ಸೋಮವಾರ, ಮಾರ್ಚ್ 8, 2021
22 °C

ಕನ್ನಡವೂ ಪ್ರಿಯ ಎಂದ ಪ್ರಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಿಯಾ ಪ್ರಕಾಶ್‌ ವಾರಿಯರ್... ಕಳೆದ ವರ್ಷ ಪ್ರೇಮಿಗಳ ದಿನಕ್ಕೂ ಒಂದೆರಡು ದಿನ ಮುಂಚೆ ಕಣ್ಣು ಮಿಟುಗಿಸುವ ದೃಶ್ಯವೊಂದರ ಮೂಲಕ ದಿಗ್ಗಜರಿಂದ ಪಡ್ಡೆಗಳವರೆಗೂ ನಿದ್ದೆ ಕೆಡಿಸಿದ ಬೆಡಗಿ!

ಮೊನ್ನೆ ಅವರು ಬೆಂಗಳೂರಿಗೆ ಬಂದಿದ್ದರು. ಕಣ್ಣು ಮಿಟುಕಿಸುವ ದೃಶ್ಯವಿರುವ ‘ಒರು ಅಡಾರ್‌ ಲವ್‌’ ಸಿನಿಮಾದ ಕನ್ನಡ ಅವತರಣಿಕೆ ‘ಕಿರಿಕ್‌ ಲವ್‌ ಸ್ಟೋರಿ’ಯ ಆಡಿಯೊ ಬಿಡುಗಡೆ ಸಮಾರಂಭದಲ್ಲಿ ಅವರು ‍ಪಾಲ್ಗೊಂಡಿದ್ದರು. ‘ಮೊದಲ ಬಾರಿ ಬೆಂಗಳೂರಿಗೆ ಬಂದಿದ್ದೀರಾ? ಇಲ್ಲಿನ ಹವೆ ಹೇಗನಿಸುತ್ತದೆ’ ಎಂದು ಮಾಧ್ಯಮದವರು ಅವರನ್ನು ಮಾತಿಗೆಳೆದರು.

‘ಎರಡು ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದೆ. ಅದೇ ನನ್ನ ಮೊದಲ ಭೇಟಿ. ಇದು ತುಂಬ ವೈಬ್ರೆಂಟ್‌ ಹಾಗೂ ಹ್ಯಾಪನಿಂಗ್‌ ಸಿಟಿ, ಈ ನಗರವನ್ನು ನೋಡಬೇಕು ಎಂಬ ಆಸೆ ಮೊದಲಿನಿಂದಲೂ ಇತ್ತು. ಆ ಕನಸು ನನಸಾಗಿದೆ. ಚಳಿ ಹೆಚ್ಚಿದೆ, ಹವೆ ತುಂಬ ಚೆನ್ನಾಗಿದೆ. ಕೋರಮಂಗಲ ಪ್ರದೇಶದಲ್ಲಿ ಸ್ವಲ್ಪ ಸುತ್ತಾಡಿ ಖುಷಿಪಟ್ಟೆ’ ಎನ್ನುತ್ತಾ ಪ್ರಿಯಾ ಮಾತಿಗಿಳಿದರು.

‘ಒಂದು ಕಣ್ಸನ್ನೆ ನಿಮ್ಮನ್ನು ಜಗತ್ತಿಗೇ ಪರಿಚಯಿಸಿಬಿಟ್ಟಿತಲ್ಲ, ಈ ಸಿನಿಮಾದ ಬಗ್ಗೆ ಕುತೂಹಲ ಮೂಡಿಸಲು ಅದೇ ಕಾರಣವಲ್ಲವೇ’ ಎಂದು ಒಬ್ಬರು ಪ್ರಶ್ನೆ ಎಸೆದರು.

‘ಖಂಡಿತವಾಗಿಯೂ ಅದು ಕಾರಣವಲ್ಲ’ ಎಂದು ಖಡಕ್‌ ಆಗಿ ಹೇಳಿದರು ಪ್ರಿಯಾ. ಪ್ರೇಮಿಗಳ ದಿನಕ್ಕೂ ಮುಂಚಿತವಾಗಿ ವೈರಲ್‌ ಆದ ಆ ದೃಶ್ಯದಿಂದ ಚಿತ್ರಕ್ಕೆ ಅನುಕೂಲ ಆಗಿರುವುದು ನಿಜ. ಆದರೆ ಅದಷ್ಟೇ ಚಿತ್ರದ ಹೈಲೈಟ್‌ ಅಲ್ಲ. ನಮ್ಮ ಇಡೀ ತಂಡದ ಹಾರ್ಡ್‌ವರ್ಕ್‌ ಈ ಚಿತ್ರವನ್ನು ಗೆಲ್ಲಿಸುತ್ತದೆ. ಕನ್ನಡದ ಪ್ರೇಕ್ಷಕರ ಆಶೀರ್ವಾದವೂ ಬೇಕು’ ಎಂಬ ಜಾಣ ಉತ್ತರ ಅವರದು.

ಕನ್ನಡ ಚಿತ್ರೋದ್ಯಮದ ಬಗ್ಗೆ ಪ್ರಿಯಾಗೆ ಹೆಚ್ಚಿನ ಪರಿಚಯವಿಲ್ಲ. ಆದರೆ ‘ಯಶ್‌ ಹೆಸರು ಗೊತ್ತು. ಕೆಜಿಎಫ್‌ ನೋಡಿದ್ದೇನೆ. ಬಹಳ ಚೆನ್ನಾಗಿದೆ’ ಎಂದರು. ‘ಕನ್ನಡ ಸಿನಿಮಾದಲ್ಲಿ ನಟಿಸುವಂತೆ ಯಾರೂ ನನಗೆ ಆಫರ್‌ ಮಾಡಿಲ್ಲ. ಒಳ್ಳೆಯ ಅವಕಾಶ ಸಿಕ್ಕರೆ ಕನ್ನಡದಲ್ಲೂ ನಟಿಸುತ್ತೇನೆ‘ ಎಂದು ಪ್ರಶ್ನೆಯೊಂದಕ್ಕೆ ಪ್ರಿಯಾ ಉತ್ತರಿಸಿದರು.

ಕನ್ನಡದ ಯಾವ ಹೀರೊ ಜೊತೆ ನಟಿಸಲು ಇಷ್ಟ ಎಂಬ ಪ್ರಶ್ನೆಗೆ ಸ್ವಲ್ಪ ಯೋಚಿಸಿ ಪ್ರತಿಕ್ರಿಯಿಸಿದರು. ‘ಯಾರ ಹೆಸರನ್ನೂ ಹೇಳಲ್ಲ. ಒಬ್ಬರ ಹೆಸರನ್ನು ಹೇಳಿದರೆ ಬೇರೆಯವರಿಂದ ಬರಬಹುದಾದ ಅವಕಾಶ ತಪ್ಪಬಹುದಲ್ಲ?’ ಎಂದು, ವೃತ್ತಿರಂಗದ ಪಟ್ಟುಗಳನ್ನು ಅರಿತವರಂತೆ ಮರು ಪ್ರಶ್ನೆ ಎಸೆದು ಮುಗುಳ್ನಕ್ಕರು.

ಮೊದಲ ಸಿನಿಮಾ ಬಿಡುಗಡೆಯಾಗುವ ಮೊದಲೇ ಪ್ರಿಯಾ ಬಾಲಿವುಡ್‌ಗೂ ‍ಪದಾರ್ಪಣೆ ಮಾಡಿದ್ದಾರೆ. ‘ಶ್ರೀದೇವಿ ಬಂಗ್ಲೊ’ ಎಂಬ ಹಿಂದಿ ಚಿತ್ರದಲ್ಲಿ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಚಿತ್ರದ ಟೀಸರ್‌ ಬಿಡುಗಡೆಯಾಗುತ್ತಲೇ ವಿವಾದವನ್ನೂ ಸೃಷ್ಟಿಸಿದೆ. ಈ ಚಿತ್ರದಲ್ಲಿ ನಟಿ ಬಾತ್‌ ಟಬ್‌ನಲ್ಲಿ ಸಾವನ್ನಪ್ಪುವ ದೃಶ್ಯವಿದೆ. ಅದು ಬಾಲಿವುಡ್‌ ನಟಿ ಶ್ರೀದೇವಿ ಸಾವನ್ನು ನೆನಪಿಸುವಂತಿರುವ ಕಾರಣ ಅವರ ಪತಿ ಬೋನಿ ಕಪೂರ್‌ ಕಾನೂನುಸಮರ ಸಾರಿದ್ದಾರೆ.

ಆದರೆ, ನಟಿ ಶ್ರೀದೇವಿಗೂ ಈ ಚಿತ್ರಕ್ಕೂ ಸಂಬಂಧವೇ ಇಲ್ಲ ಎನ್ನುತ್ತಾರೆ ಪ್ರಿಯಾ. ‘ಶ್ರೀದೇವಿ ಬಂಗ್ಲೊ ಚಿತ್ರದ ಕತೆಯ ಬಗ್ಗೆ ಏನನ್ನೂ ಹೇಳಲಾರೆ. ಆದರೆ ಅದು ನಟಿ ಶ್ರೀದೇವಿ ಅವರ ಬದುಕು ಅಥವಾ ಸಿನಿಮಾ ಬದುಕಿನ ಕುರಿತ ಚಿತ್ರ ಅಲ್ಲ. ನನ್ನ ಪಾತ್ರದ ಹೆಸರು ಶ್ರೀದೇವಿ ಅಷ್ಟೇ. ಈ ಕುರಿತು ಎದ್ದಿರುವ ವಿವಾದದ ಬಗ್ಗೆ ನನಗೇನೂ ಗೊತ್ತಿಲ್ಲ’ ಎಂದು ಸುಮ್ಮನಾದರು.‌

‘ಕಿರಿಕ್‌ ಲವ್‌ ಸ್ಟೋರಿ’ ಫೆ.14ರಂದು ತೆರೆ ಕಾಣುತ್ತಿದೆ. ಕನ್ನಡ ಮಾತ್ರವಲ್ಲ ತೆಲುಗು ಹಾಗೂ ತಮಿಳು ಭಾಷೆಗಳಿಗೂ ಇದನ್ನು ಡಬ್‌ ಮಾಡಲಾಗಿದೆ. ನಾಲ್ಕೂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

ಆಡಿಯೊ ಬಿಡುಗಡೆ ಸಮಾರಂಭದಲ್ಲಿ, ‘ಕಿರಿಕ್‌ ಲವ್‌ ಸ್ಟೋರಿ’ಯ ನಾಯಕ ರೋಶನ್‌ ಕೂಡಾ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.