ರೇಷ್ಮೆ ಗೂಡು: ಬೆಂಬಲ ಬೆಲೆ ಘೋಷಣೆಗೆ ಆಗ್ರಹ

7
ರಾಜ್ಯ ರೈತ ಸಂಘ ಹಾಗೂ ರೇಷ್ಮೆ ಬೆಳೆಗಾರರಿಂದ ರೇಷ್ಮೆಗೂಡು ಇಲಾಖೆ ಕಚೇರಿಗೆ ಬೀಗ

ರೇಷ್ಮೆ ಗೂಡು: ಬೆಂಬಲ ಬೆಲೆ ಘೋಷಣೆಗೆ ಆಗ್ರಹ

Published:
Updated:
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿದರು

ಶಿಡ್ಲಘಟ್ಟ: ರೇಷ್ಮೆಗೂಡು ದರ ಕುಸಿತ ತಡೆದು, ಬೆಂಬಲ ಬೆಲೆ ಘೋಷಿಸಿ ಸ್ಥಿರತೆ ಕಾಪಾಡಲು ಸರ್ಕಾರ ತಕ್ಷಣವೇ ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ರೇಷ್ಮೆ ಬೆಳೆಗಾರರು ಮಂಗಳವಾರ ಪ್ರತಿಭಟನೆ ನಡೆಸಿದರು.

ರೇಷ್ಮೆಗೂಡಿನ ಬೆಲೆ ಕೆ.ಜಿಗೆ ₹ 500 ಇದ್ದುದು ಇದೀಗ ₹ 200ಕ್ಕೆ ಇಳಿಕೆಯಾಗಿದೆ. ಇದೇ ಸ್ಥಿತಿ ಮುಂದುವರಿದರೆ ಬೆಳೆಗಾರರು ಮತ್ತು ರೀಲರು ಬೀದಿ ಪಾಲಾಗುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ರೇಷ್ಮೆ ಗೂಡಿನ ಬೆಲೆ ದಿಢೀರ್‌ ಕುಸಿದು ಮೂರ್ನಾಕು ವರ್ಷದ ಹಿಂದಿನ ಧಾರಣೆಗೆ ನಿಂತಿದೆ. ರೈತ ಮತ್ತು ರೀಲರು ಇಬ್ಬರ ಬದುಕನ್ನೂ ಕಟ್ಟಿಕೊಡಲು ಗೂಡಿನ ಬೆಲೆ ಹೆಚ್ಚಾಗಬೇಕು. ಬೆಳೆಗಾರರ ಸಂಕಷ್ಟ ಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.

ಬಸವರಾಜ್‌ ವರದಿಯ ಪ್ರಕಾರ ರೇಷ್ಮೆಗೂಡಿನ ಧಾರಣೆ ಕೆ.ಜಿಗೆ ₹ 280ಕ್ಕಿಂತ ಕಡಿಮೆಗೆ ಇಳಿದಾಗ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದಿದೆ. ಆದರೆ ಇದುವರೆಗೂ ವರದಿಯನ್ನು ಅನುಷ್ಠಾನಕ್ಕೆ ತಂದಿಲ್ಲ. ರೈತರು ಮತ್ತು ರೀಲರುಗಳ ಹಿತದೃಷ್ಟಿಯಿಂದ ವರದಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ 1.25 ಕೋಟಿ ಮಂದಿ ರೇಷ್ಮೆ ನಂಬಿ ಜೀವನ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 15 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ರೇಷ್ಮೆ ಬೆಳೆದರೆ, ರಾಜ್ಯದಲ್ಲಿ ಒಟ್ಟು 93 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ರೇಷ್ಮೆ ಕೃಷಿ ನಡೆಯುತ್ತಿದೆ. ಒಂದೆಡೆ ರೇಷ್ಮೆ ಬೆಳೆಯಲು ಒತ್ತಡ ಹೇರುತ್ತಿರುವ ಸರ್ಕಾರ, ಇನ್ನೊಂದೆಡೆ ಸಂಕಷ್ಟದಲ್ಲಿರುವ ಬೆಳೆಗಾರರ ಬೆಂಬಲಕ್ಕೆ ನಿಲ್ಲುತ್ತಿಲ್ಲ. ಇದರಿಂದ ರೇಷ್ಮೆ ಕೃಷಿ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಬೆಳೆಗಾರರ ಜೊತೆಗೆ ರೇಷ್ಮೆಗೂಡಿನ ಮಾರುಕಟ್ಟೆ ಜಾಗತಿಕ ಮಟ್ಟದಲ್ಲಿ ಬೆಳೆಸಲು ಸರ್ಕಾರ ಬದ್ಧವಾಗಬೇಕು ಎಂದು ಹೇಳಿದರು.

ರೈತ ಹಿತ್ತಲಹಳ್ಳಿ ಗೋಪಾಲಗೌಡ ಮಾತನಾಡಿ, ರೇಷ್ಮೆ ಬೆಳೆಗಾರರ ಸಂಕಷ್ಟ ರಾಜ್ಯ ಸರ್ಕಾರಕ್ಕೆ ಮುಟ್ಟಬೇಕು. ರೇಷ್ಮೆ ಗೂಡಿನ ಬೆಲೆ ದಿಢೀರನೆ ಕುಸಿತ ಕಂಡಾಗ ರೈತರಿಗೆ ಆಗುವ ಪರಿಣಾಮಗಳನ್ನು ಗಮನಿಸುವಂತೆ ಮಾಡಬೇಕು. ಈ ಸಂದರ್ಭದಲ್ಲಿಯೂ ಸರ್ಕಾರ ಮಧ್ಯ ಪ್ರವೇಶಿಸಿ ಪರಿಹಾರ ಯೋಜನೆ ರೂಪಿಸದಿದ್ದರೆ ಅಪಾಯದ ಸಾಧ್ಯತೆ ಇದೆ ಎಂದು ತಿಳಿಸಿದರು.

ರೇಷ್ಮೆ ಗೂಡು ಮಾರುಕಟ್ಟೆ ಉಪನಿರ್ದೇಶಕರ ಕಚೇರಿಗೆ ಬೀಗ ಜಡಿದ ಪ್ರತಿಭಟನಾಕರರು, ನಂತರ ಉಪನಿರ್ದೇಶಕ ಸುಭಾಷ್‌ ಸಂತೇನಹಳ್ಳಿ ಅವರಿಗೆ ಮನವಿ ಸಲ್ಲಿಸಿದರು.

ರೇಷ್ಮೆ ಹಿತರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಯಲುವಳ್ಳಿ ಸೊಣ್ಣೇಗೌಡ, ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ತಾದೂರು ಮಂಜುನಾಥ್‌, ಉಪಾಧ್ಯಕ್ಷ ವೀರಾಪುರ ಮುನಿನಂಜಪ್ಪ, ನಾರಾಯಣದಾಸರಹಳ್ಳಿ ಟಿ.ಕೃಷ್ಣಪ್ಪ, ಮಳ್ಳೂರು ಹರೀಶ್‌, ಎಚ್‌.ಸುರೇಶ್‌, ವೇಣುಗೋಪಾಲ್‌, ರಾಮಕೃಷ್ಣಪ್ಪ, ರಮೇಶ್‌, ಹರೀಶ್‌, ಬೋದಗೂರು ವೆಂಕಟಸ್ವಾಮಿರೆಡ್ಡಿ, ದೇವರಾಜ್‌, ಹೊಸಪೇಟೆ ಜಯಣ್ಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !