ಮತದಾನಕ್ಕೆ ಜನರನ್ನು ಪ‍್ರೇರೇಪಿಸುತ್ತಿರುವ ಬಿಜೆಪಿ

ಶುಕ್ರವಾರ, ಏಪ್ರಿಲ್ 26, 2019
21 °C
ಶೇಕಡಾವಾರು ಮತದಾನ ಹೆಚ್ಚಿದ್ದಷ್ಟೂ ಪಕ್ಷಕ್ಕೇ ಅನುಕೂಲ ಎಂಬ ಲೆಕ್ಕಾಚಾರದಲ್ಲಿ ಮುಖಂಡರು

ಮತದಾನಕ್ಕೆ ಜನರನ್ನು ಪ‍್ರೇರೇಪಿಸುತ್ತಿರುವ ಬಿಜೆಪಿ

Published:
Updated:
Prajavani

ಚಾಮರಾಜನಗರ: ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಶತಪ್ರಯತ್ನ ಮಾಡುತ್ತಿರುವ ಬಿಜೆಪಿ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮತದಾರರ ಬಳಿ ಪಕ್ಷವನ್ನು ಮಾತ್ರ ಬೆಂಬಲಿಸಿ ಎಂದು ಕೇಳುತ್ತಿಲ್ಲ; ‘ತಪ್ಪದೇ ಮತದಾನ ಮಾಡಿ’ ಎಂದೂ ಜನರನ್ನು ಪ್ರೇರೇಪಿಸತ್ತಿದೆ.

ಮತದಾನದ ಪ್ರಮಾಣ ಹೆಚ್ಚಳವಾದಷ್ಟೂ ಪಕ್ಷಕ್ಕೆ ಅನುಕೂಲ ಎಂಬ ಲೆಕ್ಕಾಚಾರ ಬಿಜೆಪಿ ಮುಖಂಡರದ್ದು. ಹಾಗಾಗಿ, ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಪಕ್ಷದ ಪ್ರಮುಖರೆಲ್ಲ ಅರ್ಹ ಮತದಾರರೆಲ್ಲರೂ ಮತದಾನದ ದಿನ ಹಕ್ಕನ್ನು ಚಲಾಯಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಚುನಾವಣಾ ವೇಳಾಪಟ್ಟಿ ಪ್ರಕಟವಾದ ದಿನದಂದೇ ಮೋದಿ ಅವರು ಟ್ವೀಟ್‌ ಮೂಲಕ ಎಲ್ಲರೂ ಮತದಾನ ಮಾಡುವಂತೆ ಕರೆ ನೀಡಿದ್ದರು. ನಂತರ ರಾಜಕೀಯ ವೇದಿಕೆಗಳಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ಇದೇ ಮಾತನ್ನು ಹೇಳುತ್ತಾ ಬಂದಿದ್ದಾರೆ.

ಇತ್ತ ಕರ್ನಾಟಕದಲ್ಲಿ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರು ಕೂಡ ತಮ್ಮ ಭಾಷಣಗಳಲ್ಲಿ ಇದೇ ರೀತಿ ಹೇಳುತ್ತಿದ್ದಾರೆ. 

ನಗರದಲ್ಲಿ ಬುಧವಾರ ನಡೆದ ಪ್ರಬುದ್ಧರ ಗೋಷ್ಠಿಯಲ್ಲೂ ಅವರು ಈ ವಿಚಾರ ಪ್ರಸ್ತಾಪಿಸಿದರು. ‘2019ರ ಚುನಾವಣೆಯಲ್ಲಿ ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡುತ್ತಿದೆ. ಹಿಂದೆ ಯಾವತ್ತೂ ಇಂತಹ ವಾತಾವರಣ ಕಂಡು ಬಂದಿರಲಿಲ್ಲ’ ಎಂದರು. 

‘ಚುನಾವಣಾ ಆಯೋಗ ಮತದಾನದ ಜಾಗೃತಿ ಮೂಡಿಸುತ್ತಿದೆ ನಿಜ. ಆದರೆ, ಜನರೇ ಸ್ವಯಂ ಪ್ರೇರಿತರಾಗಿ ಮತದಾನ ಮಾಡುವಂತೆ ಇತರರಿಗೆ ಸಲಹೆ ನೀಡುತ್ತಿದ್ದಾರೆ. ಬೆಂಗಳೂರಿನ ಹೋಟೆಲ್‌ನ ಮಾಲೀಕರೊಬ್ಬರು, ಮತಹಾಕಿದವರಿಗೆ ಮತದಾನದ ದಿನ ಉಚಿತವಾಗಿ ಆಹಾರ ನೀಡುವುದಾಗಿ ಹೇಳಿದ್ದಾರೆ. ಕೊಡಗಿನ ಹೋಟೆಲ್‌ ಮತ್ತು ರೆಸಾರ್ಟ್‌ ಮಾಲೀಕರು ಮತದಾನ ಮಾಡಿದವರಿಗೆ ಮಾತ್ರ ಕೊಠಡಿಗಳನ್ನು ಬಾಡಿಗೆ ಕೊಡುವುದಾಗಿ ಹೇಳುತ್ತಿದ್ದಾರೆ. ಮೈಸೂರಿನ ಕ್ಯಾಬ್‌ಗಳ ಮಾಲೀಕರೊಬ್ಬರು ಮತದಾನದ ದಿನ ವಾಹನಗಳನ್ನು ಬಾಡಿಗೆಗೆ ಕೊಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಬೆಂಗಳೂರಿನ ಶಾಲೆಯೊಂದು ಮತದಾನ ಮಾಡದಿದ್ದರೆ ಆ ದಿನದ ವೇತನ ಕೊಡುವುದಿಲ್ಲ ಎಂದು ಹೇಳಿದೆ’ ಎಂದರು.

‘ಇಲ್ಲಿರುವ ಅಷ್ಟೂ ಜನರ ಮೊಬೈಲ್‌ಗಳಲ್ಲಿ ಕನಿಷ್ಠ 2,000ಗಳಷ್ಟು ಮಂದಿಯ ಸಂಪರ್ಕ ಸಂಖ್ಯೆಗಳು ಇರಬಹುದು. ಪ್ರತಿಯೊಬ್ಬರು ದಿನಂಪ್ರತಿ ಕನಿಷ್ಠ 25 ಮಂದಿಗೆ ಫೋನ್‌ ಮಾಡಿ, ಏಪ್ರಿಲ್‌ 18 ಮತ್ತು ಏಪ್ರಿಲ್‌ 23ರಂದು ಮತಗಟ್ಟೆಗೆ ತೆರಳಿ ಬಿಜೆಪಿಗೆ ಮತ ಹಾಕುವಂತೆ ಹೇಳಿ. ಒಂದು ವೇಳೆ ಪಕ್ಷಕ್ಕೆ ಮತಹಾಕುವಂತೆ ಹೇಳಲು ಸಂಕೋಚವಾದರೆ ಕನಿಷ್ಠ ಮತದಾನ ಮಾಡಿ ಎಂದಾದರೂ ಹೇಳಿ’ ಎಂದು ಹೇಳಿದರು.

‘ಕನಿಷ್ಠ ಶೇ 10ರಷ್ಟು ಹೆಚ್ಚು ಮತದಾನವಾದರೆ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂಬ ಸಣ್ಣ ಸ್ವಾರ್ಥವೂ ಇದರಲ್ಲಿದೆ’ ಎಂದು ಅವರೇ ಒಪ್ಪಿಕೊಂಡರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !