ಗಾಂಧೀಜಿ ಹತ್ಯೆ ಮರುಸೃಷ್ಟಿ ಸಂಭ್ರಮ: ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

7

ಗಾಂಧೀಜಿ ಹತ್ಯೆ ಮರುಸೃಷ್ಟಿ ಸಂಭ್ರಮ: ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

Published:
Updated:
Prajavani

ಚಾಮರಾಜನಗರ: ಮಹಾತ್ಮ ಗಾಂಧೀಜಿ ಅವರ ಹತ್ಯೆಯನ್ನು ಮರುಸೃಷ್ಟಿಸಿ ಸಂಭ್ರಮಿಸಿದ ಆರೋಪಿಗಳ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾದಿಂದ (ಎಸ್‌ಡಿಪಿಐ) ಶುಕ್ರವಾರ ಪ್ರತಿಭಟನೆ ನಡೆಯಿತು.

ನಗರದ ಲಾರಿ ನಿಲ್ದಾಣದಿಂದ ಬಿ.ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನಕ್ಕೆ ತೆರಳಿದ ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌ ಅವರಿಗೆ ಮನವಿ ಸಲ್ಲಿಸಿದರು. ನಾಥುರಾಮ್‌ ಗೋಡ್ಸೆಯ ಪ್ರತಿಕೃತಿಯನ್ನು ನೇಣು ಹಾಕಿದಂತೆ ಹಿಡಿದುಕೊಂಡು ಮೆರವಣಿಗೆಯಲ್ಲಿ ಸಾಗಿದರು.

ಗಾಂಧೀಜಿ ಅವರ ಹತ್ಯೆಯಾದ ದಿನವನ್ನು (ಜನವರಿ 30) ಸಂದೇಶ, ತ್ಯಾಗದ ಬಗ್ಗೆ ಸ್ಮರಣೆ ಮಾಡುತ್ತಿರುವ ಸಂದರ್ಭದಲ್ಲಿ ರಾಷ್ಟ್ರ ವ್ಯಾಪಿ ಅವಮಾನವಾಗುವಂತಹ ಘಟನೆ ನಡೆದಿದೆ. ಉತ್ತರ ಪ್ರದೇಶದ ಅಲಿಘಡದಲ್ಲಿ ಹಿಂದೂ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್‌ ಪಾಂಡೆ ಹಾಗೂ ಇತರ ಸಹ ಕಾರ್ಯಕರ್ತರು ನಕಲಿ ಬಂದೂಕಿನಿಂದ ಗಾಂಧೀಜಿ ಅವರ ಪ್ರತಿಕೃತಿಗೆ ಗುಂಡಿಕ್ಕಿ ಹತ್ಯೆ ಮಾಡಿದ ಬಳಿಕ ಹತ್ಯಾ ದಿನವನ್ನು ಶೌರ್ಯ ದಿನ ಎಂದು ಆಚರಿಸಿ ಸಿಹಿ ಹಂಚಿದ್ದಾರೆ ಎಂದು ಆರೋಪಿಸಿದರು.

ಇದರೊಂದಿಗೆ ಗಾಂಧೀಜಿ ಅವರನ್ನು ಹತ್ಯೆ ಮಾಡಿದ ಗೋಡ್ಸೆ ಪ್ರತಿಕೃತಿಗೆ ಪುಷ್ಪನಮನ ಮಾಡಿ ಭಯೋತ್ಪಾದನಾ ಕೃತ್ಯವನ್ನು ಬೆಂಬಲಿಸಿದ್ದಾರೆ. ಈ ಮೂಲಕ ಭಯೋತ್ಪಾದನಾ ಕೃತ್ಯಕ್ಕೆ ಪರೋಕ್ಷವಾಗಿ ಕರೆ ನೀಡಿರುವ ಹಿಂದೂ ಮಹಾಸಭಾ ಸಂಘಟನೆಯ ಕಾರ್ಯ ವೈಖರಿ ಕಾನೂನುಬಾಹಿರ ಎಂದು ಖಂಡಿಸಿದರು.

ಘಟನೆಯು ಹತ್ಯೆಗೆ ಪ್ರಚೋದಿಸಿದ್ದು, ದೇಶದಲ್ಲಿ ಅಶಾಂತಿಯನ್ನು ಪ್ರೇರೇಪಿಸಿದೆ. ದೇಶದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರಲಾಗಿದೆ. ರಾಷ್ಟ್ರದ ಜಾತ್ಯತೀತ ಸಿದ್ಧಾಂತವನ್ನೇ ಹತ್ಯೆ ಮಾಡಲು ನಡೆಸಿದ ಘೋರ ಕೃತ್ಯ ಇದು. ಹಲವು ವರ್ಷಗಳಿಂದ ಇಂತಹ ಸಂಭ್ರಮಾಚರಣೆ ನಡೆಯುತ್ತಿದೆ. ಆದರೆ, ಕೇಂದ್ರ ಸರ್ಕಾರ ಕಾನೂನು ಕ್ರಮ ಕೈಗೊಳ್ಳದ ಕಾರಣ ಅವಮಾನವೀಯ ಕೃತ್ಯಗಳು ಮುಂದುವರಿಯುತ್ತಿವೆ ಎಂದು ದೂರಿದರು.

ಈ ದುರ್ಘಟನೆಯನ್ನು ಪರಿಗಣಿಸಿ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

ಪ್ರತಿಭಟನೆಯಲ್ಲಿ ಎಸ್‌ಡಿಪಿಐನ ಜಿಲ್ಲಾ ಘಟಕದ ಅಧ್ಯಕ್ಷ ಅಬ್ರಾರ್‌ ಅಹಮದ್‌, ನಗರಸಭಾ ಸದಸ್ಯರಾದ ಸಮೀಉಲ್ಲಾ ಖಾನ್‌, ಖಲೀಲ್‌ ಉಲ್ಲಾ, ಎಂ.ಮಹೇಶ್, ಮೊಹಮದ್‌ ಅಮೀಖ್‌, ಮುಖಂಡರಾದ ಸೈಯದ್‌ ಆರೀಫ್, ಶಿವಣ್ಣ, ಇಸ್ರಾರ್‌, ಸೈಯದ್‌ ಇಮ್ರಾನ್‌ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !