ರೈತರ ಬಂಧನ ಖಂಡಿಸಿ ಪ್ರತಿಭಟನೆ

7
ಗೌರಿಬಿದನೂರು ತಾಲ್ಲೂಕು ಕಚೇರಿ ಆವರಣದಲ್ಲಿ ಸತ್ಯಾಗ್ರಹ ನಡೆಸಿದ ರೈತರ ಬಂಧನಕ್ಕೆ ಖಂಡನೆ, ಉಸ್ತುವಾರಿ ಸಚಿವರ ವಿರುದ್ಧ ಆಕ್ರೋಶ

ರೈತರ ಬಂಧನ ಖಂಡಿಸಿ ಪ್ರತಿಭಟನೆ

Published:
Updated:
Prajavani

ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರ ಸ್ವಾಮ್ಯದ ಪವರ್ ಗ್ರಿಡ್‌ ಕಾರ್ಪೊರೇಷನ್‌ ವಿದ್ಯುತ್ ಮಾರ್ಗಗಳಿಗೆ ಜಮೀನು ನೀಡುವವರಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಗೌರಿಬಿದನೂರು ತಾಲ್ಲೂಕು ಕಚೇರಿ ಆವರಣದಲ್ಲಿ ಸತ್ಯಾಗ್ರಹ ನಡೆಸಿದ ರೈತರನ್ನು ಬಂಧಿಸಿದ ಜಿಲ್ಲಾಡಳಿತದ ಕ್ರಮ ಖಂಡಿಸಿ ನಗರದಲ್ಲಿ ಶುಕ್ರವಾರ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಸಿಪಿಎಂ ಮುಖಂಡ ಜಿ.ವಿ.ಶ್ರೀರಾಮರೆಡ, ‘ಗೌರಿಬಿದನೂರು ತಾಲ್ಲೂಕಿನ ರೈತರಿಗೂ ಕೆಪಿಟಿಸಿಎಲ್‌ ಮಾದರಿಯಲ್ಲಿ ಪರಿಹಾರ ನೀಡಿ, ತಾರತಮ್ಯ ಸರಿಪಡಿಸದಿದ್ದರೆ ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಉಗ್ರ ಸ್ವರೂಪದ ಹೋರಾಟ ಕೈಗೆತ್ತಿಕೊಳ್ಳಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಜಿಲ್ಲಾಧಿಕಾರಿ ಅವರ ಗೊಡ್ಡು ಬೆದರಿಕೆ, ಸರ್ವಾಧಿಕಾರಿ ನೀತಿಗೆ, ಹಿಟ್ಲರ್ ಧೋರಣೆಗೆ ನಾವು ಬೆದರುವುದಿಲ್ಲ. ರೈತರನ್ನು ಬಂಧಿಸಿ ಬೇರೆ, ಬೇರೆ ಕಡೆ ಇಟ್ಟ ಮಾತ್ರಕ್ಕೆ ಪ್ರತಿಭಟನೆ ಕೊನೆಗೊಳ್ಳುತ್ತದೆ ಎಂದು ಜಿಲ್ಲಾಡಳಿತ ನಂಬಿದ್ದರೆ ಅದು ಭ್ರಮೆ. ಬರುವ ದಿನಗಳಲ್ಲಿ ಹೋರಾಟ ತೀವ್ರವಾಗಲಿದೆ’ ಎಂದು ತಿಳಿಸಿದರು.

‘ರೈತರನ್ನು ಬಂಧಿಸಿ, ಅವರ ವಿರುದ್ಧ ದೂರು ದಾಖಲಿಸಿದರೆ ಭಯ ಪಡುತ್ತಾರೆ ಎಂದು ಪೊಲೀಸರು, ಜಿಲ್ಲಾಡಳಿತ ಭಾವಿಸಿಕೊಂಡಿದ್ದರೆ ಅದು ತಪ್ಪು. ಕಳೆದ ಮೂರು ತಿಂಗಳಿಂದ ಈ ಹೋರಾಟ ನಡೆಯುತ್ತಿದೆ. ಪರಿಹಾರ ಹೆಚ್ಚಿಸಲು 15 ದಿನ ಸಮಯ ಕೊಡಿ ಎಂದು ಅಧಿಕಾರಿಗಳು ಮೂರು ತಿಂಗಳಿಂದ ರೈತರ ಹೋರಾಟದ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಸತ್ಯಾಗ್ರಹ ನಡೆಸಿದ ರೈತರನ್ನು ಪೊಲೀಸರು ಕಳ್ಳರ ರೀತಿ ವಶಕ್ಕೆ ಪಡೆದಿರುವುದು ನಾಚಿಕೆಗೇಡಿನ ಸಂಗತಿ. ಧೈರ್ಯವಿದ್ದರೆ ಹಗಲಿನಲ್ಲಿ ವಶಕ್ಕೆ ಪಡೆದು ಜೈಲಿಗೆ ಕಳುಹಿಸಬೇಕಾಗಿತ್ತು. ಹೋರಾಟ ಹತ್ತಿಕ್ಕುವ ನಿಟ್ಟಿನಲ್ಲಿ ಬಂಧಿಸಿದ ರೈತರನ್ನು ಜೈಲಿಗೆ ಕಳುಹಿಸದೆ ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಏಕೆ ಗೌರಿಬಿದನೂರಿನಲ್ಲಿ ಆಸ್ಪತ್ರೆ ಇಲ್ಲವೇ’ ಎಂದು ಪ್ರಶ್ನಿಸಿದರು.

‘ಜಿಲ್ಲೆಯ ಇತಿಹಾಸದಲ್ಲಿ ಈ ಹಿಂದಿನ ಯಾವ ಜಿಲ್ಲಾಡಳಿತವೂ ಇಷ್ಟೊಂದು ಕ್ರೂರವಾಗಿ ನಡೆದುಕೊಂಡಿಲ್ಲ. ಜಿಲ್ಲಾಧಿಕಾರಿ ಅವರ ಈ ಸರ್ವಾಧಿಕಾರಿ ಧೋರಣೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಜಿಲ್ಲಾಧಿಕಾರಿ ಅವರು ಆದೇಶಕ್ಕಿಂತ ಹೆಚ್ಚು ಪರಿಹಾರ ನೀಡಿದ್ದೇನೆ ಎಂದು ಹೇಳುತ್ತಾರೆ. ಪರಿಹಾರ ನಿಮ್ಮ ಮನೆಯಿಂದ ಕೊಟ್ಟವರ ರೀತಿ ನೋವು ಪಡಬೇಡಿ. ರೈತರ ಹೋರಾಟವನ್ನು ಯಾರು ಹತ್ತಿಕ್ಕುತ್ತಾರೆ ನಾವೂ ನೋಡೇಬಿಡುತ್ತೇವೆ’ ಎಂದು ಗುಡುಗಿದರು.

‘ಹೆಚ್ಚಿನ ಪರಿಹಾರ ಬೇಕಾದರೆ ರೈತರು ನ್ಯಾಯಾಲಯಕ್ಕೆ ಹೋಗಲಿ ಎಂಬ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಎಚ್.ಶಿವಶಂಕರರೆಡ್ಡಿ ಅವರ ಹೇಳಿಕೆ ಹೋಣೆಗೆಡಿತನದ್ದು. ಅವರೊಬ್ಬ ಜವಾಬ್ದಾರಿಯುತ ಸಚಿವರಾಗಿ ರೈತರು, ಜನರ ಸಮಸ್ಯೆಯನ್ನು ಆಲಿಸಬೇಕಿತ್ತು. ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ಹೆಚ್ಚಿನ ಪರಿಹಾರ ಕೊಡಿಸಬೇಕಿತ್ತು. ಈ ರೀತಿ ಹೇಳುವ ಹೊಣೆಗೇಡಿ ಮಂತ್ರಿಯನ್ನು ನಾನು ಎಲ್ಲೂ ನೋಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿಪಿಎಂ ರಾಜ್ಯ ಘಟಕದ ಸದಸ್ಯ ಚನ್ನರಾಯಪ್ಪ, ರೈತ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಲಕ್ಷ್ಮಿನಾರಾಯಣ ರೆಡ್ಡಿ, ಪ್ರಾಂತ ರೈತ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಬಿ.ಎಂ.ಮುನಿಕೃಷ್ಣಪ್ಪ, ರೈತ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಜಯರಾಂ ರೆಡ್ಡಿ, ಮುಖಂಡರಾದ ಪದ್ಮಾವತಮ್ಮ, ರವಿಪ್ರಕಾಶ್, ವೆಂಕಟರವಣಪ್ಪ, ವೆಂಕಟೇಶ್,ಶ್ರೀರಾಮಪ್ಪ, ಡಿ.ಸಿ .ಅಶ್ವತ್ಥಪ್ಪ, ಆಂಜನೇಯ ರೆಡ್ಡಿ, ಕನ್ನಡ ಪರ ಸಂಘದ ಮುಖಂಡ ರವಿಕುಮಾರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !