ಊಟಕ್ಕೆ ಕರೆದು ಅತ್ಯಾಚಾರ ಎಸಗಿದ್ದವನ ಸೆರೆ!

ಬುಧವಾರ, ಮೇ 22, 2019
29 °C

ಊಟಕ್ಕೆ ಕರೆದು ಅತ್ಯಾಚಾರ ಎಸಗಿದ್ದವನ ಸೆರೆ!

Published:
Updated:

ಬೆಂಗಳೂರು: ಊಟಕ್ಕೆಂದು ಗೆಳತಿಯನ್ನು ಮನೆಗೆ ಕರೆದು ಆಕೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಕೇರಳದ ಜೀತು ತಂಕಚನ್ (29) ಎಂಬಾತನನ್ನು ಕೆಂಪೇಗೌಡನಗರ ಪೊಲೀಸರು ಗುರುವಾರ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಚಾಮರಾಜಪೇಟೆ 5ನೇ ಮುಖ್ಯರಸ್ತೆಯಲ್ಲಿ ನೆಲೆಸಿದ್ದ ಜೀತು, ನಗರದ ಖಾಸಗಿ ಕಂಪನಿಯೊಂದರಲ್ಲಿ ವ್ಯವಸ್ಥಾಪಕನಾಗಿದ್ದ. ಸಂತ್ರಸ್ತೆ ಕೂಡ ಅದೇ ಕಂಪನಿಯಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿದ್ದರು.

‘ನಾನು ಹಾಗೂ ಜೀತು ಐದು ವರ್ಷಗಳಿಂದ ಪ್ರೀತಿಸುತ್ತಿದ್ದೆವು. ಇತ್ತೀಚೆಗೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ನನ್ನನ್ನು, ಡ್ರಾಪ್ ಮಾಡುವುದಾಗಿ ಕಾರಿನಲ್ಲಿ ಹತ್ತಿಸಿಕೊಂಡಿದ್ದ. ಸ್ವಲ್ಪ ದೂರ ಸಾಗಿದ ಬಳಿಕ ಮಾರ್ಗ ಬದಲಿಸಿ ತನ್ನ ಮನೆ ಕಡೆ ಕಾರು ತಿರುಗಿಸಿದ್ದ. ಅದನ್ನು ಪ್ರಶ್ನಿಸಿದ್ದಕ್ಕೆ, ‘ಊಟ ಮಾಡಿಕೊಂಡು ಹೋಗುವಂತೆ’ ಹೇಳಿದ್ದ. ಮನೆಗೆ ತೆರಳಿದ ನಂತರ ನನ್ನ ಮೇಲೆ ಅತ್ಯಾಚಾರ ಎಸಗಿದ ಆತ, ‘ಮುಂದಿನ ತಿಂಗಳೇ ನಿನ್ನನ್ನು ಮದುವೆ ಆಗುತ್ತೇನೆ’ ಎಂದು ಹೇಳಿ ಸಮಾಧಾನಪಡಿಸಿದ್ದ. ನಮ್ಮ ಪ್ರೀತಿಯ ವಿಚಾರವನ್ನು ಪೋಷಕರಿಗೂ ತಿಳಿಸಿದ್ದೆ’ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ.

‘ಈ ನಡುವೆ ನನ್ನಿಂದ ಅಂತರ ಕಾಯ್ದುಕೊಳ್ಳಲು ಪ್ರಾರಂಭಿಸಿದ ಆತ, ಜ.18ರಂದು ಬಂದು ತನಗೆ ಸಂಬಂಧಿ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿರುವುದಾಗಿ ಹೇಳಿದ. ಅಲ್ಲದೆ, ನಮ್ಮದೇ ಕಂಪನಿಯಲ್ಲಿ ಕೆಲಸ ಮಾಡುವ ಜೀತು ಸ್ನೇಹಿತರಾದ ಸರವಣ್, ವಾಸುದೇವನ್, ಅಶ್ವತ್ಥ್ ನಾರಾಯಣ್ ಹಾಗೂ ದೀಪಕ್ ಸಹ, ‘ಜೀತು ಬೇರೆ ಮದುವೆ ಆಗುತ್ತಿದ್ದಾನೆ. ಇನ್ನುಮುಂದೆ ಅವನ ತಂಟೆಗೆ ಹೋದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ’ ಎಂದು ಧಮ್ಕಿ ಹಾಕಿದರು. ಹೀಗಾಗಿ, ಅವರೆಲ್ಲರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಸಂತ್ರಸ್ತೆ ಮನವಿ ಮಾಡಿದ್ದಾರೆ.

‘ಅತ್ಯಾಚಾರ (ಐಪಿಸಿ 376) ಹಾಗೂ ವಂಚನೆ (420) ಆರೋಪಗಳಡಿ ಜೀತುನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಜತೆಗೆ, ಜೀವ ಬೆದರಿಕೆ (506) ಆರೋಪದಡಿ ಆತನ ನಾಲ್ವರು ಸ್ನೇಹಿತರನ್ನೂ ವಶಕ್ಕೆ ಪಡೆದು, ಠಾಣಾ ಜಮೀನಿನ ಮೇಲೆ ಬಿಟ್ಟು ಕಳುಹಿಸಲಾಗಿದೆ’ ಎಂದು ಕೆಂಪೇಗೌಡನಗರ ಪೊಲೀಸರು ಮಾಹಿತಿ ನೀಡಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !