ತಮಿಳುನಾಡಿಗೆ ನೀರು: ಆದೇಶದ ವಿರುದ್ಧ ಪ್ರತಿಭಟನೆ

7

ತಮಿಳುನಾಡಿಗೆ ನೀರು: ಆದೇಶದ ವಿರುದ್ಧ ಪ್ರತಿಭಟನೆ

Published:
Updated:
ಕರ್ನಾಟಕ ಸೇನಾಪಡೆ ಕಾರ್ಯಕರ್ತರು ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು  –ಪ್ರಜಾವಾಣಿ ಚಿತ್ರ

ಚಾಮರಾಜನಗರ: ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ಆದೇಶ ನೀಡಿರುವುದನ್ನು ಖಂಡಿಸಿ ಕರ್ನಾಟಕ ಸೇನಾಪಡೆ ಕಾರ್ಯಕರ್ತರು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಭುವನೇಶ್ವರಿ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ಕೆಲ ಹೊತ್ತು ರಸ್ತೆ ತಡೆ ನಡೆಸಿ, ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ, ತಮಿಳುನಾಡು ಸರ್ಕಾರ ಮತ್ತು ರಾಜ್ಯದ ಸಂಸದರ ವಿರುದ್ಧ ಘೋಷಣೆ ಕೂಗಿದರು.

ಸೇನಾಪಡೆ ರಾಜ್ಯಾಧ್ಯಕ್ಷ ಚಾ.ರಂ. ಶ್ರೀನಿವಾಸಗೌಡ ಮಾತನಾಡಿ,  ‘ತಮಿಳುನಾಡಿಗೆ ಜುಲೈನಲ್ಲಿ 31 ಟಿಎಂಸಿ ಅಡಿ ನೀರು ಹರಿಸುವಂತೆ ನಿರ್ವಹಣಾ ಮಂಡಳಿ ಆದೇಶ ಮಾಡಿರುವುದು ಖಂಡನೀಯ. ರಾಜ್ಯದ ಕೆರೆಕಟ್ಟೆಗಳಿಗೆ ನೀರು ತುಂಬಿಸುವುದು, ಕಾಲುವೆಗಳಿಗೆ ನೀರು ಹರಿಸುವ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿಲ್ಲ. ರಾಜ್ಯದ ಕುಡಿಯುವ ನೀರು, ಕೃಷಿ ಬೆಳೆಗಳ ನೀರಿನ ವಿಚಾರವಾಗಿ ಚಕಾರ ಎತ್ತಿಲ್ಲ. ‌ಮಂಡಳಿಯು ಏಕಾಏಕಿ ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ಮಾಡಿ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ’ ಎಂದು ಆರೋಪಿಸಿದರು.

‘ಮಂಡಳಿಯಲ್ಲಿ ತಮಿಳುನಾಡಿನ ಮೂಲದ ಆರು ಅಧಿಕಾರಿಗಳು ಸದಸ್ಯರಾಗಿದ್ದಾರೆ. ನಮ್ಮ ರಾಜ್ಯದಲ್ಲಿರುವ ಜಲಾಶಯಗಳನ್ನು ಪರಿಶೀಲಿಸಲು ರಾಜ್ಯದ ಮುಖ್ಯಮಂತ್ರಿ ಕೂಡ ಮಂಡಳಿಯ ಅನುಮತಿ ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ತಕ್ಷಣವೇ ಮುಖ್ಯಮಂತ್ರಿ ಹಾಗೂ ಸಚಿವರು ಜಲಾಶಯಗಳ ಸ್ಥಿತಿಗತಿಗಳನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು’ ಎಂದು ಅವರು ಒತ್ತಾಯಿಸಿದರು.

‘ಕಾವೇರಿ ನಿರ್ವಹಣಾ ಮಂಡಳಿಯನ್ನು ತಕ್ಷಣವೇ ವಜಾ ಮಾಡಬೇಕು. ರಾಜ್ಯದ ಸಂಸದರು ಕಾವೇರಿ ನೀರಿನ ವಿಚಾರವಾಗಿ ಧ್ವನಿ ಎತ್ತಬೇಕು’ ಸೇನಾ ಪಡೆಯ ಗೌರವ ಅಧ್ಯಕ್ಷ ಶಾ.ಮುರಳಿ ಆಗ್ರಹಿಸಿದರು. ಗು.ಪುರುಷೋತ್ತಮ, ಪಣ್ಯದಹುಂಡಿರಾಜು, ಮಹೇಶ್‌ಗೌಡ, ಅರುಣ್‌ಕುಮಾರ್‌ಗೌಡ, ಡಾ.ಶಿವರುದ್ರಸ್ವಾಮಿ, ಚಾ.ಸಿ. ಸಿದ್ದರಾಜು, ಚಾ.ರ. ಕುಮಾರ್, ಟೈಲರ್‌ ನಟರಾಜು, ಸಿದ್ದಶೆಟ್ಟಿ, ನಂಜುಂಡಸ್ವಾಮಿ ಪ್ರತಿಭಟನೆಯಲ್ಲಿ ‍ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !