ಖಾಸಗಿ ವಾಹಿನಿ, ನಿರೂಪಕರ ವಿರುದ್ಧ ಪ್ರತಿಭಟನೆ

7
ಸಚಿವ ಪುಟ್ಟರಂಗಶೆಟ್ಟಿ ಅವರನ್ನು ನಿಂದಿಸಲಾಗಿದೆ ಎಂದು ಬೆಂಬಲಿಗರ ಆರೋಪ

ಖಾಸಗಿ ವಾಹಿನಿ, ನಿರೂಪಕರ ವಿರುದ್ಧ ಪ್ರತಿಭಟನೆ

Published:
Updated:
Prajavani

ಚಾಮರಾಜನಗರ: ‘ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರನ್ನು ಅಸಂವಿಧಾನಿಕ ಪದಗಳಿಂದ ನಿಂದಿಸಿರುವ ‌ಎರಡು ಖಾಸಗಿ ವಾಹಿನಿಗಳು ಹಾಗೂ ಸುಳ್ಳು ಸುದ್ದಿ ಪ್ರಚಾರ ಮಾಡುತ್ತಿರುವ ಅವುಗಳ ಇಬ್ಬರು ನಿರೂಪಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಜಿಲ್ಲಾ ಉಪ್ಪಾರ ಯುವಕರ ಸಂಘ, ಉಪ್ಪಾರ ಮೀಸಲಾತಿ ಹೋರಾಟ ಸಮಿತಿ, ಕಾಂಗ್ರೆಸ್, ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಯಿತು.

ನಗರದ ಪ್ರವಾಸಿಮಂದಿರದ ಆವರಣದಲ್ಲಿ ನೂರಾರು ಸಂಖ್ಯೆಯಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಮೆರವಣಿಗೆ ಹೊರಟು ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿಬೀದಿ, ಸಂತೇಮರಹಳ್ಳಿ ವೃತ್ತ, ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಎರಡು ವಾಹಿನಿಗಳ ಇಬ್ಬರು ನಿರೂಪಕರ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿದರು. ನಂತರ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌ ಅವರಿಗೆ ಮನವಿ ಸಲ್ಲಿಸಿದರು.

‘ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುತ್ತಿರುವ ಈ ಖಾಸಗಿ ವಾಹಿನಿಗಳ ಪ್ರಸಾರದ ಹಕ್ಕು ರದ್ದುಪಡಿಸಬೇಕು ಹಾಗೂ ಸುಳ್ಳು ಸುದ್ದಿ ಬಿತ್ತರಿಸುವ ನಿರೂಪಕರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

‘ವಿಧಾನ ಸೌಧದಲ್ಲಿ ಜನವರಿ 4ರಂದು ₹ 25.76 ಲಕ್ಷ ವ್ಯಕ್ತಿಯೊಬ್ಬರಿಂದ ದೊರೆತಿತ್ತು. ಆ ವ್ಯಕ್ತಿ ಪುಟ್ಟರಂಗಶೆಟ್ಟಿ ಅವರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಮೋಹನ್‌ ಎನ್ನುವುದು ತಿಳಿದು ಬಂದಿದೆ. ಈ ಸುದ್ದಿಯನ್ನು ಬಿತ್ತರ ಮಾಡುವಾಗ ಎರಡು ಖಾಸಗಿ ವಾಹಿನಿಯ ನಿರೂಪಕರು ಸಚಿವರನ್ನು ಅತ್ಯಂತ ಕೆಟ್ಟ ಪದಗಳಿಂದ ನಿಂದಿಸಿ ಸಚಿವರ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಕೂಡಲೇ, ಎರಡೂ ಖಾಸಗಿ ವಾಹಿನಿಯನ್ನು ರದ್ದು ಪಡಿಸಬೇಕು. ವಾಚಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾ ಉಪ್ಪಾರ ಯುವಕರ ಸಂಘದ ಅಧ್ಯಕ್ಷ ಎಂ.ಜಯಕುಮಾರ್, ಕಾರ್ಯದರ್ಶಿ ಸಿ.ಎಸ್. ನಾಗರಾಜು, ಉಪ್ಪಾರ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಬಾಗಳಿ ರೇವಣ್ಣ, ತಾಲ್ಲೂಕು ಉಪ್ಪಾರ ಸಂಘದ ಅಧ್ಯಕ್ಷ ಪಿ.ಲಿಂಗರಾಜು, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವು, ಆರ್.ಮಹದೇವು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹಮ್ಮದ್‌ ಅಸ್ಗರ್, ಗುರುಸ್ವಾಮಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾ ಜಯಣ್ಣ, ಪದ್ಮಾ ಪುರುಷೋತ್ತಮ, ನಗರಸಭಾ ಸದಸ್ಯ ಆರ್.ಪಿ. ನಂಜುಂಡಸ್ವಾಮಿ, ರಾಜಪ್ಪ, ಭಾಗ್ಯಮ್ಮ, ಮುಖಂಡರಾದ ಎಸ್.ನಂಜುಂಡಸ್ವಾಮಿ, ಸೈಯದ್‌ರಫೀ, ಪು.ಶ್ರೀನಿವಾಸನಾಯಕ, ಗೋವಿಂದಶೆಟ್ಟಿ, ಜಿ.ಎಂ.ಶಂಕರ್, ಚಾ.ಹ.ಶಿವರಾಜ್, ರಾಚಶೆಟ್ಟಿ, ಮಲ್ಲೇಶ್, ಪ್ರಕಾಶ್, ಜಯರಾಮ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !