ಕ್ರೀಡೆ, ಭದ್ರತೆ, ಪ್ರವಾಸೋದ್ಯಮ ಕುರಿತ ವಿಶ್ವವಿದ್ಯಾಲಯ

7
ಖಾಸಗಿಯವರಿಗೆ ಆಹ್ವಾನ

ಕ್ರೀಡೆ, ಭದ್ರತೆ, ಪ್ರವಾಸೋದ್ಯಮ ಕುರಿತ ವಿಶ್ವವಿದ್ಯಾಲಯ

Published:
Updated:

ಬೆಂಗಳೂರು: ಕ್ರೀಡೆ, ಭದ್ರತೆ ಮತ್ತು ಪ್ರವಾಸೋದ್ಯಮ ವಿಷಯಗಳಿಗೆ ಸಂಬಂಧಿಸಿದಂತೆ ಮೂರು ಪ್ರತ್ಯೇಕ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ರಾಜ್ಯ ಸರ್ಕಾರ ಖಾಸಗಿಯವರನ್ನು ಆಹ್ವಾನಿಸಿದೆ.

ತುಮಕೂರು ಜಿಲ್ಲೆಯಲ್ಲಿ ಕ್ರೀಡೆ ಮತ್ತು ಅಂಗಸಾಧನೆಗೆ ಸಂಬಂಧಿಸಿದ ವಿಶ್ವವಿದ್ಯಾಲಯ, ಶಿವಮೊಗ್ಗ ಜಿಲ್ಲೆಯಲ್ಲಿ  ಭದ್ರತಾ ವಿಶ್ವವಿದ್ಯಾಲಯ ಮತ್ತು ಬಳ್ಳಾರಿ ಜಿಲ್ಲೆ ಹಂಪಿಯಲ್ಲಿ ಪ್ರವಾಸೋದ್ಯಮ ವಿಶ್ವವಿದ್ಯಾಲಯವನ್ನು ಖಾಸಗಿಯವರು ಸ್ಥಾಪಿಸಬಹುದಾಗಿದೆ.

ರಾಜ್ಯದಲ್ಲಿ ಕ್ರೀಡೆಯನ್ನು ಒಂದು ವಿಷಯವಾಗಿ ಪ್ರಾಥಮಿಕ ಶಿಕ್ಷಣದಲ್ಲಿ ಸೇರಿಸಲಾಗಿದೆ. ಆದರೆ, ಸಾಂಪ್ರದಾಯಿಕ ಶಿಕ್ಷಣದಲ್ಲಿ ಸಿಗುವ ಪದವಿಯೇ ಶ್ರೇಷ್ಠ ಎಂಬ ಭಾವನೆ ವಿದ್ಯಾರ್ಥಿಗಳಲ್ಲಿದೆ. ಕ್ರೀಡೆ ಮತ್ತು ಅಂಗಸಾಧನೆಯನ್ನು ಒಂದು ವಿಷಯವಾಗಿ ಅಧ್ಯಯನ ಮಾಡಲು ವಿದ್ಯಾರ್ಥಿಗಳು ಮುಂದೆ ಬರುತ್ತಿಲ್ಲ. ಇಂತಹ ವಿಷಯಗಳ ಕಲಿಕೆಗೆ ಅನುಕೂಲವಾಗಲು ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸಲು ಖಾಸಗಿಯವರನ್ನು ಆಹ್ವಾನಿಸುತ್ತಿರುವುದಾಗಿ ಉನ್ನತ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಈ ವಿಶ್ವವಿದ್ಯಾಲಯವು ದೈಹಿಕ ಶಿಕ್ಷಣ, ಕ್ರೀಡೆ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಪದವಿ, ಸ್ನಾತಕೋತ್ತರ ಮತ್ತು ಸಂಶೋಧನಾ ಕಾರ್ಯಕ್ರಮಗಳನ್ನು ಒಳಗೊಂಡಿರಬೇಕು. ಇದಕ್ಕೆ ಪೂರಕವಾಗಿ ವಿನೂತನ ಮತ್ತು ಕ್ರಿಯಾಶೀಲ ಪಠ್ಯ ಕ್ರಮವನ್ನು ರಚಿಸಬೇಕಾಗುತ್ತದೆ. 

ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಲಕ್ಷಾಂತರ ಭದ್ರತಾ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಇವರಿಗೆ ಸೂಕ್ತ ತರಬೇತಿ ಇರುವುದಿಲ್ಲ. ಭದ್ರತಾ ಏಜೆನ್ಸಿಗಳು ನೀಡುವ ತರಬೇತಿಯೂ ಸಮಗ್ರವಾಗಿರುವುದಿಲ್ಲ. ಈಗ ಭದ್ರತಾ ಪರಿಕಲ್ಪನೆಯೂ ಬದಲಾಗಿದೆ. ಸೈಬರ್‌ ಅಪರಾಧಗಳೂ ಹೆಚ್ಚಾಗುತ್ತಿದೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಶಿವಮೊಗ್ಗ ಜಿಲ್ಲೆಯಲ್ಲಿ ಭದ್ರತಾ ವಿಶ್ವವಿದ್ಯಾಲಯ ಸ್ಥಾಪನೆಗೆ ಅವಕಾಶ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಪ್ರವಾಸೋದ್ಯಮ ಅಸಂಘಟಿತ ವಲಯವಾಗಿದೆ. ರಾಜ್ಯ ಮತ್ತು ದೇಶದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಫುಲ ಅವಕಾಶಗಳು ಇರುವುದರಿಂದ ಪ್ರವಾಸೋದ್ಯಮ ಕುರಿತ ಶಿಕ್ಷಣದ ಅಗತ್ಯವಿದೆ. ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ, ಸಂಶೋಧನೆ ಕಾರ್ಯ ಕೈಗೊಳ್ಳಲು ವಿಶ್ವವಿದ್ಯಾಲಯದ ಅಗತ್ಯವಿದೆ.

ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆ ಕುರಿತಂತೆ ಕರಡು ನಿಯಮ ರಚಿಸಲು ನೇಮಿಸಿದ್ದ ಸಮಿತಿ ಈ ವಿಷಯಗಳ ವಿಶ್ವವಿದ್ಯಾಲಯ ಸ್ಥಾಪನೆಗೆ ಶಿಫಾರಸು ಮಾಡಿತ್ತು. 2016ರ ಮೇ 5 ರಂದು ಉನ್ನತ ಶಿಕ್ಷಣ ಪರಿಷತ್ತು ಈ ಮೂರು ವಿಷಯಗಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಖಾಸಗಿ ವಿಶ್ವವಿದ್ಯಾಲಯಗಳನ್ನು ಆರಂಭಿಸಲು ಅನುಮೋದನೆ ನೀಡಿತ್ತು ಎಂದು ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !