‘ಬಟ್ಟೆ ಬ್ಯಾನರ್‌ಗೆ ಅವಕಾಶ ಕೊಡಿ’

7
ರಂಗ ಚಟುವಟಿಕೆ ಮಾಹಿತಿ ನೀಡುವುದು ಹೇಗೆ?: ರಂಗಕರ್ಮಿಗಳ ಆಕ್ರೋಶ

‘ಬಟ್ಟೆ ಬ್ಯಾನರ್‌ಗೆ ಅವಕಾಶ ಕೊಡಿ’

Published:
Updated:
Deccan Herald

ಬೆಂಗಳೂರು: ನಾಟಕ ಪ್ರದರ್ಶನಗಳ ಮಾಹಿತಿ ನೀಡುವ ಸಲುವಾಗಿ ಬಟ್ಟೆ ಬ್ಯಾನರ್‌ಗಳನ್ನು ಎಲ್ಲಾ ರಂಗಮಂದಿರಗಳ ಆವರಣದ ಒಳಗೆ ಹಾಕಲು ಅನುಮತಿ ಕೊಡಬೇಕು ಎಂದು ಒತ್ತಾಯಿಸಿ ನಗರದ ರವೀಂದ್ರ ಕಲಾಕ್ಷೇತ್ರದ ಎದುರು ‘ರಂಗ ಗೆಳೆಯರು’ ಸೋಮವಾರ ಮೌನ ಪ್ರತಿಭಟನೆ ಮಾಡಿದರು.

ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಹಾಕಿದ್ದ ಬಟ್ಟೆ ಬ್ಯಾನರ್‌ಗಳನ್ನು ನಾಲ್ಕು ದಿನಗಳ ಹಿಂದೆ ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸಿದ್ದರು. ಬಿಬಿಎಂಪಿಯ ಈ ನಡೆಗೆ ರಂಗಕರ್ಮಿಗಳು, ಪೌರಾಣಿಕ ಹಾಗೂ ಹವ್ಯಾಸಿ ನಾಟಕ ತಂಡಗಳ ಕಲಾವಿದರು ತೀವ್ರ ವಿರೋಧ ವ್ಯಕ್ತಪಡಿಸಿದರು.

‘ಸರ್ಕಾರ ಪ್ಲಾಸ್ಟಿಕ್‌ಗೆ ನಿಷೇಧ ಹೇರಿದ ಬಳಿಕ ಪ್ಲೆಕ್ಸ್‌, ಬ್ಯಾನರ್‌ ಅಳವಡಿಸುವುದನ್ನು ಕೈಬಿಟ್ಟಿದ್ದೇವೆ. ಬಟ್ಟೆ ಬ್ಯಾನರ್‌ ಹಾಕುವುದರಿಂದ ಪರಿಸರಕ್ಕೆ ಹಾನಿಯಾಗುವುದಿಲ್ಲ. ಆದರೆ, ಬಿಬಿಎಂಪಿ ಅವುಗಳನ್ನೂ ತೆರವುಗೊಳಿಸುತ್ತಿದೆ. ಹೀಗಾದರೆ ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ಪ್ರೇಕ್ಷಕರಿಗೆ ತಿಳಿಯುವುದು ಹೇಗೆ’ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್‌ ಪ್ರಶ್ನಿಸಿದರು.

‘ಕಾರ್ಯಕ್ರಮಗಳಿಗೆ ಬರುವ ಪ್ರೇಕ್ಷಕರಿಗೆ ಮಾಹಿತಿ ನೀಡುವ ಹಕ್ಕನ್ನು ನಮ್ಮಿಂದ ಬಿಬಿಎಂಪಿ ಕಿತ್ತುಕೊಳ್ಳುತ್ತಿದೆ. ಇದರಿಂದ ರಂಗ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ’ ಎಂದು ದೂರಿದರು.

‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರಾಯೋಜನೆ ಪಡೆಯುವ ಸಂಸ್ಥೆಗಳು ತಮ್ಮ ಪ್ರದರ್ಶನಗಳಿಗೆ ಟಿಕೆಟ್ ನೀಡದೆ ಉಚಿತವಾಗಿ ತೋರಿಸಬೇಕೆಂಬ ನಿಯಮವನ್ನು ಕೈಬಿಡಬೇಕು’ ಎಂದು ಒತ್ತಾಯಿಸಿದರು.

ಪ್ರೇಕ್ಷಕರೇ ಸಹಕರಿಸಿದ್ದರು: ಕಲಾಗ್ರಾಮದಲ್ಲಿ ‘ಜಲಗಾರ’ ಮತ್ತು ‘ಅಣ್ಣನ ನೆನಪು’ ನಾಟಕಗಳ ಪ್ರದರ್ಶನದ ವೇಳೆ ಬೆಳಕಿನ ತೊಂದರೆ ಆಗಿತ್ತು. ಪ್ರೇಕ್ಷಕರೇ ತಮ್ಮ ಮೊಬೈಲ್‌ಗಳ ಟಾರ್ಚ್‌ಗಳನ್ನು ಆನ್‌ ಮಾಡಿ ನಾಟಕ ಮುಂದುವರಿಸುವಂತೆ ಸಹಕರಿಸಿದ್ದರು. ಕಲಾಗ್ರಾಮ ಹಾಗೂ ನಯನ ರಂಗಮಂದಿರಗಳಲ್ಲಿ ಕೆಟ್ಟು ಹೋಗಿರುವ ಜನರೇಟರ್‌ಗಳನ್ನು ಸರಿಪಡಿಸಬೇಕು. ಅಲ್ಲದೆ, ರೀಚಾರ್ಜೆಬಲ್ ಲೈಟ್‌ಗಳನ್ನು ಅಳವಡಿಸಬೇಕು’ ಎಂದು ಅವರು ಆಗ್ರಹಿಸಿದರು.

‘ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್‌.ಆರ್‌.ವಿಶುಕುಮಾರ್‌ ಅವರು ಅಕ್ಕ ಸಮ್ಮೇಳನಕ್ಕಾಗಿ ಅಮೆರಿಕಕ್ಕೆ ಹೋಗಿದ್ದಾರೆ. ಅವರು ಇಲ್ಲಿಗೆ ಮರಳಿದ ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರ ಸಲ್ಲಿಸಲಾಗುವುದು’ ಎಂದು ಲೋಕೇಶ್‌ ಹೇಳಿದರು.

ರಂಗ ಭಾಸ್ಕರ, ರಂಗಚಕ್ರ, ರಂಗ ನಿರಂತರ, ಸೃಷ್ಟಿ ಸಾಂಸ್ಕೃತಿಕ ವೇದಿಕೆ, ಪೂರ್ಣಸಿಂಹ ಕಲಾವೇದಿಕೆ, ರಂಗ ಬದುಕು, ಜಯಲಕ್ಷ್ಮಿ ಹೂಗಾರ, ಮೈಸೂರು ಹೆಲನ್ ಹಾಗೂ ನೆಲ್ಲಿ ನಾಗರಾಜು ತಂಡಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.

‘50 ಹೋರ್ಡಿಂಗ್‌ಗೆ ಅವಕಾಶ ನೀಡಿ’
‘ನಾಟಕಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಬೆಂಗಳೂರು ಬೃಹತ್ತಾಗಿ ಬೆಳೆದಿದೆ ಎಲ್ಲರಿಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ತಿಳಿಯುವಂತೆ ಮಾಡಲು ಭಿತ್ರಿಪತ್ರಗಳನ್ನು ಅಂಟಿಸಲು ರಂಗ ಮಂದಿರಗಳ ಸುತ್ತಮುತ್ತ, ಬಸ್‌ ನಿಲ್ದಾಣಗಳು ಹಾಗೂ ಮೆಟ್ರೊ ನಿಲ್ದಾಣ‌ಗಳಲ್ಲಿ ಪೋಸ್ಟರ್‌ ಅಂಟಿಸಲು ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬರುವ ಅನುದಾನದಲ್ಲಿ ನಾಟಕಗಳ ಪ್ರದರ್ಶನಗಳ ಕುರಿತು ಪ್ರೇಕ್ಷಕರಿಗೆ ಗೊತ್ತಾಗುವಂತೆ ಮಾಡಲು 50 ಹೋರ್ಡಿಂಗ್‌ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !