‘ಆಲಮೇಲಕ್ಕೆ ತಾಲ್ಲೂಕು ಸ್ಥಾನಮಾನ; ಕೊಟ್ಟ ಮಾತಿಗೆ ತಪ್ಪಲ್ಲ’

7
ಪತ್ರಿಕಾಗೋಷ್ಠಿಯಲ್ಲಿ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಹೇಳಿಕೆ

‘ಆಲಮೇಲಕ್ಕೆ ತಾಲ್ಲೂಕು ಸ್ಥಾನಮಾನ; ಕೊಟ್ಟ ಮಾತಿಗೆ ತಪ್ಪಲ್ಲ’

Published:
Updated:

ವಿಜಯಪುರ: ‘ಮನಗೂಳಿ ಎಂದಿಗೂ ಕೊಟ್ಟ ಮಾತು ತಪ್ಪಿದವನಲ್ಲ. ವಚನ ಭ್ರಷ್ಟನಾಗಲ್ಲ. ಮೂರ್ನಾಲ್ಕು ದಿನದೊಳಗೆ ಆಲಮೇಲ ಪಟ್ಟಣಕ್ಕೆ ತಾಲ್ಲೂಕು ಕೇಂದ್ರದ ಸ್ಥಾನಮಾನ ಕೊಡಿಸಿಯೇ ಸಿದ್ಧ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಹೇಳಿದರು.

‘ಬಜೆಟ್‌ ಭಾಷಣ ಮುಗಿಸುತ್ತಿದ್ದಂತೆ, ಮುಖ್ಯಮಂತ್ರಿ ಜತೆ ಈ ವಿಷಯವಾಗಿ ಚರ್ಚಿಸಿದೆ. ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಎಲ್ಲೋ ತಪ್ಪಾಗಿದೆ ಎಂದಿದ್ದಾರೆ. ಬಜೆಟ್‌ ಮೇಲಿನ ಚರ್ಚೆಗೆ ಉತ್ತರ ಕೊಡುವ ವೇಳೆ ಆಲಮೇಲವನ್ನು ತಾಲ್ಲೂಕು ಕೇಂದ್ರ ಎಂದು ಘೋಷಿಸುವುದು ಶತಸಿದ್ಧ’ ಎಂದು ಶನಿವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಚಿವರು ತಿಳಿಸಿದರು.

‘ಎಲ್ಲ ವರ್ಗದವರಿಗೂ ಸೌಲಭ್ಯ ನೀಡಿದ ಬಜೆಟ್‌ ಇದಾಗಿದೆ. ದ್ರಾಕ್ಷಿ–-ದಾಳಿಂಬೆ ಬೆಳೆಗಾರರ ಹಿತರಕ್ಷಣೆಗಾಗಿ ವಿಶೇಷ ಪ್ಯಾಕೇಜ್‌ ಘೋಷಿಸಲಾಗಿದೆ. ಇದರೊಳಗೆ ನಿಂಬೆ ಬೆಳೆಗಾರರು ಬರಲಿದ್ದಾರೆ. ಸಚಿವ ಸಂಪುಟ ಸಭೆಯ ಅನುಮೋದನೆ ಮೂಲಕವಾದರೂ; ಆಲಮೇಲಕ್ಕೆ ತೋಟಗಾರಿಕೆ ಕಾಲೇಜ್‌ ತರುವುದು ಖಚಿತ’ ಎಂದು ಮನಗೂಳಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಸರ್ಕಾರ ಪತನಗೊಳ್ಳುತ್ತದೆ ಎಂಬುದನ್ನು ಹೇಳುವುದನ್ನು ಬಿಟ್ಟರೇ ಬಿ.ಎಸ್‌.ಯಡಿಯೂರಪ್ಪಗೆ ಬೇರೆ ಕೆಲಸವಿಲ್ಲ. ದಿನ ಒಂದೊಂದೇ ಹೇಳ್ಕೊಂಡ್‌ ಬಂದ್ವಾನೆ. ಅವ ಎಷ್ಟ್ ಸುಳ್ಳು ಹೇಳ್ತ್ವಾನೆ ಅಂಥಹ ಎಲ್ಲರಿಗೂ ಗೊತ್ತು. ಐದು ವರ್ಷ ನಿರಾತಂಕವಾಗಿ ನಾವು ಸರ್ಕಾರ ನಡೆಸುತ್ತೇವೆ’ ಎಂದು ಸಚಿವರು ಹೇಳಿದರು.

‘ಬಿಜೆಪಿಯವರು ನನಗೆ ಯಾವುದೇ ಆಫರ್‌ ನೀಡಲ್ಲ. ನನ್ನ ಬಳಿ ಸುಳಿಯುವುದು ಇಲ್ಲ. ನನ್ನ ಮಾತನಾಡಿಸುವ ಧೈರ್ಯವೂ ಅವರಲ್ಲಿಲ್ಲ. ನಾನೂ ನಾಲ್ಕು ದಶಕದಿಂದ ದೇವೇಗೌಡರ ಜತೆಯಲ್ಲಿರುವವನು. ಗೌಡರು ಸಹ ಬಿಟ್ಟೋಗೋರು ಹೋಗಲಿ. ನೀ ನನ್ನ ಜತೆ ಇರಲೇಬೇಕು ಎಂದಿದ್ದಾರೆ. ಆ ಮಾತನ್ನು ಎಂದಿಗೂ ನಾ ಮೀರಲ್ಲ’ ಎಂದು ಮನಗೂಳಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ರೇವಣ್ಣ ಹೊಣೆಯಲ್ಲ:

‘ಎಸ್.ಸಿ/-ಎಸ್.ಟಿ. ನೌಕರರ ಮೀಸಲಾತಿ ಜೇಷ್ಠತೆ ವಿಸ್ತರಿಸುವ ಕಾಯ್ದೆ-2017ನ್ನು ಅನುಷ್ಠಾನಗೊಳಿಸುವಲ್ಲಿ ಯಾವುದೇ ರೀತಿಯ ವಿಳಂಬ ನೀತಿಯನ್ನು ಸರ್ಕಾರ ಅನುಸರಿಸುತ್ತಿಲ್ಲ. ಸಚಿವ ಎಚ್‌.ಡಿ.ರೇವಣ್ಣ ಅಡ್ಡಿಯಾಗಿದ್ದಾರೆ ಎಂಬುದು ಸುಳ್ಳು. ಇದಕ್ಕೂ ಅವರಿಗೂ ಸಂಬಂಧವೇ ಇಲ್ಲ’ ಎಂದು ಜೆಡಿಎಸ್‌ ರಾಜ್ಯ ಹಿರಿಯ ಉಪಾಧ್ಯಕ್ಷ, ಮಾಜಿ ಸಚಿವ ಬಿ.ಬಿ.ನಿಂಗಯ್ಯ ತಿಳಿಸಿದರು.

ರಾಜ್ಯ ಸಮ್ಮಿಶ್ರ ಸರ್ಕಾರದ ನವದೆಹಲಿ ಪ್ರತಿನಿಧಿ ಸಯ್ಯದ್‌ ಮೊಯಿನ್‌ ಅಲ್ತಾಫ್‌ ಮಾತನಾಡಿ ‘ಕೇಂದ್ರದಲ್ಲಿ ನಮ್ಮ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದರೆ ತ್ರಿವಳಿ ತಲಾಖ್‌ ಕಾನೂನು ರದ್ದುಗೊಳಿಸಲಾಗುವುದು’ ಎಂದು ಹೇಳಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ರಿಯಾಜ್ ಫಾರೂಕಿ, ಕಾರ್ಯಾಧ್ಯಕ್ಷ ದಿಲಾವರ್‌ ಖಾಜಿ, ಚಂದ್ರಕಾಂತ ಹಿರೇಮಠ, ಅರವಿಂದ ಹಾಗರಗಿ, ಸಿದ್ದು ಕಾಮತ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !