋಗಲಾಗದು’ ಎಂದರು ಧಾರವಾಡಕ್ಕೆ ಹೊರಟಿದ್ದ ಮೇಘನಾ. 

ಎಸ್ಆರ್‌ಎಸ್

ಎಸ್‌ಆರ್‌ಎಸ್ ಬಸ್ ನಿಲ್ದಾಣದೊಳಗೆ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯವಿದೆ. ಆದರೆ, ರಾತ್ರಿ 10ರ ಹೊತ್ತಿಗೆ ರಷ್ ಜಾಸ್ತಿಯಾದಾಗ ಪ್ರಯಾಣಿಕರು ಸೀದಾ ರಸ್ತೆ ಮೇಲೆ ನಿಂತು ಕಾಯುವ ಸ್ಥಿತಿ ಇದೆ. ಪುಟ್ಟ ಮಗುವನ್ನೆತ್ತಿಕೊಂಡು ಚೆನ್ನೈಗೆ ಹೊರಟಿದ್ದ ದಂಪತಿಯೊಬ್ಬರು ಮಗು ಸಮೇತ ರಸ್ತೆಯಲ್ಲೇ ನಿಂತಿದ್ದರು. ದಾಂಡೇಲಿಗೆ ಹೊರಟಿದ್ದ ರೇಣುಕಾ ಪೂಜಾರಿ ಜಾಗವಿಲ್ಲದೆ ರಸ್ತೆಯ ಬದಿಯಲ್ಲೇ ಲಗೇಜ್ ನೋಡಿಕೊಂಡು ಕುಳಿತಿದ್ದರು. 

ಸೀ ಬರ್ಡ್ ಅವ್ಯವಸ್ಥೆ 

ಇಲ್ಲಿನ ಮಹಿಳೆಯರ ಶೌಚಾಲಯಕ್ಕೆ ಹೋಗಬೇಕಾದರೆ, ಕಾದು ಕುಳಿತಿರುವ ಪ್ರಯಾಣಿಕರ ಮಧ್ಯೆಯೇ ಜಾಗ ಮಾಡಿಕೊಂಡು ತೆರಳಬೇಕು. ಒಬ್ಬರು ಮಾತ್ರ ಹೋಗಬಹುದಾದ ಪುಟ್ಟ ಜಾಗದಲ್ಲಿ ಇರುವ ಶೌಚಾಲಯಗಳಲ್ಲಿ ಒಂದು ಸಂಪೂರ್ಣ ಹಾಳಾಗಿದೆ. ಮತ್ತೊಂದರಲ್ಲಿ ಸ್ವಚ್ಛತೆ ಅಷ್ಟಕಷ್ಟೇ.

‘ಮಗುವನ್ನೆತ್ತಿಕೊಂಡೇ ಶೌಚಾಲಯಕ್ಕೆ ಹೋದೆ. ಒಳಗೆ ಹೋದರೆ ಗಬ್ಬುನಾತ. ಒಂದು ಟಾಯ್ಲೆಟ್ ಅಂತೂ ಪೂರ್ತಿ ಹಾಳಾಗಿದೆ. ಇರುವ ಶೌಚಾಲಯ ಗಲೀಜು’ ಎಂದು ಬೇಸರ ವ್ಯಕ್ತಪಡಿಸಿದರು ಗೃಹಿಣಿ ನೀತಲ್. 

ಕೆಎಸ್ಆರ್‌ಟಿಸಿ ಬೆಸ್ಟ್‌

‘ಇದೇ ಮೊದಲ ಬಾರಿಗೆ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದೇನೆ. ಇಲ್ಲಿನ ಅವ್ಯವಸ್ಥೆ ನೋಡಿದರೆ ಕೆಎಸ್‌ಆರ್‌ಟಿಸಿ ವ್ಯವಸ್ಥೆಯೇ ಬೆಸ್ಟ್‌. ಸ್ಯಾಟಲೈಟ್ ಬಸ್‌ ನಿಲ್ದಾಣ ಸ್ವಚ್ಛವಾಗಿದೆ, ಶೌಚಾಲಯ ಸೌಕರ್ಯವೂ ಚೆನ್ನಾಗಿದೆ. ಮಹಿಳೆಯರಿಗೆ ಕಂಫರ್ಟ್ ಆಗಿದೆ. ಖಾಸಗಿ ಬಸ್ ಪಿಕ್ಅಪ್ ಪಾಯಿಂಟ್‌ಗಳಲ್ಲಿ ಸ್ವಲ್ಲ ಹೊತ್ತು ನಿಂತು ಕಾಯಬಹುದು. ಆದರೆ, ತುಂಬಾ ಹೊತ್ತು ನಿಲ್ಲಲಾಗದು. ಟಾಯ್ಲೆಟ್, ಕುಡಿಯುವ ನೀರು, ಕೂರಲು ಜಾಗ ಸೌಕರ್ಯ ಚೆನ್ನಾಗಿರಬೇಕು. ಈ ಸೌಕರ್ಯ ಮಹಿಳೆಯರಿಗಷ್ಟೇ ಅಲ್ಲ ಎಲ್ಲಾ ಪ್ರಯಾಣಿಕರಿಗೂ ಅಗತ್ಯವಾಗಿ ಟ್ರಾವೆಲ್ಸ್‌ನವರು ನೀಡಬೇಕು’ ಎನ್ನುತ್ತಾರೆ ರಾಜರಾಜೇಶ್ವರಿ ನಗರದ ಶಿಕ್ಷಕಿ ಸೋನಿ. 

ರಸ್ತೆಯಲ್ಲಿ ನಿಲ್ಲಲು ಮುಜುಗರ 

‘ನಮ್ಮದು ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ. ಸರ್ಕಾರಿ ಬಸ್ ದರ ಹೆಚ್ಚು ಅನ್ನುವ ಕಾರಣಕ್ಕೆ ಖಾಸಗಿ ಬಸ್‌ಗಳಲ್ಲೇ ಪ್ರಯಾಣಿಸ್ತೀನಿ. ಇಂದಿರಾ ಟ್ರಾವೆಲ್ಸ್ ಬಿಟ್ಟರೆ ಬೇರಾವ ಖಾಸಗಿ ಟ್ರಾವೆಲ್ಸ್‌ನವರು ನಮ್ಮೂರಿನ ತನಕ ಬರೋಲ್ಲ. ಈ ಬಸ್‌ನ ಪಿಕ್ ಅಪ್ ಪಾಯಿಂಟ್ ಇರೋದು ಗುಬ್ಬಿ ವೀರಣ್ಣ ಥಿಯೇಟರ್ ಬಳಿ. ಟ್ರಾಫಿಕ್ ಇದ್ದರೆ ಸರಿಯಾದ ಸಮಯಕ್ಕೆ ಬರಲು ಆಗದು ಅಂತ ಹೆಬ್ಬಾಳದ ಮನೆಯಿಂದ ಬೇಗ ಹೊರಟು ಬರ್ತೀನಿ. ಈ ಪಿಕ್‌ಅಪ್ ಪಾಯಿಂಟ್‌ನಲ್ಲಿ ಮಹಿಳೆಯರಿಗೆ ಯಾವುದೇ ಸೌಲಭ್ಯವಿಲ್ಲ. ಕುಡಿಯಲು ನೀರು ಹೋಗಲಿ ಶೌಚಾಲಯ ಸೌಲಭ್ಯವಿಲ್ಲ. ರಸ್ತೆಯಲ್ಲೇ ನಿಲ್ಲಬೇಕು. ಒಮ್ಮೊಮ್ಮೆ ಎರಡು ಪುಟ್ಟ ಮಕ್ಕಳನ್ನು ಕರೆದುಕೊಂಡು ರಸ್ತೆ ಮೇಲೆ ನಿಂತದ್ದೂ ಇದೆ. ಆಗೆಲ್ಲಾ ತುಂಬಾ ಮುಜುಗರವಾಗುತ್ತೆ. ಈ ಏರಿಯಾ ಎಂಥದ್ದು ಅಂತ ಗೊತ್ತಲ್ವ?’ ಅಂತ ಪ್ರಶ್ನಿಸುತ್ತಾರೆ ಪಂಕಜಾ ಬಸವರಾಜ್. 

***
‘ಖಂಡಿತ ಕ್ರಮ ಕೈಗೊಳ್ಳುತ್ತೇವೆ’
 ‘ಸ್ವಚ್ಛತೆ ಬಗ್ಗೆ ಖಂಡಿತಾ ಕ್ರಮ ಕೈಗೊಳ್ಳುತ್ತೇವೆ. ಪ್ರಯಾಣಿಕರ ಹಿತಾಸಕ್ತಿ ಕಾಪಾಡಿಕೊಳ್ತೀವಿ. ವಿಆರ್‌ಎಲ್‌ನಲ್ಲಿ ಮಹಿಳೆಯರಿಗೆ ಪ್ರಯಾಣ ದರದಲ್ಲಿ ಶೇ 5ರಷ್ಟು ರಿಯಾಯ್ತಿ ಇದೆ. ನಮ್ಮ ಬಸ್‌ ಒಳಗೂ ಮತ್ತು ಹೊರಗೂ ಎರಡೂ ಕಡೆ ಸಿಸಿ ಕ್ಯಾಮೆರಾ ಅಳವಡಿಸಿದ್ದೇವೆ. ಮಹಿಳೆಯರಿಗೆ ಪ್ರತ್ಯೇಕ ಸೀಟ್ ಇವೆ’.
–ಪ್ರಸನ್ನ, ಎಜಿಎಂ, ವಿಆರ್‌ಎಲ್ ಟ್ರಾವೆಲ್ಸ್, ಬೆಂಗಳೂರು

***
50 ಕಡೆ ಮಾಡೋಕಾಗುತ್ತಾ?

’ಸಿಟಿಯಲ್ಲಿ 50 ಕಡೆ ಪಿಕ್ಅಪ್ ಪಾಯಿಂಟ್ ಇದ್ರೆ ಅಲ್ಲೆಲ್ಲಾ ಸೌಕರ್ಯ ಕೊಡೋಕಾಗುತ್ತಾ? ಏನಿದ್ದರೂ ಅದು ಹೆಡ್ ಆಫೀಸಿನಲ್ಲಿ ಮಾತ್ರ. ಆನಂದರಾವ್ ಸರ್ಕಲ್‌ನಲ್ಲಿ ಸಣ್ಣ ಜಾಗಕ್ಕೆ ₹ 1ಲಕ್ಷ ಬಾಡಿಗೆ ಇದೆ. ನಾನು ಈಗ ಮಾತಾಡೋಕೆ ಆಗೋಲ್ಲ. ಬ್ಯುಸಿ ಇದ್ದೀನಿ’... (ಫೋನ್ ಕಟ್ ಮಾಡಿದರು)
–ಸಿಬ್ಬಂದಿ, ನ್ಯಾಷನಲ್ ಟ್ರಾವೆಲ್ಸ್, ಕಲಾಸಿಪಾಳ್ಯ.

***
ಬೆಳಿಗ್ಗೆಯಷ್ಟೇ ಶೌಚಾಲಯ

‘ನೀವು ಶೌಚಾಲಯಕ್ಕೆ ಹೋಗಬೇಕೆಂದರೆ ಪಕ್ಕದ ಕಾಂಪ್ಲೆಕ್ಸ್‌ನ ಪಾವತಿಸಿ ಉಪಯೋಗಿಸುವ ಶೌಚಾಲಯಕ್ಕೆ ಹೋಗಿ. ಅಲ್ಲಿ ಲೇಡಿಸ್‌ಗೆ ಬೇರೆ ಟಾಯ್ಲೆಟ್ ಇದೆ. ಅದೂ ಬೆಳಿಗ್ಗೆ 10ರಿಂದ ರಾತ್ರಿ 10ರ ತನಕ ಮಾತ್ರ’ 
–ಅಭಿಷೇಕ್, ಸಿಬ್ಬಂದಿ, ಗ್ರೀನ್‌ಲೈನ್ಸ್ ಟ್ರಾವೆಲ್ಸ್

*** 
ಹೆಡ್ ಆಫೀಸ್‌ನಲ್ಲಿದೆ

ಆನಂದರಾವ್ ಸರ್ಕಲ್‌ನಲ್ಲಿರುವ ನಮ್ಮ ಕಚೇರಿ ಸಣ್ಣದು. ಹಾಗಾಗಿ ಅಲ್ಲಿ ಶೌಚಾಲಯ ವ್ಯವಸ್ಥೆ ಮಾಡಿಲ್ಲ. ಆದರೆ, ರೇಸ್‌ಕೋರ್ಸ್ ರಸ್ತೆಯಲ್ಲಿರುವ ಮುಖ್ಯಕಚೇರಿಯಲ್ಲಿ ಶೌಚಾಲಯವಿದೆ. 
–ಸಂದೀಪ್, ಬುಕಿಂಗ್ ಏಜೆಂಟ್, ಸುಗಮ ಟ್ರಾವೆಲ್ಸ್

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !