ತ್ಯಾಜ್ಯ ಸಂಗ್ರಹಕಾರರ ಪ್ರತಿಭಟನೆ

7
11 ತಿಂಗಳಿನಿಂದ ಬಾಕಿ ಉಳಿಸಿಕೊಂಡ ಬಿಬಿಎಂಪಿ * ಬಿಲ್‌ ಪಾವತಿಗೆ ಆಗ್ರಹ

ತ್ಯಾಜ್ಯ ಸಂಗ್ರಹಕಾರರ ಪ್ರತಿಭಟನೆ

Published:
Updated:
Deccan Herald

ಬೆಂಗಳೂರು: ನಗರದ 33 ವಾರ್ಡ್‌ಗಳಲ್ಲಿ ಒಣ ತ್ಯಾಜ್ಯ ಸಂಗ್ರಹಣೆ ಮಾಡುತ್ತಿರುವವರಿಗೆ 11 ತಿಂಗಳಿನಿಂದ ಬಿಲ್ ಪಾವತಿಯಾಗಿಲ್ಲ. ಬಿಬಿಎಂಪಿ ವಿರುದ್ಧ ಆಕ್ರೋಶಗೊಂಡಿರುವ ತ್ಯಾಜ್ಯ ಸಂಗ್ರಹಕಾರರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

‘ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರಗಳ ನಿರ್ವಾಹಕರ ಒಕ್ಕೂಟ’ದ ನೇತೃತ್ವದಲ್ಲಿ ಪುರಭವನ ಎದುರು ಸೇರಿದ್ದ ಪ್ರತಿಭಟನಾಕಾರರು, ತ್ಯಾಜ್ಯದ ಮೂಟೆಗಳನ್ನೂ ಜತೆಗೆ ತಂದಿದ್ದರು. ‘ಬಾಕಿ ಬಿಲ್ ಪಾವತಿ ಮಾಡಿ’ ಹಾಗೂ ‘ಆಯಾ ತಿಂಗಳ ಬಿಲ್‌, ಅದೇ ತಿಂಗಳು ವಿಲೇವಾರಿ ಮಾಡಿ’ ಎಂಬ ಘೋಷಣೆಯುಳ್ಳ ಫಲಕಗಳನ್ನು ಪ್ರದರ್ಶಿಸಿದರು.

‘2016ರಿಂದಲೇ ಪ್ರತಿ ಮನೆಯಿಂದ ಒಣ ತ್ಯಾಜ್ಯವನ್ನು ಸಂಗ್ರಹಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. 2017ರ ಜುಲೈ 24ರಂದು ಆದೇಶ ಹೊರಡಿಸಿದ್ದ ಬಿಬಿಎಂಪಿ ಆಯುಕ್ತರು, ಒಣತ್ಯಾಜ್ಯ ಸಂಗ್ರಹಿಸುವವರಿಗೆ ಪ್ರತಿ ತಿಂಗಳು ಬಿಲ್ ಪಾವತಿ ಮಾಡುವುದಾಗಿ ಹೇಳಿದ್ದರು. ಆದರೆ, ಇದುವರೆಗೂ ಬಿಲ್ ಪಾವತಿ ಮಾಡಿಲ್ಲ’ ಎಂದು ಒಕ್ಕೂಟದ ಸದಸ್ಯರು ದೂರಿದರು.

‘ನಿತ್ಯವೂ ಒಂದು ವಾಹನದ ಮೂಲಕ ಒಣತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಒಬ್ಬ ಚಾಲಕ, ಒಬ್ಬ ಸಹಾಯಕ ಹಾಗೂ ಇತರೆ ವೆಚ್ಚಗಳು ಸೇರಿದಂತೆ ಬಿಬಿಎಂಪಿಯು ಒಂದು ವಾಹನಕ್ಕೆ ₹43,685 ನೀಡಬೇಕು. ಆ ಸಂಬಂಧ ಎಲ್ಲ ದಾಖಲೆಗಳನ್ನು ಬಿಬಿಎಂಪಿ ಅಧಿಕಾರಿಗಳಿಗೆ ಸಲ್ಲಿಕೆ ಮಾಡಿದ್ದೇವೆ. ಕಡತಗಳನ್ನು ಪರಿಶೀಲಿಸಲು ಸಹ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಆಯುಕ್ತರ ಆದೇಶದಂತೆ ಪ್ರತಿ ತಿಂಗಳ 7ನೇ ತಾರೀಖಿನೊಳಗೆ ಬಿಲ್ ಪಾವತಿ ಮಾಡಬೇಕು. ಒಣತ್ಯಾಜ್ಯ ಕೇಂದ್ರಗಳನ್ನು ನವೀಕರಣ ಮಾಡಿಕೊಡಬೇಕು. ಪ್ರತಿ ಮನೆಯಿಂದ ಒಣಕಸ ಸಂಗ್ರಹಣೆ ಮಾಡಲು 4 ತಿಂಗಳ ಕಾರ್ಯಾದೇಶದ ಬದಲು ನಿರಂತರ ಕಾರ್ಯಾದೇಶ ಹೊರಡಿಸಬೇಕು’ ಎಂದು ಅವರು ಒತ್ತಾಯಿಸಿದರು.

ಬಿಲ್ ಪಾವತಿ ಭರವಸೆ: ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಬಿಬಿಎಂಪಿ ಹಣಕಾಸು ವಿಭಾಗದ ಉಪ ಆಯುಕ್ತ ಶಶಿಧರ್, ಬುಧವಾರ ಬಿಲ್ ಪಾವತಿ ಮಾಡುವುದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು.

‘ಬಿಲ್ ಪಾವತಿಗೆ ಅಧಿಕಾರಿಗಳು ಕಾಲಾವಕಾಶ ಪಡೆದಿದ್ದಾರೆ. ನಿಗದಿತ ದಿನದಂದು ಬಿಲ್ ಪಾವತಿ ಮಾಡದಿದ್ದರೆ, ಮರುದಿನದಿಂದಲೇ ಪುನಃ ಪ್ರತಿಭಟನೆ ಆರಂಭಿಸಲಾಗುವುದು’ ಎಂದು ಒಕ್ಕೂಟದ ಸದಸ್ಯರು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !