ವಿಜಯಪುರ; 348 ಶಿಕ್ಷಕರಿಗೆ ಪದೋನ್ನತಿ..!

7
ಗ್ರಾಮೀಣ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸಿದ್ದ ಕೆಲ ಸಹ ಶಿಕ್ಷಕರಿಗೆ ನಗರ ವಲಯದಲ್ಲಿ ಅವಕಾಶ

ವಿಜಯಪುರ; 348 ಶಿಕ್ಷಕರಿಗೆ ಪದೋನ್ನತಿ..!

Published:
Updated:
Deccan Herald

ವಿಜಯಪುರ: ವಿಜಯಪುರ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯಲ್ಲಿ ಇದೇ ಮೊದಲ ಬಾರಿಗೆ 348 ಶಿಕ್ಷಕರಿಗೆ ‘ಬಡ್ತಿ ಭಾಗ್ಯ’ ದೊರೆತಿದ್ದು; ಶಿಕ್ಷಕ ಸಮೂಹದಲ್ಲಿ ಸಂಭ್ರಮ ಮನೆ ಮಾಡಿದೆ.

2016ರಿಂದ ಈಚೆಗೆ ಜಿಲ್ಲೆಯ ವ್ಯಾಪ್ತಿಯಲ್ಲಿನ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ ಪದೋನ್ನತಿ ದೊರೆತಿರಲಿಲ್ಲ. ರಾಜ್ಯ ಸರ್ಕಾರ 1ರಿಂದ 7ನೇ ತರಗತಿಯವರೆಗೆ 60 ವಿದ್ಯಾರ್ಥಿಗಳಿರುವ ಎಲ್ಲಾ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಮುಖ್ಯೋಪಾಧ್ಯಾಯರ ಹುದ್ದೆ ಮಂಜೂರು ಮಾಡಿದ ಫಲವಿದು. ಒಮ್ಮೆಗೆ ಅಪಾರ ಸಂಖ್ಯೆಯ ಶಿಕ್ಷಕರು ಪದೋನ್ನತಿ ಹೊಂದಿದ್ದಾರೆ.

ಇದಕ್ಕೂ ಮೊದಲು ವರ್ಷಕ್ಕೆ ಎರಡು ಬಾರಿ (ಜನವರಿ, ಜುಲೈ), ಖಾಲಿಯಿದ್ದ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಪ್ರಕ್ರಿಯೆ ಯಥಾ ಪ್ರಕಾರ ನಡೆಯುತ್ತಿತ್ತು. ಆ ಸಂದರ್ಭ ಹೆಚ್ಚಿನ ಶಿಕ್ಷಕರಿಗೆ ಅವಕಾಶ ಸಿಗುತ್ತಿರಲಿಲ್ಲ. 20–25 ಶಿಕ್ಷಕರಷ್ಟೇ ಪದೋನ್ನತಿ ಹೊಂದುತ್ತಿದ್ದರು.

ಸರ್ಕಾರ ಹೊಸ ನೀತಿ ಅನುಷ್ಠಾನಗೊಳಿಸಿದ ಬಳಿಕ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಉಪ ನಿರ್ದೇಶಕರು ಹೆಚ್ಚಿನ ಅವಧಿ ಕರ್ತವ್ಯ ಸಲ್ಲಿಸಲು ಸಾಧ್ಯವಾಗದಿದ್ದರಿಂದ, ಬಡ್ತಿ ನೀಡುವ ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು. ಇದರ ಜತೆಗೆ ಸರ್ಕಾರಿ ಆದೇಶವೂ ಪಾಲನೆಯಾಗಿರಲಿಲ್ಲ.

ಕೆ.ರಾಯಪ್ಪರೆಡ್ಡಿ ಡಿಡಿಪಿಐ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ, ಸರ್ಕಾರಿ ಆದೇಶದ ಪಾಲನೆಗೆ ಚಾಲನೆ ನೀಡಿದರು. ಹಲ ವರ್ಷಗಳಿಂದ ಮುಖ್ಯೋಪಾಧ್ಯಾಯರ ಹುದ್ದೆ ಖಾಲಿಯಿದ್ದು, ಪ್ರಭಾರ ಮುಖ್ಯೋಪಾಧ್ಯಾಯರ ಹಿಡಿತದಲ್ಲಿದ್ದ ಶಾಲಾ ಆಡಳಿತಕ್ಕೆ ಕಾಯಕಲ್ಪ ನೀಡಲು ಮುಂದಾದ ಪರಿಣಾಮ ಒಮ್ಮೆಗೆ ಇಷ್ಟೊಂದು ಸಂಖ್ಯೆಯ ಶಿಕ್ಷಕರಿಗೆ ಪದೋನ್ನತಿ ಭಾಗ್ಯ ದೊರೆತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಸರ್ಕಾರಿ ಆದೇಶದ ಪಾಲನೆ ಆಯಾ ಡಿಡಿಪಿಐ ವಿವೇಚನೆಗೊಳಪಟ್ಟ ಹೊಣೆಯಾಗಿದ್ದರಿಂದ, ರಾಯಪ್ಪರೆಡ್ಡಿ ಒಂದು ತಿಂಗಳ ಅವಧಿ ಪದೋನ್ನತಿಯ ಪ್ರಕ್ರಿಯೆಗೆ ಅವಿರತವಾಗಿ ಶ್ರಮಿಸಿದ್ದಾರೆ. ಆದೇಶ ವಿತರಿಸುವ ಸಂದರ್ಭ ಹಲವು ದೂರು, ಆರೋಪಗಳು ಕೇಳಿ ಬಂದರೂ; ಪಾರದರ್ಶಕವಾಗಿ ಮೀಸಲಾತಿ ಅನ್ವಯ ಪದೋನ್ನತಿ ನೀಡಿದ್ದಾರೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಸರು ಬಹಿರಂಗಪಡಿಸಲಿಚ್ಚಿಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಅರ್ಹ ಸಹ ಶಿಕ್ಷಕರ ಕೌನ್ಸೆಲಿಂಗ್‌ ನಡೆಸಿ, ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲು ಡಿಡಿಪಿಐ ಅವಕಾಶ ನೀಡಿದ್ದರು. ಇದರ ಜತೆಗೆ ಕೌನ್ಸೆಲಿಂಗ್‌ ಪ್ರಕ್ರಿಯೆ ನಡೆದ ದಿನವೇ ಮುಖ್ಯೋಪಾಧ್ಯಾಯರಾಗಿ ಬಡ್ತಿ ಪಡೆದ ಎಲ್ಲಾ ಶಿಕ್ಷಕರಿಗೂ ಆದೇಶ ಪತ್ರ ನೀಡಿದ್ದು ವಿಶೇಷ. ಈಗಾಗಲೇ ಹಲವರು ಮುಖ್ಯೋಪಾಧ್ಯಾಯ ಹುದ್ದೆಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !