ಶನಿವಾರ, ಅಕ್ಟೋಬರ್ 19, 2019
27 °C

ಹಿಂದಿ ಭಾಷೆ ಹೇರಿಕೆ ಖಂಡಿಸಿ ಬಿವಿಎಸ್ ಪ್ರತಿಭಟನೆ

Published:
Updated:
Prajavani

ಚಾಮರಾಜನಗರ: ರಾಜ್ಯದ ಮೇಲೆ ಹಿಂದಿ ಭಾಷೆಯ ಹೇರಿಕೆ ಖಂಡಿಸಿ ಬಹುಜನ ವಿದ್ಯಾರ್ಥಿ ಸಂಘ (ಬಿವಿಎಸ್‌) ಜಿಲ್ಲಾ ಘಟಕದಿಂದ ಬುಧವಾರ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿತು.

ನಗರದ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಉದ್ಯಾನದ ಆವರಣದಿಂದ ಮೆರವಣಿಗೆ ಆರಂಭಿಸಿದ ಸಂಘದ ಸದಸ್ಯರು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಜಿಲ್ಲಾತಡಳಿ ಭವನಕ್ಕೆ ತರಳಿ ಕೆಲಕಾಲ ಪ್ರತಿಭಟನೆ ನಡೆಸಿದರು. ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌. ಆನಂದ್ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಶ್ರೀಮಂತ ಸಂಸ್ಕೃತಿಯ ಮಹತ್ವವನ್ನು ಅರಿತಿದ್ದ ನಮ್ಮ ರಾಷ್ಟ್ರನಾಯಕರು ಅದರ ರಕ್ಷಣೆಗಾಗಿ ಭಾಷಾವಾರು ಪ್ರಾಂತ್ಯದ ಆಧಾರದ ಮೇಲೆ ರಾಜ್ಯಗಳನ್ನು ಒಟ್ಟುಗೂಡಿಸಿ ದೇಶದ ಒಕ್ಕೂಟ ವ್ಯವಸ್ಥೆಯನ್ನು ನಿರ್ಮಾಣ ಮಾಡಿದ್ದಾರೆ. ಇದಾವುದರ ಅರಿವೆ ಇಲ್ಲದ ಈಗಿನ ಕೇಂದ್ರ ಸರ್ಕಾರ, ಇಂದು ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ತರುವ ಅನೇಕ ನೀತಿಗಳನ್ನು ಜಾರಿಗೆ ತರಲು ಮುಂದಾಗಿದೆ ಎಂದು ದೂರಿದರು.

ದಕ್ಷಿಣ ರಾಜ್ಯಗಳ ಮೇಲೆ ಹಿಂದಿ ಭಾಷೆಯ ಹೇರಿಕೆಯೂ ಒಂದು. ಸಂವಿಧಾನ ಅನುಚ್ಛೇದ 8, 22 ಭಾಷೆಗಳನ್ನು ಮಾನ್ಯ ಮಾಡಿದ್ದು, 343 ಮತ್ತು 344ನೇ ವಿಧಿಗಳಲ್ಲಿ ಹಿಂದಿಯನ್ನು ಆಡಳಿತಾತ್ಮಕ ಭಾಷೆಯೆಂದಷ್ಟೇ ಹೇಳಿದೆ. ಹಿಂದಿನ ಕಾಂಗ್ರೆಸ್ ಸರ್ಕಾರ 2011ರಲ್ಲಿ ಪಿ. ಚಿದಂಬರಂ ನೇತೃತ್ವದ ಅಧಿಕೃತ ಭಾಷೆಗಳ ಸಂಸದೀಯ ಸಮಿತಿಯ ಮೂಲಕ ಮಾಡಿಸಿತು. ಅದರ ಮುಂದುವರೆದ ಭಾಗವಾಗಿ ಪ್ರಸ್ತುತ ನರೇಂದ್ರ ಮೋದಿ ನಾಯಕತ್ವದ ಬಿಜೆಪಿ ಸರ್ಕಾರ ಒಂದು ದೇಶ- ಒಂದು ಭಾಷೆ ಎನ್ನುವ ಅಪಾಯಕಾರಿ ಮತ್ತು ಅಸಾಂವಿಧಾನಿಕ ನೀತಿಯ ಮೂಲಕವೇ ಮಾಡ ಹೊರಟಿರುವುದು ಸರಿಯಲ್ಲ ಎಂದು ಆರೋಪಿಸಿದರು.

ಮೊದಲು ಬ್ಯಾಂಕಿಂಗ್ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶ ಕಲ್ಪಿಸಿಕೊಟ್ಟು ಕನ್ನಡಿಗರಿಗೆ ಈವರೆಗೆ ಉದ್ಯೋಗಗಳಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಪ್ರೊ.ಎಸ್.ಜಿ.ಸಿದ್ದರಾಮಯ್ಯ ನೇತೃತ್ವದ ಸಮಿತಿಯ ಶಿಫಾರಸುಗಳನ್ನು ಜಾರಿ ಮಾಡಬೇಕು. ಸರ್ಕಾರದ ದ್ವಿಭಾಷಾ ನೀತಿಯನ್ನು ಕೂಡಲೇ ರದ್ದುಪಡಿಸಿ ಕಲಿಯುವ ಹಕ್ಕನ್ನು ಮಕ್ಕಳು ಮತ್ತು ಪೋಷಕರು ನಿರ್ಧರಿಸುವ ವ್ಯವಸ್ಥೆ ಜಾರಿಯಾಗಬೇಕು. ಒಂದು ದೇಶ- ಒಂದು ಭಾಷೆ ಎನ್ನುವ ಬದಲಾಗಿ ಒಂದು ದೇಶ ಒಂದೇ ಶಿಕ್ಷಣ ಮಾದರಿ, ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ನೀತಿ ಜಾರಿಮಾಡಬೇಕು. ಇಲ್ಲವಾದರೆ ಕೇಂದ್ರ ಸರ್ಕಾರದ ವಿರುದ್ಧ ದೇಶದಾದ್ಯಂತ ಜನಾಭಿಪ್ರಾಯಗಳನ್ನು ಸಂಗ್ರಹಿಸಿ ದೊಡ್ಡಮಟ್ಟದ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಸಂಯೋಜಕ ಪರ್ವತ್‌ ರಾಜ್, ಜಿಲ್ಲಾಧ್ಯಕ್ಷ ಮಹೇಂದ್ರ, ಶ್ರೀನಿವಾಸ, ಕಾರ್ತಿಕ್, ರೇಚಣ್ಣ, ಚನ್ನರಾಜ,  ಮಧುಸೂದನ್, ಕೃಷ್ಣಮೂರ್ತಿ, ಶಕುಂತಲಾ, ಸುನೀತಾ, ಪುಷ್ಷಲತಾ ಭಾಗವಹಿಸಿದ್ದರು.

ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ: ಕರ್ನಾಟಕ ರಾಜ್ಯದ ಮೇಲೆ ಹಿಂದಿ ಭಾಷೆಯ ಬಲವಂತದ ಹೇರಿಕೆಯನ್ನು ಖಂಡಿಸಿ ಕರ್ನಾಟಕ ಸೇನಾಪಡೆ ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

‘ಕೇಂದ್ರದ ಅವೈಜ್ಞಾನಿಕ ನೀತಿಯಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರಿ ಸ್ವಾಮ್ಯದ ಇಲಾಖೆಗಳಲ್ಲಿ ಕೆಲಸ ಸಿಗುವುದಿಲ್ಲ. ತಕ್ಷಣವೇ ಕೇಂದ್ರ ಸರ್ಕಾರ ಹಿಂದಿ ಭಾಷೆ ಹೇರಿಕೆಯನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ವಿವಿಧ ಸಂಘ-ಸಂಸ್ಥೆಗಳೊಂದಿಗೆ ಕರ್ನಾಟಕ ಬಂದ್ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಕರ್ನಾಟಕ ಸೇನಾಪಡೆ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಾ. ಮುರಳಿ, ಚಾ.ಸಿ. ಸೋಮನಾಯಕ, ನಿಜಧ್ವನಿ ಗೋವಿಂದರಾಜು, ಗು.ಪುರುಷೋತ್ತಮ ಪಾಲ್ಗೊಂಡಿದ್ದರು.

Post Comments (+)