ಬುಧವಾರ, ನವೆಂಬರ್ 20, 2019
25 °C

ಬಾರ್ ಬಂದ್‌ಗೆ ಒತ್ತಾಯ; ವಿದ್ಯಾರ್ಥಿಗಳ ಪ್ರತಿಭಟನೆ

Published:
Updated:
Prajavani

ಯಲಹಂಕ: ರಾಜಾನುಕುಂಟೆಯ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಸಮೀಪದಲ್ಲಿ ತೆರೆದಿರುವ ಬಾರ್ ಮಳಿಗೆಯನ್ನು ಬಂದ್ ಮಾಡಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಹಾಗೂ ಸ್ಥಳೀಯರು ಗುರುವಾರ ಪ್ರತಿಭಟನೆ ನಡೆಸಿದರು.

ರಸ್ತೆತಡೆ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ‘ಕೂಡಲೇ ಬಾರ್ ಬಂದ್ ಮಾಡಬೇಕು. ಇಲ್ಲದಿದ್ದರೆ ಇಲ್ಲಿಂದ ಕದಲುವುದಿಲ್ಲ’ ಎಂದು ಪಟ್ಟುಹಿಡಿದರು.

ಈ ವೇಳೆ ಮಾತನಾಡಿದ ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಕಡತಮಲೆ ಸತೀಶ್, ‘ಶಿಕ್ಷಣಸಂಸ್ಥೆಯ ಸಮೀಪದಲ್ಲೇ ಬಾರ್ ಸ್ಥಾಪಿಸಿ ರೆಸ್ಟೋರೆಂಟ್ ಕೂಡ ಬುಧವಾರದಿಂದ ಪ್ರಾರಂಭಿಸಿದ್ದಾರೆ. ವಿಶ್ವವಿದ್ಯಾಲಯದಲ್ಲಿ 8 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ರಸ್ತೆಯ ಪಕ್ಕದಲ್ಲೇ ಮದ್ಯದಂಗಡಿ ಇರುವುದರಿಂದ ವಿದ್ಯಾರ್ಥಿಗಳ ಮೇಲೆ ಮಾನಸಿಕ ಪರಿಣಾಮ ಬೀರಲಿದೆ. ಆದ್ದರಿಂದ ಕೂಡಲೇ ಬಾರ್ ಬಂದ್ ಮಾಡಬೇಕು’ ಎಂದು ಒತ್ತಾಯಿಸಿದರು.

ಯಲಹಂಕ ತಹಶೀಲ್ದಾರ್‌ ಎನ್.ರಘುಮೂರ್ಥಿ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿ, ‘ಇಲ್ಲಿ ಬಾರ್ ತೆರೆಯುವುದರಿಂದ ಸ್ಥಳೀಯರು ಮತ್ತು ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರಲಿದೆ. ಈ ಪ್ರದೇಶವು ಹಸಿರುವಲಯ ವ್ಯಾಪ್ತಿಗೆ ಬರುತ್ತದೆ. ಭೂಪರಿವರ್ತನೆ ಮಾಡದೆ, ಸ್ಥಳೀಯ ಆಡಳಿತದಿಂದ ಅನುಮತಿ ಪಡೆಯದೆ ಕಟ್ಟಡ ನಿರ್ಮಿಸಿದ್ದಾರೆ’ ಎಂದು ತಿಳಿಸಿದರು. ಅಲ್ಲದೆ ತಕ್ಷಣ ಬಾರ್ ಬಂದ್ ಮಾಡಿಸಿದರು.

ಪ್ರತಿಕ್ರಿಯಿಸಿ (+)